Tuesday, October 25, 2011

ದೀಪದ ಕಂಬ (ಜೀವನ ಚಿತ್ರ)
ದಿ | ಎಂ. ಏ. ಭಟ್ಟ, ಕೊಡ್ಲೆಕೆರೆ
ನನ್ನ ಜೀವನದ ಕೆಲವು ಘಟನೆಗಳನ್ನು ನಾನು ಕೇಳಿದ್ದು, ನೋಡಿದ್ದು ಇವುಗಳನ್ನು ನನ್ನಿಂದಲೇ ಕೇಳಬೇಕು, ಓದಬೇಕು ಎನ್ನುವುದು ನನ್ನ ಮಕ್ಕಳ, ಮೊಮ್ಮಕ್ಕಳ ಬಯಕೆ. ಇದನ್ನು ಈಡೇರಿಸದಿದ್ದರೆ ನನ್ನ ಮೂರು ದಶಕಗಳ ಅಧ್ಯಾಪನ ವೃತ್ತಿಗೆ ನ್ಯಾಯವಾಗಲಿಕ್ಕಿಲ್ಲ. "ಶ್ರೀ ಕೊಡ್ಲೆಕೆರೆ ಅನಂತ ಭಟ್ಟರ ತೃತೀಯ ಪುತ್ರ ಮಹಾಬಲೇಶ್ವರ ಭಟ್ಟನ ಶುಭ ಜನನ" - ಇದು ನಾನು ಬರೆದದ್ದಲ್ಲ. ನನ್ನ ಜಾತಕದಲ್ಲಿ ನಮೂದಾಗಿದ್ದು: ಲಿಖ್ಯತೇ ಜನ್ಮಪತ್ರಿಕಾ, ಎಂದು. ವೈದಿಕ ಮನೆತನದವನಾದ ನನಗೆ ಕಾಲಕಾಲಕ್ಕೆ ನೆರವೇರಬೇಕಾದ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ ನನ್ನ ಅಪ್ಪಯ್ಯ, ಅಬ್ಬೆ ನನ್ನನ್ನು ಕೆಳಗಿನ ಶಾಲೆಗೆ ಒಂದನೇ ತರಗತಿಗೆ ದಾಖಲಿಸಿದರು. ನನ್ನ ಪ್ರಾಥಮಿಕ ವಿದ್ಯಾಭ್ಯಾಸದಲ್ಲಿ ಮನೆ ಗುರು ನನ್ನಬ್ಬೆ ಒಬ್ಬಳೇ. ನನ್ನ ತಂದೆಯವರು ಆಗ ದೂರದ (ಈಗೇನೂ ಅಷ್ಟು ದೂರವಲ್ಲ) ತೀರ್ಥಹಳ್ಳಿಯಲ್ಲಿ ನಮ್ಮ ಮಠದ ಪಾರುಪತ್ಯದಾರರು ಆಗಿದ್ದರು. ಮನೆಯ ಕಾರುಬಾರು ನಮ್ಮಮ್ಮನದೇ. ಜೊತೆಯಲ್ಲಿ ಇನ್ನಿಬ್ಬರು ಅಮ್ಮನ ಸಹಾಯಕರು: ಪನ್ನಿ ತಾತಮ್ಮ ಹಾಗೂ ಪಂಡಿತ ಕಾಮಾಚಿಕ್ಕಿ. ಒಂದನೇಯತ್ತೆಯಲ್ಲಿ ನನ್ನ ಮಾಸ್ತರರು ಅಲ್ಲ ಮಾಸ್ತರಣಿ ಶ್ರೀಮತಿ ಪರಮೇಶ್ವರಿ ಪಂಡಿತ. ಎಕ್ಕಂ, ದಹಂ, ಶತಂಗಳಿಗೆ ೧, ೧೦, ೧೦೦ ರ ಕಲ್ಲುಗಳನ್ನು ಬೇರೆ ಬೇರೆ ಬಟ್ಟೆಯಲ್ಲಿ ಕಟ್ಟಿ ಅವುಗಳನ್ನು ಉಪಯೋಗಿಸಿ ಲೆಕ್ಕ ವಿವರಿಸುತ್ತಿದ್ದರು. ಕೂಡುವ, ಕಳೆಯುವ ಲೆಕ್ಕಗಳನ್ನು ಚಿಕ್ಕ ಮಕ್ಕಳಾದ ನಮಗೆ ವಿವರಿಸಿ ಹೇಳುತ್ತಿದ್ದರು.ಕಲ್ಲುಸಕ್ಕರೆ ಪೊಟ್ಟಣ ತಂದು ಕಳೆಯುವ ಲೆಕ್ಕ ಕಲಿಸಿದರು. "ಮಾಚಾ, ೨೦ ರಲ್ಲಿ ೮ ಹೋದರೆ ಎಷ್ಟು?" ನನಗೆ ಪ್ರಶ್ನೆ. "ಪುರುಷಾ, ೮ ಸಕ್ಕರೆ ಹೋಳು ನೀನು ತಿನ್ನು" ಎಂದರು. ಉಳಿದ ಹರಳುಗಳನ್ನು ನಾನು ಎಣಿಸಬೆಕು. ಆಗಲೂ ತಪ್ಪಾಗಿ ಹೇಳಿದರೆ ಕಿವಿಗೆ ಬಿತ್ತು ಹರಳು! ಶ್ರಾವಣ ಮಾಸದ ಪೂಜೆ - ಊರ ಹಿರಿಯ ಮನೆತನದ ಗೋಪಿಯವರದು. ಶ್ರಾವಣದ ಒಂದು ತಿಂಗಳು ಪೂಜೆಯು ಬೆಳಿಗ್ಗೆ ಒಂಬತ್ತು, ಹತ್ತು ಘಂಟೆಯವೆರೆಗೂ ನಡೆಯುವುದು. ಕೊನೆಯ ದಿನ, ಅಮಾವಾಸ್ಯೆ, ದೇವಾಲಯಕ್ಕೆ ಬಂದ ವಟುಗಳಿಗೆಲ್ಲಾ ದಕ್ಷಿಣೆ ಕೊಡುತ್ತಿದ್ದರು. ಕೆಳಗಿನ ಶಾಲೆಯ ವಟುಗಳನ್ನು ತಾವೇ ಕರೆದು ತಂದು ಅವರಿಗೆ ದಕ್ಷಿಣೆ ಕೊಡಿಸಿ ತಿರುಗಿ ಶಾಲೆಗಳಿಗೆ ಕರೆತಂದು ಎಲ್ಲರನ್ನೂ ಬಿಡುತ್ತಿದ್ದರು. ಯಾರೋ ಇದನ್ನು ಆಕ್ಷೇಪಿಸಿದಾಗ "ನೋಡು, ಶಿಕ್ಷಕರಾದ ನಾವು ಸಮಾಜದಲ್ಲಿ ಹೊಂದಿಕೊಂಡಿರಬೇಕಾಗುತ್ತದೆ" ಎಂದು ಶಿಕ್ಷಕಿ ಶ್ರೀಮತಿ ಪರಮೇಶ್ವರಿ ಪಂಡಿತ ವಿವರಿಸಿ ಹೇಳಿದರು. ಎರಡನೇಯತ್ತೆಗೆ ಬಂದಾಗ ಶ್ರೀ ಪರಮೇಶ್ವರ ಚಿತ್ರಿಗೆಮಠ ಎಂಬ ಶಿಕ್ಷಕರು. ‘ಮಂಕುತಿಮ್ಮನ ಕಗ್ಗ’ ದಲ್ಲಿ ಬರುವಂತೆ ಸಾಧು. ಏಟು, ಪೆಟ್ಟು ಇವರ ಹತ್ತಿರ ಸುಳಿಯದು. ಒಮ್ಮೆ ಶಾಲೆಯ ಹಿಂದುಗಡೆ ಮನೆ ಸರಸಕ್ಕ"ಪರಮೇಶ್ವರ ಮಾಸ್ತರರೇ,ಈ ನಾಣಿಗೆ ಎರಡು ಬಾರ್ಸಿ.ನನ್ನ ಮಗಳಿಗೆ ಕುಂಟಿ ಹೇಳಿ ಚಾಳಿಸ್ತ."ಎಂದಳು. ಪರಮೇಶ್ವರ ಮಾಸ್ತರು "ನೋಡು, ನಾನು ಇಲ್ಲಿ ಇರುವುದು ನಾಣಿಗೆ ನಾಲ್ಕು ಅಕ್ಷರ ಹೇಳಲು. ಹೊಡೆಯಲಿಕ್ಕಲ್ಲ. ಅವ ಕುಂಟಿ ಹೇಳಿದರೆ ತಪ್ಪು. ನಾನು ಅವನಿಗೆ ತಿಳಿಸಿ ಹೇಳ್ತೇನೆ. ಅಷ್ಟೇ ಅಲ್ಲ, ಅವನ ತಾಯಿಗೂ ಮನೆಗೆ ಹೋಗುವಾಗ ಹೇಳುತ್ತೇನೆ. ನಾನು ಇರುವುದು ಶಿಕ್ಷೆ ಕೊಡಲು ಅಲ್ಲ" ಎಂದು ತಮ್ಮ ನಯ, ನಾಜೂಕಿಗೆ ಸ್ವಲ್ಪವೂ ಕುಂದು ಬರದಂತೆ ಸರಸಕ್ಕಳಿಗೆ ತಿಳಿ ಹೇಳಿದರು. ನಮ್ಮ ಅದೃಷ್ಟ, ಮೂರನೇಯತ್ತೆಗೂ ಅವರೇ ಮಾಸ್ತರರು. ಏಟು, ಬೈಗುಳ ಏನೂ ಇಲ್ಲದೇ ಮೊದಲ ಮೂರು ತರಗತಿಗಳನ್ನು ಪರಮೇಶ್ವರಾನುಗ್ರಹದಿಂದ ಕಳೆದು ನಾಲ್ಕನೇಯತ್ತೆಗೆ ಬಂದೆ. ಶ್ರೀ ರಾಜಾರಾಮ ಚಿತ್ರಿಗೆಮಠ (ಶ್ರೀ ರಾ.ವೆಂ. ಚಿತ್ರಿಗೆಮಠ) ನಮ್ಮ ಪರಮಭಾಗ್ಯ ಎಂಬಂತೆ ಸಿಕ್ಕರು. ಪರಮಭಾಗ್ಯ ಎಂದು ನನಗೆ ಆಗ ಅನಿಸದಿದ್ದರೂ ಮುಂದೆ ಐದು, ಆರು, ಏಳರಲ್ಲಿ ಮತ್ತು ವಿದ್ಯಾಭ್ಯಾಸವನ್ನು ಮುಂದುವರಿಸಿದಾಗಲೆಲ್ಲಾ ಅನ್ನಿಸಿತು. ಆಗ ಅವರು ಎಲ್ಲರಂತೆ ಒಬ್ಬ ಮಾಸ್ತರರು. ಆದರೆ ಅವರಲ್ಲಿ ಇದ್ದ ಭಾಷಾ ಸಂಪತ್ತು, ಗಣಿತ ಜ್ಞಾನ, ಭಾಷಣಕಲೆ ಪ್ರಚ್ಛನ್ನವಾಗಿ ನಮಗೆ ತೆರವಿಲ್ಲದೇ ಹರಿದು ಬಂದಿದ್ದು ಅರಿವಾದದ್ದು ನಂತರದ ದಿನಗಳಲ್ಲಿ. ಮೇಲಣ ಶಾಲೆಯಲ್ಲಿ ಒಂದು ಸಮ್ಮೇಳನ ಇತ್ತು. ನಾವು ನಾಲ್ಕೈದು ಜನರಿಂದ ಒಂದು ನಾಟಕ ಆಡಿಸಿದರು.ಬಣ್ಣ ಇಲ್ಲ, ಡ್ರೆಸ್ ಇಲ್ಲ, ಬರೇ ಮಾತು, ನಟನೆ. ಆ ನಾಟಕಕ್ಕೆ ಆ ಸಮ್ಮೇಳನದಲ್ಲಿ ಮೊದಲನೇ ನಂಬರು ಬಂತು. ನಮಗೆಲ್ಲರಿಗೂ ನನ್ನಿಂದಲೇ ಮೊದಲನೇ ನಂಬರು ಬಂತು ಎಂಬ ಹೆಮ್ಮೆ.ಮುಂದೆ ನಾನು ಶಿಕ್ಷಕನಾದ ಮೇಲೆ ಮಕ್ಕಳಿಗೆ ನಾಟಕ ತರಬೇತಿ ಕೊಡಲು ವಿಶೇಷ ತರಬೇತಿಗಾಗಿ ಬೆಂಗಳೂರಿಗೆ ಹೋಗಲು ಆಯ್ಕೆ ಆದದ್ದು....ಎಲ್ಲಾ ನನ್ನ ಬಾಲ್ಯದ ಆ ನಾಟಕದಿಂದಾಗಿ. ನಮ್ಮ ರಾಜಾರಾಮ ಮಾಸ್ತರರ ತಲೆಗೆ ಚೆಲ್ವ ಬಿಳೇ ಟೋಪಿ (ದೇವರ ತಲೆಗೆ ಬಿಲ್ವಪತ್ರೆ ತಪ್ಪಿದರೂ ಟೋಪಿ ಸ್ಥಾನ ಬದಲಿಸುತ್ತಿರಲಿಲ್ಲ). ಅಷ್ಟೇ ಶುಭ್ರ ಕಚ್ಚೆ ಪಂಚೆ.ಕೋಟಿನ ಬಣ್ಣ ಮಾತ್ರ ಬೇರೆ. ಕೈಯಲ್ಲಿ ಬೇಸಿಗೆ, ಮಳೆ, ಚಳಿ ಎಲ್ಲ ಕಾಲದಲ್ಲೂ ಛತ್ರಿ. ರಾಜಾರಾಮ ಮಾಸ್ತರರ ಬಗೆಗೆ ನನಗೆ ಎಲ್ಲಿಲ್ಲದ ಗೌರವ. ನಾನು ಒಂಬತ್ತನೇಯತ್ತೆಯಲ್ಲಿದ್ದಾಗ ಬರೆದ ಎಂಟು,ಹತ್ತು ಭಾಮಿನಿ ಷಟ್ಪದಿಯ ಪತ್ರಗಳನ್ನು ನನ್ನ ಶಿವರಾಮಣ್ಣ ಇವರಿಗೆ ಕಾಣಿಸಿದನಂತೆ. "ಚೆನ್ನಾಗಿ ಬರೆದಿದ್ದಾನೆ. ಮತ್ತೂ ಪದ್ಯ ಬರೆಯತ್ತಿರುವಂತೆ ಹೇಳು" ಎಂದರಂತೆ. ಅಷ್ಟೇ ಅಲ್ಲ, ನಾಲ್ಕೈದು ವರ್ಷಗಳ ನಂತರ ಊರಿನಲ್ಲಿ ನಾನು ಸಿಕ್ಕಾಗ ನೆನಪಿಟ್ಟು "ಏ ಕೊಡ್ಲೆಕೆರೆ, ಷಟ್ಪದಿ ಚೆನ್ನಾಗಿ ಬರೆದಿದ್ದೆ ನೀನು. ನಿನ್ನಣ್ಣ ಕಾಣಿಸಿದ" ಎಂದು ಬೆನ್ನು ಚಪ್ಪರಿಸಿದರು ನಾಗಪ್ಪ ಶೆಟ್ಟಿ ಅಂಗಡಿ ಎದುರು. ಆಗ ಈಗ ನಾನು ಬರೆಯುತ್ತಲೇ ಇದ್ದೆ - ನನಗೆ ಭಾಮಿನಿ ಬರುವವರೆಗೂ, ನಂತರವೂ. ಹೀಗೆ ನನ್ನ ನಾಲ್ಕನೇಯತ್ತೆ ಅಬಾಧಿತವಾಗಿ ಮುಗಿದು ಐದನೇಯತ್ತೆಗೆ ನನ್ನ ಗಾಡಿ - ಗುಲ್ವಾಡಿ ಮಾಸ್ತರರಿರುವ ಮೇಲಣ ಶಾಲೆಗೆ ಚಲಿಸಿತು. ಈವರೆಗೂ ಕೊಡ್ಲೆಕೆರೆ ಮಾಚನಾಗಿದ್ದವನು ತಕ್ಷಣ ಮಾಚಾ ಕೊಡ್ಲೆಕೆರೆ ಆದ ಹೆಮ್ಮೆ. ಐದು ಮತ್ತು ಆರನೇಯತ್ತೆಗೆ ಗುಲ್ವಾಡಿ ಮಾಸ್ತರರು. ಸಾಮಾನ್ಯವಾಗಿ ಒಂದು ಕೈಯಲ್ಲಿ ಛಡಿ ಇರಲೇಬೇಕು. ಹೊಡೆಯಲಿಕ್ಕಲ್ಲ, ಹೆದರಿಸಲು. ಒಮ್ಮೆ ಮಾತ್ರ ನಮ್ಮ ಮಾಸ್ತರರು ರುದ್ರಾವತಾರ ತಾಳಿದರು. ವಿದ್ಯಾರ್ಥಿಗಳಲ್ಲಿ ಒಬ್ಬ ಸಾಣಿಕಟ್ಟೆಯಲ್ಲಿ ಬಸ್ ಅಪಘಾತ ಆದ ಸುದ್ದಿ ಕೇಳಿ ಶಾಲೆ ಬಿಟ್ಟ ಕೂಡಲೇ ಹತ್ತೂವರೆಗೆ ಮನೆಗೆ ಹೋಗದೆ ಒಂದು, ಒಂದೂವರೆ ಮೈಲು ದೂರದ ಸಾಣಿಕಟ್ಟೆಗೆ ಬಿಸಿಲಲ್ಲಿ ಹೋದ. ಅವನು ತಿರುಗಿ ಮನೆಗೆ ಬಂದದ್ದು ತುಂಬಾ ತಡವಾಗಿ, ಒಂದೂವರೆಗೆ! ಅವನ ಮನೆ ಜನವೆಲ್ಲಾ ಗಾಬರಿ. ಸೀದಾ ಮಾಸ್ತರರ ಮನೆಗೆ ಬಂದು ‘ನಮ್ಮ ಹುಡುಗ ಇನ್ನೂ ಮನೆಗೆ ಬರಲಿಲ್ಲ’ ಎಂದರು. ಪಾಪ! ಗಾಬರಿಗೊಂಡ ಮಾಸ್ತರರು ತಕ್ಷಣ ಕೋಟು ಹಾಕಿ ಹೊರಡಬೇಕು ಎನ್ನುವಷ್ಟರಲ್ಲಿ ಹುಡುಗ ಮನೆ ಸೇರಿದ. ನಿಟ್ಟುಸಿರು ಬಿಟ್ಟು ಮಾಸ್ತರರು ಊಟಕ್ಕೆ ಕುಳಿತರು. ನಂತರ ಮಧ್ಯಾಹ್ನ ಎರಡೂವರೆಗೆ ಶಾಲೆ ಆರಂಭ. ಆ ಹುಡುಗನನ್ನು ಕರೆದು ಕಾಲು ನೀಡಿಸಿ, ಕೂಡ್ರಿಸಿ ಕಾಲಿಗೆ ಒಂದೇ ಸವನೆ ಪಟಪಟ ಎಂದು ಏನಿಲ್ಲವೆಂದರೂ ಹದಿನೈದಿಪ್ಪತ್ತು ಸಲ ಹೊಡೆದರು. ನಮಗೆಲ್ಲಾ ಅಳು ಬಂತು. "ನಮಗೆಲ್ಲಾ ಎಷ್ಟೊಂದು ಆತಂಕ ಮಾಡಿದೆ, ಇದೇ ಕಾಲಿನಿಂದಲ್ಲವೇ ನಡೆದುಕೊಂಡು ಹೋದದ್ದು" ಎಂದು ಬೈದರು. ಚಿತ್ರಿಗೆ ಮಾಸ್ತರರು ‘ಕುಂಟಿ’ ಎಂದವನಿಗೆ ತೋರಿಸಿದ ಶಿಕ್ಷೆಗೂ, ಇಂದು ಗುಲ್ವಾಡಿ ಮಾಸ್ತರರು ಕೊಟ್ಟ ಶಿಕ್ಷೆಗೂ ಅಜಗಜಾಂತರ. "ಕುಣಿಯೋಣು ಬಾರ" ಇದನ್ನು ನಮ್ಮ ಮಠದ ಭಟ್ಟರ ಮಗ ಹೊಸ ಶೈಲಿಯಲ್ಲಿ ಹಾಡುತ್ತಿದ್ದ. ನಮ್ಮ ಮಾಸ್ತರರಿಗೆ ಖುಷಿಯೋ ಖುಷಿ. ಎಲ್ಲಾ ಮಾಸ್ತರರ ಮುಂದೂ ಅವರ ಕ್ಲಾಸಿಗೆ ಕರೆದುಕೊಂಡು ಹೋಗಿ ಹಾಡಿಸುತ್ತಿದ್ದರು, ಖುಷಿ ಪಡುತ್ತಿದ್ದರು. ಹಾಗೇ ಶಿಷ್ಯರ ಕೆಟ್ಟ ನಡತೆಯನ್ನೂ ಕಠೋರವಾಗಿ ಶಿಕ್ಷಿಸಿ ಕಿಂಚಿತ್ ಒಳ್ಳೆಯದನ್ನು ಪರ್ವತ ಮಾಡಿ ನಮ್ಮ ಐದು, ಆರನೇಯತ್ತೆಯನ್ನು ನಿರ್ವಹಿಸಿ ನಮ್ಮನ್ನು ಅಂದಿನ ಮುಲ್ಕಿ ಕ್ಲಾಸಿಗೆ (ಏಳನೇಯತ್ತೆಗೆ) ಹರಸಿ ಕಳಿಸಿದರು. ಆರನೇಯತ್ತೆಯಲ್ಲಿದ್ದಾಗ ನಮಗೆ ಹಿಂದಿ ಪ್ರಾರಂಭವಾಯಿತು. ಬಂಕಿಕೊಡ್ಲದ ವೆಂಕಟರಾಯ ಜನ್ನು ಮಾಸ್ತರರು ಹಿಂದಿ ಕಲಿಸುವವರು. ಅವರು ಹುಡುಗರೊಂದಿಗೆ ಹುಡುಗರಾಗಿ ಕಲಿಸುತ್ತಿದ್ದರು, ಕಲೆಯುತ್ತಿದ್ದರು. ನಮ್ಮಲ್ಲಿ ಕೆಲವರನ್ನು ಹಿಂದಿ ಪ್ರಥಮ ಪರೀಕ್ಷೆಗೆ ಕೂಡ್ರಿಸಿದರು. ನಾನು ಮತ್ತು ನನ್ನ ದೋಸ್ತ ಭೂಷಣ (ಡಾ. ಎಸ್. ವಿ. ಜಠಾರ, ಈಗ) - ಇಬ್ಬರ ಭಾಷಣ ಹಿಂದಿ ಮಾಸ್ತರರಿಗೆ ಅಚ್ಚು ಮೆಚ್ಚು. ಎರಡು-ಮೂರು ಮೈಲು ದೂರದ ಬಂಕಿಕೊಡ್ಲಿಗೆ, ಅವರ ಮನೆಗೆ ಆಗಾಗ ಹೋಗುತ್ತಿದ್ದೆವು. ಅವರ ಮನೆ ಪಾಗಾರದ ಹತ್ತಿರ ರಾಜನೆಲ್ಲಿಕಾಯಿ ಮರ ಇತ್ತು. ನಮಗಿಬ್ಬರಿಗೂ ಅಮೃತಪಾಯ ಶಿಕ್ಷಣ. ನಾನು, ಭೂಷಣ ಪರಮ ದೋಸ್ತರು. ಒಮ್ಮೆ ತೊರ್ಕೆ ಶಾಲೆಯಲ್ಲಿ ಸಮ್ಮೇಳನ. ನಾವಿಬ್ಬರೂ ಎರಡು ಮೈಲು ನಡೆದುಕೊಂಡು ಹೋಗಿ ಬಂದೆವು. ಈ ಸಮ್ಮೇಳನದಿಂದಾದ ಲಾಭವೆಂದರೆ ನಮ್ಮ ಸಮೀಪದ ನೆಂಟರಾದ ಶ್ರೀ ಸಿದ್ಧೇಶ್ವರರಲ್ಲಿ ಪೊಗದಸ್ತು ಊಟ. ಆ ಸಮ್ಮೇಳನ ಯಾವುದೆಂಬುದು ಮರೆತು ಹೋಗಿದೆ. ಅರ್ಥವಾಗಿದ್ದೂ ಬಹಳ ಕಡಿಮೆ. ಆದರೂ ಊಟ ಸಿಗದೇ ಅನರ್ಥವಾಗಲಿಲ್ಲ! ಮುಲ್ಕಿ ಕ್ಲಾಸಿಗೆ ಅಂದರೆ ಏಳನೇಯತ್ತೆಗೆ ಹೆಡ್‌ಮಾಸ್ಟರ್ ಶಂಭು ಹೆಗಡೆಯವರು. ತುಂಬಾ ಒಳ್ಳೇ ಮಾಸ್ತರರು. ಸಹಶಿಕ್ಷಕರಿಗಾಗಲೀ ವಿದ್ಯಾರ್ಥಿಗಳಿಗಾಗಲೀ ದೊಡ್ಡ ಮಾತನಾಡುವವರಲ್ಲ. ಮಕ್ಕಳೆಂದರೆ ತುಂಬಾ ಪ್ರೀತಿ. ಏಳನೇಯತ್ತೆಗೆ ಹಿಂದಿನ ತರಗತಿಗಳಂತೆ ಅಲ್ಲ, ಬೇರೆ ಬೇರೆ ವಿಷಯಗಳಿಗೆ ಬೇರೆ ಬೇರೆ ಮಾಸ್ತರರು. ಅವರಲ್ಲಿ ಹೊಂದಾಣಿಕೆ ಇರುವಂತೆ ಹೆಡ್‌ಮಾಸ್ಟರು ಚಾಣಾಕ್ಷತನದಿಂದ ನೋಡಿಕೊಳ್ಳುತ್ತಿದ್ದರು. ಇವರ ಕಾಲದಲ್ಲೇ ನಮ್ಮ ಶಾಲೆಗೆ ಮಾನ್ಯ ಸ.ಪ.ಗಾಂವಕರರು ಅತಿಥಿಗಳಾಗಿ ಬಂದಿದ್ದರು. ಅವರು ತಮ್ಮ ಕಂಚಿನ ಕಂಠದಿಂದ "ತಾಯೆ ಬಾರ, ಮೊಗವ ತೋರ" ಹಾಡಿದರು. ಇಡೀ ಶಾಲೆ ನಿಶ್ಶಬ್ದವಾಗಿ ಆಲಿಸಿತು ಎಂದರೆ ಏನೂ ಅಲ್ಲ. ಶಾಲೆಗೆ ತಾಗಿ ರಸ್ತೆ, ಅಲ್ಲಿ ಹೋಗುತ್ತಿದ್ದ ಪಟ್ಟಣಶೆಟ್ಟಿ, ಹಿತ್ತಲಕಾಯಿ ಪಾಂಡು, ಎಲೆ ಅಡಿಕೆ ಮುಕುಂದ ಎಲ್ಲರೂ ಬಂದು ಜಾಗ ಇದ್ದಲ್ಲಿ ಕುಳಿತು ಕೇಳಿ ಸಂತೋಷಪಟ್ಟರು. ಗುಲ್ವಾಡಿ ಮಾಸ್ತರು ಮಕ್ಕಳಿಂದ ‘ಕುಣಿಯೋಣು ಬಾರ’ ಹಾಡಿಸಲು ಮರೆಯಲಿಲ್ಲ. ಬಂತು ಪರೀಕ್ಷೆ ಕಟ್ಟುವ ಕಾಲ. ಕೆಲವರಿಗೆ ಪಾಲಕರನ್ನ ಕರೆಸಿ ‘ನಿಮ್ಮ ಮಗನಿಗೆ ಬರುವ ವರ್ಷ ಕಟ್ಟಿಸಿದರಾಯಿತು’ ಎನ್ನುತ್ತಿದ್ದರು. ನಾನು ಒಂದು ಅಚಾತುರ್ಯ ಮಾಡಿದೆ ಎನಿಸುತ್ತದೆ. ಮನೆಗೆ ಬಂದು "ಅಬೆ, ಶಂಭು ಮಾಸ್ತರರು ನನಗೆ ಮುಂದಕ್ಕೆ ಕಟ್ಟಿಸುತ್ತಾರಂತೆ" ಎಂದೆ. ನಮ್ಮಮ್ಮ ಸಂಜೆ ಅವರ ಮನೆ ಕಡೆಗೆ ಹೋಗುವವಳು ಮಾಸ್ತರರಿಗೆ ಸಿಕ್ಕಿ "ನಮ್ಮ ಮಗನಿಗೆ ಹಾಗಾದರೆ ಮುಂದಕ್ಕೆ ಕಟ್ಟಿಸಿ" ಎಂದಳು. ಶಂಭು ಮಾಸ್ತರರು ಹೂಂ ಅಂದರು. ಅವರಿಗೂ ಕಡಿಮೆ ಜನ ಕಟ್ಟಿ ಹೆಚ್ಚು ಜನ ಪಾಸಾದರೆ ಒಳ್ಳೆಯದು. ಹೀಗೆ ನನ್ನ ಮುಲ್ಕಿ ಪರೀಕ್ಷೆ ಸದ್ಯಕ್ಕೆ ಬಂದಾಯಿತು. ಈಗ ಒಮ್ಮೆ ನಮ್ಮ ಹಳೆಯ ಕಾಲದ ಸಮಾಜದ ವಿವರ ನೀಡುತ್ತೇನೆ. ನನ್ನ ಬಾಲ್ಯಕಾಲದ ಚಿತ್ರಣದ ದೃಷ್ಟಿಯಿಂದ ಅದೂ ಮುಖ್ಯವಾದುದೇ. ನಾನೀಗ ಹೇಳ ಹೊರಟಿರುವುದು ಆ ಕಾಲದ ವಿಧವೆಯರ ಕುರಿತಾಗಿ ಕೆಲವು ವಿಷಯಗಳನ್ನು. ತಾತಮ್ಮ ವಿಧವೆ. ಅವಳ ಅಕ್ಕನ ಮಗಳು ತಿಮ್ಮಕ್ಕ. ತಿಮ್ಮಕ್ಕಳ ಗಂಡ ಸತ್ತಾಗ ತಾತಮ್ಮ ವಿಧವೆಯರ ಪಾಡನ್ನು ಕುರಿತು ಹೇಳಿದ್ದಳು. ಅದನ್ನು ಅವಳ ಬಾಯಿಂದಲೇ ಕೇಳಬೇಕು. "ಮುಂಡೆಗೆ ಮೂರು ಖಂಡಗ ಅಕ್ಕಿ, ಮೂರು ರೂಪಾಯಿ". ಈ ‘ಮುಂಡೆ’ ಶಬ್ದ ಯಾಕೆ ಎಂದು ಕೇಳಿದಾಗ "ಹಿರಿಯರಿಗೆ ಇನ್ನೂ ಉತ್ತಮ ಶಬ್ದ ಹೊಳೆಯಲಿಲ್ಲ" ಎಂದಳು. ಅಯ್ಯೋ, ನೆನಪಿಸಿಕೊಂಡರೆ ಈಗಲು ಅಳು ಬರುತ್ತದೆ. ದಿನಾ ಒಂದು ಶಿದ್ದೆ ಅಕ್ಕಿ, ವರ್ಷಕ್ಕೆ ೩೬೦ ಶಿದ್ದೆ. ಮೂರು ಖಂಡಗ ಆಯಿತು. ಕ್ಷೌರಿಕನಿಗೆ ಕೊಡಲು, ಇನ್ನೇನಾದರೂ ದಕ್ಷಿಣೆ ಕೊಡಲು ಉಳಿದ ಹಣವಂತೆ. ಬಹುತೇಕ ಮನೆಯವರೆಲ್ಲಾ ಮನೆಯ ಕುಡಿಯನ್ನು ಬೆಳಗಲು ಬಂದ ಭಾಗ್ಯಮ್ಮನಿಗೆ ಕೊಡುತ್ತಿದ್ದ ‘ಭುಕ್ತಾಂಶ’. ಈಗಲೂ ನನಗೆ ಇದನ್ನು ನೆನಪಿಸಿಕೊಂಡು ಬರೆಯುವಾಗ ಕಣ್ಣು ಒದ್ದೆಯಾಗುತ್ತದೆ. ನಮ್ಮೆಲ್ಲರ ಒಕ್ಕೊರಲ ಬೇಡಿಕೆ "ದೇವರೇ, ಅಮ್ಮನಿಗೆ ಹೆಣ್ಣುಮಗಳು ಆಗದಿರಲಿ". ದೇವರು ನೆರವೇರಿಸಿದ. ಆದರೆ ನಮ್ಮ ಊರಿನ ಭವಾನಿ, ಮಾದೇವಿ, ನಮ್ಮ ತಿಮ್ಮಕ್ಕ ಇವರ ಗತಿ? ತಾತಮ್ಮ ಹೇಳಿದ ಮಾತು ನೆನಪಿಸಿಕೊಂಡರೆ ಹೊಟ್ಟೆ ಕಿವುಚುತ್ತದೆ. "ಕೈಗಟ್ಟಿ ಇರುವವರೆಗೆ ಅವಲಕ್ಕಿ ಕುಟ್ಟುತ್ತಾಳೆ. ದೊಡ್ಡ ಮನೆಗಳಿಗೆ ಅಡಿಗೆ ಸಹಾಯಕ್ಕೆ ಹೋಗುತ್ತಾಳೆ". ಅಯ್ಯೋ ಎನಿಸುತ್ತದೆ, ಇಂಥ ಎಷ್ಟೋ ತಿಮ್ಮಕ್ಕಂದಿರು ಮದುವೆ ಮನೆ, ಶ್ರಾದ್ಧದ ಮನೆಗೆ ಹೋಗಿ ಸಂಪಾದಿಸಿ ತಮ್ಮ ಮಕ್ಕಳಿಗೆ ಯೋಗ್ಯ ವಿದ್ಯಾಭ್ಯಾಸ ಕೊಡಿಸಿದವರುಂಟು. ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಿದವರುಂಟು. ಮುಂದೆ ಸರ್ಕಾರಗಳು ಅವರ ಸಹಾಯಕ್ಕೆ ಮುಂದಾದವು - ಕುರುಡುಗಣ್ಣಿಗೆ ಮೆಳ್ಳುಗಣ್ಣು. ಕೆಲವರಂತೂ ಬಾಲವಿಧವೆಯರು. ಒಬ್ಬಳು ಹತ್ತೋ, ಹನ್ನೊಂದನೇ ವರ್ಷದವಳು. ಸದ್ಯ ಸಮಾಜ ಅಷ್ಟರಮಟ್ಟಿಗೆ ಕುರುಡಾಗಲಿಲ್ಲ. ಅವಳನ್ನು ವಿರೂಪಗೊಳಿಸಲಿಲ್ಲ. ಕೆಲವರು ಓದು ಮುಂದುವರಿಸಿ ಶಿಕ್ಷಕಿಯರಾದರು. ನಮ್ಮಂಥವರಿಗೆ ಮಾರ್ಗದರ್ಶಕರಾದರು. ಇದೇ ರೀತಿ ಪರಿತ್ಯಕ್ತೆಯರ ಪಾಡು. ಮನೆಯ ಸೊಸೆಯನ್ನು ವಿನಾಕಾರಣ ಮನೆಯಿಂದ ಹೊರ ಹಾಕಿ ಮಗನಿಗೆ ಬೇರೆ ಮದುವೆ ಮಾಡಿಸುತ್ತಿದ್ದರು. ಮೇಲೆ ಹೇಳಿದ ಪನ್ನಿತಾತಿ ಮತ್ತು ಕಾಮಾಚಿಕ್ಕಿ ನಮ್ಮಮ್ಮನ ಚಿಕ್ಕಿಯರು. ಪನ್ನಿತಾತಿಗೆ ನಮ್ಮ ಮನೆಯಲ್ಲೇ ವಾಸ. ಆದರೆ ನಮ್ಮೆಲ್ಲರ ಬಟ್ಟೆಗಳನ್ನೂ ತೊಳೆಯಲು ಕೋಟಿತೀರ್ಥಕ್ಕೆ ತೆಗೆದುಕೊಂಡು ಹೋಗಿ, ತೊಳೆದು, ಅಲ್ಲೇ ದಡದ ಮೇಲಿರುವ ಅವರ ಮನೆ ಪನ್ನಿಮನೆಯಲ್ಲಿ ಒಂದು ಕೋಲಿಗೆ ಹರಡಿ, ಒಣಗಿದ ಮೇಲೆ ಮಾರನೇ ಮಧ್ಯಾಹ್ನ ತರುತ್ತಿದ್ದಳು. ಮಧ್ಯಾಹ್ನದ ಊಟ ಅವಳ ಮನೆ ಪನ್ನಿ ಮನೆಯಲ್ಲೇ. ಪನ್ನಿತಾತಿ ಅರ್ಧಕುರುಡಿ, ಆದರೂ ಬಟ್ಟೆಗಳನ್ನು ಎಷ್ಟು ಸ್ವಚ್ಫವಾಗಿ ತೊಳೆಯುತ್ತಿದ್ದಳು! ಅದೂ ಆ ಕಾಲದಲ್ಲಿ ಸಾಬೂನಿನ ಬಳಕೆ ಇರಲಿಲ್ಲ! ಅವಳ ರಾತ್ರಿಯ ಫಳಾರ ಮಾತ್ರ ನಮ್ಮ ಮನೆಯಲ್ಲಿ. ಅರ್ಧ ಮುಷ್ಠಿ ಅವಲಕ್ಕಿ, ಹಾಲು ಹಾಕಿ ಮಾಡಿದ ಅವಲಕ್ಕಿ ಗಂಜಿ. ಅವಳು ತನ್ನ ಅರವತ್ತನೇ ವಯಸ್ಸಿಗೆ ಗಂಡ ಸದಾಶಿವ ಭಾವನನ್ನು ಕಳೆದುಕೊಂಡಳು. ಆ ಹತ್ತು, ಹನ್ನೆರಡು ದಿನ ಅವಳದು ಪನ್ನಿ ಮನೆಯಲ್ಲೇ ರಾತ್ರಿ ವಾಸ. ಆದರೆ ಬೆಳಗಾಗುತ್ತಿದ್ದಂತೇ ಎದ್ದು ನಮ್ಮ ಮನೆಗೆ ಬಂದು ಬೆಳಗಿನ ಶೌಚಕ್ರಿಯೆಗಳನ್ನು ಮುಗಿಸಿ ದೊಡ್ಡ ಬೆಳಗಾಗುತ್ತಿದ್ದಂತೆ ಪನ್ನಿ ಮನೆಗೆ ಮುಂದಿನ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದಳು. ಒಂದು ಬೆಳಿಗ್ಗೆ ಶೌಚ ಮುಗಿಸಿ ಕೈಕಾಲು ತೊಳೆಯಲು ಬಾವಿಕಟ್ಟೆ ಹತ್ತಿರ ನೀರಿಗಾಗಿ ಕಾಯುತ್ತಿದ್ದಳು. ನನ್ನ ತಮ್ಮ ಮೂರ್ತಿ ತಾತಮ್ಮನನ್ನು ನೋಡಿದ. "ಅಬೇ, ಯಾರೋ ತಾತಮ್ಮನ ತಲೆಗೆ ಕಂಚಿಶಿಪ್ಪೆ ಟೋಪಿ ಹಾಕಿದ್ದಾರೆ" ಎಂದ. ನಮ್ಮ ಅಮ್ಮ ಅಳಲು ಶುರು ಮಾಡಿದಳು. ನಾವು "ಏ ಮಳ್ಳ, ಅದು ಕಂಚಿಶಿಪ್ಪೆ ಅಲ್ಲ. ಪನ್ನಿ ಭಾವ ಸತ್ತಿದ್ದರಿಂದ ತಲೆ ಕೂದಲು ತೆಗೆದಿದ್ದಾರೆ" ಎಂದೆವು. ಆಗ ಮೂರ್ತಿಯೂ ದೊಡ್ಡದಾಗಿ ಅಳತೊಡಗಿದ. "ನನಗೆ ತಾತಮ್ಮನನ್ನು ನೋಡಲು ಆಗುವುದಿಲ್ಲ. ಅವಳಿಗೆ ಕೂದಲು ಬೇಕು". ಈಗ ತಾತಮ್ಮನೂ ಅತ್ತಳು. ನಾವೆಲ್ಲ ತೀರ ಚಿಕ್ಕವರು. ತಾತಮ್ಮನ ಮಗ್ಗುಲಲ್ಲಿ ಮಲಗುತ್ತಿದ್ದೆವು. ನಿದ್ದಗಣ್ಣಿನಲ್ಲಿ ತಾತಮ್ಮನ ಕೂದಲೇ ನಮಗೆ ಆಸರೆ. ನಿಜವೆಂದರೆ ಕೊನೆಗೆ ಕ್ಷೌರಿಕನಿಗೆ ಉಳಿದ ಕೂದಲು ಬಹಳ ಕಡಿಮೆ. ಕೂದಲು ಅಂದ ಕೂಡಲೇ ನೆನಪಾಗುತ್ತಿದೆ: ನಾನು ಮೂರ್ತಿಯಷ್ಟೆ ದೊಡ್ಡವನಿರುವಾಗ ನನಗೊಂದು ಯೋಚನೆ. ಎಲ್ಲ ಹೆಂಗಸರಿಗೂ ಕೂದಲು ಉಂಟು. ಆದರೆ ಆಚೆಮನೆ ಗಂಗತ್ತೆ, ಈಚೆಮನೆ ಪಾತತ್ತೆಗೆ ಕೂದಲೇ ಇಲ್ಲ. ಇವರಿಗೆ ಹುಟ್ಟುತ್ತಲೇ ಕೂದಲಿಲ್ಲವೇ - ಈ ಪ್ರಶ್ನೆ ನನ್ನೊಳಗೇ ಐದಾರು ತಿಂಗಳು ಕೇಳಿಕೊಳ್ಳುತ್ತಿದ್ದೆ. ಕೊನೆಗೊಮ್ಮೆ ಧೈರ್ಯಮಾಡಿ ತಾತಮ್ಮನಿಗೆ ಈ ಪ್ರಶ್ನೆ ಕೇಳಿದೆ. ತಾತಮ್ಮನಿಗೆ ಉತ್ತರ ಗೊತ್ತು, ಹೇಳಲಾರಳು. ನಾನು ಬಿಡಲಾರೆ. ಮುಂದೆ ಕಾರಣ ತಿಳಿದಾಗ ನನಗೆ ಆದ ಆಘಾತ ಬಹಳ. ಕೇರಳದ ಒಂದು ದಂಪತಿಯನ್ನು ನನ್ನ ಐದಾರನೇ ವರ್ಷದಿಂದ ನೋಡುತ್ತಿದ್ದೆ. ಕೇರಳದವರೆಂದು ಯಾರೂ ಗುರುತಿಸಬಹುದು. ಶಂಕರಕುಟ್ಟಿ (ಮಲೆಯಾಳಿ ಅಜ್ಜ). ಮೊಣಕಾಲಿನವರೆಗೆ ಶುಭ್ರ ಮುಂಡು. ಒಳಗೆ ಶುಭ್ರ ಲಂಗೋಟಿ, ಹೊದೆಯಲು ತೀರ ದೊಡ್ಡದಲ್ಲದ ಒಂದು ಬಿಳಿಯ ಪಂಜಿ. ದಿನವೂ ಬೆಳಿಗ್ಗೆ ಹೂ ಕೊಯ್ದು ಈಶ್ವರ ದೇವಸ್ಥಾನಕ್ಕೆ ಕೊಟ್ಟು ಬರುವುದು. ಅಮ್ಮ ಎಂದು ನಾವು ಕರೆಯುತ್ತಿದ್ದ ಅವನ ಹೆಂಡತಿಯ ಹೆಸರು ಪಾರ್ವತಿ. ಗಂಡನಿಗೆ ತಕ್ಕ ಸಾತ್ವಿಕ ಹೆಣ್ಣು. ಕಿವಿಗಳಲ್ಲಿ ದೊಡ್ಡ ತೂತು - ಮೀಡಿಯಂ ಚಕ್ಕುಲಿ ಆಕಾರದ್ದು! ಈ ಸಾತ್ವಿಕ ದಂಪತಿಗಳು ಇಲ್ಲೇ ಇರಬೇಕೆಂದು ಯಾರೋ ಪುಣ್ಯಾತ್ಮರು ದಿನವೂ ಒಂದು ಶಿದ್ದೆ ಅಕ್ಕಿ ಕೊಡುತ್ತಿದ್ದರು. ಅದನ್ನು ಶಿವಾರ್ಪಣೆ ಮಾಡಿ ಬಲಿ ಆದ ನಂತರ ಅನ್ನದ ಚರಿಗೆಯನ್ನು ತಾವಿದ್ದ ಹೊನ್ನಳ್ಳಿ ಮಠಕ್ಕೆ ತಂದು ಉಣ್ಣುತ್ತಿದ್ದರು. ಸುತ್ತು ಮುತ್ತಲಿನ ಮನೆಯವರು ಯಾರಾದರೂ ಪದಾರ್ಥ ಕೊಡುತ್ತಿದ್ದರು. ಪ್ರತಿ ಸೋಮವಾರ ವೇ.ಮೂ. ತಮ್ಮಣ್ಣ ಉಪಾಧ್ಯರು ಈಶ್ವರ ದೇವಾಲಯದ ಪುರಾಣ ಚೌಕಿಯಲ್ಲಿ ಪುರಾಣ ಓದುತ್ತಿದ್ದರು. ಶ್ರೋತೃಗಳು: ಪರಸ್ಥಳದ ಭಕ್ತರಲ್ಲಿ ಕೆಲವರು, ಊರಿನವರು ಐದಾರು ಜನ. ಶಂಕರ ಕುಟ್ಟಿ ಮಾತ್ರ ಖಾಯಂ ಶ್ರೋತೃ. ಒಮ್ಮೆ ಪುರಾಣ ಓದುತ್ತಿರುವಾಗ ಶಂಕರಕುಟ್ಟಿ, ಪುರಾಣಿಕರ ಸನಿಹ ಕುಳಿತವನು ಬಾಗಿಲ ಕಡೆ ಸರಿಯುತ್ತಾ ಹೋದನು - ಬಂದವರಿಗೆ ಜಾಗ ಮಾಡಿಕೊಡಲು. ಕೊನೆಗೊಮ್ಮೆ ದೀಕ್ಷಿತರ ಲಕ್ಷ್ಯ ಕುಟ್ಟಿ ಕಡೆ ಹೋಯಿತು. ಇನ್ನೇನು, ಪೌಳಿ ಕೆಳಗೆ ಬೀಳುತ್ತಾನೆ- ಆಗ ‘ಶಂಕರಾ’ ಎಂದು ಕೂಗಿದರು. ಕುಟ್ಟಿ ಸಾವರಿಸಿಕೊಂಡು ವಿಷಯ ವಿವರಿಸಿದನು. ಪುರಾಣ ಶುರುವಾದ ಕೂಡಲೆ ಬಹಳ ಜನ ಕೇಳಲು ಬರುತ್ತಾ ಇದ್ದರಂತೆ. ಅವರಿಗೆ ಅನುವು ಮಾಡಿಕೊಡಲು ಕುಟ್ಟಿ ಸರಿಯುತ್ತಾ ಹೋದನಂತೆ. "ಯಾರು ಆ ಜನ? ಈಗ ಎಲ್ಲಿ?" ಎಂದರೆ ಶಂಕರಕುಟ್ಟಿ ಕೈ ಮುಗಿದ. "ಅವರು ಅಪರಿಚಿತರು. ಶಂಕರನ ಊರಿನವರು. ತಮ್ಮಣ್ಣ ದೀಕ್ಷಿತರ ಪುರಾಣ ಕೇಳಲು ಸಿದ್ಧಿಕ್ಷೇತ್ರಕ್ಕೆ ಬಂದವರು" ಎಂದನಂತೆ. ತಮ್ಮಣ್ಣ ಉಪಾಧ್ಯರ ಶಿವಪುರಾಣ ಕೇಳಲು ಕೈಲಾಸದಿಂದಲೂ ಜನ ಬರುತ್ತಿದ್ದರು - ಇದು ಕುಟ್ಟಿಯ ಬಲವಾದ ನಂಬಿಕೆ. ಪಾರ್ವತಿ ಒಂದು ದಿನ ದೇವಸ್ಥಾನಕ್ಕೆ ಹೋಗುವಾಗ ಒಬ್ಬ ತುಂಟ "ಪಾರ್ವತಿ ಎಮ್ಮೆ, ಅಕ್ಕಚ್ಚು ಕುಡಿಯುವ ಎಮ್ಮೆ" ಎಂದನಂತೆ. ಅವನನ್ನು ಬೆನ್ನಟ್ಟಿ ಹೋಗಿ ಕೊಟ್ಟಿಗೆಯಲ್ಲಿ ಅವಿತಿರಿರುವ ಅವನ ಕಿವಿ ಹಿಡಿದು "ನಾನು ಎಮ್ಮೆ, ನೀನು ಎಮ್ಮೆ ತಮ್ಮ. ಕಲ್ಗಚ್ಚು ಕುಡಿಯಲು ಇಲ್ಲಿಗೆ ಬಂದೆ" ಎಂದು ತನ್ನ ಅರ್ಧ ಮಲೆಯಾಳಿ ಕನ್ನಡದಲ್ಲಿ ಬೈದಳಂತೆ. ಪ್ರಭಾತ ಫೇರಿ ೧೯೪೨-೪೩ರಲ್ಲಿ ಮತ್ತು ನಂತರ - ದಿನವೂ ಬೆಳಿಗ್ಗೆ ಮಕ್ಕಳ, ಹೆಂಗಸರ ಪ್ರಭಾತ ಫೇರಿ ನಡೆಯುತ್ತಿತ್ತು. "ಗಾಂಧಿ ಮಹಾರಾಜಕೀ ಜೈ", "ಭಾರತಕ್ಕೆ ಸ್ವಾತಂತ್ರ್ಯ ಕೊಡಿ", "ತಿರುವುತ್ತ ರಾಟಿಯನ್ನು, ತರುವ ಸ್ವರಾಜ್ಯವನ್ನು" ಇವು ಸ್ಲೋಗನ್. ನಾನು ಏಳನೇಯತ್ತೆ ಇರಬೇಕು, ಈ ಪ್ರಭಾತಫೇರಿಯಲ್ಲಿದ್ದೆ. ಪೋಲೀಸರು ಬಂದು ನಮ್ಮನ್ನೆಲ್ಲಾ ಅರೆಸ್ಟ್ ಮಾಡಿ ಲಾಕಪ್ಪಿಗೆ ಹಾಕಿದರು. ಮಕ್ಕಳು ಗಂಜಿ ಊಟವನ್ನೂ ಮಾಡಿಲ್ಲ ಎಂದು ತಾಯಂದಿರು ಅಳುತ್ತಾ ಬಂದರೂ, ಯಾರನ್ನೂ ಬಿಡಲಿಲ್ಲ. ಊರಿನವರೇ ಎಲ್ಲಾ ಒಟ್ಟಿನಲ್ಲಿ ಅವಲಕ್ಕಿ ಚಹಾ ಹೊಟೆಲ್‌ನಿಂದ ತರಿಸಿಕೊಟ್ಟರು, ನಾನೂ ಕುಡಿದೆ. ಆದರೆ ತಕ್ಷಣ ವಾಂತಿ ಆಗಿ ಕಣ್ಣು ಬಿಡುವ ಪರಿಸ್ಥಿತಿ. ಬೇರೇನೂ ಆಗಲಿಲ್ಲ. ಪಂಚನಾಮೆ ಪ್ರಾರಂಭ. ನನ್ನ ಹತ್ತಿರ ‘ಮಾಣೀ, ನಿನಗೆ ವಯಸ್ಸು’ ಎಂದಾಗ ‘ಹದಿನೆಂಟು’ ಎಂದೆ. ‘ಮೀಸೆ ಇಲ್ಲ, ಗಡ್ಡ ಇಲ್ಲ, ಹದಿನೆಂಟಂತೆ’ ಎಂದು ಬೆನ್ನ ಮೇಲೆ ಮೆಲ್ಲಗೆ ಹೊಡೆದು ‘ಮನೆಗೆ ನಡೆ’ ಎಂದರು. ಹಾಗೆ ಮೂವತ್ತು ನಲವತ್ತು ಜನರನ್ನು ತಿರುಗಿ ಕಳಿಸಿದರು. ಹದಿನೆಂಟು ವರ್ಷವಾದರೆ ಜೈಲಿಗೆ ಕಳಿಸುತ್ತಾರೆ ಎಂದು ನಾವೆಲ್ಲ ‘ಹದಿನೆಂಟು’ ಎಂದಿದ್ದು. ಅವರು ಕೇಳುತ್ತಾರೆಯೇ!"ನಡೆಯಿರಿ ಮಧ್ಯಾಹ್ನ ಶಾಲೆಗೆ" ಎಂದು ಕಳಿಸಿಬಿಟ್ಟರು. ನಮ್ಮಲ್ಲಿ ಒಬ್ಬ ಪೋಲೀಸ್ ಪೇದೆಯ ಮಗನೂ ಇದ್ದನು. ಮತ್ತೆ ಈಗ ನನ್ನ ವಿದ್ಯಾಭ್ಯಾಸದ ವಿಷಯಕ್ಕೆ ಹಿಂತಿರುಗುತ್ತೇನೆ. ಅದು ೧೯೪೪ರ ಪ್ರಾರಂಭ. ನಮ್ಮದು ವೈದಿಕರ ಮನೆ. ಅಪರೂಪಕ್ಕೆ, ತುಂಬಾ ಪರಿಚಿತರಿದ್ದರೆ ಅಂಥವರು ನಮ್ಮ ಮನೆಗೆ ಬಂದು ಉಳಿದುಕೊಳ್ಳುವುದಿತ್ತು. ಶ್ರೀ ಕ್ಷೇತ್ರದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿ ಹೋಗುವುದು ಅಂಥವರ ಉದ್ದೇಶ ಹೀಗೆ ಪರಿಷೆಯಾಗಿ ಬಂದವರು ಶಿವಮೊಗ್ಗಾದ ಬಾಲೋಜಿರಾಯರು ಮತ್ತು ಅವರ ಕುಟುಂಬ. ಅವರ ಸಮೀಪದ ಬಂಧು ವೆಂಕೋಬರಾಯರಿಗೆ ಸಂತಾನವಿಲ್ಲ. ಹೀಗಾಗಿ ನಾಗ ಪ್ರತಿಷ್ಠೆ, ಶ್ರೀ ದೇವರಲ್ಲಿ ವಿಶೇಷ ಪೂಜೆ ಇವನ್ನೆಲ್ಲಾ ನಾಲ್ಕೈದು ದಿನಗಳಲ್ಲಿ ನೆರವೇರಿಸಿದರು. ಹೋಗುವಾಗ ಅವರ ದೃಷ್ಟಿ ನನ್ನ ಮೇಲೆ ಬಿತ್ತು. "ಇವ ಇಲ್ಲಿ ಪರೀಕ್ಷೆ ಕಟ್ಟಲಿಲ್ಲ, ಏನು ಮಾಡ್ತಾನೆ, ಇವನನ್ನು ನಾನು ಶಿವಮೊಗ್ಗಾಕ್ಕೆ ಒಯ್ದು ತೀರ್ಥಹಳ್ಳಿಗೆ ಅನಂತಭಟ್ಟರಲ್ಲಿ ಕಳುಹಿಸುತ್ತೇನೆ. ಅಲ್ಲಿ ಇಂಗ್ಲಿಷ್ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದಲ್ಲಾ" ಎಂದರು. ಸೂಚನೆ ಯೋಗ್ಯವಾಗಿದೆ ಎನಿಸಿತು. ನನ್ನನ್ನು ಅದೇ ಫಾಲ್ಗುಣ ಮಾಸದಲ್ಲಿ ಶಿವಮೊಗ್ಗಾಕ್ಕೆ ಶ್ರೀ ಬಾಲೋಜಿರಾಯರ ಜೊತೆ ಕಳಿಸಿದರು. ಆಗ ಅವರ ಮಗ ರಾಮು, ಈಗ ಎಚ್. ಬಿ. ರಾಮರಾವ್, ಅವರ ಜೊತೆ ಶಿವಮೊಗ್ಗಾಕ್ಕೆ ಹೋದೆ. ಮುಂದೆ ಇಪ್ಪತ್ತು ವರ್ಷಗಳ ನಂತರ ಇದೇ ಎಚ್.ಬಿ.ರಾಮರಾವ್ ನಮ್ಮ ಭದ್ರಕಾಳಿ ಹೈಸ್ಕೂಲಿನ ಹೆಡ್‌ಮಾಸ್ಟರ್ ಆಗಿ ನೇಮಕವಾದರು. ಕಾಲಾಯ ತಸ್ಮೈ ನಮಃ. ನನ್ನನ್ನು ಸ್ವಲ್ಪ ಕಾಲ ಅಲ್ಲಿರಿಸಿಕೊಂಡು ಬಾಲೋಜಿರಾಯರು ನನ್ನ ಭವಿಷ್ಯತ್ತಿನ ವಿದ್ಯಾರ್ಜನೆಯ ಪ್ರೇರಕ,ಪೂರಕ ಸ್ಥಳ ಶ್ರೀ ರಾಮಚಂದ್ರಾಪುಮಠದ ತೀರ್ಥಹಳ್ಳಿಯ ಮಠಕ್ಕೆ ಕಳಿಸಿದರು. ನನ್ನ ವ ನಮ್ಮ ವಿದ್ಯಾಭ್ಯಾಸಕ್ಕೆ ಬೆನ್ನೆಲುಬಾಗಿ ನಿಂತ ಶ್ರೀ ಹಂದೆ ಶಾನುಭೋಗರು ನನ್ನನ್ನು ಮಠದ ಒಳಗೆ ಕರೆದುಕೊಂಡು ಹೋಗಿ ನನಗೆ ಒಂದು ಕೋಣೆಯನ್ನು ವಾಸಕ್ಕಾಗಿ ಏರ್ಪಾಡು ಮಾಡಿದರು. ಇಷ್ಟಕ್ಕೂ ನಮ್ಮ ತಂದೆ ಶ್ರೀ ಅನಂತ ಭಟ್ಟರು ಹೊಸನಗರ ಮಠದಲ್ಲಿ ಕಾರ್ಯನಿಮಿತ್ತ ಎಂದು ಹತ್ತು ದಿನ ಇರಲು ಹೋಗಿದ್ದರು. ಇದು ಆ ವರ್ಷದ ಚೈತ್ರಮಾಸ. ನನ್ನನ್ನು ಶ್ರೀರಾಮನವಮಿಗೆ ತಂದೆಯವರು ಹೊಸನಗರದಿಂದ ಬಂದು ಕರೆದುಕೊಂಡು ಹೋದರು. ಕಾರಿನಲ್ಲಿ, ಕೆಲವು ಬೆಲೆಬಾಳುವ ವಸ್ತುಗಳನ್ನು ಒಯ್ಯುವುದಿತ್ತು. ಅಂತೂ ನನ್ನ ಪರಸ್ಥಳದ ವಾಸ ಶಿವಮೊಗ್ಗೆ, ತೀರ್ಥಹಳ್ಳಿ, ಹೊಸನಗರಗಳಲ್ಲಿ ಪ್ರಾರಂಭವಾಯಿತು. ಇದೇ ವರ್ಷ ಮೇದಲ್ಲಿ ತಂದೆಯವರು ಗೋಕರ್ಣಕ್ಕೆ ಹೋದಾಗ- ಪನ್ನಿತಾತಿ, ಕಾಮಾಚಿಕ್ಕಿ ಮೊದಲೇ ನಿರ್ಣಯಿಸಿರಬೇಕು - "ಅನಂತ, ಮಕ್ಕಳೆಲ್ಲಾ ದೊಡ್ಡಾದೊ, ಕೊನ್ನುಗುಲಿಗೆ ಹೆದರುವುದಿಲ್ಲ. ಶಿವರಾಮ, ಗಜು ಇಬ್ಬರೂ ಮುಲ್ಕಿ ನಪಾಸು. ಶಾಲೆಗೆ ಹೋಗ್ತ್ವೋ, ಇಲ್ಲ್ಯೊ. ಎಲ್ಲಾ ಹೇಳ್ತೊ - ಗಜು ಕಾಂಗ್ರೆಸ್ಸಿನಲ್ಲಿ ಅಡಗಿರುವವರಿಗೆ ಸಹಾಯ ಮಾಡ್ತ. ದೇಶಸೇವೆ. ನಮ್ಮ ಲೆಕ್ಕದಲ್ಲಿ ದೇಶಸೇವೆ ಗೋಪಿಭಟ್ಟರಿಗೆ, ಶಿರೂರು ಮುಕುಂದ ಪ್ರಭು, ಇಂಥವರಿಗೆ. ಮನೆಯಲ್ಲಿ ಬೇಕಾದ ಹಾಗೆ ಇದ್ದು. ಇದೆಲ್ಲ ಓದಿ ಮುಗಿಸಿದ ನಂತರ ಅಲ್ಲವೇ?".ಮುದುಕಿಯರ ಮಾತು ತಂದೆಯವರಲ್ಲಿ ಕರ್ತವ್ಯ ಪ್ರಜ್ಞೆ ಮೂಡಿಸಿತು. ಮಕ್ಕಳ ವಿದ್ಯಾಭ್ಯಾಸ ಮುಖ್ಯ. ತಕ್ಷಣ ಎರಡು ಕೆಲಸ ಮಾಡಿದರು: ಗೋಕರ್ಣ ಮನೆ ನೋಡಿಕೊಂಡಿರಲು ಯೋಗ್ಯ ಜನ. ನಾವು ತೀರ್ಥಹಳ್ಳಿಯಲ್ಲಿರಲು ಶ್ರೀ ಮಠದ ಗುರುಗಳು ಶ್ರೀ ರಾಮಚಂದ್ರ ಭಾರತಿಗಳ ಒಪ್ಪಿಗೆ. ಶ್ರೀಗಳವರು "ಅನಂತ, ಈ ಮೊದಲೇ ನೀನು ಈ ಕೆಲಸ ಮಾಡಬೇಕಿತ್ತು. ಇರಲಿ, ನಮ್ಮ ಅಪ್ಪಣೆ ಉಂಟು, ಯೋಗ್ಯ ಕಾಲ ನಿಶ್ಚಯಿಸಿ ಮಠಕ್ಕೆ ಸಂಸಾರ ಸಮೇತ ಬಾ" ಎಂದರು. ಸರಿ, ಅದೇ ಮಳೆಗಾಲದಲ್ಲಿ ಅಂಕೋಲೆ ಮೇಲೆ ಹುಬ್ಬಳ್ಳಿಗೆ ಹೋದರು. ಅಲ್ಲಿ ನಮ್ಮ ಚಿಕ್ಕಮ್ಮ ಶ್ರೀಮತಿ ಗೌರಮ್ಮ ಪಂಡಿತ ಇದ್ದರು. ಶ್ರೀ ಸ.ಪ. ಗಾಂವಕರ ಸಾಹೇಬರ ಸಹಕಾರದಿಂದ ಶಿಕ್ಷಕಿಯಾಗಿ ಆಗಷ್ಟೇ ಕೆಲಸ ಪ್ರಾರಂಭಿಸಿದ್ದರು. ಅಲ್ಲಿ ಕಾಮಾಚಿಕ್ಕಿ, ಪನ್ನಿತಾತಿ ಮತ್ತು ಗಜಣ್ಣ ಇವರನ್ನು ಬಿಟ್ಟು ತೀರ್ಥಹಳ್ಳಿಗೆ ಬಂದು ತಳ ಊರಿದರು. ರಾಮಚಂದ್ರಾಪುರ ಗ್ರಾಮ ಹೊಸನಗರ ತಾಲೂಕಿನಲ್ಲಿದೆ. ಹೊಸನಗರದಿಂದ ಕೇವಲ ಮೂರು ಮೈಲಿ.ಆದರೆ ಮಳೆಗಾಲದಲ್ಲಿ ಹತ್ತು ಹನ್ನೆರಡು ಮೈಲಿ. ಸುತ್ತದ ಮೂಲಕ ಸುತ್ತಿಕೊಂಡು ಹೋಗಬೇಕು. ಚೈತ್ರ ಬಹುಳ ನವಮಿ ರಾಮನವಮಿ. ಅಂದು ಅಲ್ಲಿ ರಥೋತ್ಸವ. ಶ್ರೀಮಠದ ದೇವರು ರಾಮ, ಲಕ್ಷ್ಮಣ, ಸೀತಾ. ಸಹಸ್ರಾರು ಜನರು ಬರುತ್ತಾರೆ. ನೂರಾರು ಅಂಗಡಿಗಳು ಬರುತ್ತವೆ. ಬೆಳಿಗ್ಗೆ ರಥೋತ್ಸವ.ಆ ವರ್ಷ ವಿಶೇಷವಾಗಿ ಮಾರನೇ ದಶಮಿಯಂದು ಶ್ರೀ ಶ್ರೀಗಳಳವರಿಗೆ ಕಿರೀಟ ಧಾರಣೋತ್ಸವ. ಅಡ್ಡಪಲ್ಲಕ್ಕಿ ಉತ್ಸವ ನೋಡಲು ಬಲು ಚೆನ್ನಾಗಿರುತ್ತದೆ. ಚಿನ್ನದ ಕಿರೀಟದಲ್ಲಿರುವ ಮುತ್ತು,ರತ್ನಗಳು ಗ್ಯಾಸ್‌ಲೈಟಿನ ಬೆಳಕಿಗೆ ಕಣ್ಣು ಕೋರೈಸುತ್ತವೆ. ಇಂಥ ಕಿರೀಟೋತ್ಸವವನ್ನು ಮೊದಲು ನೋಡಿದ ಹಿಗ್ಗು,ಏಜೆಂಟ್ ಅನಂತ ಭಟ್ಟರ ಮಗನಾಗಿ ಜನ ನನ್ನನ್ನು ಗುರುತಿಸಿದ ರೀತಿ, ನಮ್ಮಲ್ಲೆಲ್ಲ ನಾನೇ ಮೊದಲಿಗನಾಗಿ ಸವಿಯುತ್ತಿರುವುದು ಇವೆಲ್ಲ ಮುಪ್ಪುರಿಗೊಂಡು ನಾನೊಬ್ಬ ನಾನೇ ಆದೆ. ಮಾರನೇ ದಿನವೇ ನಾನು, ನಾರಾಯಣಭಟ್ಟರು ತೀರ್ಥಹಳ್ಳಿಗೆ ಹೊರಟೆವು. ನಲವತ್ತು ಮೈಲಿ ದೂರದ ತೀರ್ಥಹಳ್ಳಿಗೆ ಒಳರಸ್ತೆಯಲ್ಲಿ ಹದಿನೆಂಟು ಮೈಲಿ ನಡೆದುಕೊಂಡೇ ಹೋದೆವು.ಯಾಕೆಂದರೆ ನಾರಾಯಣಭಟ್ಟರ ಅವಶ್ಯಕತೆ ತೀರ್ಥಹಳ್ಳಿಯಲ್ಲಿತ್ತು. ಬಸ್ಸಿನಲ್ಲಾದರೆ ಎರಡು ದಿನ ಬೇಕು. ರಾಮಚಂದ್ರಾಪುರ, ಸರಯೂ, ಆರಗ, ತೀರ್ಥಹಳ್ಳಿ. ಇಷ್ಟರಲ್ಲೇ ತೀಯವರು ಬಂದು ತಾನು ಗೋಕರ್ಣಕ್ಕೆ ಹೋಗಿ ಎಲ್ಲರನ್ನೂ ಇಲ್ಲಿಗೇ ಕರೆ ತರುವುದಾಗಿ ಹೇಳಿದರು. ನನಗಂತೂ ಆದ ಸಂತೋಷ ಅಷ್ಟಿಷ್ಟಲ್ಲ. ವೈಶಾಖ ಶುದ್ಧ ಹುಣ್ಣಿಮೆಗೆ ನೃಸಿಂಹ ಜಯಂತಿ ಆಚರಣೆ. ಎರಡು ದಿನ ಮೊದಲು, ಎರಡು ದಿನ ಬಳಿಕ ಹೊಳೆ ಆಚೆ ಕುರುವಳ್ಳಿಯಲ್ಲಿ ಶ್ರೀಮಠದ ಗಂಗಾ ವಿಶ್ವೇಶ್ವರ ದೇವರಲ್ಲಿ ಉತ್ಸವ. ನಾಲ್ಕೂ ದಿನಗಳು ವಿಜೃಂಭಣೆಯ ಆಚರಣೆ. ಊರ ಹೆಸರು ತೀರ್ಥರಾಜಪುರ. ತೀರ್ಥಹಳ್ಳಿ ಇತ್ತಲಾಗಿನ ಹೆಸರು. ನಮ್ಮ ಮಠದ ಹಿಂಭಾಗದ ಹಿತ್ತಲಿಗೆ ತಾಗಿಯೇ ತುಂಗಾನದಿ ಹರಿಯುತ್ತದೆ. ಈಗ ನಾನು ಹೇಳಿದ ತೀರ್ಥರಾಜಪುರ ಮಠ,- ಅಲ್ಲಿಯ ಸ್ವಾಮಿಗಳಿಗೆ "ತುಂಗಾನದಿಯಲ್ಲಿ ನಾನು ಇದ್ದೇನೆ, ನೀವು ತಂದು ಉಪಾಸನೆ ಮಾಡಿ" ಎಂದು ಸ್ವಪ್ನವಾಯಿತಂತೆ- ಮಠದ ಹಿಂದುಗಡೆ ತುಂಗಾನದಿಯಲ್ಲಿ ಹುಡುಕಲು ಒಂದು ಲಕ್ಷ್ಮೀನರಸಿಂಹ ಚಕ್ರ ದೊರಕಿತು. ಲೋಹದಲ್ಲಿ ಮಧ್ಯದಲ್ಲಿ ದೊಡ್ಡದಾದ ಲಕ್ಚ್ಮೀನರಸಿಂಹ, ಅದರ ಸುತ್ತ ಒಂದು ಸುತ್ತಿನಲ್ಲಿ ಏಳೆಂಟು ಲಕ್ಷ್ಮೀನರಸಿಂಹ, ವೃತ್ತದ ಇನ್ನೊಂದು ಸುತ್ತಿನಲ್ಲಿ ಹದಿನೈದು ಹದಿನಾರು ವಿಗ್ರಹ - ಹೀಗೆ ಕೆತ್ತಲ್ಪಟ್ಟಿದೆ. ಇದಕ್ಕೆ ಲಕ್ಷ್ಮೀ ನರಸಿಂಹ ಚಕ್ರ ಎಂದು ನಾಮಧೇಯ ಮಾಡಿ ನದಿಕಡೆ ಮುಖ ಮಾಡಿ ದೇವಾಲಯ ಕಟ್ಟಿಸಿದರು. ಅಂದಿನಿಂದ ಮಠಕ್ಕೆ ತಾಗಿರುವ ತುಂಗಾನದಿಯ ಭಾಗ ಚಕ್ರತೀರ್ಥವಾಯಿತು. ದಿನವೂ ಚಕ್ರತೀರ್ಥದಿಂದ ಶುಭ್ರ ಬಟ್ಟೆ ಧರಿಸಿ ಒಂದು ಕೊಡ ನೀರು ತಂದು ಮಠದಲ್ಲಿ ಶ್ರೀದೇವರಿಗೆ ಅಭಿಷೇಕ ಮಾಡಬೇಕು. ಅದು ಇಂದಿಗೂ ನಡೆದು ಬಂದಿದೆ. ಮಲೇರಿಯಾದ ಒಂದು ವಿಧವಾದ ರೋಗ ಚತುರ್ಥಿಜ್ವರ - ನಾಲ್ಕು ದಿನಕ್ಕೊಮ್ಮೆ ತಪ್ಪದೇ ಬರುವ ಜ್ವರ- ಇದಕ್ಕೆ ಚಕ್ರಪೂಜೆ ಮಾಡಿದಾಗ ಬಂದ ತೀರ್ಥದಿಂದ ರೋಗಿಗೆ ಸ್ನಾನ ಮಾಡಿಸುತ್ತಾರೆ. ಇದರಿಂದ ರೋಗ ನಿವಾರಣೆ ಎಂಬ ಭರವಸೆ ಉಂಟು. ತುಂಗಾನದಿಯಲ್ಲಿ ಸ್ನಾನ ಮಾಡಿ ಬಂದರೆ ಮೊದಲು ಸಿಗುವುದು ಶ್ರೀರಾಮೇಶ್ವರ ದೇವಾಲಯ. ಊರಿನ ಮುಖ್ಯ ದೇವಾಲಯದ ಸುತ್ತಮುತ್ತ ಕೆಲವು ಪಾಳು ಬಿದ್ದ ಸಣ್ಣ ದೇವಾಲಯಗಳಿವೆ. ದೇವಾಲಯದಿಂದ ಹೊರಬಂದರೆ ಮೊದಲು ರಥಬೀದಿಯಲ್ಲಿ ಸಿಗುವ ದೊಡ್ಡದೇವಾಲಯವೇ ಶ್ರೀ ಲಕ್ಷ್ಮೀ ನರಸಿಂಹ ದೇವರುಳ್ಳ ಶ್ರೀರಾಮಚಂದ್ರಾಪುರ ಮಠ. ಮೊದಲು ತೀರ್ಥರಾಜಪುರ ಮಠ. ತೀರ್ಥರಾಜ: ತುಂಗಾನದಿ ಪುರಾಣ ಪ್ರಸಿದ್ಧ ಪವಿತ್ರ ನದಿ.ಪರಶುರಾಮನು ತಂದೆಯ ಆಜ್ಞೆಯಂತೆ ತಾಯಿಯ ಶಿರಚ್ಫೇದನ ಮಾಡಿದ ನಂತರ ಕೊಡಲಿಗೆ ತಾಕಿದ ರಕ್ತ ತೊಳೆದರೆ ಹೋಗಲಿಲ್ಲ. ಎಲ್ಲ ಪವಿತ್ರನದಿಗಳಲ್ಲೂ ಸ್ನಾನ ಮಾಡಿ ತೊಳೆದರೂ ರಕ್ತ ಹೋಗಲೊಲ್ಲದು. ಆಗ ಶ್ರೀ ಪರಶುರಾಮ ಶೃಂಗೇರಿಯ ಹತ್ತಿರ ಬಂದು ತುಂಗಾನದಿಯಲ್ಲಿ ಅದ್ದಿದಾಗ ಸ್ವಲ್ಪ ರಕ್ತ ಹೋಯಿತಂತೆ. ಪರಶುರಾಮ ಕುಣಿದು ಕುಪ್ಪಳಿಸಿದ. ಅದೇ ನದಿಯ ಗುಂಟ ಕೊಡಲಿಯನ್ನು ಅದ್ದುತ್ತಾ ಬಂದನಂತೆ. ಅಲ್ಲಿಂದ ಸುಮಾರು ಹದಿನೆಂಟು, ಇಪ್ಪತ್ತು ಮೈಲಿ ದೂರದಲ್ಲಿ ತುಂಗಾನದಿಯಲ್ಲಿ ಬಂದು ತೀರ್ಥಾಕಾರದಲ್ಲಿ ಅದ್ದಿದರೆ ರಕ್ತವೆಲ್ಲಾ ಮಂಗಮಾಯ. ತಿಲ ಮಾತ್ರವೂ ಉಳಿಯಲಿಲ್ಲ. ಈ ಪವಿತ್ರ ಸ್ಥಳವೇ ರಾಮತೀರ್ಥವಾಯಿತು. ದಂಡೆಯ ಮೇಲಣ ಊರು ತೀರ್ಥರಾಜಪುರವಾಯಿತು. ಪ್ರತಿ ಎಳ್ಳಮಾವಾಸ್ಯೆಗೆ ಬಹುದೊಡ್ಡ ಜಾತ್ರೆ ಆಗುತ್ತದೆ. ರಥದ ಮೇಲಣ ಆಯತಾಕಾರದ ಹಲಗೆಗಳಲ್ಲಿ ಪ್ರತಿವರ್ಷ ಬಣ್ಣಗಳಿಂದ ಬಿಡಿಸಿ ಅಷ್ಟದಿಕ್ಕಿಗೂ ತೂಗು ಹಾಕುತ್ತಾರೆ. ಒಂದನೇ ಚಿತ್ರದಲ್ಲಿ ರಕ್ತಮಯ ಕೊಡಲಿಯೊಂದಿಗೆ ಕೊಡಲಿರಾಮ, ಎರಡನೇ ಚಿತ್ರದಲ್ಲಿ ಕೊಡಲಿ ತೊಳೆಯಲು ತೀರ್ಥಯಾತ್ರೆ ಪ್ರಾರಂಭ, ತುಂಗಾನದಿಯಲ್ಲಿ ಸ್ವಲ್ಪ ರಕ್ತ ಹೋಗಿದ್ದು, ಜಲ ಪಾತ್ರದಲ್ಲಿ ಯಾನ ಮುಂದುವರಿಸಿದ್ದು, ತೀರ್ಥಹಳ್ಳಿಯಲ್ಲಿ ತಿಲಮಾತ್ರವೂ ರಕ್ತ ಉಳಿಯಲಿಲ್ಲವಾದುದರಿಂದ ಅದು ತೀರ್ಥರಾಜ. ಮಾರ್ಗಶಿರ ಬಹುಳ ಅಮಾವಾಸ್ಯೆ- ಎಳ್ಳು ಅಮಾವಾಸ್ಯೆ. ಮಾರನೇ ದಿನ ಪುಷ್ಯ ಶುದ್ಧ ಪ್ರತಿಪದೆಯಂದು ಬೆಳಿಗ್ಗೆ ಮಹಾರಥೋತ್ಸವ. ಬ್ರಹ್ಮರಥೋತ್ಸವವನ್ನು ಆಚರಿಸಿ ರಥವನ್ನು ಹತ್ತು ಹನ್ನೊಂದರ ಹೊತ್ತಿಗೆ ಶ್ರೀರಾಮಚಂದ್ರಾಪುರ ಮಠದ ಎದುರು ತಂದು ನಿಲ್ಲಿಸುತ್ತಾರೆ. ನಂತರ ಮಧ್ಯಾಹ್ನ ಎರಡು-ಮೂರರ ಹಾಗೆ ಮಹಾರಥೋತ್ಸವ ರಥಬೀದಿಯಲ್ಲಿ. ಸುಮಾರು ಒಂದು ಕಿಲೋಮೀಟರ್ ದೂರವಿದ್ದೀತು, ಕಿವಿಗಡಚಿಕ್ಕುವಂತೆ ಜೈಕಾರ ಹಾಕುತ್ತಾ ರಥ ಎಳೆಯುತ್ತಾರೆ. ನಂತರ ಅಲ್ಲಿಂದ ನೆಲೆಗೆ ತರುವಾಗ ರಾತ್ರಿ ಹನ್ನೊಂದು, ಹನ್ನೆರಡು. ಪುನಃ ತೆಪ್ಪೋತ್ಸವ. ಈಗ ಕೆಲವು ವರ್ಷಗಳಿಂದ ಸಂಕ್ರಾಂತಿಗೂ ಅದೇ ರಥೋತ್ಸವ ನಡೆಯುತ್ತದೆ. ತೆಪ್ಪೋತ್ಸವ ನೋಡಲು ಸಮೀಪದ ಹಳ್ಳಿ ಮಾತ್ರವಲ್ಲದೇ ಕೋಣಂದೂರು, ಕೊಪ್ಪ, ತೂದೂರು, ಮಂಡಗದ್ದೆಗಳಿಂದಲೂ ರಾತ್ರಿ ಬರುತ್ತಾರೆ. ತೀರ್ಥಹಳ್ಳಿಯ ನದಿಗೆ ಅಡ್ಡಲಾಗಿ ಕಟ್ಟಿದ ಸೇತುವೆ- ಅಂದಿನ ಪ್ರಸಿದ್ಧ ಕಂಪನಿ ಡಂಕರ್ಲೆ- ನೋಡಲು ನಯನಮನೋಹರವಾಗಿದೆ. ಎರಡು ಬಸ್ಸುಗಳು ಏಕಕಾಲಕ್ಕೆ ಸಂಚರಿಸಬಹುದು. ಪ್ರತಿ ನಿರ್ದಿಷ್ಟ ದೂರಕ್ಕೆ ಬೃಹದ್ಗಾತ್ರದ ಕಂಬಗಳು. ಒಂದು ವಿಶೇಷವೆಂದರೆ ಸುಮಾರು ಮೂವತ್ತು ಫೂಟು ಅಂತರದವರೆಗೆ ಕಂಬಗಳೇ ಇಲ್ಲ. ಆಶ್ಚರ್ಯ. ಈ ನಾಲ್ಕು ಕಂಬಗಳ ಕಮಾನು ವಿಜ್ಞಾನದ ವಿಸ್ಮಯ. ಈ ಕಮಾನಿನ ಎತ್ತರ ಸೇತುವೆಯ ಮೇಲಿಂದ ಏನಿಲ್ಲ ಎಂದರೂ ೨೫’-೩೦’.ಗೋಕರ್ಣದ ಗಣೇಶ ಶಾಸ್ತ್ರಿ ಎನ್ನುವ ಯುವಕ ಈ ಕಮಾನಿನ ೨’ ಅಗಲದ ಕಮಾನಿನ ಈ ತುದಿಯಿಂದ ಆ ತುದಿಯವರೆಗೆ ಇಣಚಿ ಹತ್ತಿದಂತೆ ಏರಿ ಇಳಿದದ್ದು ನೆನಪು. ಈ ಸೇತುವೆ ಕಟ್ಟುವ ಮೊದಲು ತೀರ್ಥಹಳ್ಳಿಯಿಂದ ಆಚೆ ದಡ ಕುರುವಳ್ಳಿಗೆ ಹೋಗಲು ತಾರಿದೋಣಿ. ಈಗಿನ ಅಘನಾಶಿನಿ-ತದಡಿ ಇದ್ದ ಹಾಗೆ. ಈಚೆ ದಡದಿಂದ ಆಚೆ ಹೋಗಲು ೫ ನಿಮಿಷ.ಇಲ್ಲಿ ಬಸ್ಸಿನಲ್ಲೇ ಹೋಗಬೇಕೆಂದರೆ ಕುಮಟಾದ ಮೇಲೆ ೪೦ ಮೈಲಿ ಆಗುವಂತೆ ಅಲ್ಲಿಯೂ ತೀರ್ಥಹಳ್ಳಿಯಿಂದ ಸುತ್ತಿಕೊಂಡು ಕುರುವಳ್ಳಿ ತಲುಪಲು ನಲವತ್ತು ಮೈಲಿ. ಜೋಡುಸಾರ: ಬೇಸಿಗೆಯಲ್ಲಿ ಮಾತ್ರ ಅಗಸೆ-ತದಡಿಯಂತೆ ಅಲ್ಲ. ತೀರ್ಥಹಳ್ಳಿಯ ರಾಮೇಶ್ವರ ದೇವಸ್ಥಾನದ ಕೆಳಗಿಳಿದು ಬಂಡೆಯಿಂದ ಬಂಡೆ ಹಾರುತ್ತ, ಬಂಡೆ ಸುತ್ತ ನೀರು. ಕಾಲು ಮೈಲಿ ಹೋದರೆ ಆಶ್ಚರ್ಯದ ಜೋಡುಸಾಗರ. ಸುಮಾರು ೧೫’-೨೫’ ಉದ್ದದ ದೈತ್ಯಗಾತ್ರದ ಶಿಲೆಯ ಎರಡು ತೊಲೆಗಳು. ಒಂದರ ಪಕ್ಕದಲ್ಲಿ ಒಂದು. ಉಳಿದ ಭಾಗಗಳಲ್ಲಿ ತುಂಗಾನದಿ ಸುತ್ತುತ್ತ ಸುತ್ತುತ್ತ ಹರಿಯುತ್ತದೆ. ಇಲ್ಲಿ ಕೆಳಗಿನ ಆಳ ಸುಮಾರು ಐದಾರು ಆಳಿನಷ್ಟು. ಈ ಸೇತುವೆಯನ್ನು ಸರಾಗವಾಗಿ ದಾಟಿ ಪುನಃ ಕುಪ್ಪಳಿಸುತ್ತಾ ಕುರುವಳ್ಳಿಗೆ ಹೋಗಬಹುದು- ಹೆಚ್ಚೆಂದರೆ ಹದಿನೈದಿಪ್ಪತ್ತು ನಿಮಿಷಗಳಲ್ಲಿ. ಅಂದಾಜು ಮಾರ್ಚ್‌ದಿಂದ ಜೂನ್‌ವರೆಗೆ ಈ ಸೌಲಭ್ಯ - ನಂತರ ತುಂಗಾನದಿ ತುಂಬಿ ಹರಿಯಿತು ಎಂದರೆ ಈ ರಸ್ತೆ ಒಂಬತ್ತು ತಿಂಗಳು ಬಂದ್. ರಾಷ್ಟ್ರಕವಿ ಕುವೆಂಪುರವರು ಕಾನೂರು ಸುಬ್ಬಮ್ಮ ಹೆಗ್ಗಡಿತಿಯಲ್ಲಿ ಈ ಜೋಡುಸಾರ ದಾಟಿ ಕುಪ್ಪಳ್ಳಿಗೆ ಹೋಗಿ ಬರುವುದನ್ನು ವರ್ಣಿಸಿದ್ದಾರೆ. ನಾವು ತುಂಗಾ ಹೊಳೆಯ ಈಚೆಯವರು. ತೀರ್ಥಹಳ್ಳಿ ತಾಲೂಕಾ ಮುಖ್ಯ ಸ್ಥಳ. ಆಸ್ಪತ್ರೆ, ಪೋಲೀಸ್ ಕಛೇರಿ ಇವೆಲ್ಲ. ಹೊಳೆ ಆಚೆ ಕುರುವಳ್ಳಿ. ಪುತ್ತಿಗೆ ಶ್ರೀಗಳವರ ಮಠ, ಮಳಯಾಳ ಮಠ ಮತ್ತೂ ಕೆಲವು ಶಿಲಾಮಯ ದೇವರು. ಅಲ್ಲಿಂದ ದೊಡ್ಡದಾದ ರಸ್ತೆ- ಅದು ನಮ್ಮನ್ನು ಕುವೆಂಪುರವರ ಕುಪ್ಪಳ್ಳಿ, ಗಡೀಕಲ್ಲು, ದೇವಂಗಿ, ಕೊಪ್ಪ, ಶೃಂಗೇರಿ ಮೊದಲಾದ ಪ್ರೇಕ್ಷಣೀಯ ಪೂಜಾ ಸ್ಥಳಗಳಿಗೆ ಕರೆದೊಯ್ಯುತ್ತದೆ. ಗಂಗಾ ವಿಶ್ವೇಶ್ವರ ದೇವರು ನಮ್ಮ ತೀರ್ಥರಾಜಪುರ ಮಠಕ್ಕೆ ಸೇರಿದ್ದು. ಮಲೆಯಾಳ ಮಠದ ಯತಿಗಳಿಗೆ ತುಂಗಾನದಿಯ ದಕ್ಷಿಣ ತೀರದಲ್ಲಿ ತಾನು (ಗಂಗಾ ವಿಶ್ವೇಶ್ವರ) ಇರುವುದಾಗಿಯೂ, ಅಲ್ಲಿಂದ ತಂದು ಮೇಲೆ ಸ್ಥಾಪಿಸಬೇಕೆಂದೂ ಸ್ವಪ್ನವಾಯಿತಂತೆ. ಅದೇ ರೀತಿ ದಕ್ಷಿಣ ತೀರದಲ್ಲಿ ನೀರಿನಲ್ಲಿ ಹುಡುಕಲಾಗಿ ಸುಂದರ ಗಂಗಾವಿಶ್ವೇಶ್ವರ ಲಿಂಗ ದೊರಕಿತು, ಅದನ್ನು ತಂದು ತುಂಗಾಪ್ರವಾಹ ಎಷ್ಟೇ ಏರಿದರೂ, ದೇವಾಲಯಕ್ಕೆ ಅಪಾಯವಿಲ್ಲದಷ್ಟು ಎತ್ತರದಲ್ಲಿ ದೇವಾಲಯ ಕಟ್ಟಲಾಗಿದೆ. ಈ ಎತ್ತರದ ಜಾಗದಿಂದ ನೋಡಿದರೆ ತುಂಗಾನದಿ ಎದುರಿಗೆ ಬಹುವಿಸ್ತಾರವಾಗಿ ಕಲ್ಲು ಬಂಡೆಗಳ ಮಧ್ಯೆ ಹರಿಯುವುದು. ಮಳೆಗಾಲದಲ್ಲಿ ರುದ್ರಭೀಕರ ಪ್ರವಾಹದೊಂದಿಗೆ ಇಡೀ ತೀರ್ಥಹಳ್ಳಿ ತಾಲೂಕನ್ನೇ ನಡುಗಿಸುತ್ತಾ ಭೋರ್ಗರೆಯುತ್ತ ಹರಿಯುವ ರುದ್ರ ಮನೋಹರ ದೃಶ್ಯ. ಮೊದಲೇ ಹೇಳಿದಂತೆ ಈ ದೇವಾಲಯದಲ್ಲಿ ವನ ಭೋಜನ, ದೀಪೋತ್ಸವ ಪ್ರತಿವರ್ಷ ನಡೆಯುತ್ತದೆ. ಹೊಳೆಯ ಈ ದಡದಿಂದಲೇ ಕೊಪ್ಪ ರಸ್ತೆಯಲ್ಲಿ ಕೆಲ ಮೈಲಿ ದೂರ ಹೋದರೆ ಚಿಪ್ಲಗುಡ್ಡ ಎನ್ನುವ ಗ್ರಾಮ. ಇದು ತೀರ್ಥಹಳ್ಳಿ ತಾಲೂಕಿನಲ್ಲಿದೆ. ಸುಂದರ ಗಣಪತಿ ದೇವಾಲಯ, ಎದುರಿಗೆ ವಿಶಾಲವಾಗಿ ನದಿ. ಅಲ್ಲಿ ಮೀನುಗಳು ನಯನ ಮನೋಹರವಾಗಿ ಗುಂಪುಗುಂಪಾಗಿ ಕಾಣಿಸಿಕೊಳ್ಳುತ್ತವೆ. ಶೃಂಗೇರಿಯ ಮೀನುಗಳಿಗಿಂತಲೂ ದೊಡ್ಡವು. ಬಹುದೊಡ್ಡ ಮೀನು ಎಂದರೆ ತಿಮಿಂಗಿಲ ಗಾತ್ರದ್ದು. ಮಂಡಕ್ಕಿ ಚೆಲ್ಲಿದರೆ ತಿನ್ನಲು ಮೇಲೆ ಬರುತ್ತವಂತೆ, ಸ್ಥಳೀಯರು ಹೇಳಿದ್ದು. ತೀರ್ಥಹಳ್ಳಿಯಿಂದ ಎರಡು ಮೈಲಿ ದೂರದಲ್ಲಿ ಕುಂಬಾರದಡಿಗೆ ಚಿಕ್ಕ ಗ್ರಾಮ. ಎದುರಿಗೆ ಶಿಲಾಪರ್ವತವೇ ಇದೆ. ನಾನು, ನನ್ನ ಸ್ನೇಹಿತ ಬಿಚ್ಚುಗತ್ತಿ ಚಿದಂಬರರಾವ್ ಈ ಗುಡ್ಡವನ್ನು ಸಾಕಷ್ಟು ಏರಿ, ಉಳಿ-ಸುತ್ತಿಗೆ ಸಹಾಯದಿಂದ ನಮ್ಮ ಹೆಸರನ್ನು ಕೆತ್ತಿದ್ದೆವು: ಏಮ್. ಎ .ಬಿ. ಟಿ. ( ಮ. ಅ. ಭಟ್ಟ, ತೀರ್ಥಹಳ್ಳಿ), ಬಿ. ಸಿ. ಚಿದಂಬರ. ಸುಮಾರು ವರ್ಷ ಇತ್ತಂತೆ. ಈಗ ಶಿಲಾಧ್ವಂಸದ ಕಾಲದಲ್ಲಿ ನಮ್ಮ ಹೆಸರೂ ಅಳಿದಿರಬೇಕು! .... ನಮ್ಮ ತಂದೆಯವರು ಅಮ್ಮ ಮತ್ತು ಸಹೋದರರೊಂದಿಗೆ ತೀರ್ಥಹಳ್ಳಿಗೆ ಬಂದರು. ನನ್ನನ್ನು ಮತ್ತು ಗಜಣ್ಣನನ್ನು ಶ್ರೀ ಶ್ಯಾಮಭಟ್ಟ ಎನ್ನುವವರ ಹತ್ತಿರ ಟ್ಯೂಶನ್‌ಗೆ ಕಳಿಸುವುದೆಂದೂ, ನಾನು ಆ ವರ್ಷ ಇಂಗ್ಲಿಷ್ ರಹಿತ ಎಲ್.ಎಸ್. ಕಟ್ಟುವುದೆಂದೂ ನಿರ್ಣಯಿಸಿದರು. ಅದರಂತೆ ಮುಂದುವರಿದೆವು. ಆ ವರ್ಷ ಎಲ್. ಎಸ್. ಪರೀಕ್ಷೆಗೆ ನಾನೊಬ್ಬನೇ ಕುಳಿತೆ. ಗಜಣ್ಣನಿಗೆ ಮೊದಲ ದಿನವೇ ವಾಂತಿ ಜ್ವರ. ಒಟ್ಟಿನಲ್ಲಿ ಪರೀಕ್ಷೆಗೆ ಕಟ್ಟಲಿಲ್ಲ. ನನ್ನ ಮುಂದಿನ ವಿದ್ಯಾಭ್ಯಾಸ ಪೈ ಮಾಸ್ತರರು ಎಂಬವರಲ್ಲಿ. ಒಂದು ವರ್ಷದಲ್ಲಿ ಇಂಗ್ಲಿಷ್ ಮೂರು ತರಗತಿ ಮುಗಿಸಿ ಮುಂದಿನ ವರ್ಷ ನನ್ನನ್ನು ಮಿಡ್ಲ್‌ಸ್ಕೂಲಿಗೆ ಕೊನೆ ವರ್ಷಕ್ಕೆ ದಾಖಲು ಮಾಡಿದರು. ಆ ವರ್ಷ ಕೇವಲ ಇಂಗ್ಲಿಷ್ ಪರೀಕ್ಷೆ ಕಟ್ಟಿ ಪೂರ್ಣ ಪ್ರಮಾಣದ ಎಲ್.ಎಸ್. ಆದೆ. ೧೯೪೭-೪೮ರಲ್ಲಿ ಹೈಸ್ಕೂಲ್ ಎಂಟನೇ ತರಗತಿ ಎಂದರೆ ಆಗಿನ ಹೈಸ್ಕೂಲ್ ೧ನೇ ತರಗತಿಗೆ ಸೇರಿದೆನು. ಆಗ ಹೈಸ್ಕೂಲಿನಲ್ಲಿ ಆರು ಸೆಕ್ಷನ್‌ಗಳು. ಎಂಟನೇ ತರಗತಿಯಲ್ಲಿ ನನ್ನ ಸ್ನೇಹಿತರು ಎಂ. ಎಲ್., ವೈ.ಎಚ್. ಮತ್ತು ಎಚ್. ಎಂ. ನಮ್ಮ ಕ್ಲಾಸ್ ಮಾಸ್ತರರು ಕಮಕೋಡ ನರಸಿಂಹ ಶಾಸ್ತ್ರಿಗಳು. ನಮ್ಮ ಕನ್ನಡ ಪಂಡಿತರೂ ಅವರೇ. ಕನ್ನಡದಲ್ಲಿ ಪುಸ್ತಕಗಳನ್ನೂ ಬರೆದಿದ್ದಾರೆ. ಸೊಹ್ರಾಬ್ ರುಸ್ತುಂ ನಾಟಕ ಬಹುಪ್ರಸಿದ್ಧ. ಕನ್ನಡದ ಪ್ರಕಾಂಡ ಪಂಡಿತರು. ನಮ್ಮ ಹೆಡ್‌ಮಾಸ್ಟರ್ ಕೆ.ಶ್ರೀಪಾದ ಆಚಾರ್ಯರು. ಮುಂದೆ ಅವರಿಗೆ ವರ್ಗವಾದ ಮೇಲೆ ಶ್ರೀ ಕೆ.ಕೆ.ಅಯ್ಯಂಗಾರ್ ಹೆಡ್‌ಮಾಸ್ಟರ್ ಆಗಿ ಬಂದರು. ನಟಭಯಂಕರ, ತಾಪತ್ರಯ ಹೆಸರಿನೊಡನೆ ಪ್ರಖ್ಯಾತರು! ಇವರು ಬಂದ ಲಾಗಾಯ್ತು ಶಾಲೆಯಲ್ಲಿ ಚಟುವಟಿಕೆಗಳ ಭರ ಭರಾಟೆ. ನನ್ನ ಎಂಟನೆಯೆತ್ತೆಯ ಮೊದಲ ಸಾಹಸ ಮಾನಿಟರಾಗಿ ಆರಿಸಿ ಬಂದದ್ದು. ಎರಡನೆಯದು ನನ್ನ ಲೇಖನ "ಮೂರೂವರೆ ಆಣೆ ಸಿಡಿಲು". ‘ಬಾಲ ಭಾರತಿ’ - ವಿದ್ಯಾರ್ಥಿಗಳ ಕೈಬರಹ ಪತ್ರಿಕೆ. ಅದಕ್ಕೆ ಸಂಪಾದಕರು, ನಿರ್ದೇಶಕರು - ಎಲ್ಲ ನಮ್ಮ ಕನ್ನಡ ಪಂಡಿತ ನರಸಿಂಹ ಶಾಸ್ತ್ರಿಗಳು. ಲೇಖನಗಳನ್ನು ಬರೆದು ತರಲು ಹೇಳಿದರು. ನಾನು ಅದೇ ಆದ ಘಟನೆ, ಭಯಂಕರ ಸಿಡಿಲಿನ ಅನಾಹುತಗಳನ್ನು ಹಾಸ್ಯಮಿಶ್ರಿತವಾಗಿ ಬರೆದಿದ್ದೆ. ಅದನ್ನು ಪತ್ರಿಕೆಗೆ ಆಯ್ದೂ ಆಯಿತು, ಪ್ರಕಟವೂ ಆಯಿತು. ಅಂದು ಶಾಲೆ ಬಿಡುವ ಹೊತ್ತು. ದೊಡ್ಡ ಗುಡುಗು, ಸಿಡಿಲು. ಜನರೆಲ್ಲಾ ಭಯಭೀತರಾಗಿದ್ದರು. ಆಗ ಹೊಟೆಲ್ ಮಾಣಿ ಕೈಯಿಂದ ಚೆಲ್ಲಿದ ಕಾಫಿ ಬೆಲೆ, ಅಂಗಡಿಯಲ್ಲಿ ಚಿಮಣಿ ಎಣ್ಣೆ ಅಳೆಯುವಾಗ ಕೈನಡುಗಿ ಚೆಲ್ಲಿದ ಚಿಮಣಿ ಎಣ್ಣೆ ಬೆಲೆ, ಕಳಸಮ್ಮನ ಹಾಲಿನ ಪಾತ್ರೆಯಿಂದ ಚೆಲ್ಲಿದ ಹಾಲಿನ ಬೆಲೆ - ಬೇರೆ ಬೇರೆ ವಿಭಾಗದ ಜನರು ಅನುಭವಿಸಿದ ಹಾನಿಪ್ರಮಾಣ ಮೂರೂವರೆ ಆಣೆ. ನನ್ನ ದುರದೃಷ್ಟ. ಅದೇ ವರ್ಷ ನಮ್ಮ ಕನ್ನಡ ಪಂಡಿತರಿಗೆ ವರ್ಗವಾಯಿತು. ಬಾಲಭಾರತಿ ಆಲ್ಮೆರಾದಲ್ಲೇ ಉಳಿಯಿತು. ಆದರೂ ಲೇಖನಕ್ಕೆ ಅನ್ಯಾಯವಾಗಲಿಲ್ಲ. ಇನ್ನೂ ಮೂರು ನಾಲ್ಕು ವರ್ಷಗಳ ನಂತರ ಕನ್ನಡ ಪಂಡಿತ ಶ್ರೀ ಕ.ನ. ಅವರು ಆಫ಼್ ಪೀರಿಯಡ್‌ಗೆ ಬಂದಾಗ ಎಲ್ಲಾ ಕ್ಲಾಸುಗಳಲ್ಲೂ ‘ಮೂರೂವರಾಣೆ ಸಿಡಿಲು’ ಲೇಖನ ಓದಿ ಹೇಳುತ್ತಿದ್ದರಂತೆ. ಇದನ್ನು ನನ್ನ ತಮ್ಮ ಜಯರಾಮ ನನಗೆ ಹೇಳಿದಾಗ ಸಂತೋಷವಾಯಿತು ಮತ್ತು ಬರೆಯುವ ಬೀಜಕ್ಕೆ ನೀರು ಹನಿಸಿದಂತಾಯಿತು. ನನ್ನ ಒಂಬತ್ತನೇಯತ್ತೆ ತುಂಬಾ ಸಡಗರದಿಂದ ಪ್ರಾರಂಭವಾಯಿತು. ಆ ವರ್ಷ ಸಾಗರದ ಹೈಸ್ಕೂಲಿನಲ್ಲಿ ಇಂಟರ್ ಹೈಸ್ಕೂಲ್ ಡಿಬೇಟ್. ವಿಷಯ: "ಭಾಷಾವಾರು ಪ್ರಾಂತರಚನೆ ಆಗಬೇಕು". ನಮ್ಮ ಹೈಸ್ಕೂಲನ್ನು ಪ್ರತಿನಿಧಿಸಲು ನಾನು ಮತ್ತು ನನ್ನ ಸ್ನೇಹಿತ ಹಾ. ಮಾ. ನಾಯಕ ಆರಿಸಲ್ಪಟ್ಟೆವು. ನಾವಿಬ್ಬರೂ ಪರ, ವಿರೋಧಕ್ಕೆ ತಯಾರಾದೆವು. ಸಾಗರಕ್ಕೆ ಹೋದೆವು. ಅಂಥ ಸಭೆ ನಮ್ಮಿಬ್ಬರಿಗೂ ಹೊಸದು. ಸಾಗರದ ಪ್ರತಿಷ್ಠಿತ ವಕೀಲರು ನಿರ್ಣಾಯಕರು. ಕೋರ್ಟಿನ ಮುಖ್ಯ ನ್ಯಾಯಾಧೀಶರೇ ಅಧ್ಯಕ್ಷರು. ಚೀಟಿ ಎತ್ತಿದರು. ನನಗೆ ವಿರೋಧವಾಗಿಯೂ, ಹಾ.ಮಾ.ನಾಯಕರಿಗೆ ಪರವಾಗಿಯೂ ಮಾತನಾಡುವಂತೆ ಸರದಿ ಬಂತು. ನನ್ನ ಪಾಯಿಂಟ್‌ನಲ್ಲಿ ಎಲ್ಲರ ಗಮನ ಸೆಳೆದದ್ದು "ಇಂದು ಭಾಷಾವಾರು ಪ್ರಾಂತವಾದರೆ ಕನ್ನಡ ಒಂದೇ ಅಲ್ಲ, ಕೊಂಕಣಿಗರಿಲ್ಲವೆ, ತುಳುಜನರಿಲ್ಲವೇ, ಹೀಗೆ ಭಾಷಾವಾರು ಎಂದರೆ ಏಳೆಂಟು ಭಾಷೆಗಳವರೂ ರಾಜ್ಯ ಕೇಳಬಹುದು". ಹಾ.ಮಾ.ನಾ. ಹೇಳಿದರು: "ನಾನು ಸ್ವತಃ ಭಾಷಾವಾರು ರಾಜ್ಯ ಆಗಲೇಬೇಕು ಎನ್ನುವವ. ನನಗೆ ಅದೇ ವಿಷಯವೂ ಬಂದಿದೆ". ಆ ಕುರಿತು ಒಲವು ತೋರಿದ ಅನೇಕ ಮುಖ್ಯ ಪ್ರತಿಪಾದಕರನ್ನು ಉದಾಹರಿಸಿದರು. ಹಾ.ಮಾ.ನಾ. ಪ್ರಥಮ ಬಹುಮಾನ ಗಳಿಸಿದರು. ನಮ್ಮ ಶಾಲೆಗೆ ಕೇವಲ ಅರ್ಧ ಅಂಕದಿಂದ ಶೀಲ್ಡ್ ತಪ್ಪಿತಂತೆ ಎಂದು ಹಾ.ಮಾ.ನಾ.ರೇ ಹೇಳಿದರು. ನನ್ನ ಭಾಷಣವೂ ಉತ್ತಮ ಮಟ್ಟಿದ್ದಿತ್ತೆಂದು ಎಲ್ಲರೂ ಹೇಳಿದರು. ಬಡ ವಿದ್ಯಾರ್ಥಿಗಳ ನಿಧಿಗಾಗಿ ಶಾಲಾ ಶಿಕ್ಷಕರಿಂದ ಮತ್ತು ವಿದ್ಯಾರ್ಥಿಗಳಿಂದ ನಾಟಕ. ಮುಂದಾದವರು ನಮ್ಮ ಹೆಡ್‌ಮಾಸ್ಟರ್ ಅಯ್ಯಂಗಾರರೇ. "ಭಕ್ತ ಪ್ರಹ್ಲಾದ"ದಲ್ಲಿ ಹೆಡ್‌ಮಾಸ್ಟರ್ ಹಿರಣ್ಯಕಶಿಪು. ಊರಿನ ಶಿಕ್ಷಕರಾದ ಪದ್ಮನಾಭಯ್ಯ ಇವರದು ಖಯಾದು. ನಮ್ಮ ಗೆಳೆಯ ಶಿವಾನಂದನದು ನಾರದ. ಪರಿಣಾಮ ನಮ್ಮ ಹೆ.ಮಾ. ಮತ್ತೊಮ್ಮೆ ನಟಭಯಂಕರರಾಗಿ, ಶಿವಾನಂದ ಉತ್ತಮ ಗಾಯಕನಾಗಿ ಊರ ಜನರ ಮನವನ್ನು ಗೆದ್ದರು. ಬಹುಕಾಲ ನೆನಪಿಡಬೇಕಾದ ನಾಟಕ ಎಂದು ಜನರ ಅಭಿಪ್ರಾಯ. ಹಿಂದಿ ಸ್ಪೆಶಲ್ ಕ್ಲಾಸ್: ಶ್ರೀ ಎಂ.ಎನ್.ಜೆ. ಎಂಬ ಒಬ್ಬ ಶಿಕ್ಷಕರು ಹಿಂದಿ ಪರೀಕ್ಷೆಗೆ ಪಾಠಗಳನ್ನು ನಡೆಸುತ್ತಿದ್ದರು. ನಮ್ಮ ಕ್ಲಾಸಿನ ಹದಿನೈದು - ಇಪ್ಪತ್ತು ವಿದ್ಯಾರ್ಥಿಗಳು ಆಗಲೇ ಪ್ರಥಮಾ ಕ್ಲಾಸಿಗೆ ಹೋಗುತ್ತಿದ್ದರು. ನನ್ನ ಸ್ನೇಹಿತ ಎಂ. ಲಕ್ಷ್ಮೀನಾರಾಯಣನೂ ಹೋಗುತ್ತಿದ್ದ. ನನಗೆ ಗೊತ್ತಾಗಿದ್ದು ಒಂದು ತಿಂಗಳ ನಂತರ. ‘ನಾನೂ ಬರುತ್ತೇನೆ’ ಎಂದೆ. ಆದರೆ ಮಾಸ್ತರು ಏನೆನ್ನುತ್ತಾರೋ! ತಡವಾಗಿದೆ. ಗೆಳೆಯನೊಡನೆ ಮಾಸ್ತರರನ್ನು ಕಂಡೆ. ಅವರು "ಆಗುವುದಿಲ್ಲ. ಆಗಲೇ ಒಂದು ತಿಂಗಳ ಪಾಠ ಆಗಿದೆ" ಎಂದುಬಿಟ್ಟರು. ಆದರೆ ಲಕ್ಷ್ಮೀನಾರಾಯಣ ಬಿಡಲಿಲ್ಲ. "ಸರ್, ಮೇಕಪ್ ಮಾಡಿಕೊಳ್ಳುತ್ತಾನೆ" ಎಂದು ನನ್ನ ಪರವಾಗಿ ಬಲವಂತ ಮಾಡಿದ. ಕಡೆಗೆ ಅವರು ಒಪ್ಪಿದರು. ‘ಪ್ರಥಮಾ’ಕ್ಕೂ ಕಟ್ಟಿಸಿದರು. ಆ ವರ್ಷ ನಾನು ತೀರ್ಥಹಳ್ಳಿ ಕೇಂದ್ರಕ್ಕೇ ಪ್ರಥಮ! ಸರಾಸರಿ ಎಪ್ಪತ್ತೇಳು ಅಂಕಗಳಿಸಿದ್ದೆ. ನನಗೆ ಒಂದು ಬಹುಮಾನವೂ ಬಂತು. ಹಿಂದಿ ಕ್ಲಾಸು ಚರ್ಚಿನಲ್ಲಿ ರಾತ್ರಿ ಎಂಟರಿಂದ ಎಂಟೂನಲವತ್ತರವರೆಗೆ ನಡೆಯುತ್ತಿತ್ತು. ಒಮ್ಮೆ ಮಾಸ್ತರರು ‘ಕಾ,ಕೀ.ಕೇ’ ಪ್ರಯೋಗ ಹೇಳುತ್ತಿದ್ದರು.ಕಾಕರಳ್ಳಿ ಮಂಜಣ್ಣನ ಕೀ ಪ್ರಯೋಗ:‘ತೇರೀ ಮಾಕೀ’! ನಮಗೆಲ್ಲಾ ನಗು. ಮಾಸ್ತರರು ಮಾತ್ರ ಮಂಜ ಚುಪ್ ಎನ್ನುತ್ತಿದ್ದಂತೆ ಮಂಜಣ್ಣ ತಪ್ಪಾಯಿತು ಎಂದ. ಮುಂದೆ ಮಧ್ಯಮಾ ಪರೀಕ್ಷೆಗೆ ತಯಾರಿ ನಡೆಸಿದರು. ಕಟ್ಟಿದ ನಲವತ್ತೈದರಲ್ಲಿ ನಲವತ್ತೈದೂ ಮಕ್ಕಳು ಪಾಸು. ಮಾಸ್ತರಿಗೆ ತುಂಬಾ ಉಮೇದಿ. ಮುಂದೆ ‘ರಾಷ್ಟ್ರಭಾಷಾ’. ಆದರೆ ನಾನು, ಲಕ್ಷ್ಮೀನಾರಾಯಣ ಕಟ್ಟಲಿಲ್ಲ. ಆ ವರ್ಷವೇ ನಮ್ಮ ಎಸ್.ಎಸ್.ಎಲ್.ಸಿ. ನಮ್ಮ ಅತ್ತಿಗೆ ಆಗ ತೀರ್ಥಹಳ್ಳಿಯಲ್ಲಿ ಇದ್ದವರು ‘ಪ್ರವೇಶಿಕಾ’ ಪರೀಕ್ಷೆ ಕಟ್ಟಿದರು. ಭದ್ರಾವತಿಯಲ್ಲಿ ‘ಮೌಖಿಕ’. ನಮ್ಮ ದರ್ಜಿ ರಾಮಯ್ಯಗೌಡರು ಹಿಂದಿಯಲ್ಲಿ ತುಂಬಾ ಜಾಣರು. ಬರವಣಿಗೆಯಲ್ಲಿ ಮೊದಲನೇ ನಂಬರು. ಆದರೆ ತೋಂಡಿಯಲ್ಲಿ ಮಾತ್ರ ನಪಾಸು - ಅದೂ ಎರಡು, ಮೂರು ಸಲ. ತುಂಬಾ ಬೇಸರವಾಯಿತು, ಆದರೂ ಜೇಡರ ಹುಳದಂತೆ ಹಿಡಿದ ಪ್ರಯತ್ನ ಬಿಡಲಿಲ್ಲ. ಆ ವರ್ಷ ಪುನಃ ಮೌಖಿಕ ಪ್ರಶ್ನೆ: " ಗೌಡಾಜೀ,ಕೋಯಲ್ ಔರ್ ಕೋಯ್ಲಾ ಮೇಂ ಕ್ಯಾ ಫ಼ರಕ್ ಹೈ?".(ಕೋಗಿಲೆ ಮತ್ತು ಕಲ್ಲಿದ್ದಲು ಇವುಗಳ ನಡುವೆ ವ್ಯತ್ಯಾಸವೇನು?).ಗೌಡರಿಗೆ ಉತ್ತರ ಗೊತ್ತು. ಹೇಳಲು ಕಷ್ಟ. ಆದರೂ ಅಭಿನಯಪೂರ್ವಕವಾಗಿ ಹೇಳಲು ಯತ್ನಿಸಿದರು:"ಕೋಯಲ್ ಕೂಕೂ ಕರಕೇ ಗಾತೀ ಹೈ.ಕೋಯ್ಲಾ ಕೋ ತುಕಡಾ ತುಕಡಾ ಕರಕೇ ಇಂಜಿನ್ ಮೇಂ ಡಾಲತೇ ಹೈ.ರೇಲ್ ಕೂಕೂ ಕರಕೇ ಜಾತೀ ಹೈ.".ಹೀಗೇ ಕೆಲ ಕಾಲ ಪ್ರಶ್ನೋತ್ತರ ನಡೆದ ಬಳಿಕ ಸಂದರ್ಶಕರು ಕೇಳಿದರು:"ಆಪ್ ಇಸ್ ಬಾರ್ ಭೀ ಫ಼ೇಲ್ ಹೋ ಜಾಯೇಂಗೇ ತೋ ಕ್ಯಾ ಕರೇಂಗೇ?".ಗೌಡರು ನಿಟ್ಟುಸಿರು ಬಿಟ್ಟು ಹೇಳಿದರು:"ಮೇರೇ ಲಿಯೇ ಇಸ್ ಪರೀಕ್ಷಾ ಗೌರೀಶಂಕರಕೀ ಚೋಟಿ ಸಮಝೂಂಗಾ".(ನನ್ನ ಪಾಲಿಗೆ ಈ ಪರೀಕ್ಷೆ ಗೌರೀಶಂಕರ ಶಿಖರವೇರಿದಂತೆ ಎಂದು ತಿಳಿಯುತ್ತೇನೆ").ಆಗಿನ್ನೂ ಯಾರೂ ಗೌರೀಶಂಕರ ಶಿಖರ ಏರಿರಲಿಲ್ಲ.ಗೌಡರ ಅದೃಷ್ಟ ದೊಡ್ಡದು.ಗೌರೀಶಂಕರ ಶಿಖರವನ್ನು ಏರುವ ಮೊದಲೇ ಗೌಡರು ೪೦% ಅಂಕಗಳೊಂದಿಗೆ ಪ್ರವೇಶಿಕಾ ಪರೀಕ್ಷೆ ಪಾಸಾದರು! "ಬ್ಲಾಕ್ ಮಾರ್ಕೆಟ್" ಒಂದು ಸಾಮಾಜಿಕ ನಾಟಕ. ಅಲ್ಲಿ ಶೇಟ್‌ಜಿ ಪಾತ್ರ ಪ್ರಧಾನ ಪಾತ್ರಗಳಲ್ಲಿ ಒಂದು. ನಾನೇ ಅದನ್ನು ಮಾಡಬೇಕೆಂದು ಸ್ನೇಹಿತರ ಒತ್ತಾಯ. ಒಪ್ಪಿಕೊಂಡೆ. ಹೈಸ್ಕೂಲ್ ವಿದ್ಯಾರ್ಥಿಗಳಿಂದಲೇ ಎಲ್ಲಾ ಪಾತ್ರ. ಆ ವರ್ಷ ಎಳ್ಳಮಾವಾಸ್ಯೆಗೆ ನಾಟಕ ಕಂಪನಿ ಬಂದಿತ್ತು. ಆ ಯಜಮಾನರದೇ ರುಮಾಲು ತಂದರು. ನಮ್ಮ ಮನೆಯಲ್ಲಿ ತಂದೆಯವರಿಗೆ, ಹಂದೆ ಮಾವನಿಗೆ ಯಾರಿಗೂ ನಾನು ಪಾರ್ಟ್ ಮಾಡುವುದು ಇಷ್ಟ ಇಲ್ಲ. ಆದರೂ ನಮ್ಮ ಸ್ನೇಹಿತರ ಒತ್ತಾಯಕ್ಕೆ ಮಣಿದು ಹ್ಞೂಂ ಅಂದರು. ಹಂದೆಮಾವನಿಗೆ ಮಹಾಬಲನ ಪಾರ್ಟು ನೋಡಲು ಕುತೂಹಲ. ನಾಟಕ ಪ್ರಾರಂಭವಾಯಿತು. ಪ್ರಥಮ ಪ್ರವೇಶವೇ ನನ್ನದು. ರುಮಾಲು ಸುತ್ತಿಕೊಂಡು ಕರಿಕೋಟು ಹಾಕಿಕೊಂಡು ಪೇಪರು ಓದುತ್ತಾ ಬರುತ್ತಾ ಎದುರಿಗೆ ಬರುವ ಇನ್ನೊಂದು ಪಾತ್ರಕ್ಕೆ ಬೇಕೆಂತಲೇ ಢಿಕ್ಕಿ ಕೊಟ್ಟೆ. ಪ್ರೇಕ್ಷಕರಿಂದ ಚಪ್ಪಾಳೆ. ಹಂದೆಮಾವನಿಗೆ ಎಲ್ಲಿಲ್ಲದ ಸಂತೋಷ. ಹಾಗೇ ಮಠಕ್ಕೆ ಬಂದವ "ಅನಂತ ಭಟ್ಟರೇ, ಮಹಾಬಲನ ಪಾತ್ರ ಏ-ಒನ್. ಬನ್ನಿ ನೋಡಿ ಬರೋಣ" ಎಂದನಂತೆ. "ಕರಿಕೋಟು, ರುಮಾಲು, ಹೆಗಲಿನ ಶಲ್ಯ, ವ್ಹಾ, ವ್ಹಾ"ಎಂದೆಲ್ಲ ವರ್ಣನೆ.ಮಾರನೇ ದಿನ ಬೆಳಿಗ್ಗೆ ನಾಗಾವಧಾನಿಗಳು "ಏಜೆಂಟರೇ, ನಿಮ್ಮ ಮಗ ಶೇಟ್‌ಜಿ ಪಾರ್ಟು ಕಂಪನಿಯವರಿಗಿಂತ ಚೆನ್ನಾಗಿ ಮಾಡಿದ ಎಂದು ನಾಟಕದ ಕಂಪನಿಯ ರಂಗಪ್ಪನೇ ಹೇಳಿದ"ಎಂದು ಹೇಳಿದರು. ರಾಘಣ್ಣನ ರಥ: ಇದರಲ್ಲಿ ನಾನೇ ರಾಘಣ್ಣ. ಮುಂದೆ ಕೋಣಂದೂರು ಲಿಂಗಪ್ಪ ಎಂದು ಹೆಸರಾದ ಕೆ. ಲಿಂಗಪ್ಪ ‘ಕೈಯೆಣ್ಣೆ’. ಉಳಿದ ಪಾತ್ರಗಳೂ ಹೈಸ್ಕೂಲು ವಿದ್ಯಾರ್ಥಿಗಳದೇ. ನಾವು ಹೈಸ್ಕೂಲು ಒಂಬತ್ತು-ಹತ್ತನೇ ಇಯತ್ತೆಯಲ್ಲಿದ್ದಾಗಲೇ ಹಾ.ಮಾ.ನಾಯಕ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿದ್ದರು. ಆಗಲೇ ಅವರು ಬೇಂದ್ರೆ, ಅ.ನ.ಕೃ, ಶಿವರಾಮ ಕಾರಂತರು ಮೊದಲಾದವರನ್ನು ತೀರ್ಥಹಳ್ಳಿಗೆ ಕರೆಸಿ ಭಾಷಣ ಏರ್ಪಡಿಸುತ್ತಿದ್ದರು. ನನ್ನ ಮೆಚ್ಚುಗೆಯನ್ನು ಪ್ರತಿ ಸಲವೂ ಹೇಳುತ್ತಿದ್ದೆ. ಸಂತೋಷದಿಂದ ಸ್ವೀಕರಿಸಿ ಇಂಥ ಮೆಚ್ಚಿನ ನುಡಿ ಮುಂದಿನ ಚಟುವಟಿಕೆಗೆ ಬಂಡವಾಳ ಎನ್ನುತ್ತಿದ್ದರು. ಹತ್ತನೇಯತ್ತೆಗೆ ಬರುವ ಹೊತ್ತಿಗೆ ಹಾ.ಮಾ.ನಾ. ಮತ್ತು ನಾನು ಬಹಳ ನಿಕಟ ಸ್ನೇಹಿತರಾಗಿದ್ದೆವು. ಅವರು ಒಂದು ದಿನ ಸ್ನೇಹಿತರಿರುವಾಗ "ತಿಪ್ಪಾಭಟ್ಟರ ಜನಿವಾರ, ಇಲಿಗಳಿಗಾಗಿತ್ತಾಹಾರ" ಎಂದರು. ನಾನು "ಥೂ ಛೀ ಗೌಡನೆ ನೀ ಹಾಳಾಗ, ನಿನ್ನೀ ಗಂಟಲು ಬಿದ್ದೇ ಹೋಗ" ಎಂದೆ. ಬಿದ್ದು ಬಿದ್ದು ನಕ್ಕೆವು. ಇದು ಅನೇಕ ಸಲ ಪುನರಾವೃತ್ತಿ ಆಗುತ್ತಿತ್ತು. ಕೆಲ ಸಲ ಈ ವಿನೋದ ನನ್ನಿಂದಲೇ ಆರಂಭವಾಗುತ್ತಿತ್ತು. ಒಂದು ಸಂಜೆ ನಾವಿಬ್ಬರೂ ಸಿನಿಮಾ ನೋಡಲು ಹೋದಾಗ ಹೇಳಿದೆ, "ಮಾನಪ್ಪ, ಈಗ ನೀವು ‘ತಿಪ್ಪಾಭಟ್ಟರ...’ ಹೇಳುವಂತಿಲ್ಲ. ಯಾಕೆಂದರೆ ವಾಪಸು ನಾನೂ ಏನೂ ಹೇಳುವಂತಿಲ್ಲ. ಸಿನಿಮಾ ಟಾಕೀಸ್ ಮಾಲಿಕ ಚೆನ್ನಪ್ಪಗೌಡರು ತನಗೇ ಹೇಳ್ತಾರೆ ಎಂದು ನಮ್ಮಿಬ್ಬರನ್ನೂ ಹೊರಹಾಕ್ಯಾರು". ನಗೆಯೋ ನಗೆ. ಪ್ರತಿ ರಜಾದಿನ ನಾಲ್ಕರಿಂದ ಆರರವರೆಗೆ ಕಂಬೈಂಡ್ ಸ್ಟಡಿ. ಎಸ್.ಎಸ್.ಎಲ್.ಸಿ. ಗಣಿತದ ತೊಂದರೆಗೆ ನಾನು, ಇಂಗ್ಲಿಷ್ ತೊಂದರೆಗೆ ಹಾ.ಮಾ.ನಾ. - ಇದು ಎಸ್.ಎಸ್.ಎಲ್.ಸಿ. ಪರೀಕ್ಷೆವರೆಗಗೂ ನಡೆಯಿತು. ಒಮ್ಮೆ ಶ್ರೀ ಹಾ.ಮಾ.ನಾ.ಅಂಕೋಲೆಗೆ ಬಂದಿದ್ದರು. ಹೋಗಿ ನನ್ನ ಹೈಸ್ಕೂಲಿಗೆ ಬರಲು ಹೇಳಿದಾಗ ಸಂತೋಷದಿಂದ ಒಪ್ಪಿದರು. ಕುಮಟಾಕ್ಕೆ ಹೋಗುವಾಗ ನಮ್ಮ ಹೈಸ್ಕೂಲಿಗೆ ಬಂದರು. ಮಕ್ಕಳನ್ನು ಉದ್ದೇಶಿಸಿ ‘ಎರಡು ಮಾತು ಹೇಳಿ’ ಎಂದಾಗ ‘ನಾಲ್ಕು ಹೇಳ್ತೇನೆ’ ಎಂದರು. ನಿಮ್ಮ ಹೆಡ್‌ಮಾಸ್ಟರು ಗಣಿತದಲ್ಲಿ ನೂರಕ್ಕೆ ನೂರು ಪಡೆದವರೆಂದು ವರ್ಣಿಸಿದರು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ನಿಮ್ಮ ಹೆಡ್ ಮಾಸ್ತರರ ಸಹಾಯದಿಂದ ಗಣಿತದಲ್ಲಿ ಪಾಸಾದೆ ಎಂದಾಗ ಹುಡುಗರೆಲ್ಲಾ ತಬ್ಬಿಬ್ಬು. ಹೊನ್ನಾವರದಲ್ಲಿ ಸೇವೆ ಸಲ್ಲಿಸುತ್ತಿದ್ದ ಜಿನದತ್ತ ದೇಸಾಯಿ ಇದ್ದರು.ಅವರು ಬೇರೆ ಸಂದರ್ಭದಲ್ಲಿ ನನ್ನ ಕುರಿತು ಹೇಳುವಾಗ ನನ್ನ ಮತ್ತು ಹಾ.ಮಾ.ನಾ.ರ ಸ್ನೇಹದ ಕುರಿತು ಮುಕ್ತಕಂಠದಿಂದ ಶ್ಲಾಘಿಸಿದರು. ಹೊಳೆ ಆಚೆ ಬೊಮ್ಮರಸಯ್ಯನ ಅಗ್ರಹಾರ. ಗಣಿತದಲ್ಲಿ ನೂರಕ್ಕೆ ನೂರು ಅಂದೆ. ಈ ಬೀಜಕ್ಕೆ ನೀರೆರೆದವರು ಲಕ್ಷ್ಮೀನಾರಾಯಣ ಮತ್ತು ಅವನ ಸ್ನೇಹಿತ ಪಾರ್ಥಸಾರಥಿ. ನನಗಿಂತ ಒಂದು ವರ್ಷ ಸೀನಿಯರ್. ಅವರು ಎಸ್.ಎಸ್.ಎಲ್.ಸಿ.ಯಲ್ಲಿದ್ದಾಗ ನನ್ನನ್ನು ರಿವಿಜನ್‌ಗೆ ಕರೆದುಕೊಳ್ಳುತ್ತಿದ್ದರು. ಎಂಟು, ಒಂಬತ್ತನೆಯ ತರಗತಿಗಳ ಗಣಿತ ಭಾಗವನ್ನು ಬಿಡಿಸುವಾಗ ನನ್ನ ಜೊತೆ ಬಿಡಿಸುತ್ತಿದ್ದರು. ಹಾಗಾಗಿ ಗಣಿತದ ಬಗೆಗೆ ನನಗೆ ಪೂರ್ಣ ವಿಶ್ವಾಸ ತುಂಬಿದವರು ಅವರು. ಅವರ ಎಸ್.ಎಸ್.ಎಲ್.ಸಿ.ಮುಗಿದ ಮೇಲೆ ಅವರ ನೋಟ್ಸ್ ನನಗೆ ಕೊಟ್ಟರು. ನನಗೆ ಬರದೇ ಹೋದ ಕಠಿಣ ಲೆಕ್ಕಗಳನ್ನು ಬಿಡಿಸುವಲ್ಲಿ ಸಹಾಯ ಮಾಡುತ್ತಿದ್ದರು. ಲಕ್ಷ್ಮೀನಾರಾಯಣ ಡಿಪ್ಲೋಮಾ ಕೋರ್ಸಿಗೆ, ಪಾರ್ಥಸಾರಥಿ ಬಿ.ಇ. ಕೋರ್ಸಿಗೆ ಹೋದರು. ದರ್ಲಗೋಡ ನಾಗರಾಜ ಜೋಯ್ಸ ಕುರಿತು ಹೇಳುವೆ.ನಮ್ಮ ಸಂಸ್ಕೃತ ಪಂಡಿತರು, ವಿದ್ವಾನ್ ರಾಜಶೇಖರಯ್ಯ ವಿದ್ಯಾರ್ಥಿಗಳೊಂದಿಗೆ ತುಂಬಾ ಬೆರೆಯುತ್ತಿದ್ದರು. ಆರಗ ಒಂದು ಹಳ್ಳಿ. ಅಲ್ಲಿ ಶರಾವತಿ ನದಿಯ ಮೂಲ. ನಾವು ಮೂರು ನಾಲ್ಕು ಜನ ಶರಾವತಿ ಮೂಲಕ್ಕೆ ಟ್ರಿಪ್ ಹೋದೆವು. ಬೆಳಿಗ್ಗೆ ಆರು ಮೈಲಿ ನಡೆದು ಆರಗ, ಅಲ್ಲಿ ಒಂದೂವರೆ ಮೈಲಿ ನಡೆದರೆ ಝರಿಯ ಮೂಲಕ ಒಂದು ಕೆರೆ ಬರುತ್ತದೆ. ಇದೇ ಶರಾವತಿ ಮೂಲ. ನಾವೆಲ್ಲ ನೀರನ್ನು ಪ್ರೋಕ್ಷಣ್ಯ ಮಾಡಿಕೊಂಡು ತೀರ್ಥದಂತೆ ಕುಡಿದೆವು. ತೀರ್ಥ ಸರಿ, ಮಧ್ಯಾಹ್ನ ಪ್ರಸಾದಕ್ಕೆ ನಮ್ಮ ನಾಗರಾಜನ ಮನೆಯಲ್ಲಿ ಸುಗ್ರಾಸ ಭೋಜನ, ಬೋಂಡಾ, ಕೇಸರಿಬಾತು, ಬಾಳೆಹಣ್ಣು, ಕಾಫಿ ನಂತರ ಐದಕ್ಕೆ ತೀರ್ಥಹಳ್ಳಿಗೆ ಮರು ಪ್ರಯಾಣ. ತೀರ್ಥಹಳ್ಳಿಯ ಸುತ್ತ ಎರಡು-ಮೂರು ಮೈಲಿಗಳ ಅಂತರದಲ್ಲೇ ಪುತ್ತಿಗೆ ಮಠ, ಭೀಮನಕಟ್ಟೆ ಮಠ, ಮುಳಬಾಗಿಲಮಠ, ಕೋದಂಡರಾಮಮಠ. ನಮ್ಮ ಬಿಡಾರ ಮನೆಯ ಎದುರಿಗೇ ಉಡುಪಿ ಶ್ರೀ ರಾಮಾಚಾರ್ಯರ ಮನೆ. ರಾಮಾಚಾರ್ಯರು ಆಗ ಅರವತ್ತೈದು, ಎಪ್ಪತ್ತು ವಯಸ್ಸಿನವರು, ನನ್ನ ಪರಿಚಯ ಇತ್ತು. ಒಮ್ಮೆ ನನ್ನ ಹತ್ತಿರ "ಮಹಾಬಲಭಟ್ಟರೇ, ನಾಡಿದ್ದು ಭಾನುವಾರ ನಮ್ಮ ಭೀಮನಕಟ್ಟೆ ಮಠದಲ್ಲಿ ಆರಾಧನಾ ಸಂತರ್ಪಣೆ ಉಂಟು. ಬನ್ನಿ, ಹೋಗೋಣ" ಎಂದರು. ನಾನು ಸ್ವಲ್ಪ ಅಳುಕಿದೆ. ‘ಅನಂತ ಭಟ್ಟರಿಗೆ ನಾನು ಹೇಳುತ್ತೇನೆ’ ಎಂದರು. ನಾನು ‘ಹೂಂ’ ಎಂದೆ. ಅದೇ ವೇಳೆಗೆ ನಮ್ಮ ಅಘನಾಶಿನಿಯ ಗಾಚಣ್ಣ (ಗಾಚಮಾವ) ತೀರ್ಥಹಳ್ಳಿಗೆ ಬಂದಿದ್ದ. ಅವನೂ ಜೊತೆಗೆ ಬರುವುದು ಎಂದಾಯ್ತು. ಮೂವರೂ ಬೆಳಿಗ್ಗೆ ಹೊರಟೆವು. ಹಾದಿಯಲ್ಲಿ ಒಂದು ಗಣಪತಿ ದೇವಾಲಯ, ನಂತರ ಮುಳಬಾಗಿಲು ಮಠ. ನಂತರ ಮಧ್ಯಾಹ್ನ ಭೀಮನಕಟ್ಟೆ ಮಠ ಮುಟ್ಟಿದೆವು. ಅಲ್ಲಿ ನಮಗೆ ರಾಜೋಪಚಾರ. ನಮ್ಮ ರಾಮಾಚಾರ್ಯರು ಅಲ್ಲಿ ಒಮ್ಮೆ ಅಧಿಕಾರಿಗಳಾಗಿದ್ದವರಂತೆ. ಇಲ್ಲಿಯ ಈಗಿನ ಏಜೆಂಟರು ಶ್ರೀ ರಾಜಗೋಪಾಲಾಚಾರ್ಯರು. ಇವರ ಮಗ ನನ್ನ ಹೈಸ್ಕೂಲ್‌ಮೇಟ್. ಒಂದೆರಡು ಸಲ ಮಾತನಾಡಿದ ಪರಿಚಯ. ಅವರೇ ಇಂದಿನ ಡಾ.ಯು. ಆರ್. ಅನಂತಮೂರ್ತಿ. ತಿರುಗಿ ಬರುವಾಗ ನಮ್ಮ ಗಾಚಮಾವ "ರಾಮಾಚಾರ್ಯರೇ, ನೀವು ಒಮ್ಮೆ ಗೋಕರ್ಣಕ್ಕೆ ಬನ್ನಿ. ಅಲ್ಲಿಂದ ನನ್ನ ಊರು ಮೂರು ಮೈಲಿ. ನಾನು ಬಂದು ಕರೆದುಕೊಂಡು ಹೋಗುವೆ" ಎಂದೆ. ರಾಮಾಚಾರ್ಯರು ‘ಹೂಂ’ ಎಂದರು. ಎಲ್ಲೋ ಸಹಜವಾಗಿ ’ಹೂ’ ಎಂದರು, ಅಂದುಕೊಂಡೆ. ಇಲ್ಲ, ಈ ಮಾತಿಗೆ ಹತ್ತು ಹದಿನೈದು ವರ್ಷಗಳಾಗಿರಬಹುದು. ಶ್ರೀ ರಾಮಾಚಾರ್ಯರು, ಅವರ ಧರ್ಮಪತ್ನಿ ಮತ್ತು ಹನುಮಂತ ದೇವಸ್ಥಾನದ ಅರ್ಚಕರು ಗೋಕರ್ಣಕ್ಕೆ ನಮ್ಮ ಮನೆ ಹುಡುಕಿಕೊಂಡು ಬಂದೇ ಬಂದರು. ಎರಡು ದಿನ ಉಳಿದು ಕೋಟಿ ತೀರ್ಥ, ಸಮುದ್ರ ಸ್ನಾನ, ಶ್ರೀ ದೇವರ ದರ್ಶನ ಎಲ್ಲಾ ಮುಗಿಸಿ ಹೋದರು. ನಾನು ‘ನಮ್ಮ ಸಭಾಹಿತರ ಮನೆಗೆ’ ಎಂದೆ. ‘ಇನ್ನೊಮ್ಮೆ’ ಎಂದು ಹೊರಟೇಬಿಟ್ಟರು. ಯು.ಆರ್. ಅನಂತಮೂರ್ತಿಯವರೂ ಒಮ್ಮೆ ಗೋಕರ್ಣಕ್ಕೆ ಬಂದಿದ್ದರು. ಅಂದು ಸಂಜೆ ಅವರು ಬಂಕಿಕೊಡ್ಲಕ್ಕೆ ಶ್ರೀ ಎಕ್ಕುಂಡಿ ಮಾಸ್ತರರನ್ನು ಭೇಟಿ ಆಗಲು ಹೋಗಿದ್ದರಂತೆ. ಮರಳಿ ಬರುವಾಗ ನನಗೆ ಜವಳಿ ಅಂಗಡಿ ಬಳಿ ಸಿಕ್ಕರು. ತೀರ್ಥಹಳ್ಳಿಯ ವಿಷಯ ಮಾತನಾಡಿದೆವು. ಅವರ ತಮ್ಮ ವೆಂಕಟೇಶಮೂರ್ತಿ ಇನ್ನಿಲ್ಲವಾದರೆಂಬ ವಿಷಯ ತಿಳಿಯಿತು. ಶಿವರಾಮ (ದೊಡ್ಡಣ್ಣ): ತೀರ್ಥಹಳ್ಳಿಯ ವಿದ್ಯಾರ್ಥಿಗಳಲ್ಲೆಲ್ಲ ದೊಡ್ಡ ಹೆಸರು. ಈವರೆಗೂ ನೋಡರಿಯದ, ಕೇಳರಿಯದ ಎತ್ತರದಿಂದ ತುಂಗಾನದಿಗೆ ಧುಮುಕಿದ್ದ, ಸೇತುವೆಯ ಕಮಾನಿನ ಮೇಲಿಂದ! ಪೋಲೀಸರು ಸ್ಟೇಶನ್‌ಗೆ ಕರೆದು "ಇನ್ನು ನೀವು ಹಾಗೆ ಹಾರಬಾರದು. ಹಾರಿದರೆ ನಾವು ಕೇಸು ಮಾಡುತ್ತೇವೆ" ಎಂದು ಹೆದರಿಸಿದರಂತೆ. ಶ್ರೀ ರಾಮಕೃಷ್ಣಯ್ಯ ಹೈಸ್ಕೂಲ್ ವಿದ್ಯಾರ್ಥಿಗಳನ್ನು ಕಲೆ ಹಾಕಿ ಒಂದು ನಾಟಕ ಆಡಿಸಿದರು. ಅದರಲ್ಲಿ ಈ ಮೂವರು - ಹಾಜಗಲ್ಲ ಮಂಜಪ್ಪ, ಶ್ರೀಪತಿ ಮತ್ತು ಶಿವರಾಮ. ಇವರು ನಟನೆಯಿಂದ ಎಲ್ಲರ ಪ್ರೀತಿ ಗಳಿಸಿದರು. ಹೈಸ್ಕೂಲ್ ಒಂದನೇಯತ್ತೆಯಲ್ಲಿ ಹೆ.ಮಾ. "ಈಗ ಎಲ್ಲಾ ಆಧುನಿಕತೆ ಬಂದಿದೆ. ಪ್ರತಿಯೊಂದಕ್ಕೂ ಫ್ಯಾಶನ್" ಎಂದಿದ್ದರಂತೆ. ಸರಿ, ಅದೇ ಮಳೆಗಾಲದಲ್ಲಿ ನಮ್ಮಣ್ಣ ಕಂಬಳಿಕೊಪ್ಪೆ ಹಾಕಿಕೊಂಡು ಹೈಸ್ಕೂಲಿಗೆ ಹೋದ. ಹೆ.ಮಾ.ಶ್ರೀ ಕೆ.ಶ್ರೀಪಾದಾಚಾರ್ಯರು ಕರೆದು ಕೈಕುಲುಕಿ ಮೆಚ್ಚಿನ ಮಾತನಾಡಿದರಂತೆ. ನಾವು ಯಾರೇ ಆಗಲಿ, ತೀರ್ಥಹಳ್ಳಿಗೆ ಹೋದಾಗ ಸ್ನೇಹಿತರು "ಶಿವರಾಮ ಭಟ್ಟರು ಎಲ್ಲಿದ್ದಾರೆ? ಅವರಿಗೆ ಒಮ್ಮೆ ಬರಲು ಹೇಳಿ" ಎನ್ನುತ್ತಿದ್ದರು. ನನ್ನ ಸ್ನೇಹಿತ ಶ್ರೀ ವರದಾಚಾರ್ಯರ ಹತ್ತಿರ ಸೇತುವೆ ಬಗ್ಗೆ ಕೇಳಿದಾಗ ಅವರೂ ಶಿವರಾಮಣ್ಣನ ಸೇತುವೆ ಪ್ರಕರಣ ನೆನಪಿಸಿಕೊಂಡರು - ಪ್ರಕರಣ ಮುಗಿದು ಅರವತ್ತು, ಅರವತ್ತೈದು ವರ್ಷಗಳ ನಂತರ! ಗೋಕರ್ಣದಲ್ಲಿ ಒಮ್ಮೆ ಮಾವಿನಕಟ್ಟೆ ಬೇಣದಲ್ಲಿ ಮರದ ಕೆಳಗೆ ಬೆಂಕಿ ಹಾಕಿಕೊಂಡು ಮರದ ಮೇಲೆ ನಾಟಕದ ಕಂಪನಿಯಿಂದ ತಂದ ಗಡ್ಡ, ಮೀಸೆ ಧರಿಸಿ ಯಾವುದೋ ಧ್ಯಾನಾಸಕ್ತ ಭಂಗಿಯಲ್ಲಿ ಕುಳಿತಿದ್ದರು. ರಾಮಯ್ಯ ಮಾಸ್ತರರು ಯಾವುದೇ ಸಂತರು ಬಂದರೂ ಉಪಚಾರ ಮಾಡುವವರು. ಅವರು ಆ ರಸ್ತೆಯಲ್ಲಿ ತದಡಿಗೆ ಹೋಗುತ್ತಿದ್ದರಂತೆ. "ರಾಮ, ರಾಮಯ್ಯ, ಬಾ" ಎಂದುದು ಅವರಿಗೆ ಕೇಳಿಸಿತು. ರಾಮಯ್ಯ ಮಾಸ್ತರರು ಆಶ್ಚರ್ಯಚಕಿತರಾಗಿ ಮೇಲೆ ಕುಳಿತ ಯೋಗಿಗಳಿಗೆ ತಪ್ಪಾಯಿತೆಂದು ಇಪ್ಪತ್ತೊಂದು ನಮಸ್ಕಾರ ಮಾಡಿದರು. "ಸ್ವಾಮೀ, ತಪ್ಪಾಯಿತು, ಖಾಲಿ ಕೈಯಲ್ಲಿ ಬಂದಿದ್ದೇನೆ. ಊರಿನಿಂದ ಹಣ್ಣು ತರುತ್ತೇನೆ" ಎಂದು ಅವಸರವಾಗಿ ವಾಪಸು ಗೋಕರ್ಣಕ್ಕೆ ಹೋದರು. ಇವನೂ ಸರಸರ ಕೆಳಕ್ಕಿಳಿದು ಗೋಕರ್ಣಕ್ಕೆ ಮರಳಿದ. ಗಜಾನನ (ಗಜಣ್ಣ): ಓದುವುದರಲ್ಲಿ ನನಗಿಂತ ಹುಶಾರಿ. ಆದರೆ ಆ ಹುಶಾರಿತನ ನನಗೇ ಇರಲೆಂದು ಆ ವರ್ಷ ಎಲ್. ಎಸ್. ಕಟ್ಟಲಿಲ್ಲ. ಶ್ರೀ ಶ್ಯಾಮಭಟ್ಟರು ಬೇಸರಿದಿಂದ ಹೇಳಿದರು "ಮಹಾಬಲನಿಗಿಂತ ಹೆಚ್ಚು, ೭೮% ಮಾರ್ಕ್ಸ ತೆಗೆದುಕೊಳ್ಳುತ್ತಿದ್ದ. ರ‍್ಯಾಂಕೇ ಬರುತ್ತಿದ್ದನೋ, ಏನೋ!!" ತೀರ್ಥಹಳ್ಳಿಯಲ್ಲಿ ಗಜಾನನ ಅನಂತ ಭಟ್ಟ ಎಂಬ ಹೆಸರೇ ಇಲ್ಲ. ಇಲ್ಲಿ ಬರೇ ಗಜಾನನ ಭಟ್ಟರು ಅಥವಾ ಮನೆ ಮಟ್ಟಿಗೆ ಗಜು, ಗಜಣ್ಣ. ಮಠದ ಗುರುಗಳು ಕಾಶಿಯಾತ್ರೆಗೆ ಹೊರಟಾಗ ನಮ್ಮ ಅಪ್ಪಯ್ಯನ ಜೊತೆ ಇವನೂ ಹೊರಟ. ನಾನೇ ಹೇಳಿದ್ದುಂಟು, "ಅಣ್ಣನೇ ಇನ್ನೂ ಕಾಶಿಯಾತ್ರೆಗೆ ಹೋಗಲಿಲ್ಲ, ಇವನು ಹೋಗುತ್ತಾನೆ" ಎಂದು. ಅದಕ್ಕೆ ಹಂದೆ ಮಾವ "ಇವನಿಗೆ ಪುನಃ ಕಾಶಿಯಾತ್ರೆ ಇಲ್ಲ ಮದುವೆಯಾಗುವುದು ಕಷ್ಟ" ಎಂದ. ಕಾಶಿಗೆ ಹೋದ ಇವನು ಬರುವಾಗ ಕೆಲವು ಜಾದು ಕಲಿತುಕೊಂಡು ಬಂದ. ಇಸ್ಪೀಟಿನದು, ಬಟ್ಟೆಯದು. ನಾನು ಅವುಗಳನ್ನು ಉಪಯೋಗಿಸಿಕೊಂಡು ನಮ್ಮ ಹೈಸ್ಕೂಲ್ ಗೇದರಿಂಗ್‌ದಲ್ಲಿ ಒಂದು ಮ್ಯಾಜಿಕ್ ಶೋ ಕೊಟ್ಟೆ. ತುಂಬಾ ಚೆನ್ನಾಗಿ ಇತ್ತೆಂದು ನನ್ನ ಸ್ನೇಹಿತ ಸೋಮಯಾಜಿ, ವಿಷ್ಣು, ಹಾಮಾನಾ ಹೇಳಿದ್ದುಂಟು. ಗಜಣ್ಣ ನೇರ ಗೋಕರ್ಣಕ್ಕೆ ಹೋದ. ಬಣ್ಣ ಹಾಕುವುದನ್ನು, ಹೊಲಿಗೆಯನ್ನು ಪೂನಾಕ್ಕೆ ಹೋಗಿ ಕಲಿತುಕೊಂಡು ಬಂದ. ಕೆಲವು ದಿನ ಚೆನ್ನಾಗಿಯೇ ನಡೆಸಿದ. ದಾಸನಮಠದಲ್ಲಿ ನನಗೆ ಗೊತ್ತಿದ್ದಂತೆ ಇನ್ನೊಬ್ಬರ ಜೊತೆ ಸೀರೆಗೆ ಅಚ್ಚು ಬಣ್ಣ ಹಾಕಿರಬೇಕು. ಊರಲ್ಲಿ ಅವನಿಗೆ ಯಕ್ಷಗಾನ ವರದಾನವಾಯಿತು. ಕಲಿತ, ಕುಣಿದ, ಕುಣಿಸಿದ. ತೀರ್ಥಹಳ್ಳಿಯ ಪಂಡಿತರು ಗೋಕರ್ಣಕ್ಕೆ ಧಾರ್ಮಿಕ ಕೆಲಸಕ್ಕೆ ಹೋದವರು ಬಿಕ್ಕ ಭಟ್ಟರ ಜೊತೆ ಯಕ್ಷಗಾನ ನೋಡಲು ಹೋದರು. ಇವನ ಕೃಷ್ಣನ ಪಾತ್ರವನ್ನು ನೋಡಿ ಮೆಚ್ಚಿ ನೋಟಿನ ಹಾರ ಹಾಕಿದರು. ತೀರ್ಥಹಳ್ಳಿಗೆ ಹೋದವರು ಮರೆಯದೇ ಮಠಕ್ಕೆ ಬಂದು ವಿಷಯ ಹೇಳಿ ಹೊಗಳಿದರು. ತಾಯಿಯವರಿಗೆ ಸಹಜವಾಗಿಯೇ ಸಂತೋಷವಾಯಿತು. ತಂದೆಯವರಿಗೆ ಸಂತೋಷವಾಯಿತು ನಿಜ, ಆದರೆ "ಸರಿ, ಇದಕ್ಕೆಲ್ಲ ಅಡ್ಡಿ ಇಲ್ಲ" ಎಂದರು, ನಾಟಕದಲ್ಲೂ ಪಾರ್ಟ್ ಮಾಡುತ್ತಿದ್ದ, ಅವನಿಗೆ ಆಗಲೇ ಹಾಡುವ ಇಚ್ಛೆ ಆದದ್ದು. ಹಾರ್ಮೋನಿಯಂ ಮಾಸ್ತರರು "ಗಜುಭಟ್ಟರೇ, ನಿಮ್ಮ ಶೃತಿ ಯಾವ ಮನೆಗೂ ಬರುವುದಿಲ್ಲ. ಬೇಡ, ದಮ್ಮಯ್ಯ" ಎಂದರೂ ಬಿಡದೇ, ‘ನಾನೇ ಹೇಳುತ್ತೇನೆ’ ಎಂದು ಹಟಹಿಡಿದ. ಈಗ ಗಜುಭಟ್ಟರಿಂದ ಗಾನ ಸರಸ್ವತಿ ದೇವಿಯನ್ನು ಗಲ್ಲಿಗೇರಿಸುವ ಕಾರ್ಯಕ್ರಮ" ಎಂದು ಹೇಳಬೇಕೇ! ಬಿಡಲಿಲ್ಲ, ಹಾಡೇಬಿಟ್ಟ. ಕೊನೆಗೆ ಇವನ ಪೌರುಷ! "ಮುಂದೆ ಕುಳಿತವರು ಏಳಲಿಲ್ಲ. ಉಳಿದವರೂ ಹೊರಗೆ ಹೋಗಲಿಲ್ಲ!" ಅವರಿಗೆ ನಾಟಕದ ಮುಂದಿನ ಭಾಗದಲ್ಲಿ ಸೀಟು ಸಿಕ್ಕದೇ ಹೋದರೆ, ಎಂಬ ಭಯ! ಯಕ್ಷಗಾನದಲ್ಲಿ ಮಾತ್ರ ಚೆನ್ನಾಗಿಯೇ ಅಭಿನಯಿಸಿದ. ಗೋಕರ್ಣಕ್ಕೆ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವಪ್ಪ ಶಾಸ್ತ್ರಿಗಳು ಬಂದಿದ್ದರು. ರಾತ್ರಿ ‘ಕೀಚಕ ವಧೆ’ ಪ್ರಸಂಗ. ಇವನದು ವಲಲ ಭೀಮನ ಪಾತ್ರ. ಇವನ ಮಾತು, ಅಭಿನಯ ನೋಡಿ ಶಾಸ್ತ್ರಿಗಳು ‘ಆಧುನಿಕ ವಲಲ’ ಎಂದು ಹೊಗಳಿದರು. ಆದರೆ ಮೂಲೆಮನೆ ವೆಂಕಪ್ಪಡಿಗಳು ಮಾತ್ರ "ಅನ್ನದ ಚರಿಗೆ ನೆಕ್ಕಿಕಿದ (ನೆಕ್ಕಿ ಬಿಟ್ಟಿದ್ದಾನೆ)" ಎಂದು ಶೇಷಣ್ಣನ ಹತ್ತಿರ ದೂರು ಕೊಡಲು ಮರೆಯಲಿಲ್ಲ. "ಅನ್ನದ ಚರಿಗೆಯ ಭಾಗ್ಯ" ಎಂದು ಶೇಷಭಟ್ಟರು ಆಧುನಿಕ ವಲಲನಿಗೆ ಬಹುಮಾನ ಎಂದು ವೆಂಕಪ್ಪಣ್ಣನಿಂದಲೇ ಹಾರ ತರಿಸಿ ಇವರಿಗೆ ಹಾಕಿದರು! ಆಗಸ್ಟ್ ಹದಿನೈದು ಪ್ರಥಮ ಸ್ವಾತಂತ್ರ್ಯೋತ್ಸವ, ಪ್ರಥಮ ಪ್ರಜಾರಾಜ್ಯೋತ್ಸವ - ಎರಡೂ ನಾನು ಹೈಸ್ಕೂಲಿನಲ್ಲಿದ್ದಾಗಲೇ ಆಯಿತು. ಸ್ವಾತಂತ್ರ್ಯದ ಸವಿನೆನಪಿಗೆ ಊರಿಗೆಲ್ಲಾ ಬುಂದಿಲಾಡು ಹಂಚಿದರು. ದೇವಂಗಿ ಚಂದ್ರಶೇಖರ ಇವರಿಂದ ಸುಶ್ರಾವ್ಯ ‘ವಂದೇ ಮಾತರಂ’. ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳನ್ನೆಲ್ಲಾ ಸೇರಿಸಿ ಸ್ವಾತಂತ್ರ್ಯೋತ್ಸವಕ್ಕೆ ಕಾರ್ಯಕ್ರಮ ನಿರೂಪಿಸಲು ಹೇಳಿದರು. ನಾನು ‘ಸೂತ್ರಯಜ್ಞ’ ಎಂದೆ. ಆಗ ತೀರ್ಥಹಳ್ಳಿಯ ಕಡೆಗೆ ಆ ಶಬ್ದ ಹೊಸದು. ಎಂ.ಟಿ.ವಿ, ವಿಜ್ಞಾನ ಮೇಷ್ಟ್ರು, ‘ಈಗ ಯಜ್ಞ, ಯಾಗ ಎಲ್ಲಾ ಇಲ್ಲ. ಸಮಿಧ ಎಷ್ಟು ಬೇಕು, ತುಪ್ಪ ಎಷ್ಟು ಬೇಕು!’ ಎಂದರು. ಆಗ ನನಗೆ ನಗು ಬಂತು. ನಗೆ ತಡೆದುಕೊಂಡು "ಸರ್, ಸೂತ್ರ ಯಜ್ಞ ಎಂದರೆ ಚರಕಾ ರಾಟಿ ಮೊದಲಾದವುಗಳಿಂದ ನೂಲು ತೆಗೆಯುವುದು. ಅಂದಿನ ನೂಲನ್ನು ಖಾದಿನಿಧಿಗೆ ಕೊಡುವುದು" ಎಂದೆ. ಆಗ ಹೆಡ್‌ಮಾಸ್ಟರು "ಹತ್ತಿ ತರಿಸಿಕೊಡುತ್ತೇನೆ, ರಾಟಿ, ಚರಕ ನೀವೇ ತಂದುಕೊಳ್ಳಬೇಕು" ಎಂದರು. ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಭಾಷಣ. ನಂತರ ರಾತ್ರಿ ಹನ್ನೆರಡಕ್ಕೆ ಚರ್ಚ್ ಮೈದಾನದಲ್ಲಿ ಸಹಸ್ರಾರು ಜನರಿಂದ "ಸ್ವತಂತ್ರ ಹಿಂದೂಸ್ಥಾನಕ್ಕೆ ಜಯವಾಗಲಿ" ಎಂಬ ಘೋಷ. ಮಳೆಯೋ ಮಳೆ. ಸಭಾಕಾರ್ಯಕ್ರಮವನ್ನು ರಾತ್ರಿ ಒಂದು ಗಂಟೆಗೆ ರಾಮಮಂದಿರದಲ್ಲಿ ಜರುಗಿಸಲಾಯಿತು. ೧೯೫೦ ಜನವರಿ ೨೬ - ಪ್ರಜಾರಾಜ್ಯೋತ್ಸವ. ಅಂದು ಅರ್ಚಕ ವೆಂಕಟೇಶ ಎನ್ನುವ ಸಾಹಿತಿಗಳಿಂದ ಪ್ರಜಾಪ್ರಭುತ್ವದ ಕುರಿತು ಅಮೋಘ ಭಾಷಣ. ಅದು ನಡೆದುದು ರಾಮಮಂದಿರದಲ್ಲಿ. ಮಾರನೇ ದಿನ ಅವರಿಂದಲೇ ಒಕ್ಕಲಿಗರ ಹಾಸ್ಟೆಲಿನಲ್ಲಿ, "ವಿದ್ಯಾರ್ಥಿಗಳು ರಾಜಕೀಯದಲ್ಲಿ ಎಷ್ಟರ ಮಟ್ಟಿಗೆ ಭಾಗವಹಿಸಬೇಕು?" ಎಂಬ ಕುರಿತು ಭಾಷಣ. ನಮ್ಮ ಹೈಸ್ಕೂಲಿನಲ್ಲಿ ವಿವಿಧ ಕಾರ್ಯಕ್ರಮಗಳು, ಭಾಷಣ, ಕವನ, ಕ್ರೀಡೆ - ಎಲ್ಲವೂ ಒಂದಕ್ಕಿಂತ ಒಂದು ಭಾರೀ ಉತ್ಕೃಷ್ಟ. ನನ್ನ ಸಾಧನೆ ಎಂದರೆ ಅಡೆತಡೆ ಓಟದಲ್ಲಿ ಮೊದಲನೇ ಅಥವಾ ಎರಡನೇ ಸ್ಥಾನ ಪಡೆದದ್ದು. ವಿದ್ಯುತ್ತಿಲ್ಲದ ಆ ಕಾಲದಲ್ಲಿ ನನಗೆ ಓದಲು ಬುಡ್ಡಿ ಲ್ಯಾಂಪ್ - ಬಹುಮಾನ. ಕಾಲೇಜು ಮುಗಿಯುವವರೆಗೂ ಇದೇ ದೀಪದಲ್ಲಿ ಓದುತ್ತಿದ್ದೆ. ಆಗಲೇ ಎಲೆಕ್ಟ್ರಿಸಿಟಿ ಪರಿಚಿತವಾಗುತ್ತಿತ್ತು. ಆದರೂ ನನಗೆ ನನ್ನ ಪ್ರಜಾಪ್ರಭುತ್ವದ ಜ್ಯೋತಿ! ಒಮ್ಮೆ ನಗರದ ಉಡುಪ ಹೇಳದ್ದ "ಭಟ್ಟರೇ, ನಿಮಗೆ ಗಣಿತದಲ್ಲಿ ನೂರಕ್ಕೆ ನೂರು. ಈ ಪ್ರಜಾಜ್ಯೋತಿಯಿಂದ ಅದು!" ಎಂದಿದ್ದ. ಜ್ಯೋತಿ ಸೇ ಜ್ಯೋತಿ ಜಗಾತೇ ಚಲೋ.... ನನ್ನ ಗಣಿತದ ಪ್ರಭೆಯನ್ನು ಆಗುಂಬೆ ವಿಷ್ಣು, ನಗರದ ಉಡುಪ, ಕಾಸರವಳ್ಳಿ ಗೋವಿಂದಣ್ಣ, ಹಾಮಾನಾ ಹೇಳಿದಂತೆ ಅವರು, ಮೂಲ, ಇತ್ಯಾದಿ...ಎಲ್ಲರ ಜೊತೆ ಹಂಚಿಕೊಂಡು ಸಂತಸ ಪಟ್ಟಿದ್ದೇನೆ. ನಾವು ಎಸ್.ಎಸ್.ಎಲ್.ಸಿ.ಗೆ ಬರುವ ಹೊತ್ತಿಗೆ ಶಿಕ್ಷಕರಲ್ಲಿ ತುಂಬಾ ಬದಲಾವಣೆ ಆಗಿತ್ತು. ಹೆಡ್‌ಮಾಸ್ಟರರು ಯೋಗಾನರಸಿಂಹನ್, ಮಹಾಮೇಧಾವಿ. ಇವರ ಮಗನೇ ಶಾರದಾ ಪ್ರಸಾದ್. ಮೂರು ದಶಕಗಳ ಕಾಲ ಶ್ರೀಮತಿ ಇಂದಿರಾಗಾಂಧಿ, ಶ್ರೀ ರಾಜೀವಗಾಂಧಿ ಮತ್ತಿತರರಿಗೆ ರಾಜಕೀಯ ಕಾರ್ಯದರ್ಶಿಯಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದರು. ಗಣಿತಕ್ಕೆ ಟಿ.ಕೆ.ಎಸ್ - ಬಹುಸಿಟ್ಟಿನ ಕೋಡಿ. ಯಾರಿಗೆ ಬೇಕಾದರೂ ಸಿಕ್ಕಾಪಟ್ಟೆ ಬೈಯುತ್ತಿದ್ದರು. ಆದರೆ ಗಣಿತ ಪಾಠದಲ್ಲಿ ಮಾತ್ರ ತುಂಬ ಸಮರ್ಥರು. ಹೀಗಾಗಿಯೇ ಸ್ಟಾಫ್‌ನವರು, ನಾವು-ಎಲ್ಲಾ ಅವರ ಬೈಗಳನ್ನು ಸಹಿಸುವುದಾಗಿತ್ತು. ಒಮ್ಮೆ ನಾನು ಮಠದ ಗೇಟಿನ ಹತ್ತಿರ ನಿಂತಿದ್ದೆನಂತೆ. ಇವರನ್ನು ನೋಡಿಯೂ ನಮಸ್ಕಾರ ಹೇಳಲಿಲ್ಲ ಎಂದು ಅವರ ಆಕ್ಷೇಪ, ಬೈಗುಳ. (ನಾನು ‘ಸರ್, ನಾನು ನಿಮ್ಮನ್ನು ನೋಡಲಿಲ್ಲ’ ಎಂದರೂ ಒಪ್ಪಲಿಲ್ಲ). ಹೋಟೆಲ್ ಸುಬ್ರಾಯರ ಹತ್ತಿರವೂ ಯಾವುದೋ ವಿಷಯಕ್ಕೆ ಜಗಳ. ಎರಡು ದಿನ ಊಟ ಮಾಡಲಿಲ್ಲಂತೆ! ನಮ್ಮ ಸೋಮಯಾಜಿ, ಶ್ರೀನಿವಾಸಮೂರ್ತಿ, ರಾಘವೇಂದ್ರ ಶರ್ಮಾ ಇವರಿಗೆ ಗಣಿತದಲ್ಲಿ ಎಂಬತ್ತರಿಂದ ನೂರರವರೆಗೆ ಅಂಕ ಬಂದುದರಲ್ಲಿ ಇವರ ಪಾಠದ ಪ್ರಭಾವವೇ ಖಂಡಿತವಾಗಿ ಹೆಚ್ಚಿನದು. ನಾನು ನನ್ನ ಕೃತಜ್ಞತೆ ಅರ್ಪಿಸಲು "ಸರ್, ನನಗೆ ಗಣಿತದಲ್ಲಿ ನೂರಕ್ಕೆ ನೂರು ಬಂತು, ತಮ್ಮ ಪಾಠದ ಫಲ" ಎಂದೆಲ್ಲ ಹೇಳಲು ಹೋದರೆ "ಹೋಗಯ್ಯ, ನನಗೆ ಮೊದಲೇ ಗೊತ್ತಿತ್ತು. ಪಾಠ ಹೇಳಿದವ ನಾನು, ಮೌಲ್ಯಮಾಪನ ಅವರದೋ?" ಎಂದು ಬೈದು ಕಳಿಸಿದರು. ಎಸ್.ಎಸ್.ಎಲ್.ಸಿ.ಯಲ್ಲಿ ನನ್ನ ಸರಾಸರಿ ಅಂಕ ೭೭. ಸಮಾಜ ವಿಜ್ಞಾನದಲ್ಲಿ ನನಗೆ ಭಯವಿತ್ತು. ಆದರೆ ಆ ವಿಷಯದಲ್ಲಿಯೂ ೭೯ ಅಂಕ ಗಳಿಸಿದ್ದೆ, ಎಲ್ಲರಿಗೂ ಸಂತೋಷ. "ಆದರೆ ಭಟ್ಟರೆ, ನಮಗೆ ನೂರಕ್ಕೆ ನೂರು ಇಲ್ಲವಲ್ಲ. ಆ ಹಿರಿಮೆ ನಿಮ್ಮದೇ" ಎಂದು ಖುಷಿಪಟ್ಟರು, ಆಪ್ತ ಗೆಳೆಯ ಬಿ.ವಿ.ಸೋಮಯಾಜಿ. ಕಂಬೈಂಡ್ ಸ್ಟಡಿ: ರಾತ್ರಿ ಎಂಟು, ಹತ್ತರವರೆಗೆ -ಒಂದು ದಿವಸ ಸೋಮಯಾಜಿ, ಉಡುಪ, ರಾಘವೇಂದ್ರ ಶರ್ಮ ಇವರ ಜೊತೆ, ಇನ್ನೊಮ್ಮೆ ಇವರ ಜೊತೆ ಶ್ರೀ ಪುರುಷೋತ್ತಮ, ಶರ್ಮ, ಶ್ರೀನಿವಾಸಮೂರ್ತಿ (ಅಪರೂಪಕ್ಕೆ). ಶ್ರೀನಿವಾಸಮೂರ್ತಿ ಹನ್ನೊಂದನೇ ರ‍್ಯಾಂಕ್ ಗಳಿಸಿದರು. ಮುಂದೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದರು. ಸೋಮಯಾಜಿ ಇಂಜಿನಿಯರ್ ಆಗಿ ಟಾಟಾ ಇನ್‌ಸ್ಟಿಟ್ಯೂಟ್‌ನಲ್ಲಿ ಪ್ರೊಫೆಸರ್ ಆದರು. ನಾನು ಎರಡು ಸಲ ಮುಂಬೈಗೆ ಹೋದಾಗಲೂ ನನ್ನನ್ನು ಹುಡುಕಿಕೊಂಡು ಬಂದು ಜೊತೆಗಿದ್ದು ಮುಂಬೈ ದರ್ಶನ ಮಾಡಿಸಿದರು. ಕಳೆದ ಹದಿನೈದಿಪ್ಪತ್ತು ವರ್ಷಗಳಿಂದ ಪತ್ತೆಯಿಲ್ಲ. ತನ್ನ ಲೇಡಿಯೊಂದಿಗೆ ಆಸ್ಟ್ರೇಲಿಯಾದಲ್ಲೋ, ಇನ್ನೆಲ್ಲೋ ವಾಸವಾಗಿದ್ದಾರೆ. ಸುಖವಾಗಿರಲಿ. ರಾಘವೇಂದ್ರಶರ್ಮಾ ಕೂಡ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದರು. ಆಗುಂಬೆ ವಿಷ್ಣು ಜೋಗಿಕುತ್ರಕ್ಕೆ ಓದಲು ಹೋಗುವಾಗ ಸಾಥಿ. ಅವನು ಟೆಲಿಗ್ರಾಫ್ ಇಲಾಖೆ ಸೇರಿದ. ಅವನ ಮನೆತನದವರು ನಡೆಸಿಕೊಂಡು ಬಂದ ಆಗುಂಬೆ ಗೋಪಾಲಕೃಷ್ಣದೇವರ ಸೇವೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾನೆ. ತೀರ್ಥಹಳ್ಳಿಯಲ್ಲಿ ಎಳ್ಳಮಾವಾಸ್ಯೆಯಲ್ಲಿ ಮೂರ್ತಿಧಾರಕ. ಯಾವುದೇ ಕೆಲಸವನ್ನು ದಕ್ಷತೆಯಿಂದ ನಿರ್ವಹಿಸುವ ದಕ್ಷತೆಯುಳ್ಳವನು. ಇವನ ದೊಡ್ಡಪ್ಪ ಶ್ರೀ ಶ್ಯಾಮಭಟ್ಟರೇ ನಮಗೆ ಎಲ್.ಎಸ್.ನಲ್ಲಿ ಟ್ಯೂಶನ್ ಹೇಳೀದವರು. ಶಿವರಾಮಯ್ಯನ ಶ್ರೀಧರ ನನಗಿಂತ ಐದಾರುವರ್ಷ ಕಿರಿಯರು. ಗುಣ, ನಡತೆಯಲ್ಲಿ ಹಿರಿಯರು. ಇನ್ನು ಮೂಲನ ಒಂದು ಪ್ರಸಂಗ. ತಾನು ಕೂರುವ ಡೆಸ್ಕಿನ ಮೇಲೆ ಮೂಲ ಎಂದು ಬ್ಲೇಡಿನಲ್ಲಿ ಕೊರೆದಿದ್ದ. ನಾಲ್ಕೈದು ದಿನಗಳ ನಂತರ ಇದರ ಮುಂದೆ ಯಾರೋ ಒಬ್ಬರು ವ್ಯಾಧಿ ಎಂದು ಅಷ್ಟೇ ದೊಡ್ಡ ಅಕ್ಷರದಲ್ಲಿ ಕೆತ್ತಿದ್ದರು! ಆ ಹುಡುಗ ಯಾರು ಎಂಬುದೂ ಮುಂದೆ ಪತ್ತೆಯಾಯಿತು. ಸೋಮಯಾಜಿ ಒಮ್ಮೆ ನಮ್ಮ ಮನೆಗೆ ಬಂದಿದ್ದ (ತೀರ್ಥಹಳ್ಳಿಯಲ್ಲಿ). ಹಪ್ಪಳ ಮಾಡುತ್ತಿದ್ದರು. ನಮ್ಮಮ್ಮ ಎರಡು, ಮೂರು ಹಪ್ಪಳ ಸುಟ್ಟು, ಕಾಯಿಸುಳಿ ಹಾಕಿ ಕೊಟ್ಟರು. ಸಂಕೋಚದ ಸೋಮಯಾಜಿ ತಿಂದ. ನಂತರ ನನ್ನ ಹತ್ತಿರ ‘ನಿಮ್ಮ ಮನೆಯಲ್ಲಿ ಮೊಗೆಕಾಯಿ ಹಪ್ಪಳ ಮಾಡುವುದಿಲ್ಲವೇ’ ಎಂದ. ಬಾಳೆಕಾಯಿ, ಹಲಸು, ಗೆಣಸು ಇವುಗಳ ಹಪ್ಪಳ ಮಾಡುವುದು ಗೊತ್ತು. ಮೊಗೆಕಾಯಿ ಹಪ್ಪಳ! ಆಶ್ಚರ್ಯಚಕಿತರಾದೆವು. ಮಾರನೇ ದಿನ ಅವನದೇ ಒಂದು ತಮಾಷೆ. ದುಂಡಗಿರುವ ಮೊಗೆಕಾಯಿಯನ್ನು ತೆಗೆದುಕೊಂಡು ಕೋಳಪಾಟು, ಗುಣಿ ಬದಲು ಎಣ್ಣೆಸವರಿದ ಮೊಗೆಕಾಯಿ ಉರುಳಿಸಬೇಕಂತೆ! ನನ್ನನ್ನು ತಮ್ಮ ಮನೆ ಹಿತ್ತಲಿಗೆ ಕರೆದುಕೊಂಡು ಹೋಗಿ ಸವತೆ ಚಪ್ಪರ ತೋರಿಸಿ "ಭಟ್ಟರೆ, ಬಳ್ಳಿಯಲ್ಲಿರುವ ಮಿಡಿಸವತೆಯನ್ನು ಬಾಯಲ್ಲಿ ಕಚ್ಚಿ, ಅಗಿದು ತಿನ್ನಬೇಕು. ಬಹಳ ರುಚಿ. ನೀವೂ ತಿನ್ನಿ" ಅಂದ. ನನಗೆ ಭಯ - ಎಂಜಲಾಗುವುದಲ್ಲ! ನನ್ನ ಸಂಶಯ ನಿವಾರಣೆಗೆ ಅವನ ಬಳಿ ಉತ್ತರ ಸಿದ್ಧವಾಗಿತ್ತು. "ಭಟ್ಟರೆ, ಶಬರಿ ಎಂಜಲು ಎಂಜಲಲ್ಲ. ಗಿಳಿ, ಕಾಗೆ ಇವೆಲ್ಲ ಬಳ್ಳಿಯಲ್ಲಿರುವ ಕಾಯಿಯನ್ನೇ ತಾನೆ ಕಚ್ಚುವುದು?" ನಾನು "ಸರಿ, ನಾನು ಗಿಳಿಯಲ್ಲ, ಕಾಗೆ ಹೌದೋ, ಅಲ್ಲವೋ!" ಎನ್ನುತ್ತಾ ಅವನು ಹೇಳಿದಂತೆ ಕಚ್ಚಿ ತಿಂದೆ. ಎರಡು, ಮೂರು, ನಾಲ್ಕು! ‘ಭಟ್ರೇ, ಸಾಕು’ ಎಂದ. "ಏಕೆ?" ಎಂದೆ. "ರುಚಿ ಹೌದು. ಆದರೆ ಹೊಟ್ಟೆ ಕಡಿತ ಶುರುವಾದೀತು" ಎಂದ. ನನಗೆ ಡಿವಿಜಿಯವರ "ಮಿಡಿ ಚೇಪೆ ಕಾಯಿಗಳ ತಡಬಡದೆ ನುಂಗುವುದು,ಕಡಿಯೆ ಹೊಟ್ಟೆಯಲಿ ಹರಳೆಣ್ಣೆ ಕುಡಿಯುವುದು,..... ಪೊಡವಿಯೊಳು ಭೋಗವಿಧಿ" ನೆನಪಾಯಿತು, ಹೇಳಿದೆ. ಅಷ್ಟರಲ್ಲಿ ಸೋಮಯಾಜಿ ಅಪ್ಪ ಪದ್ಮನಾಭ ಸೋಮಯಾಜಿಗಳು ಬಂದರು. ‘ನಾನು ದಕ್ಷಿಣವಾದರೆ ಅನಂತ ಭಟ್ಟರು ಉತ್ತರ" ಎಂದರು. ಬರುವಾಗ ಎರಡು ಬಾಟ್ಲಿ ಜೇನುತುಪ್ಪ ಕೊಟ್ಟರು. ತಂದೆಯವರಿಗೆ ‘ನಾನು ಕೊಟ್ಟೆ ಎಂದು ಹೇಳು’ ಎಂದರು. ಹೀಗೆ ಸೋಮಯಾಜಿಗಳೊಡನೆ ಮಧುರ ಬಾಂಧವ್ಯ. ಮುಂದೆ ಶಿವಮೊಗ್ಗಾದಲ್ಲಿ ಜೂನಿಯರ್, ಸೀನಿಯರ್, ಇಂಟರ್‌ಮೀಡಿಯೇಟ್‌ನಲ್ಲಿ ನಾವಿಬರೂ ಬ್ರಾಹ್ಮಣರ ಹಾಸ್ಟೆಲ್‌ನಲ್ಲಿ ರೂಂಮೇಟ್ಸ್ ಆಗಿದ್ದೆವು. ಯಾವತ್ತೂ ಅವನು ನನಗಿಂತ ಬುದ್ಧಿವಂತ - ವ್ಯವಹಾರದಲ್ಲೂ, ಓದುವುದರಲ್ಲೂ. ಒಮ್ಮೆ ನನಗೆ ಹೇಳಿದ. "ಭಟ್ಟರೆ, ಈಗ ನೀವು ಎಸ್.ಎಸ್.ಎಲ್.ಸಿ.ಯಲ್ಲಿ ಓದುವಂತೆ ಓದುತ್ತಿಲ್ಲ. ಬರೇ ಮಾತು. ಓದಿ ಬೇಜಾರಾದಾಗ ಬೇರೆ ಮಕ್ಕಳು ನಿಮ್ಮ ಹತ್ತಿರ ಬರುತ್ತಾರೆ. ನಿಮ್ಮ ತಮಾಷೆ ಅವರನ್ನು ಎಚ್ಚರಿಸುತ್ತದೆ. ಚೆನ್ನಾಗಿ ಓದಿ" ಎಂದು ಎಚ್ಚರದ ಮಾತು ಹೇಳಿದ್ದ. ನನಗೆ ಆ ವರ್ಷಗಳಲ್ಲಿ ಸೆಕೆಂಡ್ ಕ್ಲಾಸ್. ಅಂತೂ ಇಬ್ಬರೂ ಬೆಂಗಳೂರಿಗೆ ಹೋದೆವು. ಅವನ ಮೆರಿಟ್ ಮೇಲೆ ಅವನಿಗೆ ಬಿ.ಇ.ಗೆ ಸೀಟು ಸಿಕ್ಕಿತು. ನನಗೆ ಬಿ.ಎಸ್.ಸಿ.ಯಲ್ಲಿ ಪಿ.ಸಿ.ಎಂ. ಇಷ್ಟು ಹೊತ್ತಿಗೆ ಅವನ ಅಣ್ಣ ರಾಮಕೃಷ್ಣ ಸೋಮಯಾಜಿಗೆ ಬೆಂಗಳೂರಿಗೆ ವರ್ಗವಾಯಿತು. ಅವನು ಹಾಸ್ಟೆಲ್ ಬಿಟ್ಟು ಅಣ್ಣನ ಜೊತೆ ರೂಮಿನಲ್ಲಿ ಉಳಿದ. ಆದರೂ ಮಧುರ ಬಾಂಧವ್ಯ ದೂರವಾಗಲಿಲ್ಲ. ಬಬ್ಬೂರಕಮ್ಮೆ ಹಾಸ್ಟೆಲ್‌ಗೆ ಬಂದು ಆ ಮಾತು, ಈ ಮಾತು ಆಡುತ್ತ ಕಾಫಿ ಕುಡಿದು ಅವನು ರೂಮಿಗೆ ಹೋಗುತ್ತಿದ್ದ. ಚಿತ್ರಗಿ ಕುಮಟಾಕ್ಕೆ ಹೊಂದಿರುವ ಒಂದು ಹಳ್ಳಿ. ಕುಮಟಾಕ್ಕೆ ಕೇವಲ ಎರಡು ಮೈಲಿ ದೂರ. ಪಟ್ಟಣದ ಎಲ್ಲಾ ತುಟಾಗ್ರತೆ, ಹಳ್ಳಿಯ ಸಮಸ್ಯೆಗಳಿಂದ ಕೂಡಿದ ಚಿತ್ರ.ಶಿವರಾಮಣ್ಣನಿಗೆ ಚಿತ್ರಗಿಗೆ ವರ್ಗವಾಗಿತ್ತು. ಅವನು ಆಗಲೇ ಶಿಕ್ಷಕನಾಗಿ ಮೂರು-ನಾಲ್ಕು ವರ್ಷಗಳಾಗಿದ್ದವು. ನಮ್ಮ ತಂದೆಯವರ ಯೋಚನೆ ಮಹಾಬಲನನ್ನು (ಅಂದರೆ ನನ್ನನ್ನು) ಕೆನರಾ ಕಾಲೇಜಿಗೆ ಸೇರಿಸಿದರೆ, ಭವಿಷ್ಯದ ದೃಷ್ಟಿಯಿಂದ ಹಾಗು ಆರ್ಥಿಕವಾಗಿ ಸಾರ್ಥಕವಾಗುತ್ತದೆ, ಎಂದು. ನನಗೆ ಇಷ್ಟವಿಲ್ಲ. ಆದರೂ ಹೊರಟೆ. ಅಣ್ಣನ ಬಿಡಾರದಿಂದ ಕಾಲೇಜು ಕೇವಲ ಎರಡು ಮೈಲು. ನಾನು ಮಠದಿಂದ ತಂದ ಕಣ್ಣಿಗೆ ಅಣ್ಣನ ಬಿಡಾರ ತೀರ ಚಿಕ್ಕದು. ಅದೇನು ವಿಚಿತ್ರವೋ! "ಮಹಾಬಲನನ್ನು ತೀರ್ಥಹಳ್ಳಿಗೆ ಕಳಿಸು. ಅಲ್ಲೇ ಕಾಲೇಜಿಗೆ ಕಳೀಸುತ್ತೇವೆ" ಎಂಬ ಸಂದೇಶ. ಅಂದೇ ಸಂಜೆ ಹೊರಟೆ. ಸಿರ್ಸಿಯಲ್ಲಿ ನಂದಿನಿ ಹೊಟೆಲ್, ರಾಮರಾಯರ ಹೊಟೆಲ್‌ನಲ್ಲಿ ರಾತ್ರಿ. ಮಧ್ಯಾಹ್ನ ಹನ್ನೆರಡು ಘಂಟೆಗೆ ಊಟದ ಹೊತ್ತಿಗೆ ಮಠ. ಮಾರನೇ ದಿನವೇ ಶಿವಮೊಗ್ಗಾಕ್ಕೆ ಪ್ರಯಾಣ. ಜೊತೆಯಲ್ಲಿ ಮೂಲ. ಮಧ್ಯಾಹ್ನದ ಊಟ ಅವನ ಖಾನಾವಳಿಯಲ್ಲಿ (ಕುಪ್ಪಯ್ಯನ ಖಾನಾವಳಿ). ಬ್ರಾಹ್ಮಣರಿಗೆ ಮಾತ್ರ. ಒಂದು ಕಂಡೀಶನ್: ಊಟಕ್ಕೆ ಕೂರುವಾಗ ಅಂಗಿ, ಬನಿಯನ್ ತೆಗೆಯಬೇಕು. ನನಗೆ ಇದು ಹೊಸದಲ್ಲ. ಮಠದಲ್ಲಿ ನಿತ್ಯದ ಪಾಠ, ಹೊಟೆಲ್‌ನಲ್ಲಿ ದುಡ್ಡು ಕೊಟ್ಟು ಊಟ ಮಾಡುವವರಿಗೆ ಈ ಕಂಡೀಶನ್ ವಿಚಿತ್ರ. ಮೂ.ಲ.ನಿಗೂ ಈ ಶಿಕ್ಷೆ ಇತ್ತು. ಆದರೆ ಅವನು ಸಂಬಂಧಿಕನಾದುದರಿಂದ ಊಟದಲ್ಲಿ ನಾಲ್ಕಾಣೆ ರಿಯಾಯಿತಿ. ಆದರೂ ಈ ವ್ಯವಹಾರದಲ್ಲಿ ನಾನೊಂದು ಸಮಾಧಾನ ಕಂಡುಕೊಂಡೆ. ಚಿತ್ರಗಿಯಿಂದ ಬಂದವನು ಜೋಗಾಕ್ಕೆ ಹೋಗಿದ್ದೆ. ಮಧ್ಯಾಹ್ನದ ಊಟ ಕರಿತಿಪ್ಪಯ್ಯನಲ್ಲಿ. ಆ ಕಡೆ ಈ ಕಡೆ ಪೇಟ, ಕೋಟು, ಟೋಪಿ ಧರಿಸಿದವರು. ಅನ್ನ ಬಡಿಸುವಾಗ ಟೋಪಿಯವನ ಬಾಳೆಯ ಅನ್ನ ನನ್ನ ಬಾಳೆಗೆ. ಅಯ್ಯೋ-ಗೋಕರ್ಣದ, ತೀರ್ಥಹಳ್ಳಿ ಶ್ರೀ ಮಠದ ವಾಸಿಗೆ ಈ ಶಿಕ್ಷೆಯೇ? ದೇವರೇ, ಇದೇನಿದು - ಏಂದುಕೊಂಡಿದ್ದೆ. ನನ್ನ ಮೊರೆ ಶ್ರೀ ದೇವರಿಗೆ ಕೇಳಿಸಿರಬೇಕು. ಇದಾದ ಮೂರು ದಿನಗಳಲ್ಲಿ ನಾನು ಶುದ್ಧ ಬ್ರಾಹ್ಮಣ್ಯವನ್ನು ಸ್ವೀಕರಿಸಿದೆ - ಶ್ರೀ ಕುಪ್ಪಯ್ಯನ ಹೊಟೆಲಿನಲ್ಲಿ! ಮುಂದಿನದು ಶಿವಮೊಗ್ಗಾದಲ್ಲಿ ವಾಸ, ಗ್ರಾಸ. ಅಲ್ಲಿ ಸೋಮಯ್ಯನ ಹೊಟೆಲ್‌ನಲ್ಲಿದ್ದೆ. ಬ್ರಾಹ್ಮಣರ ಹಾಸ್ಟೆಲ್ ಉಂಟು ಎಂದರು, ಸರಿ, ಸೇರಿದೆ. ನಮ್ಮ ಸೋಮಯಾಜಿಯೂ ಅಲ್ಲೇ ಬಂದ. ಕಾಲೇಜಿಗೆ ಸಮೀಪವಲ್ಲದಿದ್ದರೂ ದೂರವಲ್ಲ. ದಿನಾ ಹತ್ತಕ್ಕೆ ಊಟ, ಹತ್ತೂ ನಲವತ್ತೈದಕ್ಕೆ ಕಾಲೇಜು ಪ್ರಾರಂಭ. ಐದೂ ಮೂವತ್ತಕ್ಕೆ ಬಿಡುಗಡೆ. ಕೃಷ್ಣ ಕೆಫೆಯಲ್ಲಿ ತಿಂಡಿ ಮತ್ತು ಒನ್-ಬೈ-ಟೂ ಕಾಫಿ. ನಂತರ ಏನಾದರೂ ಪುಸ್ತಕ ಖರೀದಿ ಇದ್ದರೆ ದೊಡ್ಡಪೇಟೆ. ಇಲ್ಲ, ಹೊಳೆ ಕಡೆ ವಾಕಿಂಗ್. ಸಂಜೆ ಎಂಟಕ್ಕೆ ಭಜನೆ, ಊಟ. ಪ್ರತಿಯೊಬ್ಬರೂ ಸಂಧ್ಯಾವಂದನೆ ಮಾಡಲೇಬೇಕು. ನಮ್ಮ ಹಾಸ್ಟೆಲ್‌ನಲ್ಲಿ ಶ್ರೀ ಹೊಳಲ್ಕೆರೆ ರಾಮಕೃಷ್ಣ ಅಯ್ಯಂಗಾರ್ ಮತ್ತು ಪ್ರಿನ್ಸಿಪಾಲ್ ರಾಮನಾಥ್ ಇದ್ದರು. ಇವರಿಗೆಲ್ಲ ನಮ್ಮ ಜೊತೆ ಊಟ. ಹೊಳಲ್ಕೆರೆ ಸರ್‌ಗೇ ಸಂಧ್ಯಾವಂದನೆಯಿಂದ ವಿನಾಯಿತಿ ಇತ್ತು. ಏಕೆಂದರೆ ಅವರಿಗೆ ಉಪನಯನ ಆಗಿರಲಿಲ್ಲ! ಒಮ್ಮೆ ನಾವು ಇಪ್ಪತ್ತೈದು, ಮೂವತ್ತು ಜನ ಊಟಕ್ಕೆ ಕುಳಿತಿದ್ದೇವೆ. ಒಂದು ದನ ಒಳಕ್ಕೆ ನುಗ್ಗಿ ಬಾಳೆಗೆ ಮುಖ ಒಡ್ಡುತ್ತಿತ್ತು. ನಾವು ಯಾರೂ ಏಳುವ ಹಾಗಿಲ್ಲ. ಶ್ರೀ ಹೊಳಲ್ಕೆರೆಯವರು ಬಡಿಸುವ ಅಡಿಗೆ ಭಟ್ಟನ ತಡೆದು, ಕೈಯಲ್ಲಿರುವ ಸಟ್ಟುಗವ ಕಸಿದು ದನವನ್ನು ಓಡಿಸಿದರು. "ಜೈ ಹೊಳಲ್ಕೆರೆ", "ಹೊಳಲ್ಕೆರೆ ಜಿಂದಾಬಾದ್". ಈ ಸತ್ಕಾರ್ಯಕ್ಕಾಗಿ ಅವರಿಗೆ ೫೧-೫೨ರಲ್ಲಿ ಉಪನಯನ. ಮಾರನೇ ದಿನವೇ ಮದುವೆ! ಇದು ಹೊನ್ನಳ್ಳಿಯ ಹೊಳ್ಳರು ಹೇಳಿದ ಮಾತು. ನಾನು ಸರ್‌ಗೆ ಹೇಳಿದಾಗ "ಭಟ್ಟ, ನಿನ್ನ ತಮಾಷೆ ಬಿಡಲಿಲ್ಲ, ಎಂದು ಬಿಡುವೆ?" ಎಂದಾಗ "ಮದುವೆ ಆಗಬೇಕಲ್ಲ" ಎಂದೆ. ಸೀನಿಯರ್ ಇಂಟರ್‌ಮೀಡಿಯೇಟ್‌ನಲ್ಲಿದ್ದಾಗ ನಮ್ಮ ಹಾಸ್ಟೆಲ್ಲಿನ ನೂತನ ಕಟ್ಟಡದ ಉದ್ಘಾಟನೆ. ಹೊಸೋಡಿ ರಾಮಾ ಶಾಸ್ತ್ರಿಗಳು, ವೆಂಕಟರಮಣ ಶಾಸ್ತ್ರಿಗಳು, ಕೊಡ್ಲಿ ಅವಧಾನಿಗಳು - ಇವರೆಲ್ಲಾ ದಾನಿಗಳು, ಮಹಾದಾನಿಗಳು.... ಆ ವರ್ಷ ಕಾಲೇಜು ಯೂನಿಯನ್‌ಗೆ ಅಂದಿನ ಯುವಕರಲ್ಲೆಲ್ಲಾ ಪ್ರಾಯ, ಅಭಿಪ್ರಾಯ ಇರುವ ಒಬ್ಬನೇ ಯುವಕ (ನನ್ನ ಮಟ್ಟಿಗೆ) ಉಮೇದುವಾರಿಕೆಗೆ ನಿಂತಿದ್ದರು. ಇವರು ಆರಿಸಿ ಬಂದರು. ಮುಂದಿನ ಎಲ್ಲಾ ಕಾರ್ಯಕ್ರಮ ಉತ್ತಮವಾಗಿ ನಡೆಸಿಕೊಟ್ಟರು. ಒಂದು ತಮಾಷೆ. ಕಾಲೇಜ್ ಗೇದರಿಂಗ್‌ಗೆ ನನ್ನಲ್ಲಿರುವ ಜೋಡೆಳೆವಸ್ತ್ರ ಬಿಚ್ಚಿ ಕಚ್ಚೆಪಂಚೆ ಮಾಡಿ ಉಟ್ಟುಕೊಂಡೆ. ಕಾಲೇಜಿನಲ್ಲಿ ಕೆಲವು ಹುಡುಗರು ತಮಾಷೆ ಮಾಡಿದರು: ‘ಏ ಶಾಸ್ತ್ರಿ,ನಾಳೆ ಅಪ್ಪನ ತಿಥಿಗೆ ವೈದಿಕರು ಸಿಗಲಿಲ್ಲ ಎನ್ನುತ್ತಿದ್ದೆಯಲ್ಲ, ಈ ಭಟ್ಟರಿಗೆ ಹೇಳು’! ಕೇಳಿದ್ದೇ ತಡ, ಸೀದಾ ಹಿಂದೆ ಓಡಿದೆ. ಒಂದು ಮರದ ಕೆಳಗೆ ನಿಂತು ವಸ್ತ್ರ ಜೋಡೆಳೆ ಮಾಡಿ ಮುಂಡಾಗಿ ಪರಿವರ್ತಿಸಿ ಉಟ್ಟು ತಿರುಗಿ ಬಂದೆ. ಆ ಹುಡುಗರು ಮತ್ತೆ ಸಿಗಲಿಲ್ಲ. ಖಿhಚಿಟಿಞ ಉoಜ. ನಮ್ಮ ಹೈಸ್ಕೂಲ್ ಗ್ಯಾದರಿಂಗ್‌ನಲ್ಲಿ ನನ್ನದು ‘ರಾಘಣ್ಣನ ರಥ’ದಲ್ಲಿ ಅದೇ ರಾಘಣ್ಣ. ಕೈಯೆಣ್ಣೆ ಗುಡ್ಡೇಕೊಪ್ಪದ ಶಂಕರರಾವ್. ಹಾಸ್ಟೆಲ್‌ನಲ್ಲಿ ನನ್ನ ನಡತೆಯನ್ನು ನೋಡಿ ಮೆಚ್ಚಿದ ಪ್ರಿ. ರಾಮನಾಥ ನನಗೆ ಫೀಯಲ್ಲಿ ಅರ್ಧ ಮಾಫಿ ಮಾಡಿದರು. ಪರೀಕ್ಷೆಗೆ ಮುಖ್ಯವಾಗಿ ಓದಬೇಕಾದ ಪಾಠಗಳು ಪ್ರಶ್ನೆಗಳು ಯಾವುವು ಎಂದೂ ವಿಶೇಷ ಮಾರ್ಗದರ್ಶನ ಮಾಡಿದರು. ಅದರಿಂದ ಸೀನಿಯರ್ ಇಂಟರ್ಮೀಡಿಯೇಟ್ ನಲ್ಲಿ ಚೆನ್ನಾಗಿ ಪಾಸಾದೆ. ಹಂದೆ ಶ್ಯಾನುಭೋಗರಿಗೆ ಆಕಾಶಕ್ಕೆ ಎರಡೇ ಗೇಣು. ಸೀನಿಯರ್ ಇಂಟರ್ ಫಿಲ್ಟರ್ ಇದ್ದ ಹಾಗೆ. ಬೆಂಗಳೂರು ಎಂದ ಕೂಡಲೆ ಶ್ರೀ ಎಸ್.ವಿ.ತಿಮ್ಮಪ್ಪಯ್ಯ ನೆನಪಿಗೆ ಬರುತ್ತಾರೆ. ಆಶ್ರಯದಾತ, ಮಾರ್ಗದರ್ಶಕ. ವಿಷಯ ತಿಳಿದ ಕೂಡಲೇ "ಮಹಾಬಲನನ್ನು ಕಳಿಸಿ, ಹಾಸ್ಟೆಲ್ ನಲ್ಲಿ ವ್ಯವಸ್ಥೆ ಮಾಡುವಾ" ಎಂದರು. ಜೂನ್ ಕೊನೆಗೆ ಟ್ರಂಕ್, ಕೊಡೆ, ಹಾಸಿಗೆ ಸಮೇತ ಮಲೆನಾಡಿನವನೆಂಬ ಟ್ರೇಡ್‌ಮಾರ್ಕಿನೊಂದಿಗೆ ಬೆಂಗಳೂರಿಗೆ ಬಂದು ಇಳಿದೆನು. ಶ್ರೀ ತಿಮ್ಮಪ್ಪಯ್ಯ ನನ್ನನ್ನು ನರಸಿಂಹರಾಜಾ ಕಾಲೋನಿಯಲ್ಲಿ ಮನೆಗೆ ಕರೆದೊಯ್ದರು. ಸ್ವಲ್ಪ ದಿನಗಳಲ್ಲೇ ಬಬ್ಬೂರುಕಮ್ಮೆ ಹಾಸ್ಟೆಲಿನಲ್ಲಿ ಸೀಟು ಸಿಕ್ಕಿತು. ಸರಿ, ಆಗ ಬೆಂಗಳೂರಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಕೆಲವೇ ವಿದ್ಯಾರ್ಥಿನಿಲಯಗಳಿದ್ದವು. ಎರಡು ಊಟ, ಒಂದು ಕಾಫಿ- ಚಾರ್ಜು ಕೇವಲ ಹದಿನೆಂಟು ರೂ. (ತಿಂಗಳಿಗೆ). ರೇಸ್ ಕೋರ್ಸ್ ರೋಡಿನಲ್ಲಿ ಆಚೆ ವೈಶ್ಯ ಹಾಸ್ಟೆಲ್ ಈಚೆ ನಮ್ಮ ಹಾಸ್ಟೆಲ್. ಕಾಲೇಜಿಗೆ ಮುಕ್ಕಾಲರಿಂದ ಒಂದು ಮೈಲಿ ದೂರ.ನಮ್ಮ ಅದೃಷ್ಟ. ನನ್ನ ರೂಂಮೇಟ್ ಹೊಸಬಾಳೆ ಶ್ರೀನಿವಾಸರಾವ್. ಒಮ್ಮೆ ಶ್ರೀನಿವಾಸನಿಗೆ ಟೈಫೈಡ್ ಆಯಿತು. ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ಸೇರಿಸಿ ಅವನ ತಂದೆಗೆ ಟೆಲಿಗ್ರಾಂ ಕೊಟ್ಟೆ. ಮಾರನೆ ದಿನ ಬೆಳಿಗ್ಗೆ ಹೊಸಬಾಳೆ ಸುಬ್ರಾಯರು ಹಾಜರ್. ಅವರನ್ನು ಹಾಸ್ಟೆಲ್‌ಗೆ ಕರೆದುಕೊಂಡು ಹೋದೆ. ಆಮೇಲೆ ಆಸ್ಪತ್ರೆಗೆ ಹೋದೆವು. ಶ್ರೀನಿವಾಸ ಮಲಗಿದ್ದ. ‘ಏನೋ ಹುಡುಗ’ ಎಂದರು ತಂದೆ. ಅದಕ್ಕೆ ಶ್ರೀನಿವಾಸ "ಅಪ್ಪ, ಹಾಸ್ಟೆಲ್‌ನಲ್ಲಿ ಕಾಟ್ ಇಲ್ಲ. ಹಾಗಾಗಿ ಹಾಸ್ಪಿಟಲ್‌ಗೆ ಬಂದೆ" ಎನ್ನಬೇಕೆ? ನಕ್ಕರು. ಅಂದೇ ಸಾಗರ, ಸೊರಬಕ್ಕೆ ಮಗನೊಂದಿಗೆ ಹೊರಟರು. ಹದಿನೈದು ದಿನಗಳ ಬಳಿಕ ಶ್ರೀನಿವಾಸ ಹಾಜರ್ ಆದ. ನನಗೂ ತುಂಬ ಬೇಸರ ಬಂದಿತ್ತು. ಇದಕ್ಕೂ ಮೊದಲು.ನನಗಿನ್ನೂ ಹಾಸ್ಟೆಲ್ಲಿನಲ್ಲಿ ಸೀಟು ಸಿಕ್ಕಿರಲಿಲ್ಲ. ಹೆಬ್ಬಾರ ಶ್ರೀ ವೈಷ್ಣವ ಸಭಾದಲ್ಲಿ ಪ್ರತಿಯೊಬ್ಬರಿಗೆ ಹತ್ತು ರೂ. ಬಾಡಿಗೆ. ಒಂದು ರೂಮಿನಲ್ಲಿ ಮೂರುಜನರಿದ್ದರೆ ಮೂವತ್ತು ರೂ., ನಾಲ್ಕು ಜನರಿದ್ದರೆ ನಲವತ್ತು ರೂ. ಹೀಗೆ. ಇದರ ವ್ಯವಸ್ಠಾಪಕರು ಶ್ರೀ ರಾಮಕೃಷ್ಣ ಅಯ್ಯಂಗಾರ್. ಮಿತ ಭಾಷಿ. ಜವಾನನು ಸರ್ ಮಿರ್ಜಾ ಇಸ್ಮಾಯಿಲ್‌ರ ಕಾಲದಲ್ಲಿ ಸರ್ಕಾರಿ ಕೆಲಸಕ್ಕೆ ಸೇರಿದವ. ರಿಟೈರ್ ಆದ ಮೇಲೆ ಹೆಬ್ಬಾರ ಶ್ರೀ ವೈಷ್ಣವ ಸಭಾದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ದಿನವೂ ಬೆಳಿಗ್ಗೆ ಹಾಸಿಗೆ ಲೆಕ್ಕ ಮಾಡುತ್ತಿದ್ದ. ಒಮ್ಮೆ ಮಾತ್ರ ಲೆಕ್ಕ ವ್ಯತ್ಯಾಸ ಬಂತು. ಛಲಪತಿರಾಜ ಪ್ರಾಕ್ಟಿಕಲ್ಸ್‌ಗೆ ಹೋಗುವವ. ಹಾಸಿಗೆ ಮಡಿಸದೇ ಬಿಟ್ಟಿದ್ದ! ಶ್ರೀ ರಾಮಕೃಷ್ಣ ಅಯ್ಯಂಗಾರರು ಜೂನ್, ಜುಲೈ ತಿಂಗಳಲ್ಲಿ ಇಪ್ಪತ್ತು ರೂಪಾಯಿ, ಆಗಸ್ಟನಲ್ಲಿ ಐವತ್ತು ರೂಪಾಯಿ ಸೂಟ್ ಬಿಟ್ಟರು. ಶ್ರೀ ಪ್ರಹ್ಲಾದಾಚಾರ್ಯ, ಶ್ರೀ ಚಕ್ರಪಾಣಿ ಆಚಾರ್ಯರು ಒಂದೇ ರೂಮಿನಲ್ಲಿದ್ದರು. ಅಂಥಿಂಥ ಮಡಿಯಲ್ಲ ಅವರದು. ನಾನು ಏನೇ ಕೊಟ್ಟರೂ ಅದಕ್ಕೆ ನೀರು ಹಾಕಿ ಕೊಡಬೇಕು. ಒಮ್ಮೆ ಅವರ ಅನ್ನದ ಒಲೆಗೆ ಇದ್ದಿಲು ಬೇಕಾಯಿತು. ನಾನು ಕೊಟ್ಟೆ. ಮತ್ತೆ ಕೇಳಿದೆ " ನೀರು ಹಾಕಿ ಕೊಡಬೇಕೇ"?. ದಿನವೂ ಅವರ ಜೊತೆ ಚಾಮರಾಜಪೇಟೆ ಗುರುಮಠಕ್ಕೆ ಹೋಗುತ್ತಿದ್ದೆ. "ರಾಘವೇಂದ್ರ,ರಾಘವೇಂದ್ರ,ರಾಘವೇಂದ್ರ ಯೋ ವದೇತ್| ತಸ್ಯ ನಿಸ್ವರತೇ ವಾಣಿ ಜಹ್ನು ಕನ್ಯಾ ಪ್ರವಾಹವತ್" ಎಂದು ಗೋಡೆಯ ಮೇಲೆ ಒಳಗಡೆ ಬರೆದಿದ್ದಾರೆ. "ಧನ್ಯೋಸ್ಮಿ" ಎನ್ನಿಸಿತು. ಪ್ರತಿ ಗುರುವಾರವೂ ಹೋಗುತ್ತಿರಲಿಲ್ಲ. ಆದರೆ ಹೋದ ಪ್ರತಿ ಗುರುವಾರವೂ ಧನ್ಯೋಸ್ಮಿ ಭಾವ ಕ್ಷಣಿಕವಾಗಿಯಾದರೂ ಅನ್ನಿಸುತ್ತಿತ್ತು. ಪ್ರಹ್ಲಾದಾಚಾರ್ಯರ ಜಹ್ನು ಕನ್ಯಾ ಪ್ರವಾಹ ಮಳೆಗಾಲದ ಅಬ್ಬರದ್ದಲ್ಲ, ಚಳಿಗಾಲದ ನಿನಾದ. ಸಹಜ ವಾಣಿಯೇ ಮನಸ್ಸಿನ ಭಾವನೆಯನ್ನು ವ್ಯಕ್ತ ಪಡಿಸುತ್ತಿತ್ತು. ಭೀಮಸೇನಾಚಾರ್ಯರು ಶಿವಮೊಗ್ಗದವರು, ನನ್ನ ರೂಂಮೇಟ್, ಉತ್ತಮ ಸ್ನೇಹಿತ. ಪೆನ್ಸಿಲ್ ಸ್ಕೆಚ್ ಬಿಡಿಸುತ್ತಿದ್ದರು. ನನಗೆ ಪಾರ್ವತಿ ಪರಮೇಶ್ವರರನ್ನು ಬಿಡಿಸಿ ಕೊಟ್ಟಿದ್ದರು. ಆರು ದಶಕಗಳ ನಂತರವೂ ಮಾಸದೇ, ಮಾಸದ ಲೆಕ್ಕ ತನಗಿಲ್ಲ ಎನ್ನುತ್ತಿದೆ. ಇವರೆಲ್ಲಾ ನನ್ನ ಬಿ.ಎಸ್‌ಸಿ ಪ್ರಥಮ ಕೊನೇ ವರ್ಷದ ಸ್ನೇಹಿತರು. ಇನ್ನು ಇಂಟರ‍್ಮೀಡಿಯೇಟ್‌ನಿಂದ ಬಿ.ಎಸ್‌ಸಿ.ವರಗೆ ಮಕಾರತ್ರಯರು-ಎಂ.ರಾಮಾಜೋಯಿಸ್, ಎಮ್.ವಿ.ಸೂರ್ಯನಾರಾಯಣ, ಎಮ್.ಮಂಜುನಾಥ (ಎಸ್.ಎಸ್.ಎಲ್.ಸಿ.ಯಲ್ಲಿ ೮ನೇ ರ‍್ಯಾಂP). ಇವರಲ್ಲದೆ ಭಾಗವತ ನಾಗಭೂಷಣ. ಇವರಲ್ಲಿ ಸೂರ್ಯನಾರಾಯಣ ಊರಿಗೆ ಹೋದಾಗ ಮೂರು-ನಾಲ್ಕು ಬಾಸ್ಕೆಟ್ ತಿಂಡಿ ತರುತ್ತಿದ್ದ - ನಮ್ಮನ್ನೆಲ್ಲಾ ಲೆಕ್ಕ ಇಟ್ಟುಕೊಂಡು. ಒಮ್ಮೆ ರಾಮಾಜೋಯಿಸರು ಶಿವಮೊಗ್ಗಕ್ಕೆ ಹೋಗಿ ಬಂದ ಸಂದರ್ಭ. ಮಧ್ಯಾಹ್ನ ಹನ್ನೆರಡಕ್ಕೆ ಅವರ ರೂಮಿಗೆ ಹೋದೆ. "ಇದೇನು ಮಹಾಬಲ ಭಟ್ಟರು, ಈಗ ಅಪವೇಳೆಯಲ್ಲಿ" ಅಂದರು. "ಇರುವೆಗೇನು ಅಪವೇಳೆ? ಇರುವೆಗಳ ಸಾಲು ನಿಮ್ಮ ರೂಮಿನ ಕಡೆ ಹೊರಟಿತ್ತು. ನೀವು ಊರಿಂದ ಬಂದಿದ್ದೀರಿ. ವೇಳೆ ಅಪವೇಳೆ ಎನ್ನುತ್ತಿದ್ದರೆ ಪುಣ್ಯಕಾಲ ಕಳೆದೇ ಹೋದೀತು ಎಂದು ಧಾವಿಸಿದೆ" ಭಾರಿ ನಗೆಯೊಂದಿಗೆ ಬಾಸ್ಕೆಟ್ ಕಡೆ ಹೋದರು. "ಆರಿರಿಸಿಹರು ತಿಂದ ತಿಂಡಿಯಾ ಲೆಕ್ಕ?" ಬಬ್ಬೂರಕಮ್ಮೆ ಹಾಸ್ಟೆಲ್‌ನ ವಾರ್ಡನ್ ಹೆಸರು ಜವರಾಯಪ್ಪ. ಕೋರ್ಟಿನಲ್ಲಿ ಟೈಪಿಸ್ಟ್ ಆಗಿ ರಿಟೈರ್ ಆದವರು. ನನ್ನ ಹತ್ತಿರ "ಭಟ್ಟರೇ, ಜಜ್ಜರು ನಾನು ಟೈಪ್ ಮಾಡಿದ್ದನ್ನೇ ಓದಿ ಹೇಳುತ್ತಿದ್ದರು. ಜಜ್‌ರ ಜಜ್‌ಮೆಂಟ್ ಬೇರೆ ಅಲ್ಲ. ನನ್ನದು ಬೇರೆ ಅಲ್ಲ" ಎಂದು ಎನ್ನುತ್ತಿದ್ದರು. "ಸರಿ, ನಿಮಗೆ ಯಾರು ಬರೆದುಕೊಟ್ಟದ್ದು" ಅಂದರೆ "ಅದೇ,ಜಜ್‌ರು ಬರೆದದ್ದು. ಏನು ದಡ್ಡ ಪ್ರಶ್ನೆ?" ಎನ್ನುತ್ತಿದ್ದರು. ಒಂದು ಸಲ ಕಳ್ಳ ಬಂದು ನಮ್ಮ ಹಾಸ್ಟೆಲ್‌ನ ನೀರಿನ ಟ್ಯಾಪ್,ಪಕ್ಕದ ಜಯದೇವ ಹಾಸ್ಟೆಲ್‌ನಿಂದ ಮೂರು ನಾಲ್ಕು ಟ್ಯಾಪ್ ಕದ್ದು ಓಡುವುದರಲ್ಲಿದ್ದ. ಅಷ್ಟು ಹೊತ್ತಿಗೆ ಪಕ್ಕದ ಹಾಸ್ಟೆಲ್‌ನಿಂದ ಕೂಗು: ಕಳ್ಳ, ಕಳ್ಳ. ನಮ್ಮ ಶ್ರೀನಿವಾಸ ಮೂತ್ರ ಶಂಕೆಗೆ ಎದ್ದವ ಕೇಳಿದ, ಕಳ್ಳನನ್ನು ತಬ್ಬಿಬಿಟ್ಟ. ಅಷ್ಟು ಹೊತ್ತಿಗೆ ಐದಾರು ಜನ ಒಟ್ಟಾದರು. ನಮ್ಮ ಹಾಸ್ಟೆಲ್‌ನ ನಾರಾಯಣ ಮೂರ್ತಿ ಇನ್ನೊಬ್ಬನನ್ನು ಕಳ್ಳ ಎಂದು ತಿಳಿದು ಹಿಡಿದು ಬಾರಿಸಿದ. ಆತ ’ನಾನು ಮಲ್ಲೇಶಿ, ಅದಕ್ಕೇ ಬಂದೇನ್ರಿ’ ಎಂದ. ’ಅದಕ್ಕೇ’ ಎಂದರೆ ’ಕಳ್ಳನನ್ನು ಹಿಡಿಯುವುದಕ್ಕೆ’. "ಆಹಾ ಅದಕ್ಕೇ ಬಂದದ್ದಾ, ತಗೋ ಇನ್ನೊಂದು" ಎಂದು ನಾರಾಯಣ ಮೂರ್ತಿ ಮತ್ತೆ ಗುದ್ದಿದ. ಆಗ ಲಿಂಗೇಶಪ್ಪ "ಏ, ಅವ ಹಾಸ್ಟೆಲ್‌ನವ" ಎಂದ. "ಮೊದಲೇ ಹೇಳಿದ್ದರೆ ಹೊಡೀತಿರಲಿಲ್ಲ" ಎಂದು ಮೂರ್ತಿ,"ಹೊಡಿತೀರಿ ಎಂದು ಗೊತ್ತಿದ್ದರೆ ಮೊದಲೇ ಹೇಳ್ತಿದ್ದೆ" ಎಂದು ಮಲ್ಲೇಶಿ. ಅಂತೂ ಆ ಗದ್ದಲ ಮುಗಿಯಿತು. ಪಕ್ಕದ ಹಾಸ್ಟೆಲ್‌ನ ಮ್ಯಾನೇಜರು, ನಮ್ಮ ಹಾಸ್ಟೆಲ್‌ನ ಜವರಾಯಪ್ಪ "ಯಾರೂ ದೂರು ಕೊಡುವುದು ಬೇಡ" ಎಂದರು. ಅವರು ಕೋರ್ಟಿನಲ್ಲಿದ್ದವರಲ್ಲವೇ! ಕಳ್ಳನನ್ನು ಕಂಬಕ್ಕೆ ಕಟ್ಟಿ ಎಚ್ಚರದಲ್ಲಿರುವ ವಿದ್ಯಾರ್ಥಿಗಳು ಕ್ಯೂ ನಿಂತು ಬಾರಿಸಿದರು. ‘ಈ ಶಿಕ್ಷೆಯೇ ಸಾಕು’ ಎಂದು ಜವರಾಯಪ್ಪ ಠರಾಯಿಸಿದ್ದು ಸರ್ವಾನುಮತ ಪಡೆಯಿತು. ಹಾಸ್ಟೆಲ್‌ನ ಗ್ಯಾದರಿಂಗ್‌ನಲ್ಲಿ ಒಂದು ನಾಟಕ. ನನ್ನದು ಪುರೋಹಿತರ ಪಾತ್ರ. ಮದುವೆ ಮನೆ. ಎಷ್ಟು ಹುಡುಕಿದರೂ ಪುರೋಹಿತರಿಲ್ಲ. ಗೌಜು. ಪುರೋಹಿತರೆಲ್ಲಿ, ಪುರೋಹಿತರೆಲ್ಲಿ? ನಾನೇ ಪುರೋಹಿತ, ಅಲ್ಲೇ ಇದ್ದೇನೆ, ಅಡಿಗೆ ಮನೆಯಲ್ಲಿ. ನನ್ನ ಹೇಳಿಕೆ: "ಮದುವೆ ಮುಗಿದು ನೆಂಟರ ಊಟ ಮುಗಿಯುವವರೆಗೂ ನಮ್ಮ ಕಾರ್ಯ ಮುಗಿಯುವುದಿಲ್ಲ. ಕಡೆಗೆ ನಮಗೆ ಊಟ ತಣಿದಿರುತ್ತದೆ. ಬಿಸಿ ಬಿಸಿ ಹೋಳಿಗೆ ಮದುವೆ ಗುರಿ. ಆ ರಾತ್ರೆ ಊಟ ಯಾರಿಗೆ ಬೇಕು? ಪುರೋಹಿತರಿಗೆ ಲಗ್ನದ ಮುಹೂರ್ತಕ್ಕೂ ಸ್ವಲ್ಪ ಮೊದಲು ಊಟ ಹಾಕಬೇಕು. ಇಲ್ಲವಾದರೆ ನಿಮ್ಮ ದಕ್ಷಿಣೆಯೂ ಬೇಡ. ಆಗಲೇ ಅಡ್ವಾನ್ಸ್ ನೂರು ರೂ.ತೆಗೆದುಕೊಂಡಾಗಿದೆ." ಈ ಪಾತ್ರವನ್ನು ಮನೋಜ್ಞವಾಗಿ ಸಾಗಿಸಿದ ನನಗೆ ಒಂದು ಬಹುಮಾನ. ಗೆಳೆಯ ಸೋಮಯಾಜಿಗೆ ತುಂಬಾ ಖುಷಿ. ಆದರೆ ತನ್ನನ್ನು ಬಿಟ್ಟು ಊಟ ಮುಗಿಸಿದಿರಲ್ಲಾ ಎಂಬ ಆಕ್ಷೇಪ! :ಅದು ಬರೇ ನಟನೆ" ಎಂದಾಗ ಸೋಮಯಾಜಿ "ಭಟ್ಟರೇ, ನಿಮ್ಮಂಥ ಪುರೋಹಿತರು ನನಗೆ ಬೇಡ" ಎಂದ."ನೀನು ಬಿ.ಇ. ಆಗಿ ಫಾರಿನ್‌ಗೆ ಹೋಗಿ ಲೇಡಿ ರಿಜಿಸ್ಟರ್ ಮಾಡಿಕೋ. ನೀನು ಕರೆದರೂ ನಾನು ಬರಲಾರೆ. ಇಂಡಿಯಾದಲ್ಲೇ ಆದರೆ ಅಕ್ಷತೆ ನಿನ್ನ ಹೆಂಡತಿ ತಲೆಗೆ, ಮಂತ್ರಾಕ್ಷತೆ ನಿನ್ನ ತಲೆಗೆ ಹಾಕಿ ಊಟ ಮುಗಿಸಿ ಬರುವೆ" ಎಂದೆ. ಅಘನಾಶಿನಿಯ ವಿಷ್ಣು ಸಭಾಹಿತರು ನಮ್ಮ ಕುಟುಂಬಕ್ಕೆ ಸಮೀಪದ ಸಂಬಂಧ. ತೀರ್ಥಹಳ್ಳಿಗೆ ಅಲ್ಲಿಂದ ಪತ್ರ ಬಂತು. ಚಿ. ವಿಷ್ಣುವಿಗೆ ಮದ್ಗುಣಿ ಹೆಣ್ಣು. ಮದುವೆ ಚಿತ್ರ ಶುದ್ಧ ಪಂಚಮಿಗೆ.ಬರಲೇ ಬೇಕು. ಸರಿ,ಹೊರಟರು. ಒಬ್ಬರೇ ಅಲ್ಲ. ವೇ.ನಾಗಾವಧಾನಿಗಳ ಜೊತೆ ಎರಡು ದಿನ ಪ್ರಯಾಣ. ಗೋಕರ್ಣ ತಲುಪಿದರು. ಹೆಂಡತಿಯನ್ನು ಕರೆದುಕೊಂಡು ಸ್ನೇಹಿತ ಅವಧಾನಿಗಳೊಂದಿಗೆ ಅಘನಾಶಿನಿಗೆ (ಅಂದರೆ ತದಡಿ ತೀರದವರೆಗೆ) ಕಾಲು ನಡಿಗೆ. ಮುಂದೆ ಅಘನಾಶಿನಿಗೆ ಹೋಗಲು ದೋಣಿ ಹತ್ತಲು ಅವಧಾನಿಗಳಿಗೆ ಭಯ ಇಲ್ಲವಂತೆ. ತುಂಗಾನದಿಯಲ್ಲಿ ದೋಣಿ ದಾಟಿದವರು. ಆದರೆ ಅಲ್ಲಿ ದೈತ್ಯಾಕಾರದ ಸಮುದ್ರದ ತೆರೆಗಳಿಲ್ಲ. ಆದರೂ ಆಚೆ ಪಕ್ಕಕ್ಕೆ ಹೋಗಿ ತಲುಪಿದರು."ಅನಂತ ಭಾವ ಬಂಜ, ಸುಬ್ಬಕ್ಕ ಬಂಜು"ಹರ್ಷೋದ್ಗಾರ. ಅಂದೇ ರಾತ್ರೆ ಮದುವೆ. ಇಲ್ಲಿ ಸಂಜೆ ಊಟ ಮಾಡಿ ಒಂಭತ್ತು ಗಂಟೆಗೆ ಹಡಗಿನಲ್ಲಿ ಹಳಕಾರಿಗೆ ಪ್ರಯಾಣ. ಹತ್ತರ ಸುಮಾರಿಗೆ ಹಳಕಾರು ತಲುಪಿದರು. ನಾಗವಧಾನಿಗಳಿಗೆ ನಿದ್ದೆ ಜೊಂಪು. ಆಗ ನಾಗಪ್ಪಣ್ಣ ದೊಡ್ಡಬಾಯಿ ಮಾಡಿದ: "ಹೋಯ್, ತೀರ್ಥಹಳ್ಳಿಯವರು ಏಳಿ, ಹಳಕಾರು ಬಂತು." ಎದುರುಗಡೆ ಸಾಲಿನಲ್ಲಿ ಸೂಡಿ ಬೆಳಕು ಹಿಡಿದು ನಿಂತಿದ್ದಾರೆ. ನಾಗಾವಧಾನಿಗಳು ಕೂಡಲೇ ರಾಮ ರಾಮ ಎಂದು ಕಣ್ಣು ಮುಚ್ಚಿದರು. ಆಗ ಸಮೀಪದಲ್ಲಿರುವ ಅನಂತ ಭಟ್ಟರು ’ಏನು,ಏನು’ ಎಂದರು. ನಾಗಾವಧಾನಿಗಳು "ಎದುರುಗಡೆ ನೋಡಿ, ಸೂಡಿ ಭೂತಗಳು! ಇದೇನು ಮದುವೆ ದಿಬ್ಬಣವೋ, ಭೂತಗಳ ಮೆರವಣಿಗೆಯೋ" ಎಂದರು. ಆಗ ಅನಂತ ಭಟ್ಟರು ಹೇಳಿದರು: "ಗ್ಯಾಸ್ ಲೈಟ್ ಇಲ್ಲಿಯ ಗಾಳಿಗೆ ನಿಲ್ಲುವುದಿಲ್ಲ.ತೆಂಗಿನ ಗರಿಯಿಂದ ಸೂಡಿ ತಯಾರಿಸಿ ಹೀಗೆ ಬೆಳಕು ತೋರುತ್ತಾರೆ". ಆಕಡೆ,ಈ ಕಡೆ ರಭಸದಿಂದ ಸೂಡಿ ಬೀಸುತ್ತಾ ಅವರು ಮುಂದೆ, ಮೆರವಣಿಗೆಯೂ ಮುಂದುವರಿಯಿತು. ನಾಗಾವಧಾನಿಗಳಿಗೆ ಇನ್ನೂ ಸಂಶಯ! "ಇನ್ನೂ ಎಷ್ಟು ದೂರ ಮನುಷ್ಯರ ವಾಸಸ್ಠಳಕ್ಕೆ?" ಎಂದರು. ಅಷ್ಟರಲ್ಲಿ ಮದ್ಗುಣಿ ಬಂತು. ಕಾಲು ತೊಳೆಯಲು ದೊಡ್ಡ ಮಡಿಕೆಗಳಲ್ಲಿ ಶುದ್ಧ ನೀರು ಸಿದ್ಧವಾಗಿತ್ತು. ನೀರನ್ನು ಮಡಿಕೆಯಿಂದ ಎತ್ತಿಕೊಳ್ಳಲು ಚೊಂಬು ಬಿಂದಿಗೆ ಇಲ್ಲ. ದೊಡ್ಡ ಕರಟಗಳನ್ನಿರಿಸಲಾಗಿತ್ತು. "ಅನಂತ ಭಟ್ಟರೇ, ನೀವು ನಾವು ಬಂದು ಕೆಟ್ಟೆವು. ಮಂಗಲದ ಮನೆಯಲ್ಲಿ ಕರಟ, ಕರಟದ ಚಿಪ್ಪು. ಸಾಲದ್ದಕ್ಕೆ ಅನ್ನ ಬಡಿಸಲು ಅಡಿಕೆಯ ಹಾಳೆ" ಎಂದೆಲ್ಲಾ ಮರುಗುತ್ತಾ ರಾತ್ರಿ ಎಲ್ಲೋ ಮಲಗಿದರು. ಬೆಳಿಗ್ಗೆ ಎದ್ದು ಎಲ್ಲಾ ಗದ್ದೆ ಕಡೆ, ಹೊಳೆ ಕಡೆ. ಸಮಸ್ಯೆ ಊಹಿಸಿದ್ದ ಸುಬ್ಬಾಭಟ್ಟರು ಮೊದಲೇ ಎರಡು ಮಡಲು ಗರಿಗಳ ಪಾಯಿಖಾನೆ ಮಾಡಿಸಿದ್ದರಂತೆ. ಸರಿ, ಮದುವೆ ಮುಗಿಯಿತು. ಊಟಕ್ಕೆ ಮನೋಹರ. ಮಂಗಲ ಕಾರ್ಯಕ್ಕೆ ಮನೋಹರವೇ! ಮತ್ತೆ ನಾಗಾವಧಾನಿಗಳ ಆಶ್ಚರ್ಯಭರಿತ ಉದ್ಗಾರ. ಆವತ್ತೇ ರಾತ್ರಿ ಅಲ್ಲಿಂದ ಹೊರಟು ಬೆಳಿಗ್ಗೆ ಅಘನಾಶಿನಿ ದಡಕ್ಕೆ ಬಂದರು. ಅಲ್ಲಿ ಗೃಹಪ್ರವೇಶ, ಊಟ, ಮಂತ್ರಾಕ್ಷತೆ. ಸಂಜೆ ಆರಕ್ಕೆ ಅನಂತ ಭಟ್ಟರು, ಸುಬ್ಬಕ್ಕ, ನಾಗಾವಧಾನಿಗಳು ಗೋಕರ್ಣಕ್ಕೆ ಬಂದರು. ಅವಧಾನಿಗಳು ಕೋಟಿ ತೀರ್ಥ ಸ್ನಾನ, ಸಮುದ್ರ ಸ್ನಾನ ಮಾಡಿ ಮಹಾಬಲೇಶ್ವರನ ಪೂಜೆ ಮಾಡಿ ಮರುದಿನ ತೀರ್ಥಹಳ್ಳಿಗೆ ಪ್ರಯಾಣ ಬೆಳೆಸಿದರು. ಇದು ನನ್ನ ತಂದೆಯವರು (ಅನಂತಭಟ್ಟರು) ಹೇಳಿದ ವಿಷ್ಣು ಮಾವನ ಮದುವೆ ಕಥೆ. ಇದನ್ನು ರಸಪೂರ್ಣವಾಗಿ ವಿವರಿಸಿದ್ದು ನನ್ನ ಮದುವೆಯ ಮಾರನೇದಿನ. ಅಘನಾಶಿನಿಯಲ್ಲಿ ಇಪ್ಪತ್ತು ವರ್ಷಗಳ ನಂತರ! ಇಷ್ಟರೊಳಗೆ ಅಘನಾಶಿನಿಯ ಮಂಕಾಳತ್ತೆ ಮದುವೆ. ಅವಳನ್ನು ಹೊಲನಗದ್ದೆಯ ಕಾಸೆ ಗ.ಪ.ಹೆಗಡೆಯವರಿಗೆ ಕೊಟ್ಟು ಮದುವೆ. ಗ.ಪ.ಹೆಗಡೆ ಹಳಿಯಾಳದಲ್ಲಿ ಪ್ರಾಥಮಿಕ ಶಾಲೆ ಶಿಕ್ಷಕರು. ತುಂಬಾ ಶಿಸ್ತಿನವರು. ಪ್ರತಿಯೊಂದೂ ಅಚ್ಚುಕಟ್ಟಾಗಿರಬೇಕು. ಅಗಸೆ ಮದುವೆ ಮುಗಿಸಿ ಅಂದೇ ರಾತ್ರಿ ಹೊಲನಗದ್ದೆಗೆ ಬೋಟಿಯಲ್ಲಿ ಪ್ರಯಾಣ. ಸುಮ್ಮನೆ ಹೊತ್ತು ಕಳೆಯುವುದೇ? ಶ್ರೀ ಗ.ಪ.ಹೆಗಡೆಯವರೇ ಸ್ವರಚಿತ ಪದ್ಯ ಹಾಡಿದರು. ’ ಇಂದು ಬರುವರು, ಕಾಳೆ ಸಾಬರು, ನಮ್ಮ ಶಾಲೆಗೆ ಬರುವರು, ಬಿಳಿಯ ಪೈಝಣ, ಬಿಳಿಯ ಟೋಪಿ, ಖಾಕಿ ಚಡ್ಡಿ ತೊಟ್ಟು ರಂಗ ಬಂದನು ಶ್ಯಾಮ ಬಂದನು, ರಾಮ ಬಂದನು ಶಾಲೆಗೆ, ಕಾಳೆ ಸಾಬರು ಬಂದೇ ಬಂದರು, ಹುಡುಗರೆಲ್ಲ ಏಕ ಸಾಥ್ ನಮಸ್ತೇ ಕೂಗಿದರು". ಸೀನಿಯರ್ ಬಿ.ಎಸ್.ಸಿ (ಫೈನಲ್): ೧೯೫೨,೫೩,೫೪. ಬಿ.ಎಸ್.ಸಿ ಜೂನಿಯರ್ ಬಿ.ಎಸ್.ಸಿ ಸೀನಿಯರ್ ಕನ್ನಡ ವಿಧ್ಯಾರ್ಥಿಗಳ ಭಾಗ್ಯ. ಕನ್ನಡದ ಎರಡು ರತ್ನಗಳು, ಶ್ರೀ ವಿ.ಸೀ ಯವರು ಮತ್ತು ಶ್ರೀ ಜಿ.ಪಿ. ರಾಜರತ್ನಂ ಅವರು ನಮ್ಮ ತರಗತಿಗಳಿಗೆ ಪಾಠ ಹೇಳಿದರು. ಸೆಂಟ್ರಲ್ ಕಾಲೇಜಿನ ದೊಡ್ಡ ಹಾಲ್ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿತ್ತು! ಅವರು ಬರೇ ಕನ್ನಡ ವಿದ್ಯಾರ್ಥಿಗಳಲ್ಲ. ಪಿ.ಸಿ.ಎಮ್. ಸಿ.ಬಿ.ಝಡ್ ವಿದ್ಯಾರ್ಥಿಗಳೂ ಬಿಡುವಿನ ಸಮಯ ಹೊಂದಿಸಿಕೊಂಡು, ಕೆಲವೊಮ್ಮೆ ತಮ್ಮ ತರಗತಿಗಳಿಗೆ ಹಾಜರಾಗದೆ ಕನ್ನಡ ತರಗತಿಗಳಲ್ಲಿ ಪ್ರತ್ಯಕ್ಷ! ನಮ್ಮ ಮನೆಯಲ್ಲಿ (ಅದು ನಮ್ಮ ತರಗತಿ) ಮನೆಯ ಮಕ್ಕಳೇ ಅನಾಥರು! ಒಮ್ಮೆ ವಿ.ಸೀ.ಅವರು ‘ಆಗ್ರಹ’ ನಾಟಕ ಪಾಠ ಮಾಡುತ್ತಿದ್ದರು. ನಾನು ಧೈರ್ಯ ಮಾಡಿ ಎದ್ದು ನಿಂತೆ. "ಏನು ನಿಮ್ಮ ಹೆಸರು? ಎಂದರು. ಹೇಳಿದೆ. "ಆಗ್ರಹ ಎಂದರೆ ಒತ್ತಾಯ ಎಂಬ ಅರ್ಥವಲ್ಲವೇ? ಇಲ್ಲಿ ಸಿಟ್ಟು ಎಂಬ ಅರ್ಥದಲ್ಲಿ ಬಳಸಿದ್ದಾರಲ್ಲ" ಎಂದೆ. "ನೀವು ಉತ್ತರ ಕನ್ನಡದವರೋ?" ಎಂದರು ವಿ.ಸೀ.. ಹೌದು ಎಂದೆ. ವಿ.ಸೀ.ಯವರು ತಾಳ್ಮೆಯಿಂದ ಉತ್ತರಿಸಿದರು: "ಆಗ್ರಹ ಎಂದರೆ ಕೋಪ ಎಂದೇ ಅರ್ಥ. ನಿಮ್ಮಲ್ಲಿಯೂ ವಾಸ್ತವಿಕವಾಗಿ ಅದೇ ಅರ್ಥದಲ್ಲಿ ಬಳಕೆಯಲ್ಲಿದೆ. ‘ ಬಡಿಸಿದ್ದು ಸಾಕು ಆಗ್ರಹ ಮಾಡಬೇಡಿ’ ಎಂದಾಗ ಮತ್ತೆ ಬಡಿಸುವುದು ಬೇಡ ಎಂದುದಕ್ಕೆ ಸಿಟ್ಟು ಮಾಡಿಕೊಳ್ಳಬೇಡಿ ಎಂದೇ ಅರ್ಥ". ನಾನು ಸಂತೋಷದ ನಗುವಿನಿಂದ ಕುಳಿತುಕೊಂಡೆ. ನನ್ನಲ್ಲಿರುವ ಅಜ್ಞಾನ ಕಳೆಯಿತು. "ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ| ಚಕ್ಷುರುನ್ಮೀಲಿತಮ್ ಯೇನ ತಸ್ಮೈ ಶ್ರೀ ಗುರವೇ ನಮಃ" ವಿ.ಸೀ.ಅಂದದ್ದೇ ಅವರ "ಅಭೀ:" ಜ್ಞಾಪಕಕ್ಕೆ ಬರುತ್ತದೆ. ಅವರ ನಯ ನಾಜೂಕು ನೆನಪಿಗೆ ಬರುತ್ತದೆ. ಅದು ಅವರ ಇಡೀ ವ್ಯಕ್ತಿತ್ವವನ್ನು ಸಮಗ್ರವಾಗಿ ಬೆಳಗುತ್ತಿದ್ದ ನಾಜೂಕು. "ಹೂ ಕೀಳುವುದು’ ಎಂಬುದು ಸಾಮಾನ್ಯ ಪ್ರಯೋಗ. ವಿ.ಸೀ.ಯವರ ಮೃದು ಮನಸ್ಸು ಆ ಪದ ಕೇಳಿದರೆ ನೋಯುತ್ತಿತ್ತು. "ಹೂವು ಆಯುವುದು" ಎಂಬುದು ಹಿತಕರವಾದ ಪ್ರಯೋಗ. "ಅಶ್ವತ್ಥಾಮನ್"- "ಶ್ರೀ"ಯವರ ನಾಟಕವನ್ನು ನಮಗೆ ಪಾಠ ಹೇಳಿದವರು ವಿ.ಸೀ. ಕಣ್ಣಿಗೆ ಕಟ್ಟುವಂತೆ, ಮನಸ್ಸಿಗೆ ಮುಟ್ಟುವಂತೆ ಅಲ್ಲಿಯ ದೃಶ್ಯಾನುಭವ ಮಾಡಿಸಿದರು, ಮೂಡಿಸಿದರು. ನನ್ನೀ ವಯಸ್ಸಿನಲ್ಲೂ ಅಶ್ವತ್ಥಾಮನ್ ನಾಟಕದ ಸಾಲುಗಳು ನನಗೆ ಕಂಠಸ್ಥವಾಗಿವೆ. ನನ್ನ ಮಕ್ಕಳಿಗೆ ಆ ನಾಟಕ ಓದಿ ಹೇಳಿದ್ದೇನೆ. ಜಿ.ಪಿ.ರಾಜರತ್ನಂ ಅವರು ನಮಗೆ ‘ರೂಪದರ್ಶಿ’ ಕಾದಂಬರಿ ಹೇಳುತ್ತಿದ್ದರು. "ಅಥೆನ್ಸ್ ನಗರ ದೇವಾಲಯಗಳ ಬೀಡು. ಕೋಟ್ಯಾಂತರ ರೂಪಾಯಿ ದೇವಾಲಯಗಳನ್ನು ನಿರ್ಮಿಸಲು ಸಾರ್ಥಕಗೊಳಿಸಿದ್ದರು." ಎಂಬರ್ಥದ ವಾಕ್ಯ ಆ ಕಾದಂಬರಿಯಲ್ಲಿದೆ, ನೆನಪಿನಿಂದ ಹೇಳುತ್ತಿದ್ದೇನೆ. ಇಲ್ಲಿ ರಾಜರತ್ನಂ ಅವರು ‘ಸಾರ್ಥಕಗೊಳಿಸಿದ್ದರು’ ಎಂಬ ಪದ ಪ್ರಯೋಗದತ್ತ ನಮ್ಮ ಗಮನ ಸೆಳೆಯುತ್ತಿದ್ದರು. ಬೇರೇ ಯಾರೇ ಬರೆದರೂ ‘ಖರ್ಚು ಮಾಡುತ್ತಿದ್ದರು’ ಎಂದು ಬರೆಯುತ್ತಿದ್ದರೇನೋ. ಆದರೆ ಕಾದಂಬರಿಕಾರರ ಶಬ್ದಗಳ ಬಳಕೆಯಲ್ಲಿರುವ ವ್ಯತ್ಯಾಸ, ಔಚಿತ್ಯ ಗಮನಿಸಿ. ವನಿತೆ, ಭಾಮಿನಿ, ಕಾಂತೆ ಎಲ್ಲವೂ ಒಂದೇ, ಆದರೆ ಪ್ರತಿ ಪದವೂ ಬೇರೆಯೂ ಹೌದು. ಆ ವರ್ಷ ಬಿ.ಎಸ್.ಸಿ.ಯಲ್ಲಿ ನನ್ನದು ಫೈನಲ್ ಇಯರ್ ಪಾಸಾಗಲಿಲ್ಲ. ಸೋದೆ ಮಠದ ಪುರುಷೋತ್ತಮನವರದು ಮತ್ತು ವರದಾಚಾರ್ಯರದೂ ಅದೇ ಬಾಳು,ಗೋಳು. ಮೂವರೂ ಬೆಂಗಳೂರಿಗೆ ಹೋದೆವು. ಯಾವ ಮಾರ್ಗದಲ್ಲಿ ಹೋದರೂ ‘ಕೇಶವಂ ಪ್ರತಿ ಗಚ್ಛತಿ’. ನಾನು, ಪುರುಷೋತ್ತಮ ಶೇಷಾದ್ರಿಪುರದಲ್ಲಿ ಒಂದು ರೂಮಿನಲ್ಲಿ ಉಳಿದೆವು. ವರದಾಚಾರ್ಯರು ಅವರ ತಂದೆಯ ಪರಿಚಯಸ್ಥರ ಮನೆಯಲ್ಲಿ ಉಳಿದರು. ಪ್ರಯತ್ನ ಸಾಗಿತು. ಎಲ್ಲರೂ ಪಾಸಾದೆವು. ಶ್ರಮ ಪಟ್ಟರೆ ಯಾವುದು ಅಸಾಧ್ಯ? ಮುಂದೆ ನಾವು ಶಿಕ್ಷಕರಾದ ಮೇಲೂ ಅನೇಕ ಸಲ ಭೇಟಿಯಾಗಿದ್ದೇವೆ. ತಮ್ಮನ ಮನೆ (ಜಯರಾಮನದು)ಜೋಗದಲ್ಲಿ, ಮೌಲ್ಯಮಾಪನಕ್ಕೆ ಬಂದಾಗ ಬೆಂಗಳೂರಿನಲ್ಲಿ... . ನಾನು ಶ್ರೀ ತಿಮ್ಮಪ್ಪಯ್ಯನವರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದೆ. ಆದುದರಿಂದ ವರದಾಚಾರ್ಯರದು ಒಂದು ತಮಾಷೆ. "ಭಟ್ಟರೆ ನಿಮಗೆ ಮುಂದಿನ ವರ್ಷ ಮೌಲ್ಯಮಾಪನಕ್ಕೆ ಬರೋದಿಲ್ಲ" "ಯಾಕೆ ಮಾರಾಯರೆ, ನಾನು ಡಿ.ಸಿ.ಆಗಬಹುದು ಅಂದುಕೊಂಡಿದ್ದೇನೆ." "ನೋಡಿ, ನಿನ್ನೆ ಎನ್.ಆರ್,ಕಾಲೋನಿಯಿಂದ ಒಬ್ಬರು ಹಿರಿಯರು ಬಂದು ಇಂಥವರಿಗೆ ಮುಂದಿನ ವರ್ಷ ಮೌಲ್ಯಮಾಪನಕ್ಕೆ ಕರೆಯಬೇಡಿ ಎಂದು ಹೇಳಿ ಹೋಗಿದ್ದಾರೆ. ನಿಮ್ಮ ಹೆಸರು ಬರೆದುಕೊಟ್ಟು ಹೋದ ಹಾಗಿತ್ತು. ಪುಕ್ಕಟೆ ಊಟ, ಆಸರಿ ಕೊಟ್ಟು ಸಾಕಾಗಿ ಹೋಯ್ತು ಅಂದ ಹಾಗಿತ್ತು. ಅದಕ್ಕೆ ಸುಂದ್ರಾಮಯ್ಯನವರೂ "ಆಯ್ತು ರೆಕಮೆಂಡ್ ಮಾಡ್ತೇನೆ ಎಂದರು" ಎಂಬ ಬಾಲಂಗೋಚಿ ಬೇರೆ. ಎಲ್ಲರೂ ಜೋರಾಗಿ ನಕ್ಕೆವು. ಹಾಗೆಂತ ವರದಾಚಾರ್ಯರು ನಮ್ಮ ಗುರುತ್ವವನ್ನು ಪಡೆದವರು. ಶಿಷ್ಯರು ಗುರುವಿನಂತೆಯೇ ಅನ್ನುತ್ತಿದ್ದರು! ಒಂದೇ ಗರಿಯ ತೀರ್ಥಹಳ್ಳಿಯ ಕಾಜಾಣ ಪಕ್ಷಿಗಳು, ಎಲ್ಲರೂ ಜಾಣರೇ! ಮೊದಲನೇ ಬೋಗಿ ಮೂರನೆ ಬೋಗಿಯಂತೆ! III ಠಿಚಿಡಿಣ ನವರು ಎರಡನೇ ಬೋಗಿ ಲ್ಯಾಂಗ್ವೇಜಂತೆ. ಪುರುಷೋತ್ತಮ ಹೇಳಿದ್ದು:ಅಂಕಾನಾಂ ವಾಮತೋ ಗತಿ: ಅಂಕೆಗಳನ್ನು ತಿರುಗಿಸಿ ಓದಬೇಕಂತೆ. I, II, III ಬದಲಿಗೆ III, II, I. ಸಂಖ್ಯಾ ಶಾಸ್ತ್ರ. ಸಂಜೀವರಾಯರಿಗೆ ಇದನ್ನು ಶ್ರೀನಿವಾಸಾಚಾರ್ಯ ವಸ್ತರೆ ಹೇಳಿದ್ದರಂತೆ. ಪುರುಷೋತ್ತಮ ಕೇಳಿಸಿಕೊಂಡಿದ್ದನ್ನು ನನಗೆ ಹೇಳಿದ್ದನಂತೆ. ಆದರೆ ಗ್ರಹಚಾರ. ನಾನು ಮರೆಯಬೇಕೇ? ಪುರುಷೋತ್ತಮ ನಾನು ಸೇರಿ ಅವನ ಮನೆ ರೂಮಿನಲ್ಲಿ ಕಂಬೈಂಡ್ ಸ್ಟಡೀಸ್. ನಮ್ಮಮ್ಮ ಮಾಡಿದ ಚೂಡಾ(ಅವಲಕ್ಕಿ), ಅವನಮ್ಮ ಜಾನಕಮ್ಮ ಮಾಡಿದ ಕಾಫಿ-ರಾತ್ರೆ ನಿದ್ದೆ ಬರದಂತೆ. ಪರೀಕ್ಷೆ ನಂತರವೂ ನಮಗೆ ಕಾಫಿ ಬೇಕಾಗುತ್ತಿತ್ತು. ರಾತ್ರಿ ಕಾಫಿ ಕುಡಿಯದಿದ್ದರೆ ನಿದ್ದೆ ಬರುವುದಿಲ್ಲ! ಜೈ ಕಾಫಿ. ಅನಂತ ರೂಪಿ ನೀನು, ನಿದ್ರೆ ತರಬಲ್ಲೆ, ನಿದ್ರೆ ಕೆಡಿಸಲೂ ಬಲ್ಲೆ! ನಮ್ಮ ಬಿಡಾರಕ್ಕೂ, ಅವನ ಮನೆಗೂ ಒಂದೇ ರಸ್ತೆ. ನಡುವೆ ಒಂದು ದೇವಸ್ಥಾನವಿತ್ತು. ಸಂಜೀವರಾಯರು ಪುರುಷೋತ್ತಮನ ತಂದೆ. ರಿಟೈರ್ಡ್ ಮಾಸ್ತರರು. ಮನೆ ಊಟದ ವಿನಾ ಪರಾನ್ನ ಮಾಡುತ್ತಿರಲಿಲ್ಲ. ಬೆಳಿಗ್ಗೆ ಹತ್ತೂ ಮೂವತ್ತಕ್ಕೆ ಊಟ. ಅದಕ್ಕೂ ಮೊದಲು ಬೆಳಗಿನ ನಿಯಮಿತ ವಿಧಿ, ವಿಧಾನ. ಅದರಲ್ಲಿ ಕಟ್ಟಿಗೆ ತುಂಡು ಮಾಡುವುದೂ ಸೇರಿತ್ತು. ಎಪ್ಪತ್ನಾಲ್ಕು ವಯಸ್ಸಿನ ಸಂಜೀವರಾಯರು ಕೊಡಲಿಯಿಂದ ಕಟ್ಟಿಗೆ ಸೀಳಿ. ಕತ್ತಿಯಿಂದ ತುಂಡು ಮಾಡಿ ಅವರೇ ಒಳಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಹಾಗೆ ಮೂರು ನಾಲ್ಕು ಸಲ ಒಳ ಹೊರಗೆ ಅವರು ಓಡಾಡುತ್ತಿದ್ದರೆ ಇಪ್ಪತ್ತು ಇಪ್ಪತ್ನಾಲ್ಕರ ನಮಗೆ ನಾಚಿಕೆಯಾಗುತ್ತಿತ್ತು. ಪುರುಷೋತ್ತಮನ ತಾಯಿ ಜಾನಕಮ್ಮ ಗಂಡನಿಗೆ ತಕ್ಕ ಸಾಧ್ವಿ. ಇಂಥ ಆದರ್ಶ ದಂಪತಿಗಳ ಜೋಡಿ ಆಗಲೂ ಅಪರೂಪ! ಈಗ ಫೋಟೋಗಳಲ್ಲಿ ಮಾತ್ರ ಅವರ ರೂಪ! ನನಗೂ, ಪುರುಷೋತ್ತಮನಿಗೂ ಆರ್.ಎಸ್.ಎಸ್. ಸಂಬಂಧ. ಆದರೆ ಎಸ್.ಎಸ್.ಎಲ್.ಸಿ. ಬಳಿಕ ನನಗೆ ಅರ್.ಎಸ್.ಎಸ್. ಸಂಪರ್ಕ ತಪ್ಪಿಹೋಯಿತು. ಪುರುಷೋತ್ತಮ ಮಾತ್ರ ನಿಷ್ಠಾವಂತ ಆರ್.ಎಸ್.ಎಸ್. ಸದಸ್ಯನಾಗಿ ಮುಂದುವರಿದ. ಮುಂದೆ ಟೌನ್ ಮುನಿಸಿಪಾಲಿಟಿಯ ಸಮರ್ಥ ಅಧ್ಯಕ್ಷರೂ ಆದರು. ಕೃಷಿ ಋಷಿ. ಹೊಸದೊಂದು ಅಡಿಕೆ ತೋಟವನ್ನೇ ಸೃಷ್ಟಿಸಿದ. ಆ ತೋಟ ಬ್ರಹ್ಮ ಸೃಷ್ಟಿ. ಪುರುಷೋತ್ತಮನ ಕರ್ತೃತ್ವ ಶಕ್ತಿಯ ಸಹಜರೂಪ. ನಮಗೆ ಅಪರೂಪ. ಅವನ ತೋಟಕ್ಕೆ ನಾನು ಇಪ್ಪತ್ತೈದು ವರ್ಷಗಳ ನಂತರ ಹೋದಾಗ ನನ್ನನ್ನು ಐದು ನಿಮಿಷ ತಬ್ಬಿಕೊಂಡೇ ಇದ್ದ. ಅಬ್ಬಾ ಎಂಥಾ ಸ್ನೇಹಮಯಿ! ನನಗೆ ಮೈಯೆಲ್ಲಾ ಹರ್ಷ ಪುಳಕ. ತೀರ್ಥಹಳ್ಳಿ ಸ್ನೇಹಿತರಲ್ಲಿ ಪೇಟೆ ಶ್ರೀಪತಿರಾಯರ ಮಕ್ಕಳು, ಶ್ರೀ ತ್ರಿವಿಕ್ರಮ, ಶ್ರೀ ನಾಗರಾಜ. ಮೊದಲನೆಯವ ನನ್ನ ಕ್ಲಾಸ್ ಮೇಟ್. ಎರಡನೆಯವ ನಾಗರಾಜ ನನ್ನ ಸಂಘದ ಚಾಲಕ ಮತ್ತು ನನ್ನ ಆಪ್ತ ಸ್ನೇಹಿತ. ದಿನವೂ ಸಂಜೆ ಹೊಳೆ ಹತ್ತಿರ ನಾವಿಬ್ಬರೂ ಸೇರಲೇ ಬೇಕು. ಊರ ಮಾತು, ತಮಾಷೆ, ದೊಡ್ಡವರ ಬಗ್ಗೆ, ಅವರ ಸಣ್ಣತನದ ಬಗ್ಗೆ, ಸಣ್ಣವರ ಬಗ್ಗೆ, ಅವರ ದೊಡ್ಡತನದ ಬಗ್ಗೆ ನಮ್ಮ ದರ್ಪಣ. ನಂತರ ತುಂಗಾ ನದಿಯಲ್ಲಿ ಎಲ್ಲವೂ ತರ್ಪಣ. ಶುದ್ಧ ಮನದಿಂದ ನನ್ನ ಮಠಕ್ಕೆ ನಾನು, ಅವನ ಪೇಟೆ ಮನೆಗೆ ಅವನು. ಸಂಘದ ಚಾಲಕನಾಗಿ ಎಲ್ಲರನ್ನೂ ಬಲು ಆತ್ಮೀಯತೆಯಿಂದ ಕಾಣುತ್ತಿದ್ದ, ಮಾತನಾಡಿಸುತ್ತಿದ್ದ. ಓಲೈಸುತ್ತಿರಲಿಲ್ಲ. ನನ್ನ ದೋಸ್ತ ನಾಗರಾಜ ಈಗಿಲ್ಲ.ಎಂ.ಲಕ್ಷ್ಮಿನಾರಾಯಣ (ಮೂಲ-ಮೂಲವ್ಯಾಧಿಯ ಕಾರಣ ಪುರುಷ ಎಂದು ನಮ್ಮ ಹಾಸ್ಯ) ನನಗೆ ಹಿಂದಿ ಪ್ರೇರಕ. ಮುಂದೆ ದ.ಕ.ದಲ್ಲಿ ಹಿಂದಿ ಶಿಕ್ಷಕ ಆದ. ಗೋಕರ್ಣಕ್ಕೆ ಬಂದಾಗಲೆಲ್ಲಾ ಮಾತನಾಡಿಸುತ್ತಿದ್ದ. ನಾನು ಅಘನಾಶಿನಿಗೆ ಬಂದು ನೆಲಸಿದ ಮೇಲೆ ಅವನ ದರ್ಶನ ಇಲ್ಲ. ನನ್ನ ಬಿ.ಎಸ್.ಸಿ. ಫಲಿತಾಂಶ ಬಂದಾಗ ನಾನು ಸಾಗರ ಸೀಮೆಯ ಮಾವಿನಕುಳಿಯ ಚೆನ್ನಕೇಶವ ಭಟ್ಟರ ಮನೆಯಲ್ಲಿದ್ದೆ. ನಮ್ಮ ಶ್ರೀ ಶ್ರೀ ರಾಘವೇಂದ್ರ ಭಾರತಿ ಶ್ರೀ ಸ್ವಾಮಿಗಳ ಸವಾರಿ ಅವರಲ್ಲಿತ್ತು. ನಾನು ರಜೆಯಲ್ಲಿ ಶ್ರೀಗಳವರ ಪರಿವಾರದಲ್ಲಿ ಒಬ್ಬನಾಗಿ ಇರುತ್ತಿದ್ದೆ. ಶ್ರೀಚೆನ್ನ ಕೇಶವ ಭಟ್ಟರು ನಿಷ್ಠಾವಂತ ಆಸ್ತಿಕರು. ನಾನು ಚಿಕ್ಕವನಿದ್ದಾಗಲೇ ಅವರನ್ನು ಗೊಕರ್ಣದಲ್ಲಿ ನೋಡಿ ಅವರು ನಡೆಸಿದ ಶ್ರೀ ದೇವರ ಪೂಜೆಯಲ್ಲಿ ಪ್ರಸಾದ ಭಾಗಿಯಾಗಿದ್ದೆ. ಕಾಮೇಶ್ವರ ಮಠಕ್ಕೆ ಅವರು ಶಿಷ್ಯರು. ಅಲ್ಲಿಯ ನರಸಿಂಹಭಟ್ಟರು(ನಾವೆಲ್ಲಾ ಶಾಮಣ್ಣ ಅನ್ನುತ್ತಿದ್ದೆವು) ನಮ್ಮ ತಂದೆಯವರ ಅನ್ಯೋನ್ಯ ಸ್ನೇಹಿತರು. ಅಲ್ಲದೆ ಚೆನ್ನಕೇಶವಭಟ್ಟರೂ ಮಠದ ಅಭಿಮಾನಿಗಳಾದ್ದರಿಂದ ಈ ಸ್ನೇಹ ವರ್ಧಿಸಿತು. ಗೋಕರ್ಣದಿಂದ ಗಜಣ್ಣ ಅಂದು ಸಂಜೆ ಗುರುಗಳ ಕ್ಯಾಂಪಿಗೆ ಬಂದು ನಾನು ಪಾಸಾದ ಸುದ್ದಿ ಹೇಳಿ ಗೋಕರ್ಣ ಹೈಸ್ಕೂಲಿಗೆ ಶಿಕ್ಷಕ ಜಾಗಕ್ಕೆ ಅರ್ಜಿ ಮಾಡಲು ನನ್ನನ್ನು ಊರಿಗೆ ಕರೆದುಕೊಂಡು ಹೋಗಲು ಬಂದಿದ್ದ. ಶ್ರೀಶ್ರೀಗಳವರಿಂದ ಮಂತ್ರಾಕ್ಷತೆ ಪಡೆದು ಶುಭವಾಗಲೆಂಬ ಆಶೀರ್ವಾದ ಪಡೆದು ಬೆಳಿಗ್ಗೆ ಅರ್ಜಿ ಕೊಡು ಎಂದರು. ‘ಹೂಂ’ ಎಂದೆ. ಮಾರನೆ ದಿನ ನಾನು ದೇವತೆ ಜಯರಾಮಣ್ಣನ ಮನೆಗೆ ಅರ್ಜಿ ತೆಗೆದುಕೊಂಡು ಹೋದೆ. ಅಲ್ಲಿಗೆ ದತ್ತರಾಯರೂ ಬಂದಿದ್ದರು. ಅರ್ಜಿ ನೋಡಿದರು. ಅಲ್ಲಿ ಇಲ್ಲಿ ನನ್ನ ವಾಕ್ಯಗಳನ್ನಿಟ್ಟು ಬೇರೆಯೇ ಅರ್ಜಿ ಬರೆಸಿ ತೆಗೆದುಕೊಂಡರು. ಎರಡು ದಿನ ಬಿಟ್ಟು ತಮ್ಮಲ್ಲಿಗೆ ಸಾಯಂಕಾಲ ನಾಲ್ಕು ಗಂಟೆಗೆ ಬರಲು ಹೇಳಿದರು. ಅಲ್ಲಿ ಕೆನರಾ ಶಿಕ್ಷಕ ಮಂಡಲಿಯ ಅಧ್ಯಕ್ಷರು ಚೇರಮನ್ ಕಮತಿಯವರು ನನ್ನ ಇಂಟರ್ವ್ಯೂ ಮಾಡಿದರು. ಉತ್ತರ ಸಮಾಧಾನಕರ ಎಂದರು. ಶ್ರೀ ದತ್ತೂರಾಯರು ಕೆಲವು ಪ್ರಶ್ನೆ ಕೇಳಿದರು. ಉತ್ತರಗಳಿಗೆ ಇಬ್ಬರೂ ತೃಪ್ತಿ ವ್ಯಕ್ತಪಡಿಸಿ ‘ಮೀಟಿಂಗಿನಲ್ಲಿ ಇಡುತ್ತೇವೆ, ಪರಿಣಾಮ ತಿಳಿಸುತ್ತೇವೆ’ ಎಂದರು. ನಮಸ್ಕಾರ ಹೇಳಿ ಮನೆಗೆ ಬಂದೆ. ಜೂನ್ ೨೫ಕ್ಕೋ ೨೬ಕ್ಕೋ ಭದ್ರಕಾಳಿ ಹೈಸ್ಕೂಲಲ್ಲಿ ಅಧ್ಯಾಪಕನಾಗಿ ನೇಮಿಸಿರುವ ಕುರಿತು ಪತ್ರ ಬಂತು. ಅದನ್ನು ಮನೆಯಲ್ಲಿದ್ದ ಹಿರಿಯರಾದ ಗಜಣ್ಣ, ಭೂಮಿ ಅತ್ತಿಗೆಯವರಿಗೆ ಓದಿ ಹೇಳಿದೆ. ದೇವರಿಗೆ ವಂದಿಸಿದೆ. ಜುಲೈ ೧ ಪ್ರಥಮ ಏಕಾದಶಿ ರಜೆ. ಆದ್ದರಿಂದ ಮಾರನೇ ದಿನ ದ್ವಾದಶಿ ಹಬ್ಬ. ಅಂದು ಬೆಳಿಗ್ಗೆ ದೇವಸ್ಥಾನಗಳಿಗೆ ಹೋಗಿ ಬಂದು ಅಣ್ಣ ಅತ್ತಿಗೆಯರಿಗೆ ವಂದಿಸಿ ಸ್ಕೂಲಿಗೆ ಹೊರಟೆ. ಅತ್ತಿಗೆ "ನೀನು ನನಗಿಂತ ದೊಡ್ಡವನು.ನನಗೇಕೆ ನಮಸ್ಕಾರ?" ಎಂದಳು. "ಅಣ್ಣನ ಹೆಂಡತಿಯಾದ್ದರಿಂದ ನೀನು ಹಿರಿಯಳೇ" ಎಂದು ನನ್ನ ವಾದ. ಅಂದು ಶಾಲೆಗೆ ಒಂಭತ್ತು ಮೂವತ್ತಕ್ಕೆ ಹಾಜರಾದೆ. ಹೆಡ್ ಮಾಸ್ಟರ್ ಶ್ರೀ ಬೈಲೂರು ಮಾಸ್ತರರು. ಹಸನ್ಮುಖಿಯಾಗಿ ಬರಮಾಡಿಕೊಂಡರು. ನನ್ನಿಂದ ಸೇರ್ಪಡೆ ಪತ್ರ ತೆಗೆದುಕೊಂಡು ಅಭಿನಂದಿಸಿ ಅಲ್ಲೇ ಕೂರಿಸಿಕೊಂಡರು. ಬಳಿಕ ಎಲ್ಲ ಶಿಕ್ಷಕರನ್ನೂ ಪರಿಚಯಿಸಿದರು. ಶ್ರೀ ಡಿ.ಎಸ್.ಕಾರಂತ, ಶ್ರೀ ಜಿ.ಜಿ.ಹಳದೀಪುರ, ಶ್ರೀ ಜಿ.ವಿ.(ಗೌರೀಶ) ಕಾಯ್ಕಿಣಿ, ಶ್ರೀ ಎಸ್.ಆರ್. ಹಿರೇಗಂಗೆ, ಶ್ರೀ ಎಸ್.ಎಮ್.ಬರವಣಿ, ಕು.ರೋಹಿಣಿ ನಾಡಕರ್ಣಿ. ನಂತರ "ನಾನು ಎಸ್.ಜಿ.ಬೈಲೂರ, ಹೆಡ್ ಮಾಸ್ಟರ್" ಎಂದು ಚೆನ್ನಾಗಿ ಕೈ ಕುಲುಕಿದರು. ನಂತರ ನಾಗೇಶ, ಕೃಷ್ಣ ಇವರನ್ನು ಸಹಾಯಕರೆಂದು ಪರಿಚಯಿಸಿದರು. ಸರಿ, ಮೊದಲ ದಿನದ ಬಗೆಗೆ ಹೇಳುತ್ತೇನೆ. ಹತ್ತೂ ಇಪ್ಪತ್ತೈದಕ್ಕೆ ಮೊದಲ ಗಂಟೆ. ಅದು ದೇವಸ್ಥಾನದ ದೊಡ್ಡ ಗಂಟೆಯ ಹಾಗಿದೆ. ಶಾಲೆಯ ಹೆಸರು ‘ಭದ್ರಕಾಳಿ ಪ್ರೌಢಶಾಲೆ’ ಎಂಬುದಕ್ಕೆ ಸರಿಯಾಗಿ ಭದ್ರಕಾಳಿಗೆ ನಿತ್ಯ ಘಂಟಾನಾದ ಎಂಬಂತೆ ಆ ಘಂಟೆ ಕಾಲಕ್ಕೆ ಸರಿಯಾಗಿ ದನಿಗೊಡುವುದು. ಸರಿ, ಶಾಲಾ ಪ್ರಾರಂಭದ ಪ್ರಾರ್ಥನೆ. ಎದೆಯಲ್ಲೂ ಘಂಟಾನಾದ! ದೇವತಾ ಪ್ರಾರ್ಥನೆಯೊಂದಿಗೆ ಜನಗಣಮನ. ಮೊದಲ ಮೂರು-ನಾಲ್ಕು ದಿನ ನನಗೆ ವಿಷಯ ಕೊಡಲಿಲ್ಲ. ಹಿರಿಯ ಶಿಕ್ಷಕರ ಪಾಠಗಳನ್ನು ನಿರೀಕ್ಷಿಸುವುದು. ಎಲ್ಲಾ ಎಂಟೂ ಪೀರಿಯಡ್ ಅವಧಿಗಲ್ಲ. ಎರಡೋ ಮೂರೋ ಶಿಕ್ಷಕರ ಪಾಠಗಳನ್ನು ಕೇಳಿಸಿಕೊಳ್ಳುವುದು. ಬಳಿಕ ಇತರ ಶಿಕ್ಷಕರೊಂದಿಗೆ ಆ ಮಾತು, ಈ ಮಾತು. ತೀರ್ಥಹಳ್ಳಿ, ಶಿವಮೊಗ್ಗಾ, ಬೆಂಗಳೂರು,ಮಠ,ಗುರುಗಳು... ನಮ್ಮ ಮನೆ ಬಗೆಗೆ ಎಲ್ಲರಿಗೂ ಗೊತ್ತು. ನನಗೆ ‘ಕೊಡ್ಲೆಕೆರೆ’ ಎಂದೇ ಕರೆದರೂ ವೇಳಾಪಟ್ಟಿಯಲ್ಲಿ ನನ್ನ ಹೆಸರು ಎಂ.ಏ.ಬಿ. (ಎಂ.ಎ.ಭಟ್ಟ) ಎಂದೇ. ನನ್ನ ಸರ್ಟಿಫಿಕೇಟುಗಳಲ್ಲಿ ‘ಕೊಡ್ಲೆಕೆರೆ’ ಇಲ್ಲ. ನನ್ನ ಸೇವೆಯ ಮೊದಲ ವೇಳಾಪಟ್ಟಿ ತಯರಾಯಿತು. ನನಗೆ ಒಟ್ಟು ಇಪ್ಪತ್ತೆರಡು ಪೀರಿಯಡ್. ಗಣಿತ, ವಿಜ್ಞಾನ, ಇಂಗ್ಲೀಷ್. ಎಸ್.ಎಸ್.ಎಲ್.ಸಿ ಕ್ಲಾಸಿಗೆ ಯಾವ ವಿಷಯವನ್ನೂ ಕೊಡಲಿಲ್ಲ. ಮೊದಲ ವರ್ಷ ಎಂಟು ,ಒಂಭತ್ತನೇ ತರಗತಿಗಳಿಗೆ ಪಾಠ ಹೇಳಿ ಅನುಭವ ಪಡೆದುಕೊಳ್ಳಲಿ ಎಂಬುದು ಆಶಯ. ಇದನ್ನು ತುಂಬಾ ಸಂತೋಷದಿಂದ ಸ್ವಾಗತಿಸಿದೆ. ಹತ್ತನೇ ತರಗತಿಯ ಪಾಠಕ್ಕೆ ಯಾವುದಾದರೂ ಶಿಕ್ಷಕರು ಬರದಿದ್ದಾಗ ಬದಲಿಯಾಗಿ ಪಾಠ ಹೇಳಲು ಹೋದದ್ದುಂಟು. ನನ್ನ ನೆಚ್ಚಿನ ಮಂಕುತಿಮ್ಮನ ಕಗ್ಗದ ಕೆಲವು ಪದ್ಯಗಳನ್ನು ವಿವರಿಸಿ ಹೇಳುತ್ತಿದ್ದೆ. ಆಗ ನಮ್ಮೂರುಗಳಲ್ಲಿ ಅದು ಅಷ್ಟು ಪರಿಚಿತವಾಗಿರಲಿಲ್ಲ. ನನಗದು ಅನುಕೂಲವೇ ಆಯಿತು! ಅದೇ ವರ್ಷ ಕುಮಟಾ ತಾಲೂಕು ಸ್ಪೋರ್ಟ್ಸಿಗೆ ನಾನು, ಜಿ.ಜಿ.ಹಿರೇಗಂಗೆ ನಮ್ಮ ಶಾಲೆಯ ಟೀಮನ್ನು ಒಯ್ದೆವು. ವಾಲೀಬಾಲ್‌ನಲ್ಲಿ ಗಣನೀಯವಾಗಿ, ಪ್ರೇಕ್ಷಣೀಯವಾಗಿ ಆಡಿದರು. ಖೊಖೋದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಕೆ.ಎಸ್.ಬೈಲಕೇರಿ ಹೀರೋ! ಎದುರು ಟೀಮಿನಲ್ಲಿ ಯಾರಿಗೂ ಇವನನ್ನು ಕಿಟ್ಟಲಾಗಲಿಲ್ಲ. ಇವನು ಔಟ್ ಆಗಲಿಲ್ಲ. ಇವನ ಝಿಗ್-ಝಾಗ್ ಓಟ ಎಲ್ಲರ ಮೆಚ್ಚುಗೆ ಗಳಿಸಿತು. ವಾಲೀಬಾಲ್‌ನಲ್ಲಿ ರಮೇಶಶೆಟ್ಟಿಯ ಶಾಟ್ ಪ್ರಸಿದ್ಧವಾಯಿತು. ಬಹುಮಾನಗಳು ಬರಲಿಲ್ಲ, ಆದರೆ ಹೋಗುವಾಗ ಇದ್ದ ಉಮೇದಿಯಲ್ಲೇ ಹಿಂತಿರುಗಿದೆವು. ಶಿಕ್ಷಕರೂ ಮಕ್ಕಳ ಉತ್ತಮ ಸಾಧನೆ ಬಗ್ಗೆ ಸಂತೋಷ ಪಟ್ಟರು.(ವೈಯಕ್ತಿಕ ಸಾಧನೆಗಾಗಿ.) ಪ್ರತಿ ಕ್ಲಾಸಿಗೆ ಪ್ರತಿ ಶನಿವಾರ ಚರ್ಚಾ ಕೂಟ. ಮನರಂಜನಾ ಕಾರ್ಯಕ್ರಮ. ಅಧ್ಯಕ್ಷತೆ ಒಂದೊಂದು ವಾರ ಒಬ್ಬೊಬ್ಬ ಶಿಕ್ಷಕರದು. ಒಟ್ಟಿನಲ್ಲಿ ಇಡೀ ಶಾಲೆ ಯಾವಾಗಲೂ ಚುರುಕಾಗಿ, ಉತ್ಸಾಹದಿಂದ ಕ್ರಿಯಾಶೀಲವಾಗಿತ್ತು, ಜೀವಕಳೆಯಿಂದ ನಳನಳಿಸುತ್ತಿತ್ತು. ನನಗೆ ಮೊದಲ ತಿಂಗಳ ಪಗಾರ ಬಂದಾಗ ಪ್ರತಿ ರೂಪಾಯಿಯಲ್ಲಿ ನನ್ನ ಅನ್ನದಾತರು, ಶ್ರೀ ಗುರುಗಳು, ತಂದೆ, ತಾಯಿ ಕಾಣುತ್ತಿದ್ದರು. ತಂದು ದೇವರ ಮುಂದಿಟ್ಟು ಗಜಣ್ಣನ ಕೈಲಿ ಕೊಟ್ಟೆ. ದಿನವೂ ಮಧ್ಯಾಹ್ನದ ಆಸರಿಗೆ ಅವನೇ ಹಣ ಕೊಡುತ್ತಿದ್ದ. ಹೀಗೆ ದಿನಗಳು ಕಳೆದವು. ನನ್ನ ಕಲಿಸುವ ರೀತಿಯಲ್ಲಿ ಮೌಲ್ಯ ವರ್ಧನೆ ಆಯಿತು. ಹಿರಿಯ ಸಹೋದ್ಯೋಗಿ ಗುರುಗಳ ಸೂಕ್ತ ಮಾರ್ಗದರ್ಶನವೇ ಇದಕ್ಕೆ ಕಾರಣ. ದಸರಾ ರಜೆ ಬಂತು. ಹೆಡ್ ಮಾಸ್ಟರ್ ಹತ್ತಿರ ನಾನು ತೀರ್ಥಹಳ್ಳಿಗೆ ಹದಿನೈದು ದಿನಗಳು ಹೋಗಿಬರುವುದಾಗಿ ಹೇಳಿದೆ. "ಅಲ್ಲಿ ನಿನ್ನ ತಂದೆ, ತಾಯಿ, ತಮ್ಮಂದಿರು ಇದ್ದಾರೆ, ಅಲ್ಲವೇ? ಹೋಗಿ ಬಾ" ಎಂದರು. ನಮ್ಮ ಶಾಲಾ ಆಡಳಿತ ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ಡಿ.ವಿ.ಕಾಮತ, ಕಿಮಾನಿಕರರ ಹತ್ತಿರವೂ ಹೇಳಿದೆ. "ಒಳ್ಳೇದೇ ಮಾಡಿದೆ, ಹೆಡ್‌ಕ್ವಾರ್ಟರ್ ಬಿಡುವಾಗ ಸಂಬಂಧ ಪಟ್ಟವರಿಗೆ ಹೇಳಿ ಹೋಗಬೇಕಾದುದು ನಿಯಮ" ಎಂದರು. ಸರಿ,ದೇವತೆ ಜಯರಾಮಣ್ಣನ ಜೊತೆ ಹೊರಟೆ.ತೀರ್ಥಹಳ್ಳಿಯಲ್ಲಿ ಅಖಿಲ ಹವ್ಯಕ ಮಹಾಸಭೆಯನ್ನು ಶ್ರೀ ರಾಘವೇಂದ್ರ ಭಾರತಿ ಸ್ವಾಮಿಗಳು ಕರೆದಿದ್ದರು. ನಮ್ಮ ಹೈಕೋರ್ಟಿನ ಉನ್ನತ ಉದ್ಯೋಗದಲ್ಲಿದ್ದ ಶ್ರೀ ಎಂ.ಎಸ್.ಹೆಗಡೆಯವರು ಅಧ್ಯಕ್ಷರು ಮತ್ತು ಬೆಳಗಾವಿ ಕಾನೂನು ವಿದ್ಯಾಲಯದ ಪ್ರಿ.ವಿ.ಆರ್.ಭಟ್ಟರು ಮುಖ್ಯ ಅತಿಥಿಗಳಾಗಿದ್ದರು. ಮೂರು ಪ್ರಾಂತಗಳಿಂದ (ಅಂದರೆ ಸಾಗರ, ಉತ್ತರ ಕನ್ನಡ, ಮಂಗಳೂರು) ಪ್ರತಿನಿಧಿಗಳು ಸಂಘಟನೆ ಬಗೆಗೆ ಮನೋಜ್ಞವಾಗಿ ಮಾತನಾಡಿದರು. ಸಾಗರದ ಯುವ ವಕೀಲ ಶ್ರೀ ಶ್ರೀನಿವಾಸ ಭಟ್ಟರು ಕಾರ್ಯದರ್ಶಿಯಾಗಿ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದ್ದು ಎಲ್ಲರ ಶ್ಲಾಘನೆಗೆ ಪಾತ್ರವಾಯಿತು. ಎರಡೂ ದಿನಗಳು ರಾತ್ರಿ ಮನರಂಜನಾ ಕಾರ್ಯಕ್ರಮಗಳು ನಡೆದವು. ದೇವರು ಹೆಗಡೆಯವರ ದುಷ್ಟಬುದ್ಧಿ, ಕೃಷ್ಣ ಹಾಸ್ಯಗಾರರ ಪ್ರೇತನೃತ್ಯ, ಸಿಂಹ ಇವೆಲ್ಲ ಒಂದಕ್ಕಿಂತ ಒಂದು ಸೊಗಸಾಗಿ ರಂಗ ಪ್ರದರ್ಶನಗೊಂಡವು. ಊರಿನವರು ಮತ್ತೂ ಒಂದು ದಿನ ಕಾರ್ಯಕ್ರಮಗಳನ್ನು ಏರ್ಪಡಿಸಬೇಕೆಂದು ಮುಂದೆ ಬಂದರು. ಆದರೆ ಪಾತ್ರಧಾರಿಗಳು ಊರಿಗೆ ಹೊರಟಿದ್ದರು. ಶ್ರೀಶ್ರೀಗಳ ಆಶೀರ್ವಚನದೊಂದಿಗೆ ಎರಡು ದಿನಗಳ ಸಂಭ್ರಮದ ಕಾರ್ಯಕ್ರಮ ಯಶಸ್ವಿಯಾಯಿತು. ನಾನು ಏಳೆಂಟು ದಿನಗಳು ತೀರ್ಥಹಳ್ಳಿಯಲ್ಲಿದ್ದು ಸ್ನೇಹಿತರನ್ನು ಕಂಡು ಪುನಃ ಗೋಕರ್ಣಕ್ಕೆ ಬಂದೆ. ಎರಡನೇ ಅವಧಿಯ ಶಾಲಾ ಕಾರ್ಯಕ್ರಮ ಆರಂಭವಾಯಿತು. ಇದೇ ಹೊತ್ತಿಗೆ ನನ್ನ ಮದುವೆ ಪ್ರಸ್ತಾಪಗೊಂಡು ನಿಶ್ಚಯದ ಹಂತಕ್ಕೆ ಬಂದಿತ್ತು. ಅಘನಾಶಿನಿಯ ಶ್ರೀ ವಿಷ್ಣು ಸಭಾಹಿತರ ಮಗಳು ಚಿ.ರಾಧೆಯೊಂದಿಗೆ. ಅವಳ ಹದಿನೇಳನೇ ವರ್ಷದೊಳಗೆ ಕೊಡ್ಲೆಕೆರೆ ಮಠಕ್ಕೆ ಏನಿಲ್ಲ ಎಂದರೂ ಇಪ್ಪತ್ತು-ಇಪ್ಪತ್ತೈದು ಸಲ ಬಂದು ಹೋಗಿರಬಹುದು. ಆದರೆ ಮದುವೆಯಾಗುವ ಭಾವನೆ ಇತ್ತಿತ್ತನದು. ಇರಲಿ, ಆ ವರ್ಷ ಮಳೆಗಾಲದಲ್ಲಿ ಹಂದೆಮಾವ ಬರ್ಗಿಗೆ ಬಂದಾಗ ಒಮ್ಮೆ ನಾವಿಬ್ಬರೂ ಹೋಗಿ ಬರುವುದೆಂದು ತೀರ್ಮಾನಿಸಿದರು. ಸರಿ, ಗೋಕರ್ಣದಿಂದ ಬೆಳಿಗ್ಗೆ ಬಸ್ಸಿಗೆ ತದಡಿಗೆ ಹೋಗಿ ದೋಣಿ ದಾಟಿದೆವು. ನಾವು ಬರುವೆವೆಂದು ವಿಷ್ಣು ಮಾವ ದೋಣಿಗೆ ಕಾಯುತ್ತಿದ್ದ. ಅವನು ಹೆಣ್ಣು ಕೊಡಲಿ, ಬಿಡಲಿ, ಹೆಣ್ಣು ಒಪ್ಪಲಿ ಬಿಡಲಿ, ನಾನೇ ಒಪ್ಪಲಿ ಬಿಡಲಿ - ಅವನು ಸೋದರ ಮಾವ. ಗಾಚ ಮಾವ (ಗಣೇಶ, ವಿಷ್ಣುವಿನ ತಮ್ಮ) ನಾವು ಬಂದ ಸುದ್ದಿ ಹೇಳಲು ಮುಂದೆ ಹೋದ. ನಾವು ಸಾವಕಾಶ ಹೊರಟೆವು. ಹಂದೆ ಮಾವನಿಗೆ ನಾವಡರ ಮನೆಯ ಬುಳ್ಳಜ್ಜಿ ಪರಿಚಯ. ‘ಹ್ವಾಯ್’ ಎಂದು ಮಾತನಾಡಿಸಿದ "ಬರ್ಲಕ್ಕಲಿ. ಚಹಾ ಕುಡ್ಕಂಡು ಹೋಗ್ಲಕ್ಕು" ಎಂದು ಒತ್ತಾಯಿಸಿದರು. "ಇಲ್ಲ, ಹೋಗಿ ಬತ್ತೋ" ಎಂದು ಹಂದೆ ಮಾವ ಭರವಸೆ ಕೊಟ್ಟ. ಸಭಾಹಿತರ ಮನೆ ದಣಪೆ ಪ್ರವೇಶಿಸಿ, ಒಳಗೆ ಹೋಗುವಾಗ ಕಾಲು ತೊಳೆದುಕೊಂಡು, ಕಂಬಳಿ ಮೇಲೆ ಕುಳಿತೆವು. ತಾಯಿಯಿಂದ ಉಡಿಸಿಕೊಂಡಿರಬೇಕು, ಅಂದವಾದ ಸೀರೆಯನ್ನುಟ್ಟು ನಮ್ಮೆದುರು ನೀರಿಟ್ಟು ನವ ವಧು ನಮಸ್ಕರಿಸಿದಳು. ಹಂದೆ ಮಾವನಿಗೆ (ಹಾಗೂ ನನಗೆ!) ಸಂತೋಷವಾಯಿತು. ಕಾಯಿ ಬರ್ಫಿಯನ್ನು ಒಂದು ಬಸಿಯಲ್ಲಿ ತಂದಿಟ್ಟಳು. ಹೆಣ್ಣನ್ನು ನೋಡಿದ ಶಾಸ್ತ್ರ ಮುಗಿಯಿತು. ಹಂದೆ ಮಾವ "ಏನು ಸಭಾಹಿತರೇ, ಮಗಳು ಅಕ್ಕು (ಆಗಬಹುದು) ಅಂತಾಳೋ ಆಗ(ಬೇಡ) ಅಂತಾಳೋ" ಎಂದು ಸೋಮಯ್ಯನ ಮನೆಗೆ ಕೇಳುವಂತೆ ಕೇಳಿದ. ಗಾಚ ಮಾವ "ಏನು,ಹೇಳೇ" ಎಂದ. ಅವನಿಗೆ ಬದಿಗೆ ಕರೆದು "ಹಾಗೆಲ್ಲ ಮಾತಾಡಡ" ಎನ್ನಬೇಕೆ? ಆಗಬಹುದು ಎನ್ನುವ ಸೂಚನೆ ಕನ್ಯಾಮಣಿ ಕೊಟ್ಟಳೆಂದು ತೋರುತ್ತದೆ. ‘ಒಪ್ಪಿದ್ದಾಳೆ. ನಿಮ್ಮದು?’ ಎಂದು ವಿಷ್ಣು ಮಾವ ಕೇಳಿದ."ಒಪ್ಕೊಂಡೇ ಬಂದದ್ದು" ಅಷ್ಟೇ ದೊಡ್ಡಕ್ಕೆ ಹಂದೆ ಮಾವ ಹೇಳಿದ. "ಹಾಗಾದರೆ ಮುಂದೆ ನೀವುಂಟು, ಅನಂತ ಭಟ್ಟರು ಉಂಟು. ನವೆಂಬರೋ ಡಿಸೆಂಬರೋ ಎಂದು ನಿಶ್ಚಯಿಸಿ." ಎಂದ.ಮಧ್ಯಾಹ್ನ ಬೇರು ಹಲಸಿನಕಾಯಿ ಹುಳಿ, ಚಿತ್ರಾನ್ನ, ಪರಮಾನ್ನ. "ರಾಧೇ, ನೀ ಬಡಿಸೇ ಪಾಯಸಾನ’ ಎಂದು ಅಲ್ಲೇ ನಿಂತಿದ್ದ ತೆಪ್ಪದ ಲಕ್ಷ್ಮಕ್ಕ ಹೇಳಿದಳು. ಪಾಯಸಕ್ಕೆ ಸೌಟು ತುಪ್ಪ ಬಡಿಸುವ ಸೌಟಿಗಿಂತ ರಾಶೀ ದೊಡ್ಡದು! "ಅಯ್ಯೋ ಸಾಸ್ಮೆ ಸೌಂಟನೇ" ಎಂದು ಸಣ್ಣತ್ತಿಗೆ ದೊಡ್ಡ ಹುಟ್ಟು ತಂದು ಕೊಟ್ಟಳು. ಅಂದು ಪಾಯಸ ತಣಿದು ಹೋಗಿತ್ತು. ಸರಿ, ಸಾಯಂಕಾಲ ಚಹಾ ಕುಡಿದು ಹೋಗಿ ಎಂದಳು ಬುಳ್ಳಜ್ಜಿ. "ಆಗ ಜನ ರಾಶಿ ಇಕ್ಕು ಹೇಳೋ" ಎಂದು ತಮಾಷೆ ಮಾಡಿ, ವೆಂಕಟನ ದೋಣಿ ಹತ್ತಿ ಬಸ್ಸು ಹಿಡಿದೆವು. ಬರ್ಗಿ ಮಾವ ಸಾಣೆಕಟ್ಟೆಯಲ್ಲಿ ಇಳಿದು ಬರ್ಗಿಗೆ ನಡೆದ. ನಾನು ಮನೆಗೆ ಹೋಗಿ ನಡೆದ ವಿಷಯ ಹೇಳಿ ಬೇಲೆಗೆ ವಾಕಿಂಗ್ ನಡೆದೆ. ಮಾರನೇ ಸೋಮವಾರ ಯಥಾ ಪ್ರಕಾರ ಶಾಲೆ. ಶಾಲೆಯಲ್ಲಿ ದಿವಾಕರ ಮಾಸ್ತರು "ಅಗಸೆಯಲ್ಲಿ ಏನು ವಿಶೇಷ?" ಎಂದರು.ಅಘನಾಶಿನಿಗೆ ಅಗಸೆ ಎನ್ನುವುದುಂಟು. ಮದುವೆ ವಿಷಯಕ್ಕೊಮ್ಮೆ ಅರ್ಧವಿರಾಮ. ಇದೇ ಜೂನ್‌ದಲ್ಲಿ ಪ್ರೇಮಾಶೆಟ್ಟಿ, ಪ್ರೇಮಾ ಗಣಯನ್ ಇವರನ್ನು ಶಾಲೆಯವರೇ ಪರೀಕ್ಷೆ ನಡೆಸಿ ಪಾಸಾದರೆ ಎಂಟನೇ ಕ್ಲಾಸಿಗೆ ಎಡ್ಮಿಶನ್ ಮಾಡಬಹುದೆಂದು ಒಂದು ಸುತ್ತೋಲೆ ಬಂತು. ಹೆಡ್ ಮಾಸ್ತರರು "ಭಟ್ಟ ಮಾಸ್ತರರೇ ಪ್ರಶ್ನೆಪತ್ರಿಕೆ ತೆಗೆದು ಮೌಲ್ಯಮಾಪನ ಮಾಡಲಿ" ಎಂದರು. ನನಗೆ ಹೊಸ ಜವಾಬ್ದಾರಿ. ಆವರೆಗೆ ಪ್ರಶ್ನೆ ಪತ್ರಿಕೆ ತೆಗೆಯುವುದು ಹೇಗೆ ಎನ್ನುವುದು ಗೊತ್ತಿಲ್ಲ. ಪ್ರಶ್ನೆ ಉತ್ತರಿಸಬಲ್ಲೆ! ಅದಕ್ಕೇ ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಮಾದರಿಗೆ ಇಟ್ಟುಕೊಂಡು ಪ್ರಶ್ನೆಪತ್ರಿಕೆ ತಯಾರಿಸಿ ಶ್ರೀ ಬೈಲೂರು ಮಾಸ್ತರರಿಗೆ (ಹೆಡ್ ಮಾಸ್ಟರ್) ತೋರಿಸಿ ಭೇಷ್ ಎನ್ನಿಸಿಕೊಂಡೆ. ಪರೀಕ್ಷೆ ನಡೆಯಿತು. ಪಾಸಾದರು. ಇವರಿಬ್ಬರೂ ಎಸ್.ಎಸ್.ಸಿ. ಆಗಿ ಒಬ್ಬರು ಶಿಕ್ಷಣ ಇಲಾಖೆ, ಇನ್ನೊಬ್ಬರು ವೈದ್ಯಕೀಯ ಇಲಾಖೆ ಸೇರಿದರು. ನಂತರ ಶಾಲೆಯಲ್ಲಿ ಪಾಣ್ಮಾಸಿಕ ಪರೀಕ್ಷೆ ನಡೆಯಿತು. ಮುಗಿಯಿತು. ನಂತರ ಟ್ರಿಪ್. ಎಲ್ಲಿಗೆ? ಜೋಗಾಕ್ಕೆ. ಮೊದಲು ಗೇರುಸೊಪ್ಪ ಚತುರ್ಮುಖ ಬಸ್ತಿಗೆ. ನಾನು,ಹಳದೀಪುರ ಮಾಸ್ತರು ಶಿಕ್ಷಕ ಮಾರ್ಗದರ್ಶಕರು. ಮೋಹನ ಗೋಕರ್ಣ ಬಲು ತಮಾಷೆ ಹುಡುಗ. ಒಂದು ದಿಗಂಬರ ಮೂರ್ತಿಗೆ ತನ್ನ ಕರವಸ್ತ್ರವನ್ನು ಕಚ್ಚೆಯಂತೆ ಉಡಿಸಿ "ಈಗ ಹೆಣ್ಣುಮಕ್ಕಳು ಬರುತ್ತಾರೆ. ಅವರು ಹೋಗುವವರೆಗೂ ಉಟ್ಟುಕೊಂಡಿರು." ಎಂದು ಹೇಳಿದನಂತೆ! ಆ ಮೇಲೆ ಕರವಸ್ತ್ರ ತರಲು ಹೋದರೆ ಇನ್ಯಾರೋ ಅದನ್ನು ಒಯ್ದಿದ್ದರು! ನಾವು ಗೇರುಸೊಪ್ಪೆಯಲ್ಲಿ ಎಷ್ಟು ಕಾದರೂ ಐದಕ್ಕೆ ಬರಬೇಕಾದ ವೇಣುವಿನ ಗೂಡ್ಸ್ ಬರಲಿಲ್ಲ. ಕಡೆಗೆ ನಡೆದುಕೊಂಡೇ ಮಾವಿನಗುಂಡಿಗೆ ಹೊರಟೆವು.. ಮಧ್ಯೆ ಎಲ್ಲೋ ಒಂದು ಅಂಗಡಿ. ಬಾಳೆಹಣ್ಣು, ಹಾಲು ಕುಡಿದು ಪ್ರವಾಸ ಮುಂದುವರಿಸಿದೆವು. ಗುಡ್ಡೆ ಮಧ್ಯದ ಧರ್ಮಶಾಲೆಯಲ್ಲಿ ರಾತ್ರಿ ಬೆಳಗು ಮಾಡಿದೆವು. ಬೆಳಿಗ್ಗೆ ಚಾ ತಿಂಡಿ - ನಮ್ಮನ್ನು ನೋಡಿ ಇಷ್ಟೊಂದು ಜನರಿಗೆ ಚಹಾ ಮಾಡಬಹುದು ಎಂದ.ಸರಿ, "ಸೈಕಲ್ ಕೊಡು, ಸಮೀಪದ ಅಂಗಡಿಗೆ ಹೋಗಿ ರವೆ ತರ್ತೇನೆ" ಎಂದು ಸೈಕಲ್ ಸವಾರಿ ಮಾಡಿ ಹಳದೀಪುರ ಮಾಸ್ತರರು ಹೋಗಿ ರವೆ,ಬಾಳೆಹಣ್ಣು ತಂದರು. ಮಧ್ಯಾಹ್ನ ಹನ್ನೆರಡರ ಸುಮಾರಿಗೆ ಮಾವಿನಗುಂಡಿಗೆ ಬಂದೆವು. ಅಲ್ಲಿ ಐನಕೈ ಅಂಗಡಿ ಹತ್ತಿರ ಊಟ ಮಾಡಿದೆವು. ಹೆಗಡೆಯವರ ವಿಶಾಲ ಅಂಗಳದಲ್ಲಿ ಮಲಗಿದೆವು. ಐದಕ್ಕೆ ಎಚ್ಚರ. ಅಲ್ಲಿಂದ ನಾಲ್ಕೈದು ಮೈಲಿ ನಡೆದು ಜೋಗಫಾಲ್ಸ್ ತಲುಪಿದೆವು. ರಾತ್ರಿ ಹೈಸ್ಕೂಲಲ್ಲಿ ಮಲಗಿ ಜೋಗ್ ಎಲೆಕ್ಟಿಕ್ ಉತ್ಪಾದನೆಯ ಯಂತ್ರಗಳನ್ನು ನೋಡಿದೆವು. ೧೨.೩೦ ಕ್ಕೆ ಜೋಗ ಬಿಟ್ಟು ಬಸ್ಸಿನಲ್ಲಿ ಊರಿಗೆ ಬಂದು ಮುಟ್ಟಿದೆವು. ಮಧ್ಯೆ ದೇವಾನಂದ ಪ್ರಸಂಗ. ಯಾರಿಗೂ ಕಾಣದಂತೆ ಕೆಳಗಿಳಿದು ಬಸ್ಸಿನ ಹಿಂದೆ ಬಾಳೆಹಣ್ಣು ತಿನ್ನುತ್ತಿದ್ದ, ಮಾಸ್ತರರಿಗೆ ಹೆದರಿ. ಬಸ್ಸು ಹೊರಟಿತು ದೇವಾನಂದ ಅಲ್ಲೇ! ಬಸ್ಸಿನಲ್ಲಿ ಲೆಕ್ಕ ಮಾಡಿದಾಗ ಒಬ್ಬ ಕಡಿಮೆ. ಬಸ್ಸು ನಿಲ್ಲಿಸಿ ನೋಡಿದರೆ ಹಿಂದಿನಿಂದ ಓಡಿ ಬರುತ್ತಿದ್ದಾನೆ. ಅಂತೂ ದೇವಾನಂದ ಬಾಳೆಹಣ್ಣು ತಿಂದದ್ದು ದೇವಾ, ಆನಂದ! ವಾರ್ಷಿಕ ಪರೀಕ್ಷೆ ಆಯಿತು. ನನ್ನ ಪರೀಕ್ಷೆ ನನ್ನ ತಾತ್ಕಾಲಿಕ ಸೇವೆಯ ನಂತರ. ನನ್ನನ್ನು ಬಿ.ಎಡ್.ಗೆ ಶಾಲೆಯ ಸಮಿತಿ ತನ್ನ ಖರ್ಚಿನಲ್ಲಿ ಕಳಿಸುವುದೆಂದು ನಿರ್ಧಾರವಾಗಿತ್ತು. ಈಗಲೂ ಈ ಮಾತಿಗೆ ಬದ್ಧ, ಆದರೆ ಒಂದು ವರ್ಷ ಮುಂದಕ್ಕೆ- ಎಂದು ನಿರ್ಧಾರವಾಯಿತು. ಈ ವರ್ಷ ಶಿಕ್ಷಕನಾಗಿಯೇ ಮುಂದುವರಿಯುವುದು. ಪಗಾರ ಹೆಚ್ಚಳ ಮಾಡಿದರು. ನಾನು ಬಿ.ಎಡ್.ಗೆ ಹೋಗುವುದು ಆರ್ಥಿಕವಾಗಿ ಕಷ್ಟದ ಕಾರ್ಯವಾಗಿತ್ತು. ಏನೇ ಇರಲಿ, ಶಿಕ್ಷಕನಾಗಿ ಮುಂದುವರಿಯಲು ನಿರ್ಧರಿಸಿದೆ. ಮೊದಲನೇ ವರ್ಷದಂತೆ ಎರಡನೇ ವರ್ಷವೂ ಸುಸೂತ್ರವಾಗಿ ಕಳೆಯಿತು. ೫೭-೫೮ ರಲ್ಲಿ ನನ್ನನ್ನು ಶಾಲೆಯವರೇ ಬಿ.ಎಡ್.ಗೆ ಕಳಿಸಿದರು. ಬೆಳಗಾವಿ S.ಖಿ.ಕಾಲೇಜ್ ಮಾಧ್ಯಮಿಕ ಶಾಲಾ ಶಿಕ್ಷಕರ ತರಬೇತಿ ವಿದ್ಯಾಲಯ. ಬೆಳಗಾವಿಯ ಸರ್ಕಾರಿ ಮಾಧ್ಯಮಿಕ ಶಾಲಾ ಶಿಕ್ಷಕರ ಕಾಲೇಜಿನ ಪ್ರಿನ್ಸಿಪಾಲರು ನಮ್ಮ ಜಿಲ್ಲೆಯವರೇ. ಮೊದಲು ಅವರು ನಮ್ಮ ಜಿಲ್ಲೆಯಲ್ಲಿ ಡಿ.ಡಿ.ಪಿ.ಐ. ಇದ್ದರು.ಶಿಕ್ಷಣ ಕ್ಷೇತ್ರದಲ್ಲಿ ಅವರದು ದೊಡ್ಡ ಹೆಸರು. ವಿ.ಬಿ.ದೇಸಾಯಿ ಸಾಕಷ್ಟು ಸುಧಾರಣೆಗಳನ್ನು ಶಿಕ್ಷಣದಲ್ಲೂ, ಬೋಧನೆಯಲ್ಲೂ ಅಳವಡಿಸಿದವರು. ವೈಸ್ ಪ್ರಿನ್ಸಿಪಾಲ್ ಶ್ರೀ ವಿ.ಕೆ.ಜವಳಿ. ಪ್ರೊ.ರಘುರಾಮ, ಪ್ರೊ.ಬೆನ್ನೂರು, ಶಿಕ್ಷಣ ಕ್ಷೇತ್ರದಲ್ಲಿ ಒಳ್ಳೇ ಹೆಸರು ಗಳಿಸಿದ ಪ್ರೊ.ಎಸ್.ಆರ್.ರೋಹಿಡೇಕರ್, ಪ್ರೊ.ಎಂ.ಎಚ್.ನಾಯಕ ಮುಂತಾದವರು ನಮ್ಮ ಶಿಕ್ಷಕರು. ಪ್ರೊ. ನಾಯಕರು ನಮ್ಮ ಜಿಲ್ಲೆಯವರು. ನಮ್ಮೆಲ್ಲರ ಹೆಮ್ಮೆಯ ಮಾಣಣ್ಣ. ಪ್ರೊ.ಉಮ್ಮಚಗಿ, ಪ್ರೊ.ಕಟ್ಟಿ, ಇವರೆಲ್ಲ ಹೆಸರುವಾಸಿ ಶಿಕ್ಷಣ ತಜ್ಞರು. ಹೆಡ್ ಕ್ಲರ್ಕ್ ನಮ್ಮ ಜಿಲ್ಲೆಯವರು. ಬಿ.ಎಡ್.ನಲ್ಲಿ ಎಲ್ಲಾ ವಿಷಯಗಳ ಜೊತೆ ನಮ್ಮದೇ ಆದ ಎರಡು ಬೋಧನಾ ವಿಷಯ ಇರಬೇಕು. ನಾನು ವಿಜ್ಞಾನ ಶಿಕ್ಷಕನಾದ್ದರಿಂದ ಗಣಿತ, ವಿಜ್ಞಾನ ಆಯ್ದುಕೊಂಡೆ. ಗಣಿತಕ್ಕೆ ಪ್ರೊ.ರಘುರಾಮ, ವಿಜ್ಞಾನಕ್ಕೆ ಪ್ರೊ.ಎಮ್.ಎಚ್.ನಾಯಕ. ಕಾಲೇಜು ಗೇದರಿಂಗ್‌ಗೆ ಎರಡು ನಾಟಕ. ಪ್ರೊ.ರೊಹಿಡೇಕರರ ಮಗ, ೧೦-೧೧ವರ್ಷದವನು, ಪ್ರಹ್ಲಾದನ ಪಾತ್ರ ವಹಿಸಿದ್ದ. ತಂದೆ ಹಿರಣ್ಯಕಶಿಪು ಪಾತ್ರ ವಹಿಸಿದ್ದರು. ಇನ್ನೊಂದು ನಾಟಕ ‘ಅಳಿಯ ದೇವರು’ ನನ್ನದು ಮೂರು ಹೆಣ್ಣು ಮಕ್ಕಳ ತಂದೆಯ ಪಾತ್ರ. ಹೆಸರು ಚಿಂತಾಮಣಿರಾಯ. ಇಡೀ ನಾಟಕಕ್ಕೆ ನರಸಿಂಹಯ್ಯನ ಪಾತ್ರ ಮತ್ತು ನನ್ನ ಪಾತ್ರ ಕಳೆ ತಂದಿತು ಎಂಬುದು ನನ್ನ ಅಭಿಪ್ರಾಯ ಮಾತ್ರವಲ್ಲ, ಪ್ರೇಕ್ಷಕರದೂ. ಗೋಕರ್ಣದಲ್ಲಿ ನಾವು ಶಿಕ್ಷಕರು ಮೂರು ಸಲ ನಾಟಕ ಆಡಿದೆವು. ನಾಟಕದಯ್ಯ ನರಸಿಂಹನ ಪಾತ್ರದಲ್ಲಿ ಶ್ರೀ ಜಿ.ಎಚ್.ಅದ್ಭುತ ಅಭಿನಯ. ಡಾ.ಬೈಲಕೇರಿ, ದಿ.ಮಾಸ್ಕೇರಿ, ದಿ.ಬರವಣಿ ಮಾಸ್ತರು ಎಲ್ಲರೂ ಪಾತ್ರ ವಹಿಸಿದ್ದರು.ಬೆಳಗಾವಿಯಲ್ಲಿ ಒಂದು ಸಾಧನೆ ಎಂದರೆ ಲಾ ಕಾಲೇಜಿನಲ್ಲಿ ಡಿಬೇಟಿನಲ್ಲಿ ನಾನು, ವಾಮನರಾಯ (ಮುಂದೆ ಇವರು ಐದಾರು ವರ್ಷ ಬಾಡದ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದರು. ಮುಂದೆ ಶಿವಮೊಗ್ಗ ಬಿ.ಎಡ್. ಕಾಲೇಜ್ ಪ್ರಿನ್ಸಿಪಾಲ್ ಆದರು.) ನಮ್ಮ ಕಾಲೇಜನ್ನು ಪ್ರತಿನಿಧಿಸಿ ಶೀಲ್ಡ್ ಗೆದ್ದು ತಂದೆವು. ಕಾಲೇಜಿನ ಶಿಕ್ಷಕರೆಲ್ಲರೂ ಸಂತೋಷಪಟ್ಟರು. ಇದೇ ಸಮಯದಲ್ಲೇ ಹಿಂದೀ ಟ್ರೈನಿಂಗ್ ನಡೆಯಿತು. ಅದಕ್ಕೆ ನಮ್ಮ ಹೈಸ್ಕೂಲ್‌ನಿಂದ ಶ್ರೀಎಸ್.ಎಮ್.ಬರವಣಿ ಮಾಸ್ತರರು ಟ್ರೈನೀ ಆಗಿ ಬಂದಿದ್ದರು. ನನ್ನ ರೂಮಿನಲ್ಲೇ ವಾಸವಾಗಿದ್ದರು. ಇದೊಂದು ಅನನ್ಯ ಲಾಭ. ಪರಸ್ಪರರು ಸಮೀಪದಲ್ಲಿ ಅರಿಯುವಂತಾಯಿತು.ನಂತರ ಅವರೊಬ್ಬರೇ ಅಲ್ಲಿದ್ದು ಟ್ರೈನಿಂಗನ್ನು ಡಿಸ್ಟಿಂಕ್ಷನ್‌ನಲ್ಲಿ ಮುಗಿಸಿ ಶಾಲೆಗೆ ಹೆಮ್ಮೆ ತಂದರು. ಅವರೊಡನೆ ಕಡೋಲಿ ಪ್ರವಾಸ. ಅಲ್ಲಿ ಗೋಕರ್ಣದ ‘ಚಚ್ಚು ಆಯಿ’- ಪಂಡಿತ ಸರಸ್ವತಿಬಾಯಿ, ನನ್ನ ಒಂದನೇ ಇಯತ್ತೆ ಶಿಕ್ಷಕರಾಗಿದ್ದ ಪರಮೇಶ್ವರಿ ಪಂಡಿತರ ಮಗಳು. ಕ.ಬಾ.ಶಿಬಿರ. ಕಸ್ತೂರಿ ಬಾ ಆಶ್ರಮದಲ್ಲಿಮುಖ್ಯ ಮೇಲ್ವಿಚಾರಕಿ. ನಮ್ಮನ್ನು ಎರಡು ದಿನ ಉಳಿಸಿಕೊಂಡರು. ನನಗೆ ಮಾತ್ರ ಎಂದೂ ಕಡೋಲಿ ನೆನಪಿರುವಂತೆ ಆಯಿತು. ಆಚೆ ಈಚೆ ಯಾರೂ ಇಲ್ಲ ಎಂದು ಖಾತ್ರಿ ಮಾಡಿಕೊಂಡು ಜಾರು ಬಂಡೆಯಲ್ಲಿ ಜಾರಬೇಕೆ? ನನ್ನ ಗ್ರಹಚಾರ. ಬಿದ್ದ ಪೆಟ್ಟು ಒಂದೆಡೆ. ಚಚ್ಚು ಆಯಿ ಬೇರೆ ನಗಬೇಕೇ? ಅವರು ಅಲ್ಲೇ ಗಿಡಗಳ ಮಧ್ಯ ಕಸಿ ಮಾಡುತ್ತಿದ್ದರಂತೆ. "ಯಾರೂ ಇಲ್ಲ ಎಂದುಕೊಂಡರೆ ನೀವು ಇಲ್ಲಿ"ಎಂದೆ. "ಏನು ವಿಷಯ" ಎಂದರು. "ನಾನು ಬಿದ್ದದ್ದು ನೋಡಿದರಷ್ಟೆ?" ಎಂದೆ. " ಇಲ್ಲವಲ್ಲ. ಏನೋ ಬಿದ್ದಂತಾಯಿತು. ನೀವೋ " ಎಂದು ಎಲ್ಲರನ್ನೂ ಕರೆದು ಹೇಳಿ ಜೋರಾಗಿ ನಕ್ಕರು. ಬಿ.ಎಡ್. ದ್ವಿತೀಯ ಶ್ರೇಣಿಯಲ್ಲಿ ಪಾಸಾದೆ. ನಾನು ಓದಲು ಬೆಳಗಾವಿಗೆ ಹೋದ ಅವಧಿಯಲ್ಲಿ ಬಾಡದ ಶ್ರೀ ಕೆ.ಎ.ಭಟ್ಟ ಎನ್ನುವವರನ್ನು ಶಿಕ್ಷಕರನ್ನಾಗಿ ತೆಗೆದುಕೊಂಡಿದ್ದರು(ತಾತ್ಕಾಲಿಕವಾಗಿ). ಶ್ರೀ ಬೈಲೂರು ಮಾಸ್ತರರು (ಹೆ.ಮಾ.) ರಾಜೀನಾಮೆ ನೀಡಿ ಮುಂಬೈಗೆ ಹೋದರು. ನಂತರ ಕಲ್ಮಡಿ ಎಂಬ ಬಿಜಾಪುರದ ನಿವೃತ್ತ ಹೆಡ್ ಮಾಸ್ಟರು ಒಂದು ವರ್ಷ ಹೆಡ್ ಮಾಸ್ಟರಾಗಿ ಸೇವೆ ಸಲ್ಲಿಸಿದರು. ಅವರ ಬಳಿಕ ಶ್ರೀ ಎಚ್.ಬಿ.ರಾಮರಾವ್ ಬಂದರು. ಇವರು ಐದಾರು ವರ್ಷ ಹೆಡ್ ಮಾಸ್ಟರ್ ಆಗಿದ್ದರು. ಉತ್ಸಾಹಿ ಯುವಕರಾದ ಇವರು ಶೈಕ್ಷಣಿಕ ಅಭಿವೃದ್ಧಿಯಲ್ಲಿ ಪಾಲುಗೊಂಡರು. ಇವರ ಕಾಲದಲ್ಲೇ ಕಿಮಾನಿಕರ ಸಹೋದರರು - ಬಾಲಕೃಷ್ಣ ಮತ್ತು ರಾಜಾರಾಮ, ೬೦-೬೧ ಹಾಗೂ ೬೧-೬೨ ರಲ್ಲಿ ಇಡೀ ಮುಂಬೈ ಕರ್ನಾಟಕದ ಲಕ್ಷ್ಯವನ್ನು ಬಿ.ಎಚ್.ಎಸ್.ನತ್ತ ಸೆಳೆದರು. ಇದೇ ಸಮಯದಲ್ಲಿ ಇವರ ಅಕ್ಕ ತಾರಾ ಕಾಮತ ಶಿಕ್ಷಕಿಯಾಗಿ ಗಣನೀಯ ಸೇವೆ ಸಲ್ಲಿಸಿದರು. ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ವಹಿಸುತ್ತಿದ್ದರು. ಪ್ರವಾಸಗಳಲ್ಲಿ ವಿದ್ಯಾರ್ಥಿನಿಯರಿಗೆ ಹಿರಿಯಕ್ಕನಂತೆ ನೋಡಿಕೊಳ್ಳುತ್ತಿದ್ದರು. ಉತ್ತಮ ಶಿಕ್ಷಕಿ. ನನ್ನ ತಮ್ಮ ಈಶ(ವಿಶ್ವನಾಥ)ನದು ನನ್ನ ಹಾಗೇ ಕಾಕಲಿಪಿ. ಅವನ ಹತ್ತಿರ ತಮಾಷೆ ಮಾಡಿದ್ದರಂತೆ:"ನಿನಗೆ ಅಕ್ಷರ ಕಲಿಸಿದವರು ಭಟ್ಟಮಾಸ್ತರರೋ ಹೇಗೆ?". ರಾಮರಾಯರ ಕಾಲ ವಿಜಯದ ಕಾಲವಾಗಿತ್ತು. ಯಾವಾಗ ಎಂದು ನೆನಪಿಲ್ಲ. ನಾನು, ಹಳದಿಪುರ ಮಾಸ್ತರರು, ಎಂ.ಡಿ.ಕಾಮತರು-ಬಾಲಕೃಷ್ಣ, ರಾಜಾರಾಮ, ಪ್ರಕಾಶರ ಅಣ್ಣ, ತಾರಾಮೇಡಂರ ತಮ್ಮ -ಕೇಂಪ್ ಫೈರಿನಲ್ಲಿ "ಶಂಗ್ಯಾ-ಬಾಳ್ಯಾ" ಯಕ್ಷಗಾನ ಆಡಿದ್ದೆವು.ನನ್ನದು ಗಂಗೆ, ಮಾಧವ ಕಾಮತರದು ಶಂಗ್ಯಾ, ಹಳದೀಪುರ ಮಾಸ್ತರದು ಬಾಳ್ಯಾ. ಗಂಗೆ ಪಾತ್ರದಲ್ಲಿ ನನ್ನ ರೂಪ ಅಪರೂಪದ್ದು. ಎಂ.ಡಿ.ಕಾಮತರು ಅಂದೇ ಹೆಣ್ಣು ಮಕ್ಕಳ ಬಗ್ಗೆ ಜಿಗುಪ್ಸೆ ತಾಳಿದವರು ನಿಜ ಜೀವನದಲ್ಲೂ ಮದುವೆ ಆಗಲಿಲ್ಲ! ಗಂಗೆ ರೂಪಕ್ಕೆ ಹೆದರಿಯೋ, ಬೆದರಿಯೋ ಅಂದೇ ಆಜನ್ಮಬ್ರಹ್ಮಚರ್ಯದ ಶಪಥ ಮಾಡಿರಬೇಕು. ಆ ಶಪಥ ಪಾಲಿಸಿದರು.ನಂತರ ನಾನು ಹೆಣ್ಣು ಪಾತ್ರ ವಹಿಸುವುದು ಸಹಸಾ ಅಲ್ಲಗಳೆದೆ. ಅದಕ್ಕೆ ನನ್ನ ಪತ್ನಿಯೇ ಕಾರಣ. ಬ್ರಹ್ಮಚಾರಿಗಳ ಸಂಖ್ಯೆ ಹೆಚ್ಚಾಗಬಹುದೆಂಬ ಭಯ! ಇರಲಿ. ಕೇಂಪ್ ಫೈರ್ ನೂರಕ್ಕೆ ನೂರು ಸಕ್ಸಸ್ ಎಂದು ಗಂಗೆ ರಾಮಣ್ಣ ಹೇಳಿದರು. "ನಾನು ಇನ್ನು ಮುಂದೆ ಹಿರೇಗಂಗೆ ರಾಮಣ್ಣ" ಎಂದು ಘೋಷಿಸಿದರು. ಕೇಂಪ್ ಫೈರ್ ಎಂದ ಕೂಡಲೇ ಶ್ರೀ ರಾಮಶೆಟ್ಟರ ನೆನಪಾಗುತ್ತದೆ. ಮೊದಲು ಬೆಂಕಿ ಹಚ್ಚಿ ಕೊನೆಯ ಕೆಂಡ ಆರುವವರೆಗೂ ಅದರ ಶಿಕ್ಷಾ ರಕ್ಷೆ ಅವರದೇ. ಎರಡನೆ ಕೇಂಪ್ ಫೈರ್ ನಲ್ಲಿ ಎಂ.ಡಿ.ಕಾಮತರು ಭಾಗವಹಿಸಲಿಲ್ಲ. ನಾನು, ಹೆಡ್‌ಮಾಸ್ತರರು "ಪತ್ರಿ ಭೀಮಣ್ಣನ ಶವಯಾತ್ರೆ" ಹೆಣ ಹೊರಲು ತಂದೆ ಅಥವಾ ತಾಯಿ ಇಲ್ಲದ ಹುಡುಗರನ್ನೇ ಆಯಬೇಕಿತ್ತು. ಕಷ್ಟದ ಕೆಲಸ! ಈಗ ‘ಕೇಂಪ್ ಫೈರ್’ ಮಾಡುವುದಿಲ್ಲ. ಆಟದ ಮೈದಾನದಲ್ಲಿ ಮಧ್ಯೆ ಕಟ್ಟಿಗೆ, ಕಾಯಿಸಿಪ್ಪೆ, ಬೆರಣಿ ಹಾಕಿ ಅಷ್ಟು ಹೊತ್ತು ಬಿಟ್ಟು ಜನರೆಲ್ಲಾ ನೆಲದ ಮೇಲೆ ಕೂರಬೇಕು. ಅದಕ್ಕೂ ಹಿಂದೆ ಕೆಲವು ಖುರ್ಚಿ. ರಾಮ ಶೆಟ್ಟರು (ನಮ್ಮ ಶಾಲೆಯಲ್ಲಿ) ಈ ಉರುವಲು ರಾಶಿಗೆ ೨-೩ ಬಾಟಲಿ ಚಿಮಣಿ ಎಣ್ಣೆ ಸುರಿಯುತ್ತಾರೆ. ಕೇಂಪ್ ಫೈರಿನ ಅಧ್ಯಕ್ಷರು, ಅತಿಥಿಗಳು ನಿಗದಿತ ವೇಳೆಯಲ್ಲಿ ದೀಪ ಹಚ್ಚುತ್ತಾರೆ. ಅದು ಬೆಳಗುತ್ತದೆ. ಅದರದೇ ಬೆಳಕಿನಲ್ಲಿ ಮುಂದಿನ ಮನರಂಜನೆಯ ಇಪ್ಪತ್ತು ಇಪ್ಪತ್ತೈದು ಕಾರ್ಯಕ್ರಮಗಳು. ಗ್ಯಾಸ್ ಲೈಟೂ ಇಲ್ಲ, ಹಿಲಾಲೂ ಇಲ್ಲ. ನನ್ನ ಹೆಸರನ್ನು ನಾಟಕದ ಟ್ರೇನಿಂಗಿಗೆ ಶ್ರೀ ರಾಮರಾವ್ (ಹೆ.ಮಾ) ಸೂಚಿಸಿ ಇಲಾಖೆಗೆ ಕಳುಹಿಸಿದರು. ಅದು ಒಪ್ಪಿತವಾಗಿ ಎರಡು ತಿಂಗಳು ತರಬೇತಿಗಾಗಿ ಹೊರಟೆ. ಅಲ್ಲೇ ನನಗೆ ಶ್ರೀ ವಿ.ಜೇ. ನಾಯಕರ ಹೆಚ್ಚಿನ ಪರಿಚಯ ಆಯಿತು. ನಾವಿಬ್ಬರೂ ತರಬೇತಿ ಪಡೆದೆವು. ಗುಬ್ಬಿ ವೀರಣ್ಣನವರ ಕಿರಿ ಮಗ ಶಿವಾನಂದ ನಮಗಿಂತ ಕಿರಿಯವ. ಶ್ರೀನಿವಾಸಮೂರ್ತಿ ,ವೆಂಕಟರಾವ್ ಎಂಬ ಕೈಲಾಸಂರ ಆತ್ಮೀಯ ಗೆಳೆಯರು (ಮುಖ್ಯಸ್ಥರು). ಬೀಳ್ಕೊಡುವ ದಿನ ಎರಡು-ಮೂರು ನಾಟಕಗಳು ಇದ್ದವು. ಅವುಗಳಲ್ಲಿ ಒಂದು ಲ್ಯಾಂಪ್ ಪೋಸ್ಟ್. ಈ ಲ್ಯಾಂಪ್ ಪೋಸ್ಟ್ ಮತ್ತು ಉದ್ದಿನ ಹಪ್ಪಳ ನಾನು ಬಿಟ್ಟರೂ ಅವು ನಮ್ಮನ್ನು ಬಿಡುವುದಿಲ್ಲ! ಉದ್ದಿನ ಹಪ್ಪಳ ನಂತರ ಹೇಳುವೆ. ನಾನು ಚಿಕ್ಕವನಾಗಿದ್ದಾಗ ಪನ್ನಿ ತಾತಿ ‘ನೀನು ದೊಡ್ಡವನಾದ ಮೇಲೆ ಯಾವ ಕೆಲಸ ಮಾಡುವೇ’ ಎಂದಾಗ ಚಿಮಣಿ ರಾಮನ ಕೆಲಸ ಎನ್ನುತ್ತಿದ್ದೆ. ದಿನಾ ಬೆಳಿಗ್ಗೆ ಒಂದು ಚಿಕ್ಕ ಏಣಿ ಹೆಗಲ ಮೇಲೆ ಇಟ್ಟುಕೊಂಡು, ಕೈಯಲ್ಲಿ ಚಿಮಣಿ ಎಣ್ಣೆ ಡಬ್ಬ ಹಿಡಿದು, ಬಟ್ಟೆ ಚೂರು ಇಟ್ಟುಕೊಂಡು ಎಲ್ಲ ದೀಪದ ಕಂಬಗಳ ಹತ್ತಿರ ಹೋಗಿ ದೀಪಕ್ಕೆ ಎಣ್ಣೆ ಹಾಕಿ ಬುರುಡೆಯ ಮಸಿ ತೆಗೆಯುವುದು, ದೀಪ ಹಚ್ಚುವುದು, ಮುಂದಿನ ಕಂಬಕ್ಕೆ ಹೋಗುವುದು. ನಮ್ಮ ಎದುರು ಒಂದು ದೀಪದ ಕಂಬ ಇತ್ತು. ಇದೇ ನನಗೆ ಪ್ರೇರಣೆ! ದಿನವೂ ಕಾಳೆರಾಮನ ಜೊತೆ ಐದಾರು ಕಂಬಗಳ ಕೆಲಸ ಆಗುವವರೆಗೂ ಅವನೊಟ್ಟಿಗಿರುತ್ತಿದ್ದೆ.ಈ ಬಯಕೆ ನಾನು ಹೈಸ್ಕೂಲ್ ಶಿಕ್ಷಕನಾದ ಮೇಲೆ ಈಡೇರಿತು! ಅದೂ ರಾಜ್ಯದ ರಾಜಧಾನಿಯಲ್ಲಿ. ಟಚಿmಠಿ ಠಿosಣ ನಾಟಕದಲ್ಲಿ ನನ್ನದು ದೀಪ ಸ್ವಚ್ಛಗೊಳಿಸಿ ಬೆಳಗುವ ಕೆಲಸ. ಹಪ್ಪಳದ ಬಗ್ಗೆ ಈಗಲೇ ಹೇಳಿ ಮುಗಿಸುವೆ. ನಾವು ಶಾಲೆಗೆ ಹೋಗಿ ಬಂದ ಮೇಲೆ (ಏಳರಿಂದ ಹನ್ನೆರಡು ವರ್ಷದ ವರೆಗೆ) ಬಾಯಿ ಬೇಡಿ ಅಂದರೆ ತಿನ್ನಲು ಹಪ್ಪಳ ಕೊಡುತ್ತಿದ್ದರು.ಭಾನುವಾರವೂ ಬಾಯಿ ಬೇಡಿಗೆ ರಜ ಇಲ್ಲ. ಒಂದು ದಿನ ನನ್ನ ತಪ್ಪೋ, ಅಬ್ಬೆ ತಪ್ಪೋ ಗೊತ್ತಿಲ್ಲ - ನನಗೆ ಹಪ್ಪಳ ಸಿಗಲಿಲ್ಲ. ಸಂಜೆ ಬೇರೆ. ಊಟ,ಓದು ಯಾವುದೂ ತಪ್ಪಲಿಲ್ಲ. ಆದರೆ ರಾತ್ರಿಯಾಗುತ್ತಿದ್ದಂತೆ ಹಪ್ಪಳ ತಪ್ಪಿದ್ದು ನೆನಪಾಯಿತು. ಎಚ್ಚರ ಆದಾಗಲೆಲ್ಲಾ ‘ಅಬೇ ಹಪ್ಪಳ’ ಎನ್ನುತ್ತಿದ್ದೆನಂತೆ. ಪನ್ನಿ ತಾತಿಗೆ ಈ ವಿಷಯ ಹೇಳಿದೆ. ಪುನಃ ‘ಅಬೇ ಹಪ್ಪಳ’. ಅವಳಿಗೆ ಕರಕರೆ ಅನ್ನಿಸಿತು. " ಈ ಸುಟ್ಟ ಮಾಣಿ ಹಪ್ಪಳ ಸುಟ್ಟಕೊಟ್ಟಂತೂ ಮನಿಕತ್ನಿಲ್ಲೆ. ಎರಡು ಹಪ್ಪಳ ಕೊಡು."ಅಬ್ಬೆ ಕೊಟ್ಟಳು.ಕರಾರು ಏನೆಂದರೆ ಈಗ ಕೈಯಲ್ಲಿ ಹಿಡಿದುಕೊಳ್ಳುವುದು.ಬೆಳಿಗ್ಗೆ ಸುಟ್ಟುಕೊಡುವುದು. ಹೂಂ ಎಂದೆ. ರಾತ್ರಿಯಿಡೀ ಕೈಯಲ್ಲಿ ಹಿಡಿದಿಟ್ಟುಕೊಂಡು ಬೆಳಿಗ್ಗೆ ಬಚ್ಚಲೊಲೆಯಲ್ಲಿ ಸುಟ್ಟುಕೊಂಡು ತಿಂದೆನಂತೆ. ನನ್ನ ದೊಡ್ಡಣ್ಣ ಹೇಳಿದ್ದು. "ಅಬೇ, ರಾತ್ರಿ ನೀನು ಹಪ್ಪಳ ಕೊಡದಿದ್ದರೆ ಇಷ್ಟು ಹೊತ್ತಿಗೆ ಅವನಿಗೆ ಎಚ್ಚರ ಅಲ್ಲ! ಎಚ್ಚರ ತಪ್ಪುತ್ತಿತ್ತು!! ಆ ಮೇಲೆ ಬಾರೀನೂ (ಪೂಜೆ) ಮಾಡುತ್ತಿರಲಿಲ್ಲ." ದೇವರ ಬಾರಿ ಅಂದರೆ ಮನೆದೇವರ ಪೂಜೆ. ಉಪನಯನ ಆದವರು ಸರತಿಯಂತೆ ಪೂಜೆ ಮಾಡಿ ದೇವಸ್ಥಾನಕ್ಕೆ ಹೋಗಬೇಕು. ದೇವಸ್ಥಾನಕ್ಕೆ ದಿನವೂ ಪೂಜೆಗೆ ಹೋಗುವುದು ಉಪನಯನವಾದ ಎಲ್ಲರಿಗೂ ಕಡ್ಡಾಯ. ಯಾರದು ಮನೆ ಪೂಜೆ ಬಾರಿಯೋ, ಅವರಿಗೆ ಮೊದಲು ಸ್ನಾನ. ನಮಗೆ ನಾವೇ ಹೆಸರಿಟ್ಟುಕೊಂಡಿದ್ದೆವು: ಹಿರೇಭಟ್ಟರು, ಅಡಿಗಳು, ಉಪಾಧ್ಯರು ಎಂದು. ಇವು ಮೂರೂ ಗೋಕರ್ಣದ ಪ್ರಸಿದ್ಧ ವೈದಿಕ ಮನೆತನಗಳು. ನಮ್ಮ ಮನೆ ಮಟ್ಟಿಗೆ ಹಿರೇ ಭಟ್ಟರು ಎಂದರೆ ನಮ್ಮ ಹಿರಿ ಅಣ್ಣ, ಶಿವರಾಮ. ‘ಅಡಿಗಳು’ - ಅಡಿಗಡಿಗೂ ಸಿಟ್ಟು ಮಾಡುತ್ತಿದ್ದ ಗಜಣ್ಣ. ‘ಉಪಾಧ್ಯರು’- ವಿಘ್ನೇಶ್ವರ ಉಪಾಧ್ಯರ ಗಳಸ್ಯಕಂಠಸ್ಯ ನಾನು. ಪೂಜೆ ತಪ್ಪದೇ ಮಾಡುತ್ತಿದೆವು. ನಂತರ ಗಂಜಿ ಊಟ. (ಹಾಲು, ತುಪ್ಪ, ಉಪ್ಪು. ಒಮ್ಮೊಮ್ಮೆ ಕಾಯಿಚೂರು). ಬಳಿಕ ಶಾಲೆಗೆ. ಲಕ್ಷ್ಮೀನಾರಾಯಣ (ಅಕ್ಕಿ ಮಾಣಿ), ಜಯರಾಮ (ದೊಳ್ಳೊಟ್ಟೆ), ನರಸಿಂಹ (ಅಚ್ಚುಮ) ಕೆಳಗಿನ ಶಾಲೆಗೆ ಒಟ್ಟು ಆರು, ಶಾಲೆಗೆ ಹಾರು! ಅಬ್ಬೆಗೆ ಬೇಜಾರು! ಪನ್ನಿ ತಾತಿ ಬಟ್ಟೆ ಒಟ್ಟು ಮಾಡಿ ಕೋಟಿತೀರ್ಥಕ್ಕೆ ಪಾರು! ಸಂಜೆ ಐದಕ್ಕೆ ಅವಳ ದರ್ಶನ. ನಂತರ ಶಾಲೆಯಿಂದ ಮಕ್ಕಳ ಆಗಮನ. ಅಬ್ಬೆಗೆ ಬಿನ್ನಗಿದ್ದ ಮನೆಗೆ ಜೀವ ಬಂತು ಎಂಬ ಆನಂದ. ‘ಮಾತೃ ಹೃದಯಂ ನ ಪಶ್ಯತಿ’! ಅಬ್ಬೆಯ ಕೊನ್ನುಗುಲೂ ನಪಶ್ಯತಿ! ಹೆಡ್ ಮಾಸ್ಟರ್ ರಾಮರಾವ್ ದಾಂಡೇಲಿಗೆ ಜನತಾ ವಿದ್ಯಾಲಯಕ್ಕೆ ಹೆಡ್ ಮಾಸ್ಟರ್ ಆಗಿ ಹೋದರು. ನಮಗೆ ಹೆಡ್ ಮಾಸ್ಟರ್ ಜಾಗ ಖಾಲಿ. ಧಾರವಾಡದಿಂದ ಎನ್.ಜಿ.ಗುಡಿ ಎಂಬುವರು ಹೆ.ಮಾ.ಆಗಿ ಬಂದರು. ಶ್ರೀ ರಾಮರಾಯರ ಅವಧಿಯಲ್ಲೇ ನಮಗೆ ಎಸ್.ಎಸ್.ಎಲ್.ಸಿ . ಪರೀಕ್ಷಾ ಕೇಂದ್ರ ಮಂಜೂರು ಆಗಿತ್ತು. ಈ ವರ್ಷ ಶ್ರೀ ಗುಡಿ ಚೀಫ್ ಕಂಡಕ್ಟರ್ ಆಗಬೇಕಿತ್ತು. ಆದರೆ ಏಕೋ, ಏನೋ-ನನ್ನನ್ನೇ ಚೀಫ್ ಕಂಡಕ್ಟರ್ ಮಾಡಿದರು. ನಮ್ಮ ಕೇಂದ್ರದಲ್ಲಿ ನಮ್ಮ ಶಾಲೆಯಲ್ಲದೆ ಆನಂದಾಶ್ರಮ ಶಾಲೆ, ಬಂಕಿಕೊಡ್ಲ, ನಿತ್ಯಾನಂದ ಪ್ರೌಢಶಾಲೆ ಸಾಣೆಕಟ್ಟಾ ಮತ್ತು ಸೆಕಂಡರಿ ಹೈಸ್ಕೂಲ್ ಹಿರೇಗುತ್ತಿ - ಒಟ್ಟು ನಾಲ್ಕು ಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆಗೆ ಕೂರಬೇಕಿತ್ತು. ಶ್ರೀ ಹಿರೇಗಂಗೆಯವರ ಸಹಾಯದೊಂದಿಗೆ ಎಸ್.ಎಸ್.ಎಲ್.ಸಿ . ಪರೀಕ್ಷೆ ಯಶಸ್ವಿಯಾಗಿ ಮುಗಿಯಿತು. ಶ್ರೀ ಗುಡಿಯವರು ತಾವು ರಾಜೀನಾಮೆ ಕೊಡುವುದಾಗಿ ಹೇಳಿ ಕೊಟ್ಟರು. ಇದು ಮೂರು ಹೆಡ್ ಮಾಸ್ಟರರ ಸೃಷ್ಟಿಗೆ ಕಾರಣವಾಯಿತು. ಒಬ್ಬರು ಹೆಡ್ ಮಾಸ್ಟರ್ ಬೇಕೆಂದಾಗಲೇ ಸಮಸ್ಯೆ ಇತ್ತು. ಈಗ ಮೂವರು! ಸಮಸ್ಯೆ ಪರಿಹಾರ - ಅರ್ಚಕರು (ಭಟ್ಟರು), ದೇವಾಲಯ (ಗುಡಿ)ಮತ್ತು ಮೂರ್ತಿ (ದೇವರ ಮೂರ್ತಿ) ಬೇರೆ ಬೇರೆಯಾಗಿ ಸೃಷ್ಟಿ ಆದರು. ಮೂರೂರಿಗೆ ದೇವರಗುಡಿ, ಹಿರೇಗುತ್ತಿಗೆ ಅರ್ಚಕ ಭಟ್ಟರು, ಗೋಕರ್ಣಕ್ಕೆ ಮೂರ್ತಿ (ಚಿದಂಬರ ಮೂರ್ತಿ) ಹೀಗೆ ಒಮ್ಮೆಲೇ ಮೂವರು ಹೆ.ಮಾ.ರು ಜೂನ್ ೧,೨,೩ಕ್ಕೆ ಪದಗ್ರಹಣ ಮಾಡಿದರು. (ಪ್ರಾಣಪ್ರತಿಷ್ಠೆ ಆಯಿತು). ಯಾರ, ಯಾವ ಪ್ರತಿಷ್ಠೆಯೂ ಅಡ್ಡಿ ಬರಲಿಲ್ಲ. ಈ ಮೂವರೂ ಮಧುರ ಬಾಂಧವ್ಯದಿಂದ ತಮ್ಮ ಪೂರ್ಣಾವಧಿಯನ್ನು ಅಲ್ಲಲ್ಲೇ ಮುಗಿಸಿದರು. ನನಗೆ ಹಿರೇತನವನ್ನು ಕೊಟ್ಟು ಎತ್ತಿದ ತಾಯಿ ಹಿರೇಗುತ್ತಿ. ನನ್ನನ್ನು ಹೆತ್ತ ತಾಯಿ ಸುಬ್ಬಮ್ಮ. ಹೊತ್ತ ತಾಯಿ ಗೋಕರ್ಣ. ನನ್ನನ್ನು ಸಮಾಜದಲ್ಲಿ ಕೈಹಿಡಿದು ಎತ್ತಿದ ತಾಯಿ ಹಿರೇಗುತ್ತಿ. ದಿಗಂಬರನಾದ ನನ್ನ ಮಾನ ಮುಚ್ಚಿ ಆಡಲು, ಓಡಲು ಓದಲು ಕಲಿಸಿದ ತಾಯಿ ಅಬ್ಬೆ. ನನಗೆ ಅಕ್ಷರಾಭ್ಯಾಸವನ್ನು ಕೊಟ್ಟು ಅಜ್ಞನಾದ ನನ್ನನ್ನು ಸುಜ್ಞನನ್ನಾಗಿ ಮಾಡಿ ನಿನ್ನ ಧೀಶಕ್ತಿಯಿಂದ ನೀನು ಬೆಳೆ ಎಂದು ಆಶೀರ್ವದಿಸಿದವಳು ಗೋಕರ್ಣ ಮಾತೆ. ನನ್ನ ಏಳು ಬೀಳುಗಳನ್ನು ನೋಡಿ ನಲಿಯುತ್ತಾ, ಅಳುತ್ತಾ ನುಗ್ಗಿ ನಡೆ ನುಗ್ಗಿ ನಡೆ ಎಂದು ಬೆನ್ನೆಲುಬಾಗಿ ನಿಂತ ಈ ತಾಯಿಯರು, ನನಗೆ ಮೂರನೇ ಮರು ಹುಟ್ಟು ಕೊಟ್ಟು ಹಿರೇಗುತ್ತಿ ತಾಯಿಯನ್ನು ಕೊಟ್ಟರು. ಈ ಮೂರು ಐದೆಯರು ಐದು ಐದೆಯರಂತೆ ಕಾಪಾಡುತ್ತಿದ್ದಾರೆ. ಯಾರಿಗೂ ಇಲ್ಲದ ನನ್ನ ಭಾಗ್ಯ ಹಿರೇಗುತ್ತಿ ತಾಯಿಯ ಆಸರೆ - ಹೆಡ್ ಮಾಸ್ಟರ್ ಆಗಿಯೇ. ಈಶ್ವರ ದೇವಾಲಯದ ಚಂದ್ರಪೌಳಿಯಲ್ಲಿ ಶಾಲೆ. ವಾರ್ಷಿಕ ತಪಾಸಣೆಗೆ ಬಂದ ಡಿ.ಡಿ.ಪಿ.ಐ. ಕಲಾದಗಿಯವರು ಶಾಲೆಯ ಸ್ಥಿತಿ ನೋಡಿ ಅಸಮಾಧಾನಗೊಂಡರು. ನಮ್ಮ ಗ್ರಹಚಾರಕ್ಕೆ ಮಳೆಯೂ ಬರುತ್ತಿತ್ತು. ಅವರ ಮೂಗಿನ ಮೇಲೆ ಮಳೆ ನೀರ ಹನಿ ಬಿತ್ತು! ಕಲಾದಗಿಯವರು ಕೆಂಡಾಮಂಡಲವಾದರು. ಇನ್‌ಸ್ಪೆಕ್ಷನ್ ಆದ ಮೇಲೆ ಹೆಡ್ ಮಾಸ್ಟರು, ಮ್ಯಾನೇಜರ್, ಹೊಸಬಣ್ಣ ನಾಯಕರು ಬಂಕಿಕೊಡ್ಲ ಹೈಸ್ಕೂಲಿಗೆ ಸಾಯಂಕಾಲ ನಾಲ್ಕಕ್ಕೆ ಬರಲು ಹೇಳಿದರು. ಹೊರಡಲು ಕಾಲೇಳದು. ಆ ವೇಳೆಗೆ ಬಸ್ಸಿಲ್ಲ. ಒಳ ರಸ್ತೆಯಲ್ಲಿ ಹೋದೆವು. ಬಹಳ ಉಪಯುಕ್ತವಾದ ಸಲಹೆ ಕೊಟ್ಟರು. ನನ್ನ ಹತ್ತಿರ ‘ನೀವೂ ಬರುವ ವರ್ಷ ಹೋಗುವವರೋ? ಹಾಗೆ ಮಾಡಬೇಡಿ’ ಎಂದರು. "ಬದುಕಿದೆಯಾ ಬಡಜೀವ" ಎಂದುಕೊಂಡೆ. ಬಂಕಿಕೊಡ್ಲದಿಂದ ಹಿರೇಗುತ್ತಿಗೆ ಹೋಗಲಿಲ್ಲ, ಮನೆಗೆ ಹೋದೆ. ಏನೂ ಆಗದವರಂತೆ ಇದ್ದೆ. ಹೊಸಬಣ್ಣ ಲಿಂಗಣ್ಣ ನಾಯಕರು ಮಹಾತ್ಮ ಗಾಂಧಿ ವಿದ್ಯಾವರ್ಧಕ ಸಂಘದ ಚೆಅರಮನ್‌ರು. ಹಿರೇಗುತ್ತಿಗೆ ಶಿಕ್ಷಣ ಕ್ಷೇತ್ರದ ನಕಾಶೆಯಲ್ಲಿ ಒಂದು ಸ್ಥಾನವನ್ನು, ಹೊಸದೊಂದು ಬಣ್ಣವನ್ನು ಕೊಟ್ಟವರು ಶ್ರೀಯುತರು. ಅಂಬೆಗಾಲು ನಡಿಗೆಯಿಂದ ಸರಿಯಾದ ನಡಿಗೆವರೆಗೆ ಕರೆತಂದವರು ಅವರು. ಊರಿನವರ ಸಹಕಾರದಿಂದ ಸಾರಥ್ಯ ಇವರದೇ. ಪ್ರತಿವರ್ಷ ವಾರ್ಷಿಕ ಪರೀಕ್ಷೆಯಲ್ಲಿ ಸೂಚನೆ ಇರುತ್ತಿತ್ತು: "ಪದವೀಧರ ಹೆಡ್ ಮಾಸ್ಟರ್ ಬೇಕು, ಇಲ್ಲವಾದರೆ ಮನ್ನಣೆ ರದ್ದು ಮಾಡುತ್ತೇವೆ." ಶ್ರೀ ಹೊಸಬಣ್ಣ ನಾಯಕರು ಗೋಕರ್ಣದ ನಮ್ಮ ಮನೆಗೆ ಬಂದು "ನೀವು ಬರಲೇಬೇಕು, ನಿಮಗೆ ಅನುಕೂಲ ಮಾಡಿಕೊಡುತ್ತೇವೆ" ಎಂದು ಒತ್ತಾಯಿಸಿದರು. ಆ ಸಂದರ್ಭದಲ್ಲಿ ನಾನು ಹ್ಞೂಂ ಎಂದೆ. ಅವರಿಗೆ ಹೆ.ಮಾ. ಬೇಕು,ನನಗೂ ಹೆ.ಮಾ. ಬೇಕು. ಏನೇ ಇರಲಿ, ಒಂದು ವರ್ಷ ‘ಲೆಂಟ್’ ಆಗಿ ಹೋದೆ. ಅಲ್ಲೇ ಇಪ್ಪತ್ತೇಳು ವರ್ಷ ಉಳಿದೆ. ಈ ಉಳಿಕೆಯೇ ನನ್ನ ಗಳಿಕೆ. ಈ ವರೆಗೆ ಬೇರೆಲ್ಲೂ ಇಷ್ಟು ಕಾಲ ಉಳಿಯಲಿಲ್ಲ. ಈ ವರ್ಷಗಳೇ ನನ್ನ ಜೀವನದಲ್ಲಿ ಉಳಿದದ್ದು. ಶ್ರೀ ಹೊಸಬಣ್ಣ ನಾಯಕರು ಸುಮ್ಮನೆ ಕೂಡ್ರುವಂತಿಲ್ಲ ಅಂದೇ ಬೆಳಿಗ್ಗೆ ಆಪದ್ಬಾಂಧವ ಶ್ರೀ ಆರ್.ಬಿ.ನಾಯಕ ವಕೀಲರಲ್ಲಿ ಹೋಗಿ ಸಂಕಷ್ಟ ವಿವರಿಸಿದರು. ಅವರು "ನಾಳೆ ಸಂಜೆ ಬರುತ್ತೇನೆ, ಊರಿನ ಪ್ರಮುಖರಿಗೆ ಹೇಳಿ" ಎಂದರು. ಸರಿ, ಬಂದರು, ಸಭೆ ನಡೆಸಿದರು, ಶಾಲೆ ಕಟ್ಟಲು ತೀರ್ಮಾನಿಸಿದರು. (ಅದು ಶ್ರೀ ಆರ್.ಬಿ.ನಾಯಕರ ಕರ್ತೃತ್ವ, ವ್ಯಕ್ತಿತ್ವ) . ಹಣ ಕೂಡಿಸಲು ಆರಂಭ. ಗೋಕರ್ಣ ಅರ್ಬನ್ ಬ್ಯಾಂಕಿನಿಂದ ಸಾಲ ಪಡೆದರು. ಶುಭ ಮುಹೂರ್ತದಲ್ಲಿ ಶ್ರೀ ಬೀರಣ್ಣಜ್ಜನವರಿಂದ (ಶ್ರೀ ಆರ್.ಬಿ.ನಾಯಕರ ತಂದೆ) ಕೋನ ಶಿಲಾ ಸ್ಥಾಪನೆ ಆಯಿತು, ೧೦ ಅಕ್ಟೊಬರ್ ೧೯೬೨. ಮುಂದೆ ಜುಲೈ ೧೯೬೩ಕ್ಕೆ ನೂತನ ಶಾಲೆ ಪ್ರಾರಂಭವಾಯಿತು. ಆ ವರ್ಷ ಇನ್‌ಸ್ಪೆಕ್ಷನ್‌ಗೆ ಶ್ರೀ ಗುರಾಣಿಯವರು ಬಂದಿದ್ದರು. ಅವರು ಹೇಳಿದರು "ಶ್ರೀ ಆರ್.ಬಿ.ನಾಯಕರಿಗೆ ಹೇಳಿರಿ,ನೀವು ಕಟ್ಟಿದ್ದು ಬರೀ ಶಾಲೆಯ ಕಟ್ಟಡ ಅಲ್ಲ, ದೇವಾಲಯ". ನಾನೆಂದುಕೊಂಡೆ, ಸರಿ, ಭಟ್ಟರಿಗೊಂದು ದೇವಾಲಯ ಸಿಕ್ಕಿತು! ಗುರಾಣಿಯವರು ನನಗೆ ಹೆ.ಮಾ. ಆಗಿ ಕೆಲಸ ಮುಂದುವರಿಸಿಕೊಂಡು ಹೋಗಲು ಪ್ರೋತ್ಸಾಹಿಸಿದರು. ಮಾರನೇ ವರ್ಷವೂ ಅವರೇ ತಪಾಸಣೆಗೆ ಬಂದಿದ್ದರು. ಶಾಲೆಯ ನೆಲ, ಜಲ: ರಾಷ್ಟ್ರೀಯ ಹೆದ್ದಾರಿಗೆ ಹೊಂದಿ ಇರುವ ಜಾಗ. ಪ್ರತಿ ಇಂಚಿಗೂ ಮಹತ್ವವಿದೆ. ಇಂಥ ಎರಡು ಎಕರೆ ಜಮೀನನ್ನು ಶ್ರೀಮತಿ ನಾಗಮ್ಮ ನಾರಾಯಣ ನಾಯಕ, ಕೆಂಚನ್ ಶಾಲೆಗೆ ದಾನವಾಗಿ ಕೊಟ್ಟರು. ಈ ದಾನ ಬರೀ ಭೂದಾನ ಅಲ್ಲ, ವಿದ್ಯಾದಾನ. ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ, ಕುಮಟಾ, ಬಂಕಿಕೊಡ್ಲ, ಗೋಕರ್ಣಕ್ಕೆ ಹೋಗಲಾರದವರಿಗೆ ವರದಾನವಾಯಿತು ಇಂದಿಗೆ ಸಹಸ್ರಾರು ಕುಟುಂಬಗಳು ನೆಮ್ಮದಿಯಿಂದ ಇದ್ದರೆ ಅದರ ಶ್ರೇಯಸ್ಸು ಓದಿದ, ಓದುತ್ತಿರುವ ಮಕ್ಕಳ ಮಹಾತಾಯಿ ನಾಗಮ್ಮ ಅವರದು. ಇವರ ಹಿಂದೆ ಶ್ರೀ ನಾರಾಯಣ ನಾಯಕರು, ಮಾವ ಬೀರಜ್ಜಣ್ಣ, ಭಾವ ಶ್ರೀ ಆರ್.ಬಿ.ನಾಯಕರು ಇವರೆಲ್ಲರ ಪ್ರೇರಣೆ.ಜಲ: ಪಕ್ಕದ ಗೋಕರ್ಣದ ರಾಮ ಪೈರ ಜಮೀನನ್ನು ಆಟದ ಮೈದಾನವಾಗಿ ಪಡೆದು ಅಲ್ಲಿ. ಊರಿನ ಪಂಚಾಯತ, ತಾಲೂಕು ಪಂಚಾಯತ ಇವರ ಸಹಾಯ. ಬಲ ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿಗಳು.ಅಂದಿಗೂ, ಇಂದಿಗೂ ಉಕ್ಕಿನ ಬಲ. ಶಾಲಾ ಕಾಂಪೌಂಡ್, ಬಯಲು ನಾಟಕ ಮಂದಿರ, ಇಂದಿನ ಊಟದ ವ್ಯವಸ್ಥೆ... ಒಂದೇ ಎರಡೇ? ಅಭೇದ್ಯವಾದ ಈ ಬಲಗಳೊಂದಿಗೆ ಸಬಲವಾಗಿ ಬೆಳಗಲಿ, ಬೆಳೆಯುತ್ತಿರಲಿ. ನಾ ಕಂಡಂತೆ ನನ್ನ ಮೊದಲ ಚೇಅರಮನ್ ಶ್ರೀ ಹೊಸಬಣ್ಣ ಲಿಂಗಣ್ಣ ನಾಯ್ಕ ಕೊಂಯನ್ ಒಂದು ಪೂರ್ಣ ದರ್ಜೆಯ ಹೈಸ್ಕೂಲನ್ನು ಒಂದು ಗ್ರಾಮಾಂತರ ಪ್ರದೇಶದಲ್ಲಿ ಎಲ್ಲ ಅಡೆ ತಡೆಗಳ ಮಧ್ಯದಲ್ಲೂ ಕಟ್ಟಿ ನಿಲ್ಲಿಸಿದ ಮಹಾನ್ ಶಕ್ತಿಯ ಧೀಮಂತ ವ್ಯಕ್ತಿ. ಬಿಲ್ಡಿಂಗ್ ಇಲ್ಲ, ಸ್ಟಾಫ್ ಇಲ್ಲ, ಸಲಕರಣೆಗಳಿಲ್ಲ, ಇದ್ದದ್ದು ಊರಿಗೆ ಒಂದು ಹೈಸ್ಕೂಲು ಬೇಕು. ಮಕ್ಕಳ ಮಾಧ್ಯಮಿಕ ವಿದ್ಯಾಭ್ಯಾಸದ ದಾಹ ನೀಗಬೇಕು. ನಿಮಗೆ ಕೇಳಲು ಆಶ್ಚರ್ಯ. ನನಗೆ ಬರೆಯಲು ಹೆಮ್ಮೆ. ನಾನು ಭದ್ರಕಾಳಿ ಹೈಸ್ಕೂಲಿನ ಶಿಕ್ಷಕ. ಒಬ್ಬ ಮಹಾನ್ ವ್ಯಕ್ತಿ ನಮ್ಮ ಶಾಲೆಗೆ ಬಂದರು. ಅವರಿಗೆ ಪ್ರಯೋಗಾಲಯದ ಕೆಲವು ಉಪಕರಣ, ಪಾದರಸ, ರಂಜಕ ಬೇಕಿತ್ತು. ಮಾರನೇ ದಿನ ಅವರ ಹೈಸ್ಕೂಲಿನ ವಾರ್ಷಿಕ ತಪಾಸಣೆ: ಮೂಲಭೂತ ಸಲಕರಣೆಗಳೇ ಇಲ್ಲ. ನಮ್ಮ ಶಾಲೆಯ (ಅಂದರೆ ಗೋಕರ್ಣದ) ಅಧಿಕಾರಿಗಳಿಂದ ಒಪ್ಪಿಗೆ ಪಡೆದು ಇವನ್ನು ಒಯ್ದರು. ಒಂದು ಹೈಸ್ಕೂಲಿಗಾಗಿ ಈ ವ್ಯಕ್ತಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಶಾಲೆಗೆ ಕ್ಲರ್ಕ್ ಇಲ್ಲ. ಸಂಘದ ವೈಸ್ ಚೇಅರಮನ್ ನಾರಾಯಣ ನಾಯಕರ ಮಗ ಮಾಧವನನ್ನು ಒಂದು ದಿನದ ಮಟ್ಟಿಗೆ ಕ್ಲರ್ಕ್ ಆಗಿ ತಂದ ಸಾಹಸಿ! ಮುಂದೆ ವಿದ್ಯಾರ್ಥಿಗಳ ಸಂಖ್ಯೆಯನ್ನು ಸರಿತೂಗಿಸಿದ ಶ್ರೀ ಹೊಸಬಣ್ಣ ಊರಿಗೆ ವರದಾನ.ಶಾಲೆಯ ಸಿಬ್ಬಂದಿ ವರ್ಗಕ್ಕಾಗಿ ಪಟ್ಟ ಶ್ರಮ, ಅವರಿಗೆ ಆಗ ಸಂಬಳ ವಿತರಣೆಗಾಗಿ ಹಣ ಹೊಂದಿಸಿದ ರೀತಿ ಅವರಿಗೇ ಗೊತ್ತು. ತಕ್ಕ ಮಟ್ಟಿಗೆ ನನಗೂ ಗೊತ್ತು. ಪ್ರಾಥಮಿಕ ಶಾಲಾ ಶಿಕ್ಷಕಿಯೊಬ್ಬರಿಂದ ಸಾಲ ಪಡೆದದ್ದು, ಗ್ರಾಂಟ್ ಬಂದ ಮೇಲೆ ನಿಬಡ್ಡಿಯಿಂದ ಹಿಂತಿರುಗಿಸಿದ್ದು, ಇವಕ್ಕೆಲ್ಲಾ ಊರಿನವರ ಸಹಾಯ, ಸಹಕಾರ ಪಡೆದದ್ದು ಶ್ರೀಯುತರ ಕರ್ತೃತ್ವ ಶಕ್ತಿಯ ಮಹಾನ್ ದ್ಯೋತಕ. ಮನೆಯ ಜಮೀನಿನ ಸಾಗುವಳಿ (ದೊಡ್ಡ ಹಿಡುವಳಿ), ದೊಡ್ಡ ಸಂಸಾರ, ಮಕ್ಕಳ ವಿದ್ಯಾಭ್ಯಾಸ, ಕಾಲಕಾಲಕ್ಕೆ ನಡೆಯಬೇಕಾದ ಮಂಗಲಕಾರ್ಯಗಳು ಎಲ್ಲ ನಿರ್ವಹಣೆ, ಮೇಲಿಂದ ಶಾಲೆಯ ಸಾರಥ್ಯ, ಹೈಸ್ಕೂಲಿಗೆ ಕಟ್ಟಡ, ಪೂರ್ಣಪ್ರಮಾಣದ ಸಿಬ್ಬಂದಿ. ದೊಡ್ಡ ಪ್ರಮಾಣದ ಗ್ರ್ಯಾಂಟ್ ಬರುವುದನ್ನು ನೋಡಿ ಸಂತಸದಿಂದ ತಮ್ಮ ಚೇಅರಮನ್‌ಶಿಪ್ಪನ್ನು ಶ್ರೀ ಆರ್.ಬಿ. ನಾಯಕರ ಸಲಹೆ ಪಡೆದು ಶ್ರೀ ವೆಂಕಣ್ಣ ಕೃಷ್ಣ ನಾಯಕರಿಗೆ ವಹಿಸಿಕೊಟ್ಟರು. ಸದ್ದಿಲ್ಲದ, ಗದ್ದಲವಿಲ್ಲದ, ನಿಸ್ವಾರ್ಥ ಸೇವೆಗೆ ಮೂರ್ತ ಸ್ವರೂಪರಾದರು, ‘ಸ್ವಯಮೇವ ಮೃಗೇಂದ್ರ’ರೆಂಬ ಮಾತು ಇಂಥವರಿಗೆ ಭೂಷಣ. ಸಿಂಹಕ್ಕೆ ಕಿರೀಟವೇ! ಆನೆಗೆ ಅಲಂಕಾರವೇ! ವೆಂಕಣ್ಣ ಕೃಷ್ಣ ನಾಯಕ ಗಾಂವಕರ: ನನ್ನ ಸೇವಾ ಅವಧಿಯಲ್ಲಿ ಎರಡನೇ ಚೇಅರಮನ್. ಒಬ್ಬ ಪರಿಪೂರ್ಣ ಸಭ್ಯಗೃಹಸ್ಥರು. ಹಸನ್ಮುಖಿ. ಇವರು ಅಧಿಕಾರ ವಹಿಸಿಕೊಳ್ಳುವಾಗ ಕಟ್ಟಡಕ್ಕೆ ಮಾಡಿದ ಸಾಲದ ಹೊರೆ ಇತ್ತು. ಈ ಹೊಣೆ ನೆರೆಹೊರೆಯವರಿತ್ತ ಸಾರ್ಥಕ ಸಹಾಯದಿಂದ ತೀರ್ಮಾನವಾಯ್ತು. ಅಷ್ಟೇ ಅಲ್ಲ ಪುನಃ ಶಾಲೆಯ ಕಟ್ಟಡದ ವಿಸ್ತರಣೆಯ ಕಾರ್ಯ ಕೈಗೊಂಡರು. ಇವರ ಕಾಲದಲ್ಲೇ ನಮ್ಮ ಆಟದ ಮೈದಾನಕ್ಕೆ ಕಾಂಪೌಂಡ್ ಆಯಿತು. ಈ ಕಾರ್ಯಕ್ಕೆ ಶ್ರೀ ಗೋವಿಂದ್ರಾಯ ಸಣ್ಣಪ್ಪ ನಾಯಕ ಹೆಚ್ಚಿನ ಶ್ರಮ ವಹಿಸಿದರು. ಶ್ರೀಯುತರು ನಮ್ಮ ಮ.ಗಾಂ.ವಿ.ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರೂ ಆಗಿದ್ದರು. ನಮ್ಮ ಶಾಲಾ ಆಟದ ಮೈದಾನ ಸುಂದರವಾಗಿ ಮೈತಳೆದು ತಾಲೂಕಾ ಮಟ್ಟದ ಆಟದ ಕೂಟವನ್ನು ಹಿರೇಗುತ್ತಿ ಗ್ರಾಮಾಂತರದಲ್ಲಿ ಯಶಸ್ವಿಯಾಗಿ ನಡೆಸುವಂತಾಯಿತು. ಶ್ರೀ ವೆಂಕಣ್ಣ ನಾಯ್ಕ ಗಾಂವಕರರು ಶಾಲೆಯ ಅಧ್ವೈರ್ಯವನ್ನು ವಹಿಸಿ ಕೈಂಕರ್ಯವನ್ನು ಸಮರ್ಥವಾಗಿ ನಡೆಸಿದರು. ಇದಕ್ಕೆ ಅವರಿತ್ತ ವಿಸ್ತರಣೆಯೇ ಸಾಕ್ಷಿ. ನನ್ನ ಮೂರನೆಯ ಚೆಅರಮನ್ ಶ್ರೀ ಲಕ್ಷ್ಮೀಧರ ಹೊನ್ನಪ್ಪ ಕೆರೆಮನೆ. ಬಹು ಸಣ್ಣ ವಯಸ್ಸಿನಲ್ಲೇ ಬಹು ದೊಡ್ಡ ಕಾರುಭಾರು ವಹಿಸಿಕೊಂಡ ಚೇತನ ಇವರದು. ಶಾಲೆಗೆ ಆರ್ಥಿಕ ಸ್ಥಿರತೆಯನ್ನು ವಹಿಸಲು ಗೋಕರ್ಣದಲ್ಲಿ ಶಿವರಾತ್ರಿಯಲ್ಲಿ ಬೆನಿಫಿಟ್ ಶೋ ವಹಿಸಿಕೊಂಡು ವಿಜಯಿ ಆದರು. ಊರಿನ ಉದ್ಯಮಿ ಆರ್.ಎನ್.ನಾಯಕರನ್ನು ಭೇಟಿಮಾಡಿ ಶಾಲೆಗೆ ಅಗತ್ಯ ಇರುವ ನಾಲ್ಕು ಭದ್ರವಾದ ಕೊಠಡಿಗಳನ್ನು ಕಟ್ಟಿಸಿದರು. ಬಹು ದೊಡ್ಡ ಅವಧಿಯ ಚೆಅರಮನ್‌ರಾಗಿ ಸಮರ್ಥರೆನಿಸಿದರು. ಇವರ ಕಾಲದಲ್ಲಿ ಹೆಚ್ಚಿನ ಶಿಕ್ಷಕರು ನೇಮಕಗೊಂಡರು. ನನ್ನ ಸಹೋದ್ಯೋಗಿಗಳು: ನಾನು ಅಲ್ಲಿಗೆ ಹೋದಾಗ ನನ್ನ ಮೊದಲ ಸಹೋದ್ಯೋಗಿ ಶ್ರೀ ಹೊನ್ನಪ್ಪಯ್ಯ ಲಕ್ಷ್ಮಣ ನಾಯಕ. ನಮ್ಮ ಶಾಲೆ ಪ್ರಾರಂಭವಾದಂದಿನಿಂದ ಶ್ರೀ ಎಚ್.ಎಲ್.ಎನ್, ಶ್ರೀ ಬಿ.ಯು.ಗಾಂವಕರ ರಾಮಲಕ್ಷ್ಮಣರಂತೆ ಶಾಲೆಯ ಏಳ್ಗೆಗಾಗಿ ಶ್ರಮಿಸಿದರು. ಕಾರಣಾಂತರದಿಂದ ಶ್ರೀ ಬಿ.ಯು.ಗಾಂವಕರ ಕಪೋಲಿಗೆ ಹೋದರು. ಶ್ರೀ ಎಚ್.ಎಲ್.ನಾಯಕರು ಮಾತ್ರ ಹನೇಹಳ್ಳಿ-ಹಿರೇಗುತ್ತಿ ತಪ್ಪಿಸಿದವರಲ್ಲ. ಶಿಕ್ಷಣದ ವಿಷಯದಲ್ಲಿ ಶಿಸ್ತಿನ ಸಿಪಾಯಿ. ದೂರದಿಂದ ಬರುವವರಾದರೂ ಎಂದೂ ತಡವಾಗಿ ಬಂದವರಲ್ಲ. ಇಂಥದೇ ವಿಷಯ ಎಂದಿಲ್ಲ, ಯಾವ ವಿಷಯ ಕೊಟ್ಟರೂ ಅಧ್ಯಯನ ಮಾಡಿ ಮಕ್ಕಳಿಗೆ ಬೋಧನೆ ಮಾಡುವ ಕೌಶಲ್ಯ ಇತ್ತು. ಇಂಗ್ಲಿಷ್, ಇತಿಹಾಸ, ಸಮಾಜ ಶಾಸ್ತ್ರ, ದೈಹಿಕ ಶಿಕ್ಷಣ ಇವರ ನೆಚ್ಚಿನ ವಿಷಯಗಳು. ಎರಡನೆಯವರು, ಅದ್ವಿತೀಯರು ಶ್ರೀ ಎಂ.ಎನ್.ಭಂಡಾರಿಯವರು. ತುಂಬಾ ಸಹಕಾರಿ. ಅವರ ವಿಷಯದಲ್ಲಿ ಕುಂದಿಲ್ಲದೇ ಪಾಠ ಮಾಡುತ್ತಿದ್ದರು. ಹೆಗಡೆಯಿಂದ ಬರುವಾಗಲೂ ಸಮಯದ ವಿಷಯದಲ್ಲಿ ಅಚ್ಚುಕಟ್ಟು. ಶಿಕ್ಷಣ ಪದವಿ (ಬಿ.ಎಡ್.) ಪಡೆದು ಮೊದಲು ಅಸಿಸ್ಟೆಂಟ್ ಆದಾಗಿನಿಂದ ಮುಖ್ಯಾಧ್ಯಾಪಕರಾಗುವವರೆಗೂ, ನಂತರವೂ ಶಾಲೆಯ ಏಳ್ಗೆಗಾಗಿ ದುಡಿದವರು. ಕೆಲವೊಮ್ಮೆ ನನಗೆ ಉಪಯುಕ್ತ ಸಲಹೆ ಕೊಡುತ್ತಿದ್ದರು. ಇಬ್ಬರು ವಿಜ್ಞಾನದ ಶಿಕ್ಷಕರು: ಶ್ರೀ ಎಸ್.ಎಸ್.ಕೂರ್ಸೆ ಮತ್ತು ಶ್ರೀ ಎಸ್.ಡಿ.ನಾಯಕ. ಕೆಲಕಾಲ ಸೇವೆ ಸಲ್ಲಿಸಿದರು. ಶ್ರೀ ಜಿ.ಎನ್. ಕೂರ್ಸೆ ಹಿಂದಿ ಪಾರ್ಟ್ ಟೈಂ ಶಿಕ್ಷಕರು.ಆಫೀಸ್ ಸಹಾಯಕ ನಾರಾಯಣ ನಾಗಪ್ಪ ಗುನಗ. ಹೇಳಿದ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದ. ನಂತರ ಬಂದವರು ಶ್ರೀ ವಾಯ್.ಏ.ಶೇಖ(ಕುಮಟಾ)ದಿಂದ ಹಿಂದಿ ಮತ್ತು ಸಮಾಜ ವಿಜ್ಞಾನ ಪಾಠ ಮಾಡುತ್ತಿದ್ದರು. ಶ್ರೀ ಎಸ್.ಡಿ.ನಾಯಕರು ಕಾರವಾರದವರು, ಮನೆ ಮಾತು ಕೊಂಕಣಿ. ಕನ್ನಡ ಮಾತಾಡಲು ಪ್ರಯಾಸಪಡುತ್ತಿದ್ದರು. ಅವರದೊಂದು ಹಾಸ್ಯ ಪ್ರಸಂಗ ಹೇಳುತ್ತೇನೆ: ನನ್ನ ಮಗನಿಗೆ ಶಿವರಾತ್ರಿ ದಿನ ಭೇದಿ ಆಗಿತ್ತು. ಜವಾನ ನಾರಾಯಣ ಶಾಲೆಯಲ್ಲಿ ಹೇಳಿದ: "ಹೆಡ್ ಮಾಸ್ಟರು ಇಂದು ಶಾಲೆಗೆ ಬರುವುದಿಲ್ಲ. ಅವರ ಮಗನಿಗೆ ಹೇಲಾಟ". ಕೇಳಿದ ಶ್ರೀ ಎಸ್.ಡಿ. ನಾಯಕರು ಕೂರ್ಸೆಯವರ ಬಳಿ ಹೇಳಿದರಂತೆ: "ಅರೆ ಕೂರ್ಸೆ ಮಾಸ್ತರರೇ, ಹೆಡ್ ಮಾಸ್ತರರು ಬಹಳ ಕಂಜೂಸ್ ಅಂತ ಕಾಣ್ತದೆ". " ಏಕೆ ಏನಾಯ್ತು?" "ಅಲ್ಲ, ಅವರು ಮಗನಿಗೆ ಶಿವರಾತ್ರಿಯಲ್ಲಿ ಆಟ ತೆಗೆಸಿಕೊಡಲಿಲ್ಲ ಅಂತ ಕಾಣ್ತದೆ. ಅವ ....ನಲ್ಲಿ ಆಟ ಆಡ್ತಾನಂತೆ. ನಾರಾಯಣ ಹೇಳಿದ." ಕೂರ್ಸೆ ಮಾಸ್ತರು ನಕ್ಕು ಆಮೇಲೆ ಎಸ್.ಡಿ.ನಾಯಕರಿಗೆ ಶಬ್ದದ ಅರ್ಥ ತಿಳಿಸಿ ಹೇಳಿದರು. ಸದ್ಯ, ನಾನು ಕಂಜೂಸ್ ಅಲ್ಲ ಎಂದು ತೀರ್ಮಾನವಾಯಿತು! ಮೊದಲವರ್ಷದ ಗ್ಯಾದರಿಂಗ್‌ಗೆ ಶ್ರೀ ಗೌರೀಶ ಕಾಯ್ಕಿಣಿಯವರು ಮುಖ್ಯ ಅತಿಥಿಗಳಾಗಿ ಬಂದರು. ಶ್ರೀ ಆರ್.ಬಿ.ನಾಯಕರು ಅಧ್ಯಕ್ಷತೆ ವಹಿಸಿದ್ದರು.ರಾತ್ರಿ ಯಕ್ಷಗಾನ- ವಿದ್ಯಾರ್ಥಿಗಳಿಂದ. "ಲವಕುಶರ ಕಾಳಗ". ಗೌರೀಶ ಮಾಸ್ತರು ಯಕ್ಷಗಾನ ನೋಡಿದರು. ವಾಲ್ಮೀಕಿ ರಾಮಾಯಣ ಬರೆಯುತ್ತಿದ್ದಾನೆ.ಶಾಹಿ,ದೌತಿ ಉಂಟು. ಕೈಯಲ್ಲಿ ಲೆಕ್ಕಣಿಕೆ ಉಂಟು. ಒಮ್ಮೆಯೂ ದೌತಿಗೆ ಲೇಖನಿ ಅದ್ದಲಿಲ್ಲ. "ಭಟ್ಟ ಮಾಸ್ತರೇ, ವಾಲ್ಮೀಕಿ ಲೇಖನಿ ಅದ್ಭುತ." ಎಂದರು. "ಯಾಕೆ?" ಎಂದೆ."ರಾಮಾಯಣ ಮುಗಿದರೂ ಲೇಖನಿ ಶಾಹಿ ಖರ್ಚಾಗಲಿಲ್ಲ, ನೋಡಿ" ಎಂದರು. ನಗೆಯೋ ನಗೆ. ಗ್ಯಾದರಿಂಗ್‌ನಲ್ಲಿ ಪ್ರದರ್ಶನಗೊಂಡ ಮಕ್ಕಳ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಕಾಯ್ಕಿಣಿಯವರು ಮೆಚ್ಚಿಕೊಂಡರು. ‘ಹಳ್ಳಿ ಊರಲ್ಲಿ ಸಂಗೀತ ಸಾಮಗ್ರಿ ಒದಗಿಸಿ ಹಾಡಿದ್ದು ಶ್ಲಾಘನೀಯ.’ ಎಂದರು. ತಬಲಾ ಗೋಕರ್ಣದ ರಾಮಶೆಟ್ಟರು, ಗಿರಿಯನ್ ಗಂಪಿ ಹಾರ್ಮೋನಿಯಂಗೆ. ಹೈಸ್ಕೂಲಿನ ಹಳೆಯ ವಿದ್ಯಾರ್ಥಿಗಳ ಸಹಕಾರ ನೆನೆಯಲೇ ಬೇಕು. ರಂಗ ಸಜ್ಜಿಕೆ ಸಿದ್ಧಮಾಡುವುದರಿಂದ ತೊಡಗಿ ಪ್ರದರ್ಶನ, ಪ್ರೇಕ್ಷಕರ ಸಹಕಾರ ಪ್ರತಿಯೊಂದೂ ಉನ್ನತ ಮಟ್ಟದ್ದಾಗಿತ್ತು. ರಾಜ್ಯ ಮಟ್ಟದ ಸಾಧನೆ: ಥಿಯಸಾಫಿಕಲ್ ಸೊಸೈಟಿ,ಬೆಂಗಳೂರು ಇವರು ರಾಜ್ಯಮಟ್ಟದಲ್ಲಿ ಹೈಸ್ಕೂಲು ವಿದ್ಯರ್ಥಿಗಳಿಗೆ ನಿಬಂಧ ಸ್ಪರ್ಧೆ ಏರ್ಪಡಿಸಿದ್ದರು. ನಮ್ಮ ವಿದ್ಯಾರ್ಥಿ ಚಿಂತಾಮಣಿ ಕೊಡ್ಲೆಕೆರೆ (ಹತ್ತನೇ ತರಗತಿಯಲ್ಲಿ ಓದುತ್ತಿದ್ದ) ಬಂಗಾರದ ಪದಕ ಸಮೇತ ಪ್ರಥಮ ಸ್ಥಾನ ಗಳಿಸಿದ್ದು ಹೆಮ್ಮೆಯ ವಿಷಯ. ಆ ವರ್ಷ ಗ್ಯಾದರಿಂಗ್‌ನ ಮುಖ್ಯ ಅತಿಥಿ, ಮಾನ್ಯ ಮಂತ್ರಿ ಶ್ರೀ ಎಸ್.ಎಂ.ಯಾಹ್ಯಾ. ಅವರು ಬಂಗಾರದ ಪದಕ ವಿತರಣೆ ಮಾಡಿದ್ದು ನಮಗೆಲ್ಲಾ ಸಂತೋಷದ ವಿಷಯ. ಕಿರಿಯನ ಸಾಧನೆ ಎಂದು ಮಂತ್ರಿಗಳು ಶ್ಲಾಘಿಸಿದರು. ಶಾಲೆಗೆ ಇಂಥ ಸಾಧನೆ ಬರುತ್ತಿರಲಿ ಎಂದು ಮೆಚ್ಚುಗೆಯ ಮಾತನಾಡಿದರು. ಹೊನ್ನಾವರದ ಶಾಸಕ ಎಸ್.ವಿ.ನಾಯಕರೂ,ವಕೀಲ ಜಾಲಿಸತ್ಗಿಯವರೂ ಬಂದಿದ್ದರು. ಅವರು ಒಮ್ಮೆ ನಮ್ಮ ಶಾಲೆಯ ಬಂಗಾರದ ಪದಕದ ಸಾಧನೆಯನ್ನು ಮೆಚ್ಚಿ ಮಾತನಾಡಿದ್ದುಂಟು. ಮುಷ್ಠಿ ಫಂಡು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಂತಸ್ತರ ನೆರವಿಗಾಗಿ ಪ್ರತಿ ಮನೆಯಲ್ಲಿ ಬಡವ-ಬಲ್ಲಿದ ಭೇದವಿಲ್ಲದೆ ಪ್ರತಿದಿನ ಅಡುಗೆಗೆಂದು ಪಾತ್ರೆಗೆ ಹಾಕಿದ ಅಕ್ಕಿಯಲ್ಲಿ ಒಂದು ಮುಷ್ಠಿ ಬೇರೆ ತೆಗೆದಿಟ್ಟು ಉಳಿದುದರ ಅನ್ನ ಮಾಡಿ ಉಣ್ಣುತ್ತಿದ್ದರು. ನಮ್ಮ ಹಿರೇಗುತ್ತಿಯಲ್ಲಿ ಆ ಅಕ್ಕಿಯನ್ನು ಮಾರಿ ಬಂದ ಹಣವನ್ನು ಸಂಗ್ರಹಿಸಿ ಮುಷ್ಠಿ ಫಂಡಿನ ಹೆಸರಲ್ಲಿ ಶೇಖರಿಸಿ ಇಡುತ್ತಿದ್ದರು. ನಂತರ ಹಣದ ಅವಶ್ಯಕತೆ ಇಲ್ಲದಾಗಲೂ ಈ ಕಾಯಕ ನಡೆದೇ ಇತ್ತು. ಇದು ಹತ್ತು ಹನ್ನೆರಡು ಸಾವಿರ ರೂಪಾಯಿ ಆಗಿತ್ತು. ಈ ಹಣವನ್ನು ಹೈಸ್ಕೂಲಿನ ಅಗತ್ಯಕ್ಕಾಗಿ ಸಾಲರೂಪದಲ್ಲಿ ಬಳಸಿಕೊಳ್ಳುತ್ತಿದ್ದರು. ಹೀಗಾಗಿ ಒಂದು ರೀತಿಯಲ್ಲಿ ಮುಷ್ಠಿ ಫಂಡಿನ ಹಣವೇ ಮೂಲಧನ ಎಂದರೆ ತಪ್ಪಲ್ಲ. ಹೀಗೆ ನಮ್ಮ ಹೈಸ್ಕೂಲಿನ ಚಾಲಕ ಸಂಸ್ಥೆ ಮಹಾತ್ಮಾ ಗಾಂಧಿ ವಿದ್ಯಾವರ್ಧಕ ಸಂಘ ಎಂದಾಗಿರಬೇಕು. ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೂ, ನಮ್ಮ ಶಾಲೆಗೂ ನಿಕಟ ಸಂಬಂಧ ಉಂಟು. ಶಾಲೆಯ ಬೆಳ್ಳಿ ಹಬ್ಬವನ್ನು ಯೋಗ್ಯ ರೀತಿಯಲ್ಲಿ ಆಚರಿಸಬೇಕು ಎಂದು ನಮ್ಮೆಲ್ಲರಿಗೂ ಅನ್ನಿಸಿತು. ಆಗಲೇ ಆರ್.ಎನ್.ನಾಯಕರು ಸಂಘದ ಅಧ್ಯಕ್ಷರಾಗಿದ್ದರು. ಹುಬ್ಬಳ್ಳಿಯ ಪಾಂಡುರಂಗ ರಂಗಪ್ಪ ಕಾಮತ (ಕಾಮತ್ ಹೋಟಲುಗಳ ಸಮೂಹ) ಬೆಳ್ಳಿ ಹಬ್ಬದ ಅಧ್ಯಕ್ಷರಾಗಿ, ಅಂದಿನ ಮುಖ್ಯಮಂತ್ರಿ ಶ್ರೀ ರಾಮಕೃಷ್ಣ ಹೆಗಡೆ ಮುಖ್ಯ ಅತಿಥಿಗಳಾಗಿ ಸಭಾ ಕಾರ್ಯಕ್ರಮ ನಡೆಯಿತು. ನನಗೆ ತಿಳಿದಂತೆ ಇಷ್ಟು ವೈಭವದಿಂದ ಬೆಳ್ಳಿ ಹಬ್ಬ ಆಚರಿಸಿಕೊಂಡ ಶಾಲೆ ಎಂಬ ಶ್ರೇಯಸ್ಸು ನಮ್ಮದೇ. ಈ ಶ್ರೇಯಸ್ಸು ಅಂದಿನ ಚೆಅರಮನ್ ಶ್ರೀ ಎಲ್.ಎಚ್. ಕೆರೆಮನೆ ಮತ್ತು ಉದ್ಯಮಿ, ನಮ್ಮ ಹೈಸ್ಕೂಲ್‌ನ ಚಾಲಕ ಸಂಸ್ಥೆ ಅಧ್ಯಕ್ಷ ಶ್ರೀ ರಾಮಚಂದ್ರ ನಾರಾಯಣ ನಾಯಕ ಅವರದು. ಮಹಾತ್ಮಾ ಗಾಂಧಿ ಹೆಸರಿನ ಸಂಸ್ಥೆ, ಹಿರೇಗುತ್ತಿಯ ಸಮೀಪದ ಬಳಲೆಯಲ್ಲಿರುವ ಗಾಂಧಿ ಆಶ್ರಮ. ಇದು ಗಡಿನಾಡ ಆಶ್ರಮವೂ ಹೌದು. ಅಂಕೋಲ, ಕುಮಟಾ ತಾಲೂಕಿನ ಗಡಿಯಲ್ಲಿದೆ. ಗಾಂಧಿ ಆಶ್ರಮ ಎಂದು ನಾನು ಹೇಳಿದ್ದು ಗಾಂಧಿಯವರ ನಿಕಟವರ್ತಿಗಳಾಗಿದ್ದ, ಗಾಂಧಿ ಸದೃಶ ವ್ಯಕ್ತಿತ್ವ ಹೊಂದಿದ್ದ ಶ್ರೀ ತಿ.ಶ್ರೀ. ನಾಯಕರ ಆಶ್ರಮದ ಕುರಿತು. ಆಶ್ರಮದಲ್ಲಿ ನೂತ ನೂಲು, ಗುಡಿ ಕೈಗಾರಿಕೆಯ ಸುಲಭ ಸಂಡಾಸದ ಸಾಮಗ್ರಿ ಸಿಗುತ್ತಿತ್ತು. ಒಂದರ ಫಲಾನುಭವಿ ನಾನು. ಇನ್ನೊಂದಕ್ಕೆ ಶ್ರಮಪಟ್ಟು ನಿರಾಶನಾದೆ. ಸುಲಭ ಸಂಡಾಸಿನ ಸಾಮಗ್ರಿಯನ್ನು ನನ್ನ ಬಿಡಾರಕ್ಕೆ ಕಳಿಸಿಕೊಟ್ಟರು. ಆದರೆ ಒಂದು ಲಡಿ ನೂಲನ್ನು ಕೇಳಿದಾಗ ಧ್ಯೇಯವಾದಿ ತಿ.ಶ್ರೀ. ನಾಯಕರು ನಿಷ್ಠುರವಾಗಿ "ಕೊಡುವುದಿಲ್ಲ" ಎಂದರು. ಖಾದಿ ನೂಲು ನಮ್ಮ ಶಾಲೆಯಿಂದ ಶ್ರೀ ರಾಮಕೃಷ್ಣ ಹೆಗಡೆಯವರಿಗೆ ಮಾಲಾರ್ಪಣೆ ಮಾಡಲು ಬೇಕಾಗಿತ್ತು. "ಗಾಂಧಿಯವರು ಪಾನ ನಿರೋಧ ಪ್ರತಿಪಾದಿಸಿದ್ದರು. ಹೆಗಡೆ ಅದನ್ನು ಪುನಃ ಸಕ್ರಮ ಮಾಡಲು ಹೊರಟಿದ್ದಾರೆ. ಅಂಥವರಿಗೆ ನನ್ನಲ್ಲಿ ಮಾನ್ಯತೆ ಇಲ್ಲ. ಬಡಬಗ್ಗರ ರಕ್ತ ಹೀರುವ ಮದ್ಯಪಾನದ ಹಣದಿಂದ ರಾಜ್ಯ ಉದ್ಧಾರವಾಗುತ್ತದೆಯೇ? ಇದಕ್ಕಾಗಿಯೇ ನಾನು ಈ ಆಶ್ರಮದಲ್ಲಿ ಉಪವಾಸ ಮಾಡಲಿಲ್ಲವೇ? ದೀನ ದಲಿತರನ್ನು ಶೋಷಿಸಿದ ಪಾಪದ ಹಣದಿಂದ ಒಳ್ಳೆ ಕೆಲಸ ಆಗಲಾರದು. ಒಳ್ಳೆ ಕೆಲಸಕ್ಕೆ ಒಳ್ಳೆ ಮೂಲ ಇರಬೇಕು" ನಾಯಕರ ಧ್ಯೇಯ ನಿಷ್ಠೆಗೆ ಜೈ ಎಂದು ಬಂದೆ. ಬಳಲೆಯ ಈ ಬಳಲದ ಜೀವ ನೂಲುವ ಕಾಯಕವನ್ನು, ಏಕಾದಶ ವ್ರತವನ್ನು ಆಚರಿಸುತ್ತಾ ಮುಕ್ತರಾದರು. ಈ ಆಶ್ರಮದ ಒಂದು ಭಾಗವನ್ನು ನಮ್ಮ ಶಾಲೆಗೆ ಹಾಸ್ಟೆಲ್ ನಡೆಸಲು ಭಕ್ಷೀಸು ಪಡೆದೆವು. ಕೆಲವು ವರ್ಷ ನಡೆಸಿಯೂ ನಡೆಸಿದೆವು. ತಿ.ಶ್ರೀ. ನಾಯಕರ ನೆನಪಿನ ಜೊತೆ ಬಾಲ್ಯದ ಪ್ರಭಾತ ಫೇರಿ ದಿವ್ಯ ಮಂತ್ರಗಳೂ ಧ್ವನಿಸುತ್ತಿವೆ: "ಈಶ್ವರ ಅಲ್ಲಾ ತೇರೋ ನಾಮ್ ಸಬಕೋ ಸನ್ಮತಿ ದೇ ಭಗವಾನ್" "ರಾಮ ರಹೀಮ, ಕೃಷ್ಣ ಕರೀಮ" "ತಿರುವುತ್ತ ರಾಟಿಯನ್ನು, ತರುವ ಸ್ವರಾಜ್ಯವನ್ನು" "ತಳವಾರ ಹಮಾರಾ ಖಾದಿ ಹೈ" "ಕರೇಂಗೆ ಯಾ ಮರೇಂಗೆ" "ಇನ್‌ಕ್ವಿಲಾಬ್ ಜಿಂದಾಬಾದ್" "ಭೋಲೋ ಭಾರತ್ ಮಾತಾಕಿ ಜೈ" "ಸ್ವತಂತ್ರ ಹಿಂದೂಸ್ತಾನಕೀ ಜೈ" "ವಂದೇ ಮಾತರಂ ,ವಂದೇ ಮಾತರಂ" ಮಧ್ಯಾಹ್ನದ ಊಟ: ನಮ್ಮ ಶಾಲೆಗೆ ಮಧ್ಯಾಹ್ನದ ಊಟದ ಅವಶ್ಯಕತೆ ಪ್ರಥಮ ಆದ್ಯತೆಯದು. ಐದಾರು ಮೈಲಿ ನಡೆದು ಬರುವ, ಮೊಗಟಾ, ಮೊರಬ, ಹಿತ್ತಲಮಕ್ಕಿ, ಬೆಟ್ಕುಳಿ ಕಡೆಯ ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಕಷ್ಟದ್ದಾಗಿತ್ತು. ಈ ಸಂದರ್ಭದಲ್ಲಿ ನಮ್ಮ ಮುಷ್ಟಿ ಫಂಡಿನ ವರದಾನ ಸಹಾಯಕ್ಕೆ ಬಂತು. ಪುನಃ ಊರ ದಾನಿಗಳ ನೆರವು. ನಮ್ಮ ಸಹಾಯಕರಲ್ಲೇ ಒಬ್ಬರು ಗಂಜಿ,ಚಟ್ನಿ ತಯಾರಿಸುತ್ತಿದ್ದರು.ದೂರದ ವಿದ್ಯಾರ್ಥಿಗಳು ಈ ಅಮೃತ ಪ್ರಸಾದವನ್ನು ಸ್ವೀಕರಿಸಿ ಹಸಿವು ನೀಗಿಸಿಕೊಂಡು ಜ್ಞಾನದ ಹಸಿವು ತುಂಬಿಕೊಳ್ಳಲು ಅನುಕೂಲವಾಯಿತು. ಈ ವ್ಯವಸ್ಥೆ ಸರಕಾರದಿಂದ ಚಪಾತಿ, ಹಾಲು ಮಂಜೂರು ಆಗುವವರೆಗೂ ನಡೆಯಿತು. ನಂತರ ಈ ವ್ಯವಸ್ಥೆಯನ್ನು ಸರಕಾರ ಕೈಬಿಟ್ಟಿತು. ನಮ್ಮ ವಿದ್ಯಾರ್ಥಿಗಳಿಗೆ ಪುನಃ ಸಂಕಟ. ಬಳಲೆ ಆಶ್ರಮದಲ್ಲಿ ಹಾಸ್ಟೆಲ್ ತರಹದ ವ್ಯವಸ್ಥೆ ನಮ್ಮ ಚಾಲಕ ಸಂಸ್ಥೆಯ ವತಿಯಿಂದ ಆಯಿತು. ಈ ಊಟದ ವ್ಯವಸ್ಥೆಯನ್ನು ಡಾ.ಎನ್.ವಿ.ನಾಯಕ- ಹಿರೇಗುತ್ತಿಯ ಸಮೀಪದ ಕೇಕಣಿಯ ಪ್ರಸಿದ್ಧ ಯಕ್ಷಗಾನ ವೇಷಧಾರಿ ವೆಂಕಟರಮಣ ನಾಯಕರ ಸುಪುತ್ರರು-ವಹಿಸಿಕೊಂಡರು. ಇವರ ಅಕ್ಕಂದಿರು, ತಮ್ಮಂದಿರು- ಇವರೂ ಸಹ - ನಮ್ಮ ಶಾಲೆಯ ಹಿಂದಿನ ವಿದ್ಯಾರ್ಥಿಗಳು. ಈ ಯೋಜನೆ ಆರಂಭವಾಗುವ ಹೊತ್ತಿಗೆ ನಾನು ನಿವೃತ್ತನಾಗಿದ್ದರೂ ಹಿರೇಗುತ್ತಿಗೆ ಬಂದು ಕಾರ್ಯಕ್ರಮದಲ್ಲಿ ಪಾಲುಗೊಂಡಿದ್ದೆ. ಇಂಥ ದಾನಿ ವಿದ್ಯಾರ್ಥಿಗಳನ್ನು ಪಡೆದ ನಮ್ಮ ಶಾಲೆ, ನಾವು ಶಿಕ್ಷಕರು ಎಲ್ಲರೂ ಧನ್ಯರು. ಈ ಸಮಾರಂಭದ ಧನ್ಯತೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಶ್ರೀ ಗಂಗಾಧರ ಹಿರೇಗುತ್ತಿ, ಶ್ರಿ ಹೊನ್ನಪ್ಪ ನಾಯಕ ಇನ್ನೂ ಅನೇಕರು ಭಗವಹಿಸಿದ್ದರು. ಡಾ. ನಾರಾಯಣರನ್ನು ಕುರಿತು ನಾನು ಒಂದು ಶ್ಲೋಕವನ್ನು ಅನ್ವಯಿಸಿ ಹೇಳಿದ್ದೆ. ವೈದ್ಯರೆಲ್ಲಾ ದೇಹಕ್ಕೆ ಚಿಕಿತ್ಸೆ ನೀಡಿ ಆರೋಗ್ಯ ಭಾಗ್ಯ ನೀಡುತ್ತಾರೆ. ನಮ್ಮ ಡಾ.ನಾರಾಯಣ ವಿದ್ಯಾರ್ಥಿಗಳ ಮನಸ್ಸಿಗೇ ಚಿಕಿತ್ಸೆ ನೀಡಿ" ಧಿಯೋಯೋನಃ ಪ್ರಚೋದಯಾತ್"-ಬುದ್ಧಿ ಭಾಗ್ಯ ವೃದ್ಧಿಸುವಂತೆ ಮಾಡಿದ್ದಾರೆ. "ವೈದ್ಯೋ ನಾರಾಯಣೋ ಹರಿಃ".ನನ್ನ "ವೈದ್ಯೋ..." ಉಲ್ಲೇಖವನ್ನು ಲಕ್ಷ್ಯ ಕೊಟ್ಟು ಕೇಳಿಸಿಕೊಂಡ ಗಂಗಾಧರ ಹಿರೇಗುತ್ತಿ ಆ ಕುರಿತು ಫೋನ್ ಮಾಡಿಯೇ ವಿವರ ಪಡೆದುಕೊಂಡರು. ಹದಿನೈದು ಇಪ್ಪತ್ತು ವರ್ಷಗಳ ಬಳಿಕವೂ ನನ್ನಲ್ಲಿ ಗುರುತ್ವವನ್ನು ಕಂಡ ಗಂಗಾಧರ, ಇನ್ನಿತರ ಕೆಲ ವಿದ್ಯಾರ್ಥಿಗಳನ್ನು ನೆನೆದು ‘ಧನ್ಯೋಸ್ಮಿ’ ಎನಿಸಿತು. ಹಿರೇಗುತ್ತಿಯಿಂದ ಬರುವಾಗ ನನ್ನ ಹೃದಯದಲ್ಲಿ ಡಾ.ಪಿ.ಎಸ್.ಭಟ್ಟ, ಈಗ ಮುಂಬಯಿಯಲ್ಲಿ ಐಐಟಿಯಲ್ಲಿ ಪ್ರಾಧ್ಯಾಪಕರು, ತೋಟಗುಳಿಯಿಂದ ಹೈಸ್ಕೂಲಿಗೆ ಬರುತ್ತಿದ್ದರು, ಶ್ರೀ ಬೀರಣ್ಣ ನಾಯಕ, ಮೊಗಟಾ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನ ಗಳಿಸಿ ಯಲ್ಲಾಪುರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವವರು, ಡಾ.ವಿನಾಯಕ ಕಾಮತ ಅಮೇರಿಕಾದಲ್ಲಿ ಡಾಕ್ಟರ್ ಆಫ್ ಸೈನ್ಸ್ ಪದವಿ ಪಡೆದ ಮೇಧಾವಿ... ಇವರೆಲ್ಲಾ ನೆನಪಿಗೆ ಬಂದು ಮಧುರ ಭಾವ ಹುಟ್ಟಿಸಿದರು. ಡಾ.ವಿ.ಆರ್.ನಾಯಕ ಕುಮಟಾದಲ್ಲಿ ಆಸ್ಪತ್ರೆ ತೆರೆದು ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಿದ್ದಾರೆ. ಆರಕ್ಷಕ ಖಾತೆಯಲ್ಲಿ ದಕ್ಷತೆಗೆ ತನ್ನದೇ ಆದ ಛಾಪು ಮೂಡಿಸಿ (ಅಲ್ಪಾವಧಿಯಲ್ಲೇ) ಈಗ ಸಿ.ಪಿ.ಐ. ಆಗಿರುವ ಎನ್.ಟಿ.ಪ್ರಮೋದರಾವ್ ನಮ್ಮ ಊರಿನ, ಶಾಲೆಯ ಹೆಮ್ಮೆ. ನಮ್ಮ ಶಾಲೆಗೆ ಪೂರ್ಣ ಪ್ರಮಾಣದ ಕಟ್ಟಡ ಪೂರ್ತಿಗೊಳಿಸಲು ಅಣ್ಣನೊಂದಿಗೆ ಕೈ ಜೋಡಿಸಿರುವ ವೆಂಕಟೇಶ, ಮಾಧವ, ರಮಾನಂದ, ಚಂದ್ರಕಾಂತ, ವಿನಾಯಕ ಈ ಅಣ್ಣ ತಮ್ಮಂದಿರಲ್ಲಿ, ಅಕ್ಕ ತಂಗಿಯರಲ್ಲಿ - ಎಲ್ಲರೂ ನನ್ನ ಹೆಮ್ಮೆಯ, ಬಹಳ ವರ್ಷ ಹೈಸ್ಕೂಲ್ ಸಮಿತಿಯ ವೈಸ್ ಚೇಅರಮನ್ ಆದ ಶೇಷಗಿರಿ ನಾರಾಯಣ ನಾಯಕರ ಕುಟುಂಬದವರು- ನಮ್ಮಶಾಲೆಗೆ ಸಹಾಯ ಬೇಕಾದಾಗ ನಿಸ್ಸಂಕೋಚವಾಗಿ ಕೇಳಿದ, ಪಡೆದ ನಾವೇ ಧನ್ಯರು. ಇವರಲ್ಲದೇ ನಾನು ಹಿರೇಗುತ್ತಿಗೆ ಹೋದಾಗ ಅತ್ಮೀಯ ಬಂಧುಗಳಂತೆ ನೆರವಾದ ದೇವಣ್ಣ ನಾಯಕರು, ಬೀರಣ್ಣ ನಾಯಕ ಅಡ್ಲೂರಮನೆ, ಟಿ.ಎನ್.ನಾಯಕ ದಂಪತಿಗಳು ಇವರಾರನ್ನೂ ಮರೆಯುವಂತಿಲ್ಲ. ನಮ್ಮ ಊರಿನ ಸಂಸ್ಥೆ ಎನ್ನುವ ಅಭಿಮಾನದಿಂದ ಕಾರವಾರದ ಅವರ ವಕೀಲ ಸ್ನೇಹಿತರಿಂದ ಒಂದು ಗ್ಲಾಸಿನ ಬಾಗಿಲಿನ ಕಪಾಟು ತಂದು ಕೊಟ್ಟು ಪ್ರಯೋಗ ಶಾಲೆಗೆ ಒಂದು ರೂಪ ತಂದುಕೊಟ್ಟರು. ಅನಿಲ ರಾಯಕರ್ ನಮ್ಮ ಶಾಲೆಗೆ ಎಸ್.ಎಸ್.ಎಲ್.ಸಿ.ಯಲ್ಲಿ ಪ್ರಥಮ ಸ್ಥಾನ ಪಡೆದು ಅರ್ಬನ್ ಬ್ಯಾಂಕಿನ ಬಹುಮಾನ ಪಡೆದವನು. ಹಿಂದುಳಿದ ವರ್ಗದಿಂದ ಬಂದು ಉತ್ತಮ ಯಶಸ್ಸು ಪಡೆದ ಹಾಲಕ್ಕಿ ಸಮಾಜದ ವಿದ್ಯಾರ್ಥಿಗಳು... ಇವರೆಲ್ಲರ ನೆನಪಿನ ಭಾರವಾದ ಹೃದಯದಿಂದ ಮನೆಗೆ ಬಂದರೆ ನನ್ನ ನಾಲ್ವರೂ ಮಕ್ಕಳು ಇದೇ ಶಾಲೆಯ ವಿದ್ಯಾರ್ಥಿಗಳಾಗಿ ಜೀವನದಲ್ಲಿ ಉತ್ತಮರಾಗಿ ಬಾಳುತ್ತಿದ್ದಾರೆ. ಇವೆಲ್ಲಾ ಇವರೆಲ್ಲಾ ಶಾಲೆಯ ಸಹಾಯಕ ಹಸ್ತಗಳು. ಮಾದನಗೇರಿಯ ಡಾ.ಗಣೇಶ ಕಿಣಿ ನಮ್ಮ ಹೆಮ್ಮೆಯ ವಿದ್ಯಾರ್ಥಿ. (ಕೆಲವೇ ದಿನಗಳ ಮಟ್ಟಿಗೆ ಎಂದು ಕಾಣುತ್ತದೆ) ವೈದ್ಯಕೀಯ ವೃತ್ತಿಯ ಜೊತೆ ಲಯನ್ಸ್ ಕ್ಲಬ್, ರೋಟರಿ ಕ್ಲಬ್‌ಗಳ ಜೊತೆ ಉಚಿತ ವೈದ್ಯಕೀಯ ಶಿಬಿರಗಳಲ್ಲಿ ಭಾಗವಹಿಸಿದ್ದು ಕಂಡಿದ್ದೇನೆ. ನಾನು ಲಯನ್ಸ್ ಕ್ಲಬ್ ಅಧ್ಯಕ್ಷನಾಗಿದ್ದಾಗ ಗೋಕರ್ಣಕ್ಕೆ ಬಂದಿದ್ದರು. ಉತ್ಸಾಹಿ ಡಾಕ್ಟರು ಎಂಬ ಪ್ರಶಂಸೆ ಪಡೆದಿದ್ದರು. ಶ್ರೀ ಕೆ.ಜಿ.ನಾಯಕ ಬೆಟ್ಕುಳಿಯಿಂದ ಬರುತ್ತಿದ್ದ. ಇವನು ಪಠ್ಯೇತರ ಚಟುವಟಿಗಳಲ್ಲಿ ಭಾಗವಹಿಸುತ್ತಿದ್ದ. ಗೋಕರ್ಣದ ಅರ್ಬನ್ ಬ್ಯಾಂಕಿನಲ್ಲಿ ಸ್ಟಾಫ್ . ಇವನು ಬೆಟ್ಕುಳಿಯಲ್ಲಿ ಒಂದು ಸಾಂಸ್ಕೃತಿಕ ಸಂಘವನ್ನು ಸ್ಥಾಪಿಸಿ ಸಮೀಪದ ಹಳ್ಳಿಗಳಲ್ಲಿ ಕಾರ್ಯಕ್ರಮಗಳನ್ನು ಕೊಡುತ್ತಿರುತ್ತಾನೆ. ಶಾಲೆಯ ಬಗೆಗೆ ತನ್ನ ಕೈಲಾದ ಸಹಾಯವನ್ನು ಮಾಡಲು ಮುಂದಾಗುವವ. ಯಕ್ಷಗಾನದಲ್ಲಿ ಹಾಸ್ಯದ ಪಾತ್ರ ನೋಡಿದ ಜ್ಞಾಪಕ. ಚಿಟ್ಟೆ ಗಣಪಯ್ಯ: ನನ್ನ ಪ್ರಾಮಾಣಿಕ ದೋಸ್ತ. ಇವನ ತಮ್ಮ ಸಚ್ಚಿಯೂ ಸ್ನೇಹಿತನೇ. ಸಚ್ಚಿ ನನ್ನ ತಮ್ಮ ಲಕ್ಷ್ಮೀನಾರಾಯಣನ ಗಳಸ್ಯ ಕಂಠಸ್ಯ. ಗಣಪಯ್ಯನ ಬಾಯಲ್ಲಿ ಒಮ್ಮೆಯೂ ಯಾರ ಬಗ್ಗೆಯೂ ಕೆಟ್ಟ ಮಾತು ಬರುವುದಿಲ್ಲ. ಒಮ್ಮೆ ನನಗೂ, ಅವನಿಗೂ ಜಗಳವಾಗಿ ಮಾತು ಬಿಟ್ಟೆವು. ಐದಾರು ದಿನಗಳ ನಂತರ - ತಪ್ಪು ನನ್ನದೇ ಆಗಿದ್ದರೂ!- ಇವನು ತಾನಾಗಿಯೇ "ಮಾಚ, ನಾನು ಮಾತು ಬಿಡಬಾರದಾಗಿತ್ತು" ಎಂದ. ಅಂಥ ಸಜ್ಜನ. ಓದುವುದರಲ್ಲಿ ನನಗಿಂತಲೂ ಹುಶಾರಿ. ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಪ್ರಾಮಾಣಿಕವಾಗಿ ಬಾಳುತ್ತಿದ್ದಾನೆ. ವಿಷ್ಣು ಉಪಾಧ್ಯ: ಇವನು ಚಿಟ್ಟೆ ಹಾಗಲ್ಲ, ಸ್ವಲ್ಪ ಏರು. ನಾನು ಏನು ಹೇಳಿದರೂ ಅವನದು ಉಲ್ಟಾ. ನಮ್ಮಿಬ್ಬರಲ್ಲಿ ಯಾರ ತಪ್ಪಿದ್ದರೂ ಮಾತು ಬಿಡುತ್ತಿದ್ದ. ಕಡೆಗೆ ನಾನಾಗಿಯೇ ಮಾತಾಡಬೇಕು. ಬೇಲೆಯಲ್ಲಿ ಆಟ ಆಡುತ್ತಿದ್ದೆವು. ಸಂತೋಷದಲ್ಲೂ, ಸಿಟ್ಟಿನಲ್ಲೂ ಮರಳು ಒಬ್ಬರಿಗೊಬ್ಬರು ಚೋಕುವುದು, ಮನೆಗೆ ಹೋಗಿ ಅಬ್ಬೆಯಿಂದ ಬೈಸಿಕೊಳ್ಳುವುದು. ನಾರಾಯಣ ಹಿರೇಗಂಗೆ: ಮೂಲತಃ ವೇದೇಶ್ವರನ ಸ್ನೇಹಿತ. ನಾಲ್ಕನೇ ತರಗತಿಯವರೆಗೂ ನಮಗಿಂತ ಒಂದು ವರ್ಷ ಕೆಳಗೆ. ನಮ್ಮಿಬ್ಬರಲ್ಲಿ ಜಗಳ ಕಡಿಮೆ. ಶಾಲಾ ಚರ್ಚಾಕೂಟದ ಕುರಿತು ಪ್ರೌಢಚರ್ಚೆ. ಕೆಲವೊಮ್ಮೆ ಶನಿವಾರ, ಭಾನುವಾರ ಸಂಜೆ, ಪಾಂಡವರ ಗುಡಿ, ರಾಮತೀರ್ಥಕ್ಕೆ ಹೋಗಿ ಹರಟೆ, ತಮಾಷೆ. ಕೆಲವು ಪದ್ಯಗಳ ಬಗೆಗೆ ಚರ್ಚೆ ನಡೆಯುತ್ತಿತ್ತು. ಆಗಲೇ ವೇದೇಶ್ವರದ ಉಪ್ಪರಿಗೆಯ ಮೇಲೆ ಬಾಲಸಂಘ ಸ್ಥಾಪನೆಯಾಯಿತು. ಅದು ವಾಚನಾಲಯ. ಇದಕ್ಕೆ ಮೂಲ ವೇದೇಶ್ವರನೇ. ಅವನಿಗೆ ಈ ಶಕ್ತಿ ದೈವದತ್ತವೇ ಸರಿ. ಬಾಲ ಸಂಘ ಮುಂದೆ ಸ್ಟಡಿ ಸರ್ಕಲ್ ಆದ ಬೆಳವಣಿಗೆ ಕುರಿತು ನನಗೆ ಮಾಹಿತಿ ಸಾಲದು. ಆದರೆ ಬಾಲಸಂಘ, ಗೋಪಿಯವರ ಪ್ರೇಮಸಂಘ, ಹಿರಿಯರ ಕೆಳೆಯರ ಕೂಟ ಎಲ್ಲ ಸೇರಿ ಕರ್ನಾಟಕ ಸಂಘವಾಯಿತು. ಆ ಲಾಗಾಯ್ತು ಈಗಿನವರೆಗೂ ವೇದೇಶ್ವರ - ಗ.ಮ.ವೇ. (ಗಣಪತಿ ಮಹಾಬಲೇಶ್ವರ ವೇದೇಶ್ವರ) ಮತ್ತು ಗೋಪಿ ಚಂದ್ರಶೇಖರ ಸಂಘದ ಅವಿಭಾಜ್ಯ ಅಂಗ. ಚಂದ್ರಶೇಖರನ ತೂಕವೇ ಹೆಚ್ಚಿತ್ತು. ಆ ತೂಕಕ್ಕಿಂತ ಸಂಘದ ಬಗ್ಗೆ ಅವನ ಅಭಿಮಾನ ಇನ್ನೂ ಹೆಚ್ಚು. ಪ್ರಾಮಾಣಿಕತೆಗೆ ಇನ್ನೊಂದು ಹೆಸರು ಚಂದ್ರು. ಲೈಬ್ರರಿಗ್ರ್ಯಾಂಟ್ ೩-೧-೦ ಕುಮಟಾದಲ್ಲಿ ಪಡೆಯಬೇಕು. ನಮ್ಮ ಗೋಪಿಯವರು ಬೆಳಿಗ್ಗೆ ಮನೆಯಲ್ಲಿ ಗಂಜಿ ಉಂಡು ಅಘನಾಶಿನಿಯ ಮೇಲೆ ಕುಮಟಾಕ್ಕೆ ಹೋಗುವವರು. ತಾರಿದೋಣಿಯ ಎರಡು ಬಿಲ್ಲಿ, ಹೋಗ್ತಾ-ಬರ್ತಾ ಅಷ್ಟೆ. ಉಳಿದ ಮೂರು ರೂ. ಸಂಘಕ್ಕೆ ಜಮಾ. ಚಂದ್ರು ಸ್ವಂತ ಖರ್ಚಿನಿಂದ ಮಂಡಕ್ಕಿ ಖರೀದಿಸಿ ಹೋಗ್ತಾ-ಬರ್ತಾ ತಿನ್ನುತ್ತ ಬರುತ್ತಿದ್ದನಂತೆ. ಸಂಜೆ ಊಟ ಮನೆಗೆ ಬಂದ ಮೇಲೆ. ಚಂದ್ರಶೇಖರನದು ಒಂದು ತಮಾಷೆ. "ವೇದೇಶ್ವರಾ, ಈ ನಮ್ಮ ಸಂಘದ ಜಿರಲೆ ನೆಫ್ತಲಿನ್ ಗುಳಿಗೆನೇ ತಿಂದುಕೊಂಡು ದಪ್ಪ ಆಜು ನೋಡು" ಎನ್ನುತ್ತಿದ್ದ. "ಅಲ್ದೋ ವೇದೇಶ್ವರ, ಈ ನಾಗಕ್ಕನ ಹೆಸರಿನಲ್ಲಿ ಕೇಶ ಸಂಘರ್ಷ ಪುಸ್ತಕ ತೆಗೆದುಕೊಂಡು ಒಂದು ತಿಂಗಳು ಆಯ್ತು. ಪುಸ್ತಕದ ಕಾಪಿ ಮಾಡ್ತೊ ಹೇಗೆ?" ಅದಕ್ಕೆ ವೇದೇಶ್ವರನ ಉತ್ತರ ಹೀಗೆ: "ಹಾಂಗಲ್ದೋ ಅದು. ಮತ್ತೂ ಮೂರು ಪುಸ್ತಕ ಯಾರು ಯಾರದೋ ಹೆಸರಿನಲ್ಲಿ ತಕಂಡು ಮುಂಬೈಗೆ ಹೋಜು. ಮಗಳ ಬಾಳಂತನಕ್ಕೆ. ಇನ್ನೂ ಎರಡು ತಿಂಗಳು ಆ ಮೂರೂ ಪುಸ್ತಕ ಬತ್ತಿಲ್ಲೆ". "ಹಾಂಗಲ್ಲ, ಗಿಡ್ಡಜ್ಜನ ಕತ್ತಲೆ ಲೈಬ್ರರಿಗೆ ಹೋತೋ ಹೇಗೆ ಹೇಳಿ ಸಂಶಯ ಬಂತು" ಎಂದ ಗೋಪಿ ಚಂದ್ರು. ಗಿಡ್ಡಜ್ಜನ ಕಥೆ ಈಗ ಹೇಳಬೇಕಾಯಿತು. ಅವನು ಗೋಕರ್ಣದ ಐತಿಹಾಸಿಕ ವ್ಯಕ್ತಿ. ಈ ಬ್ರಹ್ಮಸೃಷ್ಟಿಯಲ್ಲಿ ಅವನಿಗೆ ಬೇಡದ ವಸ್ತುವಿಲ್ಲ, ಅವನು ಮಾಡದ ಕೆಲಸವಿಲ್ಲ. ನಾವು ತೀರ್ಥಹಳ್ಳಿಯಲ್ಲಿದ್ದಾಗ ಶಂಕರಲಿಂಗ ರಾಮಕೃಷ್ಣ ಭಟ್ಟರು - ನಮ್ಮ ತಂದೆಯವರು ಸ್ನೇಹಿತರು - ತಿಂಗಳು, ಹದಿನೈದು ದಿನ ನಮ್ಮೊಡನೆ ಇರುತ್ತಿದ್ದರು. ಅವರಿಗೆ ಇನ್ನೂ ಎರಡು ಹೆಸರುಗಳು. ಋಭಾವ, ಇನ್ನೊಂದು ಶಂಕರಲಿಂಗ ಮಾಸ್ತರರು. ಅವರು ಊರಿಗೆ ಸಂಬಂಧಪಟ್ಟಂತೆ ಕೆಲವು ಕಥೆಗಳನ್ನು ಸೃಷ್ಟಿಸಿ ಹೇಳುತ್ತಿದ್ದರು. ಬೇಲೆಹಿತ್ತಲ ಕರಿಯನ ಮನೆಯಲ್ಲಿ ಒಳ್ಳೆ ಹಾಲು ಸಿಗುತ್ತದೆ ಎಂದು ಗಿಡ್ಡಜ್ಜನಿಗೆ ಗೊತ್ತಾದ ತಕ್ಷಣ ಬೇಲೆಹಿತ್ತಲಿಗೆ ಹೋಗಿ ದಿನಾ ಒಂದು ಶಿದ್ದೆ ಹಾಲಿಗೆ ಆರ್ಡರ್ ಕೊಟ್ಟ. ಹಾಲು ದಿನಾಲು ಬರಲು ಪ್ರಾರಂಭವಾಯಿತು. ಆಗಲೇ ನಮ್ಮ ಶಂಮಾಸ್ತರರು "ಅಲ್ದೋ, ಅದು ಮಡಿಗೆ ಸರಿ ಆಗ್ತಾ? ಹಾಲು ನೀನು ದೇವರಿಗೆ ಬೇರೆ.."ಎಂದರು. "ಸುಮ್ಮಂಗಿರು" ಎಂದ ಗಿಡ್ಡಜ್ಜ. ಒಂದು ತಿಂಗಳಾಯ್ತು. ಕರಿಯ ಹಾಲಿನ ದುಡ್ಡಿಗೆ ಬಂದ. ಗಿಡ್ಡಜ್ಜನಿಗೆ ಎಲ್ಲಿಲ್ಲದ ಕೋಪ ಬಂತು. "ನಿನ್ನ ದುಡ್ಡು ತಗೋ. ನೀನು ಸಣ್ಣ ತಮ್ಮನ ಮಗನಂತೆ.ಮಡಿ ಬಗ್ಗೆ ನಿನಗೆ ಗೊತ್ತಿದೆ ಎಂದುಕೊಂಡೆ.ನೀನು ಮಡಿಮಾಡಲಿಲ್ಲ. ನಿನ್ನ ಮೈಲಿಗೆ ಹಾಲನ್ನು ದೇವರ ಅಭಿಷೇಕಕ್ಕೆ, ಪಂಚಾಮೃತ ತುಪ್ಪಕ್ಕೆ ಎಲ್ಲಾ ಉಪಯೋಗಿಸಿದೆ. ಮಹಾ ಪಾಪ, ಮಹಾಪಾಪ. ಪ್ರಾಯಶ್ಚಿತ್ತಕ್ಕೆ ಐವತ್ತು ರೂ. ಬೇಕು. ನಿನ್ನ ಹಾಲಿನ ದುಡ್ಡು ರೂ.೩೫/-. ಇದಕ್ಕೆ ರೂ.೧೫/- ಸೇರಿಸಿಕೊಡು. ನಾಳೆಯಿಂದ ಹಾಲು ಬೇಡ. ಒಂದೇ ಮಾತು, ಹಾಲು ಬೇಡ, ಹದಿನೈದು ರೂಪಾಯಿ ಕೊಡು." ಕರಿಯನ ಮುಖ ಕಪ್ಪಿಟ್ಟು ಕಂಗಾಲಾದ. "ಒಡೆಯಾ, ಇಪ್ಪತ್ತು ಕಾಯಿ ಕೊಡ್ತೆ" ಎಂದ. ಆಗ ಗಿಡ್ಡಜ್ಜ "ಸಿಪ್ಪೆ ಸಮೇತ ಕೊಡು" ಎನ್ನಬೇಕೆ? "ಶಿವರಾಮನ ಅಂಗಡಿಗೆ ಟೊಪ್ಪಿ": ಉದ್ರಿ ಅಂಗಡಿ, ಹದಿನೈದು ದಿನ, ತಿಂಗಳಿಗೆ ಹಣ ಕೊಡುವುದು. ಗಿಡ್ಡಜ್ಜ ಹಣಕೊಡದೇ ಒಂದೂವರೆ ತಿಂಗಳು ಆಗಿಹೋಗಿತ್ತು. ಅರವತ್ತು ರೂಪಾಯಿ ಬಾಕಿ. ಮುಂಬಯಿಯಿಂದ ಮಗ ನೂರು ರೂ ಕಳಿಸಿದ್ದ. ಪೋಸ್ಟ್ ಮ್ಯಾನ್ ಬರುವ ಹೊತ್ತಿಗೆ ಇವನು ಅಂಗಡಿ ಹತ್ತಿರವೇ ಇದ್ದ. ದುಡ್ಡು ಪಡೆದ. ಅಷ್ಟು ಹೊತ್ತಿಗೆ ಇನ್ನೊಬ್ಬ ಮಗ ಮಾಬ್ಲ ಬಂದ. ಸಾಮಾನಿನ ಚೀಟಿ ಕೈಯಲ್ಲಿ. ನೂರು ರೂ. ನೋಟು ಹಿಡಿದೇ ಚೀಟಿ ಕೊಟ್ಟ. ಹೇಗೂ ಎಂ.ಓ.ಬಂದಿದೆ ಎಂದು ಅಂಗಡಿಯವನೂ ಸಾಮಾನುಕೊಟ್ಟ. ಅಷ್ಟು ಹೊತ್ತಿಗೆ ಹೆಂಡತಿ ಶೇಷಕ್ಕನೇ ಅಂಗಡಿಗೆ ಬಂದು, " ಆ ನೂರು ಕೊಡಿ. ಅಲ್ಲಿ ಅಜ್ಜಿ ಮನೆ ಚಚ್ಚಕ್ಕ ಪಿತ್ಥ ಬಿಗೀತು. ಮಗನ ಪರೀಕ್ಷೆ, ಪುಸ್ತಕ ಹೇಳಿ ನೂರೈವತ್ತು ರೂಪಾಯಿ ಕೊಡುದಾಗ್ತಡ" ಎಂದು ನೂರು ರೂ. ತೆಗೆದುಕೊಂಡು ಹೊರಟೇ ಹೋದಳು. "ಏ ಏ ಏ" ಎಂದು ಗಿಡ್ಡಜ್ಜ ಹುಸಿಕೋಪ ಮಾಡುತ್ತಲೇ ಇದ್ದ. ಶಿವರಾಮ ನಾಗಪ್ಪನ ಮುಖ, ನಾಗಪ್ಪ ಮುಖ ಶಿವರಾಮ ನೋಡುತ್ತಲೇ ಇದ್ದರು. "ಹೂಂ ಬರ್ಕೊ, ಒಟ್ಟು ರೂ. ನೂರು ಬಾಕಿ ಬರ್ಕೊ. ನೀ ಬರೂದು, ನಾವ್ ತೆರೂದು" ಹೇಳಿ ನಸ್ಯ ಏರಿಸಿ ಮನೆಗೆ ಹೊರಟ. ಕಟ್ಟಿಗೆ ಗಾಡಿ ಎಂಕಣ್ಣ: "ಎಂಕಣ್ಣ, ೧೫ ಗಾಡಿ ಕಟ್ಟಿಗೆ ಬೇಕು, ಹೇಗೆ ದರ?" "ಒಡೆಯಾ, ಒಂದು ಗಾಡಿಗೆ ಹದಿನೆಂಟು ರೂಪಾಯಿ. ನೀವು ರಾಶಿ ತಕಳ್ತ್ರಿ, ಹೇಳಾದರೆ ಹದಿನೈದು ರೂಪಾಯಿಗೆ ಕೊಡ್ವ". "ಆತು, ಹದಿನೈದು ಹದಿನೈದಲೆ ಇನ್ನೂರಿಪ್ಪತ್ತೈದು ರುಪಾಯಿ. ತಕೊ ರೂ. ಇಪ್ಪತ್ತೈದು ಮುಂಗಡ. ಶಿವರಾತ್ರಿ ಮರುದಿವಸ ತಕಂಡು ಬಾ". ತಕ್ಷಣ ಶಿವಭಾವ, ತಿಮ್ಮಪ್ಪ ಭಾವ, ಚಚ್ಚಕ್ಕ, ರಾಮಭಾವ ಇವರಿಗೆ ಕಟ್ಟಿಗೆ ಗಾಡಿ ವಿಷಯ ವಿವರಿಸಿದ ಪ್ರತ್ಯೇಕವಾಗಿ. ಒಪ್ಪಿದರು. "ಗಾಡಿ ದುಡ್ಡು ಮೊದಲೇ ಕೊಡೊ" ಎಂದು ಪ್ರತಿಯೊಬ್ಬರಿಂದಲೂ ನಲವತ್ತೈದು ರೂಪಾಯಿ ತೆಗೆದುಕೊಂಡ."ನಿಮ್ಮ ಮನೆ ಬಾಗಿಲಿಗೆ ತಂದು ಹಾಕೋ ಎಂದ್ರೆ ಪಾಪ, ಗಾಡಿಗೆ ಐದು ರೂಪಾಯಿ ಕೊಡುವಾ, ಬೇಡ, ಎಲ್ಲಾ ಸೇರಿ ಹತ್ತು ರೂಪಾಯಿ ಒಟ್ಟು ಕೊಡುವಾ ಆಗದನೋ ರಾಮಮಾವ" ಎಂದ. "ಅಕ್ಕಲಿ" ಎಂದ ರಾಮಮಾವ. ಒಟ್ಟು ಇನ್ನೂರು ರೂಪಾಯಿ ಸೇರಿಸಿದ. ಶಿವರಾತ್ರಿ ಮರುದಿನ ಬಂತು, ಕಟ್ಟಿಗೆ ಗಾಡಿಗಳೂ ಬಂದವು. "ಎಂಕಣ್ಣ ನಾಯಕ, ತಗೋ ರೂ.೨೨೫ರಲ್ಲಿ ೨೫ ಆಗಲೇ ಸಂದಿದೆ. ಉಳಿದ ಇನ್ನೂರರಲ್ಲಿ ಈಗ ನೂರು ತೆಗೆದುಕೋ. ಉಳಿದ ನೂರು ಯುಗಾದಿ ಮಾರನೆ ದಿವಸ" ಎಂದ. ಹೂಂ ಎನ್ನದೇ ವಿಧಿ ಇಲ್ಲ. ಯುಗಾದಿ ಮರುದಿನ ಮೂವತ್ತು ನಂತರ ಹದಿನೈದು, ನಂತರ ಇಪ್ಪತ್ತೈದು, ಬಳಿಕ ಹದಿನೈದು ಹೀಗೆ ಕೊಡುತ್ತಾ ಇನ್ನೂ ಹದಿನೈದು ರೂಪಾಯಿ ಕೊಡುವುದು ಬಾಕಿ ಇರುವಾಗ ಒಂದು ದಿನ "ಏನೋ ಎಂಕಣ್ಣ, ನಿನ್ನ ಲೆಕ್ಕ ಮುಗೀತೋ ಇಲ್ಲವೋ? ೧೫, ೨೫, ೩೫...... ನನ್ನ ಲೆಕ್ಕದಂತೆ ನಿನಗೆ ಒಂದು ಐದು ರೂಪಾಯಿ ಹೆಚ್ಚೇ ಸಂದಿದೆ. ಇರಲಿ ಬಿಡು. ಅದನ್ನು ಕೊಡುವುದು ಬೇಡ. ಏ, ಎಂಕಣ್ಣಂಗೆ ಒಂದು ಲೋಟ ಚಹಾ ಮಾಡೇ ಅಥವಾ ಬೇಡ, ಮಜ್ಜಿಗೆ ಕೊಡು" ಎಂದ ಗಿಡ್ಡಜ್ಜ! ಗಿಡ್ಡಜ್ಜನ ಪುಸ್ತಕ ಸಂಗ್ರಹ: ಗೋಕರ್ಣದ ಕೆಲ ಸಾಹಿತ್ಯಾಸಕ್ತರು ಸಂಗ್ರಹ ಯೋಗ್ಯವಾದ ಪುಸ್ತಕ ತರಿಸುತ್ತಿದ್ದರು. ಇವನು ಹೊಂಚು ಹಾಕಿ "ಭೈರಪ್ಪನವರ ವಂಶವೃಕ್ಷ ಒಂದು ಸಲ ಕೊಡು" ಎಂದ. ಪುಸ್ತಕ ತಂದವನೇ ಪುಸ್ತಕದ ಕೆಲ ಪುಟಗಳಲ್ಲಿ,- ೨೫ನೇ ಪುಟ, ೭೫ ನೇ ಪುಟ, ೧೨ನೇ ಪುಟ ಎಂದುಕೊಳ್ಳೋಣ - ಬೈಂಡಿನ ಕಡೆಗೆ ಗಿಜ್ಜಗೋರ್ಣ ಎಂದು ಬರೆದ. ಪುಸ್ತಕ ಹಿಂತಿರುಗಿಸಿದ. ಪುಸ್ತಕ ತಂದಿದ್ದವರ ಮನೆಗೆ ಕೆಲ ದಿನಗಳ ಬಳಿಕ ಹೋಗುವುದು. ಆಗ ಅವರ ಮನೆಯವರು ಘಟ್ಟಕ್ಕೆ ಹೋಗಿದ್ದಾರೆ ಎಂದು ಖಾತ್ರಿಮಾಡಿಕೊಂಡೇ ಇವನು ಹೋಗುವುದು! "ನಾಗು, ನಿನ್ನ ಗಂಡ ನನ್ನ ಪುಸ್ತಕ ತಕಂಡಿದ್ದ. ಕೊಡು" ಎನ್ನುವ ಗಿಡ್ಡಜ್ಜ. ಆ ಮನೆಯಾಕೆ "ಇವರು ಏನೂ ಹೇಳಲಿಲ್ಲವಲ್ಲ" ಅನ್ನಬೇಕು, "ಹೇಳಲಿಲ್ಲವಾ? ಇರಲಿ ಬಿಡು, ಪುಸ್ತಕ ತಕಂಡು ಬಾ". ಪುಸ್ತಕ ತಂದ ಮೇಲೆ ಇವನು ಆಯ್ದ ಪುಟಗಳಲ್ಲಿ ಗಿಜ್ಜಗೋರ್ಣ ಎಂದು ಬರೆದದ್ದು ತೋರಿಸುತ್ತಿದ್ದ. ಗಿಜ್ಜಗೋರ್ಣ ಎಂಬುದು ಗಿಡ್ಡಜ್ಜ ಗೋಕರ್ಣ ಎಂಬುದರ ಸಂಕ್ಷಿಪ್ತರೂಪ! ಸರಿ, ಇನ್ನು ಸಂಶಯಕ್ಕೆ ಎಡೆ ಎಲ್ಲಿದೆ? ಗಿಜ್ಜಗೋರ್ಣನ ಪುಸ್ತಕ ಭಂಡಾರದಲ್ಲಿರುವುದು ಈ ಬಗೆಯಾಗಿ ಸಂಗ್ರಹಿಸಿದ ಪುಸ್ತಕಗಳು! ಆ ಬಡ ಹೆಂಗಸರೂ ಗಿಡ್ಡಜ್ಜ ತನ್ನ ಪುಸ್ತಕ ತಾನು ತೆಗೆದುಕೊಂಡು ಹೋದ ತಾನೆ ಎಂದು ಗಂಡನಿಗೂ ಹೇಳಲಿಲ್ಲ. "ಇತಿಗೋಕರ್ಣ ಪುರಾಣೇ ಗಿಡ್ಡಜ್ಜ ಕಾಂಡೇ ಪ್ರಥಮ ಅಧ್ಯಾಯಃ". ಎಂಬಲ್ಲಿಗೆ ಶ್ರಾವಣಮಾಸ ಶುರುವಾದ್ದರಿಂದ ಮಾಸ್ತರರು ಗೋಕರ್ಣಕ್ಕೆ ಹೋದರು. ನಾಟಕ: ನಾನು ನೋಡಿದ ಮೊದಲ ನಾಟಕ ಸಾಹಿತ್ಯ ಸೇವಕ ಸಂಘದ "ಟಿಪ್ಪು ಸುಲ್ತಾನ". ಅಗಸೆಯ ಅಯ್ಯು ಸಭಾಹಿತರ ಟೀಪು ಪಾತ್ರ ಸುಪ್ರಸಿದ್ಧ. ವಸಂತಸೇನೆಯ ಚಾರುದತ್ತನಾಗಿಯೂ ಅವರದು ಒಳ್ಳೆಯ ಹೆಸರು. ಚಾರುದತ್ತನಾಗಿ ಪಾತ್ರ ವಹಿಸಿದ ಸಂದರ್ಭ. ಅವನಿಗೆ ಗಲ್ಲು ಶಿಕ್ಷೆಯಾಗುವುದಷ್ಟೆ? ತಾನು ನಿರಪರಾಧಿ ಎಂದು ಹೇಳುತ್ತಾ ರಂಗಪ್ರವೇಶ ಮಾಡುವ ಸನ್ನಿವೇಶ: "ನಭೀತೋ ಮರಣಾದಸ್ಮಿ ಕೇವಲಂ ದೂಷಿತಂ ಯಶಃ" ಹೇಳುತ್ತಿದ್ದಂತೆ ಮುಂದಿನ ಸಾಲಿನಲ್ಲಿ ಕುಳಿತ ಭಡ್ತಿ ದೇವರ ಭಟ್ಟರು, ನಾರಾಯಣ ಶಾಸ್ತ್ರಿಗಳು , ಗಣಪಿ ಕೃಷ್ಣ ಭಟ್ಟರು ಎಲ್ಲಾ ಒಕ್ಕೊರಲಿನಲ್ಲಿ "ಪುನರುಚ್ಯತಾಂ" (ಒನ್ಸ್ ಮೋರ್). ಹಾಗೆ ಚಾರುದತ್ತ ಮೂರುನಾಲ್ಕು ಸಲ ಅಭಿನಯ ಪುನರಾವೃತ್ತಿಸಬೇಕಾಯಿತು! ಆಮೇಲೆ ಯಾರೋ ಹೇಳಿದರು: "ಪುನರುಚ್ಯತಾಂ ಎಂದಾಗ ಹಾಡುವುದು, ಬಿಡುವುದು ಹಾಡುಗಾರನ ಮರ್ಜಿ". ಸದ್ಯ, ಸಭಾಹಿತಮಾವ ಬದುಕಿದ! ಇನ್ನೊಂದು ಹಾಡು ನೆನಪಿಗೆ ಬರುತ್ತಿಲ್ಲ.... ಶಕಾರನ ಪಾತ್ರ ಶ್ರೀ ಬೈಲಕೇರಿ ಪರಮೇಶ್ವರ ಭಟ್ಟರದು. ಬೈಲಕೇರಿ ಭಾವಯ್ಯ ಎಂದೇ ಊರಿನವರೆಲ್ಲ ಕರೆಯುತ್ತಿದ್ದುದು. "ಕಿಂ ಭೀಮಸೇನೋ ಜಮದಗ್ನಿ ಪುತ್ರ; ಕುಂತೀಸುತೋವಾ.. "ಅಭಿನಯ ಸಮೇತ-ಮುಖ ವಿಕಾರ ಮಾಡುತ್ತಾ-ಶಕಾರ ಹಾಡಿದನೆಂದರೆ ಪುನಃ ’ಪುನರುಚ್ಯತಾಂ’. ವೇಣಿ ಸಂಹಾರ ನಾಟಕದಲ್ಲಿ ಪಂಡಿತ ನಾಗಪ್ಪಣ್ಣನ "ಕಂ ಸಂದಿಃ ಲಾಕ್ಷಾಗೃಹಾನ್ನ...... "ರಾತ್ರಿಯ ನಿಶ್ಯಬ್ದತೆಯಲ್ಲಿ ಕೋಟಿತೀರ್ಥಕಟ್ಟೆ, ನಾಗಬೀದಿ, ರಥಬೀದಿಯಲ್ಲಿ ಕಂಠಶ್ರೀ ಮೊಳಗುತ್ತಿತ್ತು. ಈವರೆಗೆ ಹೆಣ್ಣು ವೇಷವನ್ನು ಗಂಡಸರೇ ಮಾಡುತ್ತಿದ್ದರು. ಹೊಸ ಮನ್ವಂತರದಲ್ಲಿ ಹೆಣ್ಣು ವೇಷವನ್ನು ಹೆಂಗಸರೇ ಮಾಡತೊಡಗಿದರು. ನಾಟಕ ನಡೆಯುವ ಸ್ಥಳ ದೇವಸ್ಥಾನದ ಉಪ್ಪರಿಗೆ. ಹೆಂಗಸು ಪಾತ್ರಧಾರಿಗಳಿಗೆ ಕೆಲ ಸಂದರ್ಭಗಳಲ್ಲಿ ದೇವರೆದುರು ಹೋಗಲಾಗದು. ಹೊಂಡದಕ್ಲ ಭಾವನಿಗೆ ಒಂದು ಉಪಾಯ ಹೊಳೆಯಿತು. ಮೆತ್ತಿಯ ಕಡಗಟ್ಟಿಗೆ ಬಾವಿಯ ಗಡಗಡೆ ಕಟ್ಟುವುದು. ಹಗ್ಗದ ತುದಿಗೆ ಬುಟ್ಟಿ ಕಟ್ಟುವುದು. ಬುಟ್ಟಿಯಲ್ಲಿ ಸ್ತ್ರೀ ಪಾತ್ರಧಾರಿಗಳು. ಮೆತ್ತಿ ಮೇಲಿಂದ ನಿಧಾನವಾಗಿ ನಾಲ್ವರು ಹಗ್ಗ ಜಗ್ಗುವುದು! ’ಆಗ್ರಹ’ ನಾಟಕದ ಅಶ್ವತ್ಥಾಮನ ಏಕಪಾತ್ರಾಭಿನಯ ಶ್ರೀನರಸಿಂಹ ಪಂಡಿತರದು. ಬಟ್ಟೆ ಶಂಕರ ಭಟ್ಟರ ಉಪಪಾಂಡವ. ಅಶ್ವತ್ಥಾಮನ ಮಾತು, ಅಭಿನಯ ಎಲ್ಲಾ ಮೆಚ್ಚಿಗೆಯಾದವು. ಉಪಪಾಂಡವರನ್ನು ಕೊಲ್ಲಬೇಕು. ಆವೇಶದಲ್ಲಿ ಬಟ್ಟೆಭಟ್ಟರ ಕುತ್ತಿಗೆಗೆ ಸ್ವಲ್ಪ ಹಿಂಸೆ ಆಯಿತು. "ನಿನ್ನದು ಕೊಲ್ಲುವ ಕೆಲಸ. ಕಿರೀಟ ತೆಗೆದುಕೊಂಡು ಹೋಗಬೇಕು. ಅದು ಬಿಟ್ಟು ಕುತ್ತಿಗೆಗೇಕೆ ಕೈ ಹಾಕಿದ್ದು? ನಾನು ನಿನ್ನಿಂದ ಸಾಯುವವನಲ್ಲ" ಎಂದು ರಂಗಸ್ಥಳ ಬಿಟ್ಟು ಒಳ ನಡೆದರು ಶಂಕರಭಟ್ಟರು. "ನಿನ್ನನ್ನು ಬಿಡುವೆನೇ?" ಎಂದು ಅಶ್ವತ್ಥಾಮ ಕೂಡಾ ಓಡಿದ. ಹೀಗೆ ಮೂರು ನಾಲ್ಕು ಸುತ್ತು ಆಯಿತು! ಅಶ್ವತ್ಥಾಮನಿಗೆ ಕೈ ಸಾಗದಾಯಿತು. ಆಗ ಒಳಗಿದ್ದವರು ಭಟ್ಟರಿಗೆ ಸಮಾಧಾನ ಮಾಡಿ ಕಿರೀಟ ತಂದು ಅಶ್ವತ್ಥಾಮನಿಗೆ ಕೊಟ್ಟರು. ರಕ್ತಮಯ ಕಿರೀಟದೊಂದಿಗೆ ಆಗ್ರಹಕ್ಕೆ ಮಂಗಳ ಹಾಡಿದರು. ರಕ್ತಾಕ್ಷಿ: ಕುವೆಂಪುರವರ ಪ್ರಸಿದ್ಧ ನಾಟಕ. ನಾಟಕದ ಪ್ರತಿ ಕರ್ನಾಟಕ ಸಂಘದಲ್ಲಿತ್ತು. ನನ್ನಣ್ಣ ಗಜಾನನ (ಗಜಣ್ಣ) ರಕ್ತಾಕ್ಷಿ. ನನ್ನದೂ ಒಂದು ಚಿಕ್ಕ ಪಾತ್ರ ಇತ್ತು. ನಮ್ಮ ಪಕ್ಕದ ಮನೆಯ ಅನಂತಜ್ಜ ಸೇವಕನ ಪಾತ್ರ ವಹಿಸಿದ್ದ. ಪಾತ್ರವಹಿಸಿದ ನಾನು ’ಸಿಪಾಯಿ’ ಎಂದು ಕರೆದಾಗ ಇವನು "ಮಾಚಾ, ಕರೆದೆಯಾ?" ಎನ್ನುತ್ತ ಬಂದ. ಎಲ್ಲರೂ ನಕ್ಕರು. "ಇದನ್ನು ರಕ್ತಾಕ್ಷಿಗೆ ಕೊಟ್ಟು ಬಾ" ಎಂದೊಡನೆ "ಗಜಣ್ಣನಿಗೋ?" ಎಂದು ಕೈಯಲ್ಲಿದ್ದ ಆಯುಧವನ್ನು ಕಸಿದುಕೊಂಡು ಹೋದ. "ಇದನ್ನು ಮಾಚ ನಿನಗೆ ಕೊಡಲು ಹೇಳಿದ್ದಾನೆ. ನೀನೇ ರಕ್ತಾಕ್ಷಿ ಅಲ್ಲವೆ?" ಎಂದು ಆಯುಧ ಕೊಟ್ಟು ಒಳಗೆ ಹೋಗಿ ಸಿಕ್ಕಾಪಟ್ಟೆ ಕೂಗಿದನಂತೆ. "ನನಗೆ ರಾಜಕುಮಾರನ ಪಾರ್ಟು ಹೇಳಿ ಸೇವಕನ ಪಾರ್ಟು ಕೊಟ್ಟರು. ಅದಕ್ಕೇ ಹೀಗೆ ಮಾಡಿದೆ" ಎಂದೂ ಕುಂಟುನೆವ ಹೇಳಿದನಂತೆ. ಅದೇನೇ ಇರಲಿ, ರಕ್ತಾಕ್ಷಿಯ ಅತ್ಯುತ್ತಮ ಅಭಿನಯದಿಂದ ನಾಟಕ ರಂಗೇರಿತ್ತು. "ತ್ಯಾಗೇನೈಕೇ ಅಮೃತತ್ವ ಮಾನುಷು:" ಶ್ರೀ ಗೌರೀಶ ಮಾಸ್ತರರ ಗೀತ ನಾಟಕ. ಏಕ್ಟರ್ ಜೋಷಿ (ಸೀನಿಯರ್)- ಕರ್ಣ. ಗಂಗಾತೀರದಲ್ಲಿ ವಿಚಾರಮಗ್ನನಾಗಿ ನಿಂತ ಕರ್ಣನ ಭಂಗಿ ಇನ್ನೂ ನನ್ನ ಕಣ್ಣ ಮುಂದೆ ಕಟ್ಟಿದಂತಿದೆ. ಸುಮಾರು ಮೂರು ನಿಮಿಷ ಒಂದೇ ಠೀವಿಯಲ್ಲಿ ನಿಂತಿದ್ದ! ಪ್ರೇಕ್ಷಕರೆಲ್ಲ ಹುಚ್ಚೆದ್ದು ಚಪ್ಪಾಳೆ ತಟ್ಟಿಯೇ ತಟ್ಟಿದರು. ಕರ್ಣನ ಅಭಿನಯಪೂರ್ವಕವಾದ ಪ್ರತಿಯೊಂದು ಮಾತೂ ಹೃದಯಸ್ಪರ್ಶಿಯಾಗಿತ್ತು. "ಕರ್ಣ ರಸಾಯನಮಲ್ತೆ ಭಾರತಂ’ ನೆನಪಿಗೆ ಬಂತು. ರಾಮ ವನವಾಸಕ್ಕೆ ಹೋದಾಗ ದಶರಥ ಮಾಡಿದ ಪ್ರಲಾಪದ ಸಂದರ್ಭ ಹೇಳಬೇಕು. ದಶರಥನ ಪಾತ್ರ ಡಾ.ಕೆ.ಜಿ.ಶಾಸ್ತ್ರಿಯವರದು. ತಲೆಗೂದಲು ಬೆಳ್ಳಗಿರಬೇಕಲ್ಲವೆ? ವೇದೇಶ್ವರನಿಗೆ ಹೇಳಿ ತಲೆ ತುಂಬಾ ಪೌಡರ್ ಹೊಯ್ಯಿಸಿಕೊಂಡಿದ್ದರು. ಕಡೆಗೂ ಒಂದು ಸಂಶಯ ಅವರಿಗೆ. ತಾನೇ ದಶರಥ ಎಂದು ಕೈ ಸನ್ನೆ, ಕಣ್ಣುಸನ್ನೆಯಿಂದ ತನ್ನನ್ನು ಪರಿಚಯಿಸಿಕೊಂಡರು - ಮುಂದಿದ್ದ ಗಣ್ಯರಿಗೆ. ನಂತರ ರಾಮ, ಕೈಕೇಯಿಯರೊಡನೆ ಸಂಭಾಷಣೆ. ಶ್ರೀರಾಮ ವನವಾಸಕ್ಕೆ ಹೊರಟೇಬಿಟ್ಟ ’ಹಾ ರಾಮಾ ಹಾ ರಾಮಾ’ ಎಂದು ತಲೆ ಜಪ್ಪಿಕೊಳ್ಳುತ್ತಿದ್ದರು. ಆಗೆಲ್ಲ ಪೌಡರು ಬುಸ್ಸೆಂದು ಹಾರುತ್ತಿತ್ತು. "ಶಾಸ್ತ್ರಿಗಳೇ, ಇನ್ನೂ ಜಪ್ಪಿದರೆ ಕರಿಕೂದಲು" ಎಂದು ವೇದೇಶ್ವರ ಎಚ್ಚರಿಸಿದ. ಶಾಸ್ತ್ರಿಗಳ ಪ್ರಲಾಪ ಮಾತ್ರ ಎಲ್ಲರ ಕಣ್ಣಲ್ಲಿ ನೀರು ತಂದಿತು. "ಸುವಾಸನಾಭರಿತ ಅಶ್ರು" ಎಂದು ಅಲ್ಲೇ ಇದ್ದ ವಿಶ್ವೇಶ್ವರ ಭಟ್ಟರು ಉದ್ಗಾರ ತೆಗೆದರು. ಯಕ್ಷಗಾನ: ಶಿವರಾಮ ನಾವಡರು ಯಕ್ಷಗಾನ ಮೇಳ ಸ್ಥಾಪಿಸಿದರು. ಅವರ ಯಕ್ಷಗಾನದ ಅಭಿಮಾನ ದೊಡ್ಡದು. ಲಾಭವೋ, ಹಾನಿಯೋ - ತಿಳಿಯದು. ಮೇಳ ಕಟ್ಟಿಕೊಂಡು ಅಂಕೋಲೆಯಲ್ಲಿ ಐದಾರು ಆಟ ಆಡಿರಬೇಕು. ನಮ್ಮ ನಾವಡರ ಮೇಳದಲ್ಲಿ ಸ್ತ್ರೀ ವೇಷಧಾರಿಗಳಾಗಿ ಶ್ರೀ ಶಿವ ಹೆಗಡೆ, ಬಹು ಪ್ರಸಿದ್ಧ ಪುರುಷ ವೇಷಧಾರಿಗಳು ಶ್ರೀ ಗುರುಲಿಂಗ ಮಾರ್ಕಾಂಡೆ ಭಟ್ಟರು, ಹಾವಗೋಡಿ ಗಣೇಶ ಭಟ್ಟರು, ಯುವವೇಷಧಾರಿಗಳಾಗಿ ಅನಂತ ಬಾಳೆ ಹಿತ್ತಲ, ಗಣಪತಿ ನಾವಡ, ಶಿವರಾಮ ನಾವಡರು (ನಳ ಬಹಳ ಪ್ರಸಿದ್ಧ), ಮೇಳದ ಯಜಮಾನರು. ಅತಿಥಿ ಕಲಾವಿದರಾಗಿ ಬಾಡದ ವಲಲ ಭೀಮ ನಾರಾಯಣ ಹೆಗಡೆ, ಕಾಗಾಲ ಈಶ್ವರ ಭಟ್ಟರು, ಹೊನ್ನಕೋಟೆ ಪರಮಭಟ್ಟರು, ನೀರಳ್ಳಿ ಭಟ್ಟರು, ವೈತರಣಿ ಹೆಗಡೆಯವರು. ಬಣ್ಣದ ವೇಷಕ್ಕೆ ಊರಿನ ರಾಮದಾಸ ಪಂಡಿತರು, ಶಿವೋಡಿಯವರು, ಮೂಲೆ ಮಹದೇವಿ ಅಡಿಗಳು (ಹಾಸ್ಯ), ಊರ ಕಲಾಭಿಮಾನಿ ಧಾರೇಶ್ವರ ಅಡಿಗಳು, ಕಾಶಿವಾಸುದೇವ ಕೊಡ್ಲೆಕೆರೆ ಇವರ ಪ್ರೋತ್ಸಾಹ. ಧಾರೇಶ್ವರ ಅಡಿಗಳು ಕೊಟ್ಟ ಹತ್ತು ವರ ದಕ್ಕಿತೋ ದಕ್ಕಿತು ಎನ್ನುವಾಗ ಮಂಗಲ. "ರಾಮಕೃಷ್ಣರು ಮನೆಗೆ ಬಂದರು ಬಾಗಿಲು ತೆರೆಯಿರೋ, ಸುಖವ ಪಡೆಯಿರೋ, ಕಾಮಧೇನು ಬಂದಂತಾಯ್ತು, ವರವ ಕೇಳಿರೋ" ಎನ್ನುವುದು ಮಂಗಳ ಪದ್ಯ. ನಾವಡರ ಮೇಳದ ವಿನಾ ಇನ್ನೊಂದು ಮೇಳ ಇತ್ತು. "ಭದ್ರಕಾಳಿ ಕೃಪಾಪೋಷಿತ" ಎಂದು ನೆನಪು. ಇದರಲ್ಲಿ ಪ್ರಸಿದ್ಧರು ಶ್ರೀ ಹೊನ್ನಿಕೃಷ್ಣ (ಹಾಸ್ಯ), ಶ್ರೀ ಗಣಯನ್ ಗಂಪಿ, ವಾಲಗದ ಶ್ರೀ ಶಿವು ಭಂಡಾರಿ, ಶ್ರೀ ಪೊಮ್ಮ ಪಡಿಯಾರ, ವೇ.ಗಂಪಿ ಉಪಾಧ್ಯರು (ಅತಿಥಿ ಕಲಾವಿದರು), ಬೀರು, ಮಂಕಾಳಿ ಮನೆ ಪರಮೇಶ್ವರ (ಸ್ತ್ರೀ ವೇಷಧಾರಿ), ಗಣಯನ್ ನೀಲಕಂಠ ಇವರೆಲ್ಲಾ ತುಂಬಾ ಪ್ರಸಿದ್ಧರು. ಗಿರಿಯನ್ ನೀಲಕಂಠ (ಸ್ತ್ರೀ ವೇಷ). ಈ ಮೇಳದ ವಿಶೇಷ ಎಂದರೆ ನವರಾತ್ರಿಯಲ್ಲಿ ಒಂಬತ್ತು ದಿವಸ ಮತ್ತು ವಿಜಯದಶಮಿ - ಈ ಹತ್ತೂ ದಿನ ಅಮ್ಮನವರ ದೇವಸ್ಥಾನದಲ್ಲಿ ಯಕ್ಷಗಾನ ಪ್ರಸಂಗ ಏರ್ಪಡಿಸುತ್ತಿದ್ದುದು. ನಾವಡರ ಮೇಳಕ್ಕೆ ಹಿಮ್ಮೇಳದಲ್ಲಿ ಶ್ರೀವಾಸುನಾವಡರು, ಶಂಕರ ಪಂಡಿತರು. ಭದ್ರಕಾಳಿ ಮೇಳಕ್ಕೆ ಬಸ್ತಿ ಸೀತಾರಾಮ. ಮೃದಂಗ ಎರಡೂ ಮೇಳಕ್ಕೆ ಗಿರಿಯನ್ ಗಂಪಿ, ಬಸ್ತಿ ಸುಬ್ರಾಯ.ಶ್ರೀ ಪಾಂಡುರಂಗ ಮಾಸ್ತರರು, ಬಂಡಿಕೇರಿ, ನಾರಾಯಣ ಭಂಡಾರಿ ಒಳ್ಳೆ ಅರ್ಥಧಾರಿಗಳು ಮತ್ತು ವೇಷಧಾರಿಗಳೂ ಹೌದು. ಮಾಸ್ತರರು ದಕ್ಷ, ಪ್ರಾಮಾಣಿಕ ಹೆಡ್ ಮಾಸ್ಟರ್ ಆಗಿಯೂ ಹೆಸರು ಪಡೆದವರು. ಶಿವೋಡಿಗೆ ಒಮ್ಮೆ ನರಸಿಂಹನ ಪಾತ್ರವನ್ನು ಮಾಡಬೇಕೆಂಬ ಬಯಕೆ. ಆದರೆ ಹಿರಣ್ಯಕಶಿಪು ಬಾಡದ ನಾರಾಯಣ ಹೆಗಡೆಯವರೇ ಆಗಬೇಕು. ನಾರಾಯಣ ಹೆಗಡೆ ಒಪ್ಪಿದರು. ಕೊನೆಯ ದೃಶ್ಯ ಭಕ್ತ ಪ್ರಹ್ಲಾದ. ಕಂಬ ಒಡೆದು ನರಸಿಂಹ ಹೊರಗೆ ಬರುವುದೇ ಇಲ್ಲ. ಭಾಗವತರ ಪದ ಮುಗಿಯಿತು. ಒಳಗಿನಿಂದ ಶಿವೋಡಿಯನ್ನು ಹೊರದಬ್ಬಿದರು. ನರಸಿಂಹ ನಡುಗುತ್ತಾ ಹೊರಗೆ ಬಂದವನೇ ಹಿರಣ್ಯ ಕಶಿಪುವನ್ನು ಹುಡುಕಿದ ಶೈಲಿಗೆ ಜನರು ಚಪ್ಪಾಳೆ ತಟ್ಟಿದರು. ಹಿರಣ್ಯ ಕಶಿಪುವೇ ನರಸಿಂಹನ ತೊಡೆಯ ಮೇಲೆ ಹೋಗಿ ಮಲಗಿದ! ಈಗ ನರಸಿಂಹನಿಗೆ ಧೈರ್ಯ ಬಂತು. "ಏ ಕಶಿಪು, ನಿನ್ನ ಉದರವನ್ನು ಬಗೆದು, ರಕ್ತ ಕುಡಿದು ಮಾಂಸವನ್ನು ತಿನ್ನುತ್ತೇನೆ. ನನ್ನನ್ನು ಗದರಿಸುವೆಯಾ?" ಎಂದ. ಹಿರಣ್ಯ ಕಶಿಪುವಿನ ಹೊಟ್ಟೆಬಟ್ಟೆ ಬಿಚ್ಚಿದ: ಸಿಹಿಯಾಳದ ಚೂರು, ಕೆಂಪಗೆ ಉಪ್ಪಿನಕಾಯಿ ಬಡಿದಿದ್ದು, ತಿಂದೇ ತಿಂದ. ಜನರೆಲ್ಲಾ ಚಪ್ಪಾಳೆ ತಟ್ಟಿದರು. ಆಟಕ್ಕೆ ಮಂಗಲ. ಮಾರನೇ ಬೆಳಿಗ್ಗೆ ನಾರಾಯಣ ಹೆಗಡೆ ಬಾಡಕ್ಕೆ ಹೋದ. ಶಿವೋಡಿ ಕೇಳಿದ "ಅಂವ ಹೋದ್ನಾ?". "ಆಗಲೇ ಅಗಸೆ ತಲುಪಿಯಾಯಿತು ಬಿಡು" ಯಾರೋ ಹೇಳಿದರು. "ಹೋದ್ನಾ. ಹೋಗ್ಲಿ, ಹೋಗ್ಲಿ. ಅವಂಗೆ ಯಾರು ಹೆದರ್ತೋ? ಅಲ್ಲ ಹಿರಣ್ಯಕಶಿಪು ಪ್ರಹ್ಲಾದನಿಗೆ ಜೋರು ಮಾಡೊ, ಮಾಡ್ಲಿ. ನನಗೆ, ನರಸಿಂಹಂಗೆ ಯಾಕೆ ಹೆದರಿಸ್ತಾ? ’ಎಲ್ಲಿ ನರಸಿಂಹ?’ ಹೇಳ್ತಾ! ಅವನನ್ನು ಸೀಳುತ್ತೇನೆ ಹೇಳಿ ಮೀಸೆ ತಿರುವಿ, ಕಿರೀಟ ವಾರೆ ಮಾಡ್ಕಂಡು ಕಂಬ ಯಾಕೆ ನೋಡ್ತಾ? ಎಲ್ಲಿದ್ದು? ಯಾವ ಪ್ರಸಂಗದ ಪಟ್ಟೀಲಿದ್ದು? ನಾನು ಕೇಳ್ತೆ. ಅಪ್ಪಣ್ಣಿ ನಾವಡರನ್ನ. ಕಡೆಗೆ ಬಾಡಕ್ಕೆ ಹೋಗಿ ಅವನಿಗೆ ಜೋರು ಮಾಡ್ತೆ" ಇದು ನರಸಿಂಹನ ಅಬ್ಬರ! ಹಿಂದಿ ಯಕ್ಷಗಾನ: ಇದೊಂದು ಹೊಸ ಪ್ರಯೋಗ. ಜಿ.ಎನ್.ಪಂಡಿತ, ಎನ್.ಡಿ.ಭಡ್ತಿ, ಜಿ.ಜಿ. ಶಾಸ್ತ್ರಿ, ನನ್ನ ಅಣ್ಣ ಗಜಾನನ ಕೊಡ್ಲೆಕೆರೆ ಎಲ್ಲರೂ ಸೇರಿ ಎರಡು ಘಂಟೆಯ "ಕಾಳ ಜಂಗವಧೆ" ಮಾಡಿದರು. ಶ್ರೀ ಪಂಡಿತರದು ವಿದ್ಯುನ್ಮತಿ, ಜಿ.ಜಿ.ಶಾಸ್ತ್ರಿ ಕಾಳಜಂಗ. ಎಸ್.ಆರ್.ಕೂರ್ಸೆ ಚಿತ್ರರಥ. ನಮ್ಮಣ್ಣನದು ಸೇವಕ. ಅವನಿಗೆ ಹಿಂದಿ ಅಷ್ಟೊಂದು ಬಾರದು. ಆದರೂ ಉಮೇದಿಯಿಂದ ಮಾಡಿದ. "ಮಾತಿನ ಮಧ್ಯೆ ಕನ್ನಡ ಬಂದರೆ ಏನು ಮಾಡ್ತೀ?" ಎಂದು ಕೇಳಿದಾಗ "ನಾನು ಸೇವಕನಾಗಿ ಕನ್ನಡರಾಜರಲ್ಲೂ ಇದ್ದೆ, ಆದ್ದರಿಂದ ಕನ್ನಡವೂ ಬರುತ್ತದೆ ಎಂದು ಹೇಳುತ್ತೇನೆ" ಎಂದ. ದೂರದಲ್ಲಿ ಬರುವ ಹಯ ಕಂಡೆನು ಇದಕ್ಕೆ ಹಿಂದಿಯಲ್ಲಿ "ದೂರ ಸೇ ದೇಖಾ ಏಕ್ ಘೋಡಾ....." ನಾಲ್ಕೈದು ಸಲ ಬೇರೆ ಬೇರೆ ಭಂಗಿಯಲ್ಲಿ ಹಾಡಿದ. ಕಾಳಜಂಗನ ಪಾತ್ರದಲ್ಲಿ ಕೂಗಿ ಕೂಗಿ ಜಿ.ಜಿ. ಶಾಸ್ತ್ರಿ ಧ್ವನಿ ಬಿದ್ದಿತ್ತು. ಭಾಗವತರು ನುರಿತ ಶಂಕರ ಪಂಡಿತರು. ಹಿಂದಿ ಪದ್ಯಗಳನ್ನು ಅಭ್ಯಾಸ ಮಾಡಿಕೊಂಡು ಸುಶ್ರಾವ್ಯವಾಗಿ ಹಾಡಿದರು. ಶಿವೋಡಿಗೆ ಕುದುರೆ ಪಾರ್ಟ್ ಮಾಡು ಎಂದರೆ ಹೆದರಿದ. "ತನಗೆ ಕನ್ನಡದಲ್ಲಿ ಕುದುರೆ ಕೂಗಿದಂತೆ ಕೂಗಲು ಬರುತ್ತದೆ. ಹಿಂದಿಯಲ್ಲಿ ಬಾರದು" ಎಂದ! "ಇಲ್ಲ, ನಾವು ಅದನ್ನು ಹೇಳಿಕೊಡುತ್ತೇವೆ" ಎಂದು ಒಪ್ಪಿಸಿದರು."ಹಾಗಾದರೆ ಇಂಗ್ಲಿಷ್‌ನಲ್ಲೂ ಮಾಡಿ" ಎಂದ. ನಮ್ಮೂರ ಮಡಿ. ಸಾತಕ್ಕನ ಮಡಿ: ಮಡಿ ಶಬ್ದಕ್ಕೆ ಎರಡರ್ಥ. ನಮ್ಮಲ್ಲಿ ಎರಡೂ ಅರ್ಥ ಉಂಟು. ಬೇರೆ ಬೇರೆ ಅಲ್ಲ, ಒಂದೇ. ಆದರೆ ಸಾತಕ್ಕ ಮಡಿ ಮಾಡಿ ಮಾಡಿ ಮಡಿದಳು. ಎಂಥ ಮಡಿ?ಕೊಟ್ಟಿಗೆಯಲ್ಲಿ ದನ ಬಾಲ ನೆಗತ್ತು ಎಂದರೆ ಓಡಿದಳು. ದನಕ್ಕೆ ಸಗಣಿ ಬರುವಲ್ಲಿ ನೀರು ಹಾಕಿ ಶುದ್ಧ ಮಾಡಿದಳು. ನಂತರ ಗೋಮಯ ಮನೆ ಸಾರಿಸಲು ಉಪಯೋಗಿಸುವಳು. ಗೋಮೂತ್ರ ಶುದ್ಧಿಕ್ರಿಯೆಗೆ ಬಳಸುತ್ತಾರೆ. ಇವಳು ಗೋಮೂತ್ರ ಸಂಗ್ರಹಿಸುವ ಮೊದಲೇ ನೀರನ್ನು ಚೋಕಿ ನಂತರ ಗೋಮೂತ್ರ ಸಂಗ್ರಹಿಸುವಳು! ಒಂದು ಬಾಳಂತಿ ದನ ಇವಳ ನೀರಿನ ಹೊಡೆತಕ್ಕೆ ಮಲದ್ವಾರದಲ್ಲಿ ಹುಳ ಆಗಿ ಸತ್ತು ಹೋಯಿತು! ನಮ್ಮ ಮನೆಯಲ್ಲಿ ಉಪ್ಪು ತಂದರೆ ಅದರ ಮೇಲೆ ಕೆಂಡ ಇಟ್ಟು ಶುದ್ಧೀಕರಿಸಿ ಬಳಸುವೆವು. ಪಾತಕ್ಕ ಉಪ್ಪನ್ನ ಬೆತ್ತದ ಚೊಬ್ಬೆಯಲ್ಲಿ ಹಾಕಿ ಕೋಟಿತೀರ್ಥದ ನೀರಲ್ಲಿ ಅದ್ದುವಳು. ತಕ್ಷಣ ತೆಗೆದು, ಮನೆಗೆ ಬಂದು, ನೆಲಕ್ಕೆ ಹರಡಿ ಒಣಗಿಸಿ ತುಂಬಿಡುವಳು. ಗೋದಕ್ಕನ ಮಡಿ: ಮಕ್ಕಳು ಶಾಲೆಯಿಂದ ಬಂದ ಕೂಡಲೇ ಅಂಗಿಚಡ್ಡಿ ಬೇರೆ ಇಟ್ಟು ಉಪಯೋಗಿಸಬೇಕು. ಗಂಡಸರು ಪೇಟೆಗೆ ಹೋಗಿ ಬಂದರೆ ಬಟ್ಟೆ ಗಿಳಿಗುಟ್ಟಕ್ಕೆ ಇಟ್ಟು ಬೇರೆ ಬಟ್ಟೆ ಉಪಯೋಗಿಸಬೇಕು. ಆಟಕ್ಕೆ (ಯಕ್ಷಗಾನಕ್ಕೆ) ಹೋಗಿಬಂದರೆ ಆ ರಾತ್ರಿ ಇದೇ ಗೋಳು. ಎಂಕಕ್ಕನ ಮಡಿ: ಕಡು ಮಡಿ, ಇವಳಿಗೆ ಸ್ನಾನವಾದ ಮೇಲೆ ಚಿಕ್ಕ ಮಕ್ಕಳು ಹೇಸಿಗೆ ಮಾಡಿದರೆ ಮನೆ ಒಳಗೇ ಬಟ್ಟೆ ಹಾಕಿಕೊಳ್ಳದೇ ಮಾಡಬೇಕು. ಆಗ ಮಡಿಯಲ್ಲಿ ಯಂಕಕ್ಕ ಮಗುವಿನ ಕುಂಡೆ ತೊಳೆಸಿ ಮಲ ತೆಗೆಯುವಳು. ಒಮ್ಮೆ ಎರಡು ವರ್ಷದ ಗುಂಡನಿಗೆ ಯಂಕಕ್ಕನ ಸ್ನಾನವಾದ ಮೇಲೆ ಹೇಸಿಗೆ ಬಂತು. ಬಾಗಿಲ ಮೇಲೆ ಕುಳಿತು ಆರಾಮಾಗಿ ಹೇತ. ಯಂಕಕ್ಕ ಕುಂಡೆ ತೊಳೆಸಿದಳು. ಮಲ ನಂತರ ತೆಗೆದರಾಯಿತೆಂದು ಅಡುಗೆ ಮುಂದುವರಿಸಿದಳು. ಅಷ್ಟರಲ್ಲೇ ಒಬ್ಬ ಕೆಲಸದವ ಬಂದ ಅಡಿಗೆ ಮನೆ ಬಾಗಿಲು ಸರಿ ಮಾಡಲು. ಒಂದು ಕಾಲು ಮಲದ ಮೇಲೆ ಇಟ್ಟ. ಜಾರಲಿಲ್ಲ ಸದ್ಯ. ಮತ್ತೆ ಬೈದ: "ಎಂಕಬ್ಬೆ, ಮಡಿ ಮಡಿ ಅಂತ್ರಿ, ಮಗ ಇಲ್ಲೇ ಹೇತಾನೆ, ಥೋ" ಎಂದ. "ರಾಮ ರಾಮಾ, ಕಾಲಿಗೆ ಅದು ಬಡಿದರೆ ನೀರು ಕೊಡ್ತೆ ತೊಳಕೊ. ಆದರೆ ಈಗ ಮಲ ಮೈಲಿಗೆ ಆಯಿತು. ನಾನು ಮಡಿ. ನೀನೇ ಅದನ್ನೀಗ ತೆಗೆಯಬೇಕು. ತಗೋ ಹಾಳೆಕಡಿ, ಸಗಣಿ." ಗ್ರಹಚಾರ! ಯಾರ ಮುಖ ನೋಡಿದ್ದನೋ, ಏನೋ! ಉಳಿಸುತ್ತಿಗೆ ಹಿಡಿದ ಕೈಯಲ್ಲಿ ಹಾಳೇಕಡಿ, ಸಗಣಿ! "ಕೊಡಿ ಹಾಳೇ ಕಡಿ, ಯಾರಿಗೂ ಹೇಳಿಕ್ಕಡಿ" ಎಂದು ಮಲ ಸ್ವಚ್ಛವಾಗಿ ತೆಗೆದು ತನ್ನ ಕೆಲಸ ಪೂರ್ತಿ ಮಾಡಿ ಕೈ ಮುಗಿದು ಹೊರಬಂದ; "ಶರಣೋ, ಶರಣು, ಮಡಿಯಬ್ಬೆಗೆ ಯಂಕಬ್ಬೆಗೆ ಶರಣು" ಎಂದ. ದಾಕ್ಷಕ್ಕನ ಮಡಿ: ತುಂಬಾ ದೈವಭಕ್ತಿ. ಒಂದು ದಿನ ಬಿಡದೇ ಮೂರೂ ದೇವಸ್ಥಾನಕ್ಕೆ ಪೂಜೆಗೆ ಹೋಗುತ್ತಿದ್ದಳು. ದೇವಸ್ಥಾನದಲ್ಲಿ ಎಲ್ಲರೂ ಅಭಿಷೇಕ ಮಾಡಬಹುದು. ಕೆಲವು ದಿವಸ ಇವಳು ಆತ್ಮಲಿಂಗದಿಂದ ತೀರ್ಥ ತೆಗೆದ ಹೊತ್ತಿಗೆ ಬೇರೆಯವರು ನೀರು ಹಾಕಿದರೆ ತೀರ್ಥ ಮೈಲಿಗೆ. ದೇವರಿಗೆ ಅಡ್ಡಿ ಇಲ್ಲ. ಇವಳಿಗೆ ಆಗ! ನಾನು ಪೂಜೆಗೆ ಹೋದ ಹೊತ್ತಾದರೆ ನನ್ನ ಕೈಲಿ ನೀರು ಹಾಕಿಸಿ ತಕ್ಷಣ ತೀರ್ಥ ತೆಗೆಯುತ್ತಿದ್ದಳು. ಒಂದು ದಿನ ಯಾರೂ ಸಿಗಲಿಲ್ಲ. ಆತ್ಮಲಿಂಗದಲ್ಲಿ ಮೈಲಿಗೆ ನೀರು. ಇವಳೇ ಆತ್ಮಲಿಂಗದಲ್ಲಿಯ ನೀರನ್ನು ಮೇಲೆ ಹಾಕಿ ತಕ್ಷಣ ತಾನು ತಂದ ನೀರನ್ನು ಹಾಕುತ್ತಿದ್ದಳು. ತೀರ್ಥ, ಬಿಲ್ವಪತ್ರೆ ತೆಗೆದುಕೊಳ್ಳುತ್ತಿದ್ದಳಂತೆ. ರಾಮತೀರ್ಥದಲ್ಲಿ ಲಂಕಾದಹನ: ಊರಿನವರಿಗೆ ನಾರಾಯಣಾಚಾರಿಯ ಹನುಮಂತನನ್ನು ನೋಡುವ ಆಸೆ. ಭಟ್ಕಳದಿಂದ ಇಬ್ಬರಿಗೆ ಬಂದು ಹೋಗುವ ಹಾದಿ ಖರ್ಚು, ಅವನ ಸಂಭಾವನೆ ಎಲ್ಲಾ ಸೇರಿ ನೂರೈವತ್ತು ರೂ. ಬೇಕು. ಇಟ್ಟಿಮಾಣಿ ಒಂದು ವಾರದಲ್ಲಿ ಒಟ್ಟು ಹಾಕಿದ. ಅವನೇ ಭಟ್ಕಳಕ್ಕೆ ಹೋಗಿ ನಾರಾಯಣಾಚಾರಿಗೆ ಮುಂಗಡಕೊಟ್ಟು ಭಾನುವಾರ ಬರುವುದಾಗಿ ಮಾತು ತೆಗೆದುಕೊಂಡು ಬಂದ. ಅಂದು ಹುಣ್ಣಿಮೆ. ಜನಕ್ಕೆ ಬಂದು ಹೋಗಲು ಅನುಕೂಲ. ಶನಿವಾರವೇ ಆಚಾರಿ ಬಂದ, ರಂಗಸ್ಥಳ ಎಲ್ಲಿ? ಊರಿನಲ್ಲಿ ಮೂರು ನಾಲ್ಕು ಸ್ಥಳ ಕಾಣಿಸಿದರು. "ಛೇ, ಸಾಧ್ಯವೇ ಇಲ್ಲ, ನನ್ನ ಕಾಲು ಕೈಚಳಕ ತೋರಿಸಲು ಸುತ್ತಲೂ ಮರಮಟ್ಟು ಇರಬೇಕು" ಎಂದ. ಕಡೆಗೆ ರಾಮತೀರ್ಥಗುಡ್ಡೆಯಲ್ಲಿ ಒಂದು ಜಾಗ ಪ್ರಶಸ್ತ ಎಂದ. ಅಲ್ಲಲ್ಲಿ ಮಾವಿನ ಮರ, ಗೇರುಗಿಡ, ತೆಂಗಿನಮರ. ಮಧ್ಯದಲ್ಲಿ ರಂಗಸ್ಥಳ ಕಟ್ಟಿದರಾಯಿತು ಎಂದ. ಭಾನುವಾರ ಸಂಜೆಗೆ ನಾರಾಯಣ, ಅವನ ಮಗ ವಾಸುದೇವ ಇಬ್ಬರೂ ಪತ್ತೆ ಇಲ್ಲ. ಬಂಕಿಕೊಡ್ಲದಲ್ಲಿ ಅವನ ಸಂಬಂಧಿಕರ ಮನೆ ಉಂಟು, ರಾಮಾಚಾರಿ ಮನೆ ಎಂದರು. ಸರಿ, ಹುಡುಗರು ಅಲ್ಲಿಗೇ ಹೋದರು. ಅಲ್ಲಿಲ್ಲ. ಬಳಲೆಯಲ್ಲಿ ಅವನ ತಂಗಿ ಮನೆ, ಅಲ್ಲಿಗೆ ಹೋಗಿರ್ವ ಎಂದರು. ಎಲ್ಲೂ ಇಲ್ಲ. ಇಟ್ಟಿಮಾಣಿ "ಆಟ ಶುರು ಆಗಲಿ" ಎಂದ. "ನಿನ್ನ ತಲೆ. ಆಚಾರಿಯೇ ಇಲ್ಲ" ಎಂದರು. "ಅಂವ ಬತ್ತ, ಮೇಕಪ್ ಮಾಡ್ಕಂಡೇ ಬತ್ತ" ಎಂದರು. ಹುಡುಗರು ಕೆಲವರು ಬ್ರಹ್ಮೇಶ್ವರಕ್ಕೆ ಹೋದರು. ಅಲ್ಲಿ ಯಾರೂ ಇಲ್ಲ. "ವಿಶ್ವಾಮಿತ್ರೇಶ್ವರದಲ್ಲಿ ದೀಪ ಕಾಣ್ತು" ಎಂದರು. ಅಲ್ಲಿಗೇ ಓಡಿದರು. ದೀಪ ಉಂಟು. " ಓಹೋ, ಇಲ್ಲೇ ಮೇಕಪ್ ಮಾಡ್ಕಂಡು ಹೋಜ" ಎಂದರು. ಇವರೆಲ್ಲಾ ಬರುವ ಹೊತ್ತಿಗೆ ಕಾಚಾ ತರ ಕೆಂಪು ಮಡಿ ಉಟ್ಟು ಮೈಗೆಲ್ಲಾ ಬಣ್ಣ ಬಳಿದುಕೊಂಡು ತಲೆಗೆ ಲಕಲಕ ಹೊಳೆದ ಚಿನ್ನದ ಕಿರೀಟ ತೊಟ್ಟು, ಹನುಮಂತ ಕುಣಿತಾನೆ, ಹಾರತಾನೆ!"ಇತ್ತ ಹನುಮಂತ ಲಂಕೆಯಲ್ಲಿ" ಎನ್ನುವ ಹೊತ್ತಿಗೆ ಭಾಗವತರ ಮಂಚದಿಂದ ಚಂಗನೆ ರಂಗಸ್ಥಳಕ್ಕೆ ಹಾರಿದ್ದ. ಎಲ್ಲರಿಗೂ ಆಶ್ಚರ್ಯ. " ಆ ಸತ್ತ ಇಟ್ಟಿಕುಟ್ಟಂಗೆ ಎಲ್ಲಾ ಗೊತ್ತಿತ್ತು, ಹೇಳಲಿಲ್ಲ" ಎಂದರು. ಇಲ್ಲಿ ಚಪ್ಪಾಳೆಯೋ ಚಪ್ಪಾಳೆ. ಸಮೀಪದ ಗೇರು ಮರಕ್ಕೆ ಹೋಗಿ ಚಂಗನೆ ಮರದ ಮೇಲಣ ಟೊಂಗೆಗೆ ಹಾರಿದ. ಅಲ್ಲಿಂದ ಸೀದಾ ಮಾವಿನ ಮರಕ್ಕೆ ಹಾರಿದ. ತಂದ ಮಾವಿನ ಹಣ್ಣನ್ನು ಮಂಗನಂತೆ ತಿಂದು ಗೊರಟೆಯನ್ನು ಜನರ ಮೇಲೆ ಬಿಸಾಕಿದ. ಜನ ಹುಚ್ಚೆದ್ದು ಕುಣಿದರು. ಹುಣ್ಣಿಮೆಯಾದ್ದರಿಂದ ಮರದ ಮೇಲೆ ಮಾರುತಿ ಚೇಷ್ಟೆ ಎಲ್ಲರಿಗೂ ಚೆನ್ನಾಗಿ ಕಂಡಿತು. ಮಾವಿನ ಮರದಿಂದ ತೆಂಗಿನ ಮರಕ್ಕೆ ಹಾರಬೇಕು, ಹಾರಿದ. ಕೈಜಾರಿ ಕೆಳಕ್ಕೆ ಬಿದ್ದ. ಹೋಹೋ ಎಂದು ಜನ ಬೊಬ್ಬೆ ಹೊಡೆದರು. ’ಹನುಮಂತ ಫೈಸಲ್’ ಎಂದ ಒಬ್ಬ ಚೇಷ್ಟೆಗೆ. ಅಲ್ಲೇ ಸಮೀಪದಲ್ಲಿದ್ದ ವೀರಭದ್ರ "ಏನು ಹೇಳ್ತೆ? ಹನುಮಂತ ಚಿರಂಜೀವಿ" ಎಂದು ಅವನ ಎರಡೂ ಕಪಾಳಕ್ಕೆ ಬಾರಿಸಿದ. ಅಲ್ಲಿದ್ದ ರಾಕ್ಷಸ ವೇಷಧಾರಿಗಳು ಬಿದ್ದ ಹನುಮಂತನನ್ನು ಹಗ್ಗದಿಂದ ಕಟ್ಟಿ ರಾವಣನ ಹತ್ತಿರ ಒಯ್ಯಬೇಕು ಎನ್ನುವಷ್ಟರಲ್ಲಿ ಹನುಮಂತ ಹಗ್ಗವನ್ನು ಪಟಪಟನೆ ಹರಿದು (ಹರಿದ ಹಗ್ಗವೇ ಇರಬೇಕು!) ರಾಕ್ಷಸರಿಗೆಲ್ಲಾ ಎರಡೆರಡು ಗುದ್ದು ಹೇರಿ ಓಡಿಹೋದ. ಹನುಮಂತ ಪತ್ತೆಯೇ ಇಲ್ಲ. ಅವನಿಗೆ ತಂದ ಶಾಲು ಹೊದಿಸಬೇಕೆಂದರೆ ಅವನೇ ಇಲ್ಲ. ಅದನ್ನು ಇಟ್ಟಿಮಾಣಿ ಕೈಲಿಕೊಟ್ಟು ’ಭಟ್ಕಳಕ್ಕೆ ನೀನು ಹೋದಾಗ ಕೊಡು’ ಎಂದರು. ನಾರಾಯಣಾಚಾರಿ, ಮಗ ಇಬ್ಬರೂ ತಾವು ಗೊತ್ತು ಮಾಡಿಕೊಂಡ ಜಾಗಕ್ಕೆ ಹೋಗಿ ವೇಷ ಕಳಚಿ ಸಿಂಗಲ್ ಚಹಾ ಕುಡಿದು ೦೫೩೦ಕ್ಕೆ ಹೊರಡುವ ಭಟ್ಕಳ ಬಸ್ಸಿನಲ್ಲಿ ಹೊರಟಿದ್ದರು. ಆಟ ಸುಖಾಂತವಾಯಿತು. ****** ನನ್ನ ಮದುವೆ ವಿಷಯ ಅರ್ಧಕ್ಕೆ ನಿಲ್ಲಿಸಿದ್ದೆ.ನೆನಪಿಸುವೆ:ಶ್ರಾವಣದಲ್ಲಿ ಹಂದೆಮಾವನೊಟ್ಟಿಗೆ ಹೋಗಿ ಹೆಣ್ಣು ನೋಡಿ ಒಪ್ಪಿಬಂದೆನಷ್ಟೆ? ನಾನು ಒಪ್ಪಿದ್ದೇನೆಂದು ತಂದೆಯವರಿಗೂ ತಿಳಿಸಿಯಾಗಿದೆ. ಮಾರ್ಗಶೀರ್ಷ ಶುದ್ಧ ಪಂಚಮಿಯಂದು ಮದುವೆ ಎಂದು ನಿರ್ಣಯಿಸಿದರು. ಮೂರೂರು, ಸಿರ್ಸಿ, ಹುಬ್ಬಳ್ಳಿ ಎಲ್ಲಾ ಕಡೆ ಮದುವೆ ಕರೆಯ ಹೋಯಿತು. ಕರ್ಮಾಂಗಗಳು ತದಿಗೆಯಿಂದಲೇ ಪ್ರಾರಂಭ. ಮಧ್ಯಾಹ್ನ ನೆಂಟರಿಗೆಲ್ಲಾ ಊಟ. ಮಧ್ಯಾಹ್ನ ೦೨೩೦ಕ್ಕೆ ದಿಬ್ಬಣವು ಓಲಗಸಮೇತ ತದಡಿಗೆ ಸ್ಪೆಶಲ್ ಬಸ್ಸಿನಲ್ಲಿ ಹೊರಟಿತು. ಸ್ಪೆಶಲ್ ದೋಣಿಯಲ್ಲಿ ಅಘನಾಶಿನಿಗೆ ಪ್ರಯಾಣ. ದೋಣಿಯಲ್ಲಿ ಹುಲಿಯ ಗರ್ನಾಲು ಹೊಡೆಯುತ್ತಿದ್ದ. ಬೆಂಕಿ ಹಚ್ಚಿ ಗರ್ನಾಲು ಎಸೆಯುತ್ತಿದ್ದ. ಬೀಡಿ ಬಾಯಿಗೆ ಇಡುತ್ತಿದ್ದ. ಹೊಸಮನೆ ದೊಡ್ಡಮಾಣಿ" ಏ ಹುಲಿಯಾ, ಗರ್ನಾಲು ಹಚ್ಚಿ ಬಾಯಿಗಿಟ್ಟುಕೊಂಡು ಬೀಡಿ ಹೊಳೆಗೆ ಎಸೆವೆ." ಎಲ್ಲಾ ನಗು. ದೊಡ್ಡದೊಂದು ತೆರೆ ಬಂದು ದೋಣಿಗೆ ಅಪ್ಪಳಿಸಿದಾಗ ನಿಂತಿದ್ದ ಜಯರಾಮ ಭಾವ, ಶಂಕರಣ್ಣ ಕೆಳಗೆ (ದೋಣಿ ಒಳಗೆ) ಬಿದ್ದರು. ಕುಳಿತಿದ್ದವರೆಲ್ಲಾ ಎದ್ದು ನಿಲ್ಲಲು ಶುರು. ವೆಂಕಟರಾಮ ಅಂಬಿಗರು ಹುಟ್ಟಿನಲ್ಲಿ ತಲೆ ಬಡಿದು ಕುಳಿತವರೆಲ್ಲಾ ನಿಂತರೆ ದೋಣಿ ಮುಳುಗುತ್ತದೆ ಎಂದರು. ಗಂಗೆ ಜಯರಾಮ ಭಾವ ಆಯತಪ್ಪಿ ಬಿದ್ದನಾದರೂ, ’ತಾನು ಅದಕ್ಕೇ ಕೂತಿದ್ದು’ ಎಂದ. ಅಂತೂ ಈಚೆ ದಡ ಬಂತು. ಕಾಲು ಫರ್ಲಾಂಗ್ ನೀರಿನಲ್ಲಿ ನಡೆದು ಹೋಗಬೇಕು. ದೋಣಿಯಲ್ಲಿ ನಾನೊಬ್ಬನೇ. ನನ್ನನ್ನ ರಾಮ ಹೊತ್ತು (ಮದುಮಗನಷ್ಟೆ?) ನೀರು ತಾಗದಂತೆ ಈಚೆ ದಡಕ್ಕೆ ತಂದು ಇಳಿಸಿದ. ಅಲ್ಲಿಂದ ಎಲ್ಲರೂ ಓಲಗದ ಮೇಲೆ ಊರ ಗಣಪತಿ ದೇವಸ್ಥಾನಕ್ಕೆ ಬಂದೆವು. ಉಳಿದವರೆಲ್ಲಾ ಗಣಪತಿಗೆ ನಮಸ್ಕರಿಸಿ ನೆಂಟರ ಮನೆಗೆ ಚಹಾ ತಿಂಡಿಗೆ ಹೋದರು. ಗಣಪತಿ ದೇವಸ್ಥಾನದಲ್ಲಿ ನಾನು, ಹೆಣ್ಣಿನ ಪೈಕಿ ಒಬ್ಬಿಬ್ಬರು ಉಳಿದೆವು. ಸ್ವಲ್ಪ ಹೊತ್ತಿನಲ್ಲಿ ನನ್ನ ಸೋದರಮಾವ ಒಂದು ಹರಿವಾಣದಲ್ಲಿ ಒಂದು ಸಹಿ, ಎರಡು ಖಾರ, ಬಾಳೆಹಣ್ಣು ತಂದ ಅಳಿಯನಿಗೆ ಮತ್ತು ಮೂರೂರು ಭಾವನಿಗೆ. ಬಹುತೇಕ ರಾತ್ರಿ ೦೧:೨೦ರ ಮದುವೆ. ಆದುದರಿಂದ ಗಣಪತಿ ದೇವಸ್ಥಾನಕ್ಕೆ ಪುನಃ ಬಾಸಿಂಗ ಕಟ್ಟಿ ನಮಸ್ಕರಿಸಿ ದಿಬ್ಬಣ ಹೊರಟಿತು. ದಾರಿ ಉದ್ದಕ್ಕೂ ಗರ್ನಾಲು ಹೊಡೆದದ್ದು, ಓಲಗ ಬಾರಿಸಿದ್ದು, ಸಭಾಹಿತರ ಮನೆ ದಣಪೆ ಹತ್ತಿರ ನೆಂಟರು ನೆಂಟರನ್ನು ಎದುರುಗೊಳ್ಳಲು ಬಂದಿದ್ದಾರೆ. ಹೆಂಗಸರಂತೂ ಎರಡೂ ಕಡೆಯವರು ಪಟ್ಟೆ ಚಿನ್ನಾಭರಣಗಳಿಂದ ಶೃಂಗರಿಸಿಕೊಂಡಿದ್ದಾರೆ. ನೆಂಟರು ನಮಗೆ ಲಾಜ(ಹೊದ್ದಲು) ಎಸೆಯುತ್ತಿದ್ದಾರೆ. ಆ ಮನೆಯ ಮಗಳು ಮಂಕಾಳತ್ತೆ, ಅವಳ ಪತಿ ಗಪ್ಪಭಾವ ಎಲೆ ಅಡಿಕೆ ಕೊಟ್ಟು ಕೈ ಹಿಡಿದು ಒಳಗೆ ಕರೆದುಕೊಂಡು ಹೋದರು. ದೇವರ ಎದುರಿನ ಹೆಬ್ಬಾಗಿಲಿನಲ್ಲಿ ನನ್ನ ಅತ್ತೆ, ಮಾವ. ಜರಿಸೀರೆ, ಮುಗುಟಗಳೊಂದಿಗೆ ಪುರೋಹಿತರ ಸಮೇತ ಎದುರು ನಿಂತಿದ್ದರು. ಕಾಲಿಗೆ ನೀರು ಹಾಕಿ ಶಾಸ್ತ್ರೋಕ್ತವಾಗಿ ಸ್ವಾಗತಿಸಿದರು. ಒಳಗೆ ಹೋಗಿ ಮಂಟಪದಲ್ಲಿ ಕೂರಿಸಿದರು. ನನ್ನ ಸಣ್ಣತ್ತೆ ಆಗುವವಳು ಒಂದು ಬೆಳ್ಳಿ ಲೋಟದಲ್ಲಿ, ಹಾಲು ಸಕ್ಕರೆ ಕೊಟ್ಟಳು. ಅದರಲ್ಲಿ ಸ್ವಲ್ಪ ಕುಡಿದೆ. ಮಾವನ ಮನೆಯಲ್ಲಿ ದಾಕ್ಷಿಣ್ಯ ಮಾಡಿಕೊಳ್ಳಬೇಕು! ನಮ್ಮ ತಂದೆ, ತಾಯಿಯರು ಹೂವು, ಹಣ್ಣು, ಚಿನ್ನಗಳೊಂದಿಗೆ ಮದುವೆ ಹೆಣ್ಣು ನಿಶ್ಚಯಕ್ಕೆ (ಆಗೆಲ್ಲಾ ನಿಶ್ಚಿತಾರ್ಥ,ಲಗ್ನಕ್ಕೆ ಸ್ವಲ್ಪ ಹೊತ್ತು ಮೊದಲು) ಹೆಣ್ಣಿನ ಮನೆಯೊಳಗೆ ದೇವರ ಒಳಕ್ಕೆ ಹೋಗಿರಬೇಕು. ಲಗ್ನ ಮುಹೂರ್ತಕ್ಕೆ ಸರಿಯಾಗಿ ಮಂಟಪಕ್ಕೆ ಹೆಣ್ಣನ್ನು ಅವಳ ಸೋದರಮಾವ ಹೊತ್ತು ಕರೆತಂದ. ಈ ಹೊತ್ತಿಗೆ ಸರಿಯಾಗಿ ನನ್ನ ಸ್ನೇಹಿತ, ಸಹೋದ್ಯೋಗಿ ಶ್ರೀ ಜಿ.ಜಿ. ಹಳದಿಪುರ ತಮ್ಮ ಕಲಾಪ್ರತಿಭೆಯಿಂದ ಎಲ್ಲರನ್ನೂ ಅಚ್ಚರಿಗೊಳಿಸಿದರು. ಒಂದು ಫೂಟ್ ಉದ್ದದ ಬಾಳೆದಿಂಡಿಗೆ ಅಚ್ಚುಕಟ್ಟಾಗಿ ಅತ್ತರದ ಹೂವಿನ ಕಡ್ಡಿಗಳನ್ನು ಚುಚ್ಚಿ ಹತ್ತಿಯ ಚೂರಿಗೆ ಅತ್ತರ ಬಡಿದು ಎಲ್ಲರಿಗೂ ಒಂದೊಂದು ಕೊಟ್ಟರು. ಎಂಥ ಪರಿಮಳ! ಎಲ್ಲರೂ ಭೇಷ್ ಎಂದರು. ಮದುವೆಗೆ ಡಾ.ಹಳಕಾರ ಬಂದಿದ್ದರು. ಇನ್ನೆರಡು ಹೂವುಗಳನ್ನು ಕೇಳಿ ತೆಗೆದುಕೊಂಡರು. ಮೊಳಗುತ್ತಿರುವ ಓಲಗ, ಸುವಾಸಿನಿಯರ ಮಂಗಲ ಹಾಡು, ಪುರೋಹಿತರ ಮಂತ್ರಘೋಷಗಳ ನಡುವೆ ಮಾಲೆಗಳ ವಿನಿಮಯವಾಯಿತು. ಸಭಾಪೂಜೆಯ ಮಂತ್ರಗಳು ಆಕರ್ಷಣೀಯವಾಗಿದ್ದವು. "ವಂದೇ ಸಭಾಮಂಟಪಂ". ರಾತ್ರಿಯೇ ಮದುವೆ ಊಟ. ಊಟವಾದವರೇ ರಾತ್ರಿಯೇ ಸ್ಪೆಶಲ್ ದೋಣಿ ಮಾಡಿಕೊಂಡು ಗೋಕರ್ಣದ ಕೆಲ ಗಂಡಸರು ಹೊರಟರು. ಕುಮಟಾ ಕಡೆಯವರೂ, ಹೊಲನಗದ್ದೆವರೆಗಿನವರೂ ಹೊರಟರು. ಮಾರನೇ ದಿನ ಊರಿನವರಿಗೆ ಊಟ. ಮನೋಹರ, ಬೋಂಡಾ ಭಕ್ಷ್ಯ. ಪಾಯಸ - ಮದುವೆ ಪಾಯಸ ಉಂಟೇ ಉಂಟು. ಅದಕ್ಕೂ ಮಾರನೇ ದಿನ ಬಹುತೇಕ ಸೋಮವಾರ ಬೆಳಗಿನ ೧೦.೩೫ಕ್ಕೆ ಗೃಹಪ್ರವೇಶ. ಅಘನಾಶಿನಿಯಿಂದ ದಿಬ್ಬಣ ಬೆಳಗಿನ ಆರಕ್ಕೇ ಹೊರಟಿತು. ಏಕೆಂದರೆ ಬಸ್ಸು ಏಳಕ್ಕೆ. ಸರಿ, ಗೋಕರ್ಣಕ್ಕೆ ನಾವು ವಧೂವರರು, ನೆಂಟರು ತಲುಪಿದೆವು. ಉಳಿದವರೆಲ್ಲ ನಮ್ಮ ಮನೆಗೇ ಹೋದರು. ನಾವಿಬ್ಬರು ಮಾತ್ರ ಪಕ್ಕದ ಅನಂತಜ್ಜನ ಮನೆಯಲ್ಲಿ ಉಳಿದೆವು.ಊರನ್ನು ಆಮಂತ್ರಿಸಲು ಓಲಗದ ಮೇಲೆ ಗಂಡಿನ ಕಡೆ ಏಳೆಂಟು ಜನ, ಹೆಣ್ಣಿನ ಕಡೆಯಿಂದ ಐದಾರು ಜನ ಹೊರಟರು. "ಕೊಡ್ಲೆಕೆರೆ ಅನಂತಭಟ್ಟರ ಮನೆಲಿ ನೂತನ ವಧೂವರರ ಗೃಹಪ್ರವೇಶ. ಎಲ್ಲರೂ ಬರೋ". ಎಲ್ಲರಿಗೂ ಆಮಂತ್ರಣ ಕೊಟ್ಟರು. ಅದೊಂದು ರಿವಾಜು. ಸರಿ, ಗೃಹಪ್ರವೇಶ ಆಗುವಾಗ ಬಿತ್ತಕ್ಕಿ ಅಕ್ಕ, ಒಳಗೆ ಹೋಗಲು ಬಿಡುವುದಿಲ್ಲ. ಅಡ್ಡಕಟ್ಟುತ್ತಾಳೆ: "ಹೆಣ್ಣು-ಹೊನ್ನು, ಇವುಗಳಲ್ಲಿ ನೀವು ಏನನ್ನು ಕೊಡುವಿರಿ?" ಸೋದರ ಹೆಣ್ಣು ಮಾಡಿಸಿಕೊಳ್ಳಲು ಬಿತ್ತಕ್ಕಿ ಅಕ್ಕನಿಗೆ ಆತುರ. ನಾವು "ಹೆಣ್ಣು ಕೊಡುತ್ತೇವೆ" ಎಂದೆವು. ಸಾಮಾನ್ಯವಾಗಿ ಅದೇ ವಾಡಿಕೆ. ನಂತರ ಒಂದು ಹೃದಯಸ್ಪರ್ಶಿ ಕಾರ್ಯಕ್ರಮ. ಅತ್ತೆ, ಮಾವ ನನ್ನ ತಂದೆ, ತಾಯಿಯರಿಗೆ ಮಾಡುವ ಕಳಕಳಿಯ ಪ್ರಾರ್ಥನೆ. ಹೆಣ್ಣನ್ನು ಕೈಯೆತ್ತಿ ಬೀಗರಿಗೆ ಒಪ್ಪಿಸುವುದು. ವಿ.ಸೀಯವರ "ನಮ್ಮ ಮನೆಯಂಗಳದಿ" ಹಾಡನ್ನು ಅಳುತ್ತಾ ಹೇಳುತ್ತಾರೆ. ವೇದಮಂತ್ರದಲ್ಲಿ ಇದೇ ಅರ್ಥದ ಶ್ಲೋಕಗಳನ್ನು ಪುರೋಹಿತರು ಹೇಳುತ್ತಾರೆ. ಅದಕ್ಕೆ ನಮ್ಮ ತಂದೆಯವರ ಪ್ರತ್ಯುತ್ತರ ಅಭೂತ!!" ನೋಡಿ, ನಿಜವಾಗಿ ಎಂದರೆ ನನ್ನ ಮಗನನ್ನು ನಿಮ್ಮ ಮಗಳ ಕೈಯಲ್ಲೂ ಇಟ್ಟಿದ್ದೇವೆ. ಪರಸ್ಪರರು ಒಬ್ಬರನ್ನು ಇನ್ನೊಬ್ಬರು ಅರಿತು ಜೀವನದುದ್ದಕ್ಕೂ ಸ್ನೇಹಿತರಂತೆ ವರ್ತಿಸುತ್ತಿರಲಿ. ಗುರು ಹಿರಿಯರಿಗೆ ವಿಧೇಯರಾಗಿ ವರ್ತಿಸುತ್ತಿರಲಿ. ಎರಡೂ ಕುಟುಂಬಗಳಿಗೆ ಒಳ್ಳೆ ಹೆಸರನ್ನು ತರಲಿ". ನಂತರ ನೂತನ ವಧೂವರರಿಂದ ಸತ್ಯನಾರಾಯಣ, ಸತ್ಯಗಣಪತಿ ವ್ರತ. ಊರಿನ ನೆಂಟರಿಷ್ಟರಿಗೆ ಸಿಹಿಭೋಜನ. ಗಂಗೆ ಜಯರಾಮಭಾವನು ಹಾಲು ತರುವಾಗ ಅವನ ಹೆಂಡತಿ (ಕಾವೇರತ್ತೆ) ಎಚ್ಚರಿಸಿದ್ದಾಳೆ: "ನಾವಡರ ಮನೆ ಹತ್ತಿರ ಜಾರ್ತದೆ.ಹುಷಾರಿ". ಇಂವ ಜಾರುವ ಜಾಗ ಎಲ್ಲಿ ಎಲ್ಲಿ ಎಂದು ಕಾಲಿಂದ ಪರೀಕ್ಷಿಸಿ ಕಡೆಗೂ ಜಾರಿ ಬಿದ್ದು ಹಾಲು ಚೆಲ್ಲಿದ. ****** ಮತ್ತೊಮ್ಮೆ ನೆನಪುಗಳು ಹಿಂದಕ್ಕೆ........ತೀರ್ಥಹಳ್ಳಿಗೆ....... ತೀರ್ಥಹಳ್ಳಿಗೆ ಬಂದ ಮೇಲೆ ನಾವು ಒಂಬತ್ತು ಗಂಡು ಮಕ್ಕಳಾದೆವು. ನನಗೆ ವೈಯಕ್ತಿಕ ಲಾಭ ಇನ್ನೂ ಮೂರು ಸಹೋದರರ ಬೆಂಬಲ. ಗೋಕರ್ಣದಲ್ಲಿದ್ದಾಗ ನಾನು ಆರರಲ್ಲಿ ಒಬ್ಬನಾಗಿದ್ದೆ. ಈಗ ಒಂಬತ್ತರಲ್ಲಿ ಮೂರನೇ ರ‍್ಯಾಂಕ್. ಆದ್ದರಿಂದ ನನಗೆ ಈ ಮೂವರ ಮೇಲೆ ಪ್ರೀತಿ ಹೆಚ್ಚು. ರಾಜಾರಾಮ ಏಳನೆಯವ, ವಿಶ್ವನಾಥ ಎಂಟನೆಯವ, ವಸಂತ ಒಂಬತ್ತನೆಯವ. ರಾಜಾರಾಮ, ವಿಶ್ವನಾಥರ ನಡುವೆ ಅಂತರ ಕಡಿಮೆ. ಅದರಿಂದ ಹುಬ್ಬಳ್ಳಿ ಗೌರಕ್ಕ ರಾಜಾರಾಮನನ್ನು ತಾನೇ ಒಯ್ದು ಬೆಳೆಸಿದಳು. ಅವನಿಗೆ ನಾವೆಲ್ಲಾ ಹುಬ್ಬಳ್ಳಿ ಎಂದೇ ಕರೆಯುತ್ತಿದ್ದೆವು. ತಂದೆಯವರು ಶ್ರೀರಾಮಚಂದ್ರ ಭಾರತೀ ಸ್ವಾಮಿಗಳೊಡನೆ ಕಾಶಿಯಾತ್ರೆ ಮಾಡಿದ ಕಾಲದಲ್ಲಿ ಹುಟ್ಟಿದವನು ವಿಶ್ವನಾಥ. ಎಂಟು ಮಕ್ಕಳ ನಂದನವನವನ್ನು ನವನಂದನವನವನಾಗಿ ಪರಿವರ್ತಿಸಿದವನು, ಎಲ್ಲ ಗಿಡಗಳು ಚಿಗುರುವಂತೆ ಮಾಡಿ ವಸಂತವನ್ನು ತಂದವನೇ ವಸಂತರಾಜ. ಕೆಂಪು ಬೆಳ್ಳಗೆ ಇದ್ದು, ಸುಂದರವಾಗಿ ಕಾಣುತ್ತಿದ್ದ. ಅಮ್ಮನಿಗೆ ಹೆಣ್ಣುಮಕ್ಕಳಿಲ್ಲ ಎನ್ನುವ ಕೊರಗನ್ನು ತನ್ನ ರೂಪದ ಮೂಲಕ ತೊಡೆದು ಹಾಕಿದ. ಇವನಿಗೇ ಹೆಣ್ಣು ಡ್ರೆಸ್ ಮಾಡಿಸಿ ಕಾಲಿಗೆ ಗೆಜ್ಜೆ, ಕೈಗೆ ಬಳೆ ಹಾಕಿ ಲಂಗ ಹಾಕಿ ತೆಗೆದ ಫೋಟೋ ಈಗಲೂ ಇರಬೇಕು. ಅದನ್ನು ಅವನು ತೋರಿಸುತ್ತಿಲ್ಲ. "ಜ್ವಾಲೆ" ನಾಟಕದ ಗಂಗೆ ಪಾರ್ಟು ಎಲ್ಲರೂ ಮೆಚ್ಚಿದರು. ಕೂರ್ಸೆ ಗಣಪತಿಯ ಜ್ವಾಲೆ, ದಿಗ್ದರ್ಶನ ನನ್ನದೇ. ನಮ್ಮ ಸ್ಕೂಲ್ ಗೇದರಿಂಗ್‌ನಲ್ಲಿ. ವಿಶ್ವನಾಥ ಚಿಕ್ಕವನಿದ್ದಾಗ ಒಮ್ಮೆ ನಮ್ಮ ಮಠದ ಒಂದು ಕೋಣೆಯಲ್ಲಿ ಅವನನ್ನು ಆಡಿಸುತ್ತಿದ್ದೆ. ಆಗೆ ಗೋಡೆಗುಂಟ ಒಂದು ನಾಗರಹಾವು ಹರಿದಾಡುತ್ತಾ ಇದ್ದುದನ್ನು ಮೊದಲು ನೋಡಿದ ಇವನು "ಮಾಚಣ್ಣ" ಎಂದು ಹಾವನ್ನು ಅಭಿನಯದ ಮೂಲಕ ತೋರಿಸಿದ. "ಬದುಕಿದೆಯಾ ಬಡಜೀವ" ಎಂದು ಅವನನ್ನು ಎತ್ತಿಕೊಂಡು ಹೊರಗೆ ಬಂದೆ. ಇವನಿಗೆ ಈಶ ಎಂದು ಈಗಲೂ ಕರೆಯುತ್ತೇವೆ. ಒಂದು ದಿನ ನನ್ನ ಹತ್ತಿರ ಎರಡು ಬೆರಳು ಕಾಣಿಸುತ್ತಾ "ಆನೆಗೆ ಇದು, ಇದು ಬಾಲ ಯಾಕೆ?".ಆಗ ನಾನು ನಗೆ ಆಡಲಿಲ್ಲ. "ಮುಂದಿನದು ಅದರ ಕೈ. ತಿನ್ನುವುದಕ್ಕೆ ಹಣ್ಣು, ಕಾಯಿ ತೆಗೆದುಕೊಳ್ಳಲು ಅದನ್ನು ಉಪಯೋಗಿಸುತ್ತದೆ. ಹಿಂದಿನದು ನೀನು ಎಂದಂತೆ ಬಾಲ" ಎಂದೆ. "ಗೊತ್ತಾಯಿತಾ ಕೇಳಿದ್ದಕ್ಕೆ "ಹೌದು" ಎಂದ. ವಸಂತಸೇನಾ ಸಂಸ್ಕೃತ ನಾಟಕದಲ್ಲಿ ಮೈತ್ರೇಯಿ ಪಾತ್ರವನ್ನು ಮಾಡಿ ಪ್ರೇಕ್ಷಕರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದುಂಟು. ಸ್ವಲ್ಪ ಹಠದ ಸ್ವಭಾವದವ. ಅವನು ಹೇಳಿದಂತೆ ಆಗಬೇಕು. ಒಮ್ಮೆ ಕಬ್ಬಿಣದ ಮೊಳೆಯನ್ನು ಬಾಯಲ್ಲಿ ಹಾಕಿಕೊಂಡು ತೆಗೆ ಎಂದರೆ ತೆಗೆಯುತ್ತಿಲ್ಲ. ಏನೇ ಹೇಳಿದರೂ, ಎಷ್ಟೇ ಹೇಳಿದರೂ ತೆಗೆಯಲಿಲ್ಲ. ನನಗೆ ಸಿಟ್ಟು ಬಂತು. ಚಕ್ರತೀರ್ಥದಲ್ಲಿ ನಿನ್ನನ್ನು ಮುಳುಗಿಸುತ್ತೇನೆ ಎಂದರೂ ಜಗ್ಗಲಿಲ್ಲ. ಹೊಳೆಗೆ ಕರೆದುಕೊಂಡು ಹೋಗಿ ಕಾಲನ್ನು ನೀರಿನಲ್ಲಿ ಇಟ್ಟರೂ ತೆಗೆಯಲಿಲ್ಲ. ಕಡೆಗೆ ನಾನೇ "ಹಾಗಾದರೆ ಇನ್ನು ಹಾಗೆ ಮಾಡಬೇಡ, ತೆಗೆ" ಎಂದೆ. ಏನು ಕಂಡಿತೋ, ತೆಗೆದ! ಹೊಳೆ ಹತ್ತಿರ ಇದ್ದ ರಾಮಾಚಾರ್ಯರು "ಏನು ಮಹಾಬಲಭಟ್ಟರೇ, ಇದೆಲ್ಲಾ" ಎಂದರು. ಕಾಲೋಚಿತವಾಗಿ ಏನೋ ಹೇಳಿ ತಪ್ಪಿಸಿಕೊಂಡೆ. ರಾಜಾರಾಮ (ಬಾಲಕೃಷ್ಣ) ಗಂಭೀರ, ಹಾಸ್ಯ ಕಡಿಮೆ. ಆದರೆ ಹಾಸ್ಯ ಅರ್ಥಮಾಡಿಕೊಳ್ಳುವ, ಅನುಭವಿಸುವ ವ್ಯಕ್ತಿ. ದಸರಾ ರಜೆಗೆ ಗೌರವಕ್ಕನ ಜೊತೆ ತೀರ್ಥಹಳ್ಳಿಗೆ ಬರುವವನು. ಇಲ್ಲಿ ನಮ್ಮಮ್ಮ ಕೇಳಿದಳು: "ಅಲ್ದೊ ರಾಜಾ, ಹುಬ್ಬಳ್ಳಿಯಲ್ಲಿ ಹುಲಿವೇಷ ಕಂಡರೆ ಹೆದರಿಕೆ ಇಲ್ಲೆ. ಇಲ್ಲಿ ಯಾಕೆ ಹೆದರ್ತೆ?" ಅದಕ್ಕೆ ಅವನ ಉತ್ತರ ಚೆನ್ನಾಗಿತ್ತು: "ಸುಬಕಾ, ಅವರು ಮನ್ಸಾರ್ ಅಂತ ಗೊತ್ತದ. ಬಣ್ಣ ಹಚ್ಚಿದ್ ನೋಡೀನಿ". ****** ಶಿಕ್ಷಕರ ದಿನಾಚರಣೆ: ಇಂದು ಸೆಪ್ಟೆಂಬರ್ ೫, "ಅಪ್ಪ, ಶಿಕ್ಷಕರ ದಿನಾಚರಣೆ ನಾವೆಲ್ಲರೂ ಆಚರಿಸಬೇಕು. ನೀವು ಶಿಕ್ಷಕರು. ನೀವು ಯಾಕೆ ಆಚರಿಸಬೇಕು?" ಕೇಳಿದಳು ಜಯಲಕ್ಷ್ಮಿ. "ಜಯಕ್ಕ, ನೀನು ಕೇಳುವುದು ಕೇಳಬೇಕಾದದ್ದೇ, ಆದರೆ ಕೇಳುವುದಿಲ್ಲ. ಅವರಿಗೆ ಹೆದರಿಕೆ. ನಿನಗೆ ನಿನ್ನಪ್ಪನೇ ಶಿಕ್ಷಕ ಇರಲಿ.ನಾನು ನಿನಗೆ ಶಿಕ್ಷಕ. ನನಗೂ ಒಬ್ಬ ಶಿಕ್ಷಕ ಇರಬೇಕಲ್ಲವೇ? ಗುರು,ಗುರುವಿನ ಗುರು, ಅವನ ಗುರು ಪರಮೇಷ್ಠಿಗಳು, ಅವನ ಗುರು, ಪರಾತ್ಪರಾ ಗುರು.... ಪರಾತ್ಪರಾಗುರು ತವಚರಣಂ. ನಮಾಮಿ ಶಂಕರ, ಭವಾನಿ ಶಂಕರ, ಉಮಾಮಹೇಶ್ವರ ತವಚರಣಂ. ಈ ಉಮಾ ಮಹೇಶ್ವರನೇ "ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ, ಚಕ್ಷುರುನ್ಮೀಲನಂ ಯಸ್ಯ, ತಸ್ಮೈ ಶ್ರೀಗುರುವೇ ನಮಃ".ಜನರಲ್ಲಿ ಅಜ್ಞಾನ ಎನ್ನುವ ಕತ್ತಲೆ ಆವರಿಸಿರುತ್ತದೆ. ಅದರ ನಿವಾರಣೆಗೆ ಬೆಳಕಿನ ಅವಶ್ಯಕತೆ ಇದೆ. ಇಲ್ಲಿ ಗುರುವಿನಿಂದ ಬೆಳಕು, ಜ್ಞಾನಾಂಜನ. ಈ ಬೆಳಕು ಎಲ್ಲ ಕಡೆ ತಲುಪಿದೆಯೇ ಇಲ್ಲವೇ ಎಂದು ನೋಡಲು ಗುರು ಬಿಟ್ಟ ಕಣ್ಣನ್ನು ಮುಚ್ಚುವುದಿಲ್ಲ. ಇವೆಲ್ಲಾ ನಿಮಗೆ ಪಾಠ ಓದುವಾಗ ಎಚ್ಚರವಾಗಿರಬೇಕು. ಇದೇ ಶಿಕ್ಷಕರ ದಿನಾಚರಣೆಯ ಸಂದೇಶ. ಸೆಪ್ಟೆಂಬರ ಐದರ ಮಹತ್ವವೇನು? ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಪೌರಾತ್ಯ, ಪಾಶ್ಚಿಮಾತ್ಯ ತತ್ತ್ವಶಾಸ್ತ್ರಗಳೆರಡನ್ನೂ ಆಮೂಲಾಗ್ರವಾಗಿ ಅಭ್ಯಸಿಸಿದವರು. ಅವರನ್ನು ಹಿಂದೂ ವೇದಾಂತದ ವಿಷಯದಲ್ಲಿ "ಎರಡನೆಯ ಶಂಕರ" ಎನ್ನುತ್ತಿದ್ದರು. ವಿದೇಶಗಳಲ್ಲಿ ಹಿಂದೂ ತತ್ತ್ವದ ಮೇಲೆ ಉಪನ್ಯಾಸ ಮಾಡುತ್ತಿದ್ದರು. ಒಮ್ಮೆ ಇಂಗ್ಲೆಂಡಿನಲ್ಲಿ ಇವರ ಭಾಷಣ ಏರ್ಪಾಡಾಗಿತ್ತು. ಮೊದಲ ಎರಡು ದಿನ ಬೆರಳೆಣಿಕೆಯಲ್ಲಿ ಎಣಿಸುವಷ್ಟು ಜನ. ಆದರೆ ಇವರ ಭಾಷಣ ಕೇಳಿದ ಜನ ನದೀ ದಡದಿಂದ ಭಾಷಣದ ಹಾಲಿಗೆ ಬಂದರಂತೆ. ಮೂರನೇ ದಿನ ನದಿ ದಂಡೆಯಲ್ಲಿ ಬೆರಳಣಿಕೆಯಷ್ಟು ಜನ ಮಾತ್ರ! ಇವರು ಎರಡು ಅವಧಿ ನಮ್ಮ ರಾಷ್ಟ್ರಪತಿ ಆಗಿದ್ದರು. ಈ ಮೇಧಾವಿಯ ಜನ್ಮದಿನ ಸೆಪ್ಟೆಂಬರ್ ೫. ನೆಹರೂ ಅವರ ಜನ್ಮದಿನಾಚರಣೆಯನ್ನು ಬಾಲಕರ ದಿನಾಚರಣೆ, ಗಾಂಧಿಯವರ ದಿನಾಚರಣೆಯನ್ನು ಸರ್ವೋದಯ ದಿನ ಎಂದು ಆಚರಿಸುತ್ತಾರೆ. "ನಿಮ್ಮ ದಿನವನ್ನು ಏನೆಂದು ಆಚರಿಸಬೇಕು?’ ಎಂದು ಕೇಳಿದಾಗ ಡಾ.ರಾಧಾಕೃಷ್ಣನ್ "ನಾನು ನನ್ನ ಜೀವಿತದಲ್ಲಿ ಶಿಕ್ಷಕನಾಗಿದ್ದುದೇ ಹೆಚ್ಚು ಕಾಲ. ದೇಶ, ವಿದೇಶಗಳಲ್ಲಿ ಸಂಚಾರೀ ಶಿಕ್ಷಕನಾಗಿದ್ದೆ. ನೀವು ನನ್ನ ಜನ್ಮದಿನ ಆಚರಿಸುವುದಾದರೆ ಶಿಕ್ಷಕ ದಿನಾಚರಣೆಯಾಗಿ ಆಚರಿಸಿರಿ" ಎಂದರು. ನಾನು ಓದಿದ ಸೆಂಟ್ರಲ್ ಕಾಲೆಜಿನಲ್ಲಿ ಅವರು ಕೆಲಕಾಲ ಶಿಕ್ಷಕರಾಗಿದ್ದರಂತೆ. ಇದು ಸಹಜವಾಗಿಯೇ ನನಗೆ ಹೆಮ್ಮೆಯ ವಿಷಯ. ಶಿಕ್ಷಕರ ದಿನಾಚರಣೆ ಶಿಕ್ಷಕರ ಕರ್ತವ್ಯಗಳ ಬಗೆಗೆ, ಶಿಕ್ಷಕರ ಕುರಿತು ಸಮಾಜದ ಕರ್ತವ್ಯಗಳ ಬಗೆಗೆ ಆಲೋಚಿಸಲು ಒಂದು ಸಂದರ್ಭ. ಇತ್ತೀಚೆಗೆ ಆದರ್ಶಶಿಕ್ಷಕರನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಇವು ವೈಯಕ್ತಿಕ ಮಟ್ಟದಲ್ಲಿ ಸಲ್ಲುವ ಗೌರವಗಳು. ಸಾಮೂಹಿಕ ಹಿತವನ್ನೂ ಯೋಚಿಸಬೇಕು. ಶಿಕ್ಷಕ ಸಮೂಹಕ್ಕೆ ಸಮಾಧಾನಕೊಡುವ ಯೋಜನೆಗಳು ಬರಲಿ. ಡಾ.ರಾಧಾಕೃಷ್ಣನ್‌ರ ಒಂದು ಸೂಕ್ತಿ ಇದೆ: "ಯಾವ ಶಿಕ್ಷಣ ವಿಧಾನವೂ ಶಿಕ್ಷಕನಿಗಿಂತ ಉತ್ತಮವಾದುದಲ್ಲ" ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ಎಷ್ಟೇ ನೂತನವಾದುದಾದರೂ ಶಿಕ್ಷಕನೇ ಉತ್ತಮ ಸುಧಾರಕ. ಧನುರ್‌ಮಡ್ಡಿ ಧನುರ್ಮಾಸದ ಒಂದು ತಿಂಗಳು ಸೂರ್ಯೋದಯಕ್ಕೆ ದೇವರ ಪೂಜೆ, ನೈವೇದ್ಯ ಆಗಬೇಕು. ದೇವಸ್ಥಾನಗಳಲ್ಲಿ ಇಡೀ ಮಾಸದ ಆಚರಣೆ. ಮನೆಗಳಲ್ಲಿ ಸಾಂಕೇತಿಕವಾಗಿ ಒಂದು ದಿನ ಆಚರಣೆ. ಸಂಬಂಧಿಕರನ್ನು ಊಟಕ್ಕೆ ಕರೆಯುತ್ತಾರೆ. ಅಂದು ಕಿಚಡಿ - ಅನ್ನದಿಂದ ಮಾಡುವ ವಿಶೇಷ ಅಡುಗೆ. ಅರಿಸಿನ, ಹೆಸರುಬೇಳೆ, ಹಸಿಶುಂಠಿ, ಹಸಿಮೆಣಸು ಬೇರೆ ಬೇರೆ ಪ್ರಮಾಣದಲ್ಲಿ ಕೊಚ್ಚಿ ಹಾಕುತ್ತಾರೆ. ಉದ್ದಿನ ದೋಸೆ, ಕಡಲೆಹಿಟ್ಟಿನ ಜುಣಕ (ಜುಳಕ) - ಈ ವ್ಯಂಜನ ಮಹಾರಾಷ್ಟ್ರ ಮೂಲದ್ದು. ದೋಸೆ ಜೊತೆ ವಿಶೇಷ ರುಚಿಯಾಗಿರುತ್ತದೆ. ಪಾಯಸ ಕೂಡ ಜೊತೆಗೆ. ಪಕ್ಕದ ಮನೆ ಫಣಿಯಕ್ಕನ ಮನೆ, ಅಲ್ಲಿ ಧನರ್ಮಾಸದ ಊಟಕ್ಕೆ ನವದಂಪತಿಗಳನ್ನು ಕರೆದಿದ್ದಾರೆ. ಅಂದೇ ಜೋಗಾಪ್ರವಾಸ. ಈ ಎರಡಕ್ಕೂ ನಾನಿರಬೇಕು. ನನ್ನ ಸಂದರ್ಭ ಅರಿತು ಶ್ರೀ ಜಿ.ಜಿ. ಹಳದಿಪುರ ಸೈಕಲ್ ತಂದು ಕಾಯುತ್ತಿದ್ದರು. ಊಟವಾದ ಮೇಲೆ "ಫಣಿಯಕ್ಕ, ಬತ್ನೇ" ಅಂದವನೇ ಹಳದಿಪುರರ ಡಬಲ್ ರೈಡ್‌ನಲ್ಲಿ ಬಸ್ ಸ್ಟ್ಯಾಂಡಿಗೆ. ಬಸ್ ಹೊರಡುವ ಸಮಯ ಆಗಿಬಿಟ್ಟಿತ್ತು. ಬಸ್ ಏಜೆಂಟ್ ಶ್ರೀ ವೆಂಕಟ್ರಮಣ ಶೆಟ್ಟರು ನಮಗಾಗಿ ಎರಡು ನಿಮಿಷ ತಡೆದು ಸಹಕರಿಸಿದರು. ಹಂಪೆ ಪ್ರವಾಸಕ್ಕೆ ನಾನು ಸಪತ್ನೀಕನಾಗಿ ಮಗುವಿನೊಂದಿಗೆ ಹೊರಟವ. ನನ್ನದು ಸ್ವಾಮಿ ಕಾರ್ಯ, ಸ್ವಕಾರ್ಯ - ಎರಡೂ. ನನ್ನ ಹೆಂಡತಿ, ಮಗುವನ್ನು ಗದಗಿನ ನನ್ನ ತಮ್ಮನ ಬಿಡಾರದಲ್ಲಿ ಬಿಟ್ಟು ಅಲ್ಲಿಂದ ನನ್ನ ಅಣ್ಣನ ಹೆಂಡತಿಯನ್ನು ಗೋಕರ್ಣಕ್ಕೆ ಕರೆ ತರುವುದು.ಪ್ರವಾಸಕ್ಕೆ ಎರಡು ಸ್ಪೆಶಲ್ ಬಸ್. ಹೆ.ಮಾ.ಸಹಿತ ನಾವು ಐದಾರು ಮಾಸ್ತರರು, ಮಹಿಳಾ ಶಿಕ್ಷಕಿ ಎಲ್ಲಾ ಇದ್ದೆವು. ಬಸ್ಸಿನಲ್ಲಿ ಉದ್ದಕ್ಕೂ ವಿದ್ಯಾರ್ಥಿಗಳಿಂದ ಹಾಡು, ವಿವಿಧ ವಿನೋದಾವಳಿ. ಪ್ರವಾಸದ ದಣಿವು ಅನಿಸಲಿಲ್ಲ. ನಾನು ಗದಗದಲ್ಲಿ ಅವರಿಂದ ಬೇರ್ಪಟ್ಟು ನನ್ನ ಸ್ವಂತ ಕೆಲಸಕ್ಕೆ ಹೋದೆ. ಗದಗದಲ್ಲಿ ವೀರನಾರಾಯಣ ಸ್ವಾಮಿ ದೇವಾಲಯ (ದರ್ಶನ ಮಾಡಿ) ನೋಡಿ ಬಂದೆವು.ಮರುದಿವಸ ಗೋಕರ್ಣಕ್ಕೆ ಬಂದು ಮುಟ್ಟಿದೆವು. ಹೆಬ್ಬೈಲ ಘಟ್ಟದಲ್ಲಿ ಅತ್ತಿಗೆಗೆ ಹೊಟ್ಟೆ ಉಬ್ಬರ ತೋರಿತು. ಲಿಂಬು ಹುಳಿಯೊಂದಿಗೆ ಶಮನ ಆಯಿತು. ಹೊಸೂರು ಬ್ರಿಜ್: ಗೋಕರ್ಣ ಹುಬ್ಬಳ್ಳಿ ನಡುವೆ ತಾರಿ ಜಂಗಲ ದಾಟದೇ ಬಸ್ಸೇ ಹೋಗುವಂತೆ ಬ್ರಿಜ್ ಕಟ್ಟುತ್ತಿದ್ದರು. ಅದನ್ನು ನೋಡಲು ಹುಡುಗರನ್ನು ಕರೆದುಕೊಂಡು ಹೊರಟೆವು. ಗೋಕರ್ಣದ ಡಾ.ಹೊಸಮನೆಯವರು ಎಲ್ಲ ಏರ್ಪಾಡೂ ಮಾಡಿದ್ದರು. ರೈಸ್ ಮಿಲ್‌ನ ಮೈದಾನದಲ್ಲಿ ಸಾಮೂಹಿಕ ಊಟ. ಬ್ರಿಜ್ ಕೆಲಸ ನಡೆಯುವಲ್ಲಿ ಪುನಃ ಇನ್ನೊಂದು ದೋಣಿಯಲ್ಲಿ ಹೋಗಬೇಕು. ಸೇತುವೆ ಕಂಬಗಳು ೩’- ೪’ ಎತ್ತರ ಬಂದಿದ್ದವು. ಸಿಮೆಂಟ್ ಕಬ್ಬಿಣದ ಕೆಲಸಗಳು ಸಾಗಿದ್ದವು. ನಂತರ ನಾಲ್ಕು ಗಂಟೆಗೆ ಮಾದನಗೇರಿಗೆ ಬಂದೆವು. ಅಲ್ಲಿ ಚಹಾಪಾನ. ಶೇವು ಅವಲಕ್ಕಿಯೊಂದಿಗೆ ಬಂಕಿಕೊಡ್ಲ ಬಸ್ಸಿನಲ್ಲಿ ಗೋಕರ್ಣಕ್ಕೆ ವಾಪಸು. ನನ್ನ ಹಿರೇಮಗಳು ಸುಬ್ಬಲಕ್ಷ್ಮಿ.ಹೆಸರಿಡುವ ನಮ್ಮ ಮುಂದೆ ಹೆಸರುಗಳ ಶತನಾಮಾವಳಿ ಇತ್ತು. ಎಲ್ಲರೂ ಒಂದೊಂದು ಹೆಸರು ಸೂಚಿಸಿದರು. ನನಗೆ ನನ್ನ ಅಬ್ಬೆ ಹೆಸರನ್ನು ಇಡಬೇಕೆಂಬ ಆಸೆ. ಆದರೆ ನನ್ನ ಶ್ರೀಮತಿಗೆ ತನ್ನ ತಾಯಿಯ ಹೆಸರಿಡಲಿ ಎಂದೂ ಆಸೆಯಿರಬಹುದೇನೋ. ತಕ್ಷಣ ನನಗೆ ಹೊಳೆದದ್ದು ಸುಬ್ಬಲಕ್ಷ್ಮಿ. ನನ್ನ ಅಬ್ಬೆಯ ಹೆಸರು ಸುಬ್ಬಿ. ಅವಳ ತಾಯಿಯ ಹೆಸರು ಲಕ್ಷ್ಮಿ. ಹೀಗಾಗಿ ಇವಳು ಸುಬ್ಬಲಕ್ಷ್ಮಿಯಾದಳು. ಹೊಸ ಹೆಸರಿಗೆ ಎಲ್ಲರದೂ ಒಪ್ಪಿಗೆ ಸಿಕ್ಕಿತು. ನಾನು ಬಿ.ಎಡ್.ಗೆ ಹೋಗುವಾಗ ಅವಳು ಹುಟ್ಟಿ ಆಗಿತ್ತು. ನಾನು ಬಿ.ಎಡ್.ಗೆ ಹೋದ ಅವಧಿಯಲ್ಲಿ ತಾಯಿ, ಮಗಳು ತೀರ್ಥಹಳ್ಳಿಯಲ್ಲಿದ್ದರು. ನಾನು ಬಿ.ಎಡ್ ಮುಗಿಸಿ ಬಂದ ಒಂದು ವರ್ಷದಲ್ಲೇ ನನ್ನ ದ್ವಿತೀಯ ಪುತ್ರಿ ಜಯಲಕ್ಷ್ಮಿಯ ಜನನ. ಹೆಸರಿಡಲು ತ್ರಾಸಾಗಲಿಲ್ಲ. ಬಿ.ಎಡ್.ನಲ್ಲಿ ಜಯಶೀಲನಾಗಿದ್ದೆ, ’ಲಕ್ಷ್ಮಿ’ ಅಕ್ಕನ ಹೆಸರಿನ ಜೊತೆಗೆ ಇವಳೂ ಇರಲಿ ಎಂದು ’ಜಯಲಕ್ಷ್ಮಿ’.ಸುಬ್ಬಲಕ್ಷ್ಮಿ ತೀರ್ಥಹಳ್ಳಿಯಲ್ಲಿ ಅಮ್ಮನ ಮುದ್ದಿನ ಮೊಮ್ಮಗಳಾಗಿ ಬೆಳೆದಳು. ಮನೆ ಎದುರಿನ ಅಂಗಳದಲ್ಲಿ ಮಲ್ಲಿಗೆ ಬಳ್ಳಿ, ಹೂಗಿಡಗಳನ್ನು ಅಬ್ಬೆ ನೆಟ್ಟು ಬೆಳೆಸಿದ್ದಳು. ಅದಕ್ಕೆ ’ಸುಬ್ಬಲಕ್ಷ್ಮಿ ಪಾರ್ಕ್’ ಎಂದು ಹೆಸರಿಟ್ಟು ಅಮ್ಮ ನಲಿದಳು. ಮೊಮ್ಮಗಳು ಕುಣಿದಾಡಿದಳು. ಅಪ್ಪಯ್ಯ ಗುರುಗಳ ಜೊತೆಯಲ್ಲಿ ಇರುವುದೇ ಹೆಚ್ಚು. ಇದ್ದಾಗಲೆಲ್ಲಾ ಮೊಮ್ಮಗಳನ್ನು ಮಠಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಅಜ್ಜ ನಮಸ್ಕಾರ ಮಾಡುವ ದೇವರಿಗೆ, ಗುರುಗಳಿಗೆ ತಾನೂ ನಮಸ್ಕರಿಸುತ್ತಿದ್ದಳು. ಎಲ್ಲರ ಮುದ್ದಿನ ಸುಬ್ಬಲಕ್ಷ್ಮಿಯಾಗಿ ಬೆಳೆಯುತ್ತಿದ್ದಳು. ಮುಂದೆ ಅಮ್ಮನಿಂದ ನೃತ್ಯವನ್ನೂ ಕಲಿತಳು. "ಕಾಫಿ ತೋಟದ ರೈತರು ನಾವು, ಆಗೇ ಸುಂದರಿ ಮದುವೆ". ಅಮ್ಮನಿಗೆ ದಿನವೂ ಎರಡು-ಮೂರು ಸಲವಾದರೂ ಮೊಮ್ಮಗಳ ನೃತ್ಯ ಮಾಡಿಸದಿದ್ದರೆ ಸಮಾಧಾನವಿಲ್ಲ. ಎಲ್ಲರ ಮುಂದೂ ನೃತ್ಯ ಪ್ರದರ್ಶನ. ಕೊನೆಗೊಂದು ದಿನ ಗುರುಗಳ ಮುಂದೂ ಮಾಡಿದಳಂತೆ. ಅನಂತಭಟ್ಟರ ಮೊಮ್ಮಗಳು ಎಲ್ಲರಿಗೂ ಮೆಚ್ಚು. ಪಂಡಿತ ಸುಬ್ಬಮ್ಮ ದೃಷ್ಟಿ ತೆಗೆಯುತ್ತಿದ್ದಳು. ಚಿಂತಾಮಣಿಯೂ ಅಘನಾಶಿನಿಯಲ್ಲೇ ಹುಟ್ಟಿದವ. ಸೌ.ರಾಧೆಗೆ ಸ್ವಪ್ನದಲ್ಲಿ ಆನೆ ಕಂಡಿತಂತೆ. ಹಾಗಾಗಿ ಇವನಿಗೆ ಗಣಪತಿ ಹೆಸರನ್ನು ಇಡಬೇಕು ಎಂದು ನಿರ್ಣಯ. ಅಘನಾಶಿನಿಯ ಪ್ರಧಾನ ದೇವರಲ್ಲೊಬ್ಬನಾದ ಗಣಪತಿಯೂ ಚಿಂತಾಮಣಿ.ಆದುದರಿಂದ ಚಿಂತಾಮಣಿ ಎಂಬ ನಾಮಕರಣ ಮಾಡಿದೆವು. ಜನವರಿಯಲ್ಲಿ ಜನನ.ಏಪ್ರಿಲ್‌ದಲ್ಲಿ ಗೋಕರ್ಣಕ್ಕೆ ತಾಯಿ, ಮಕ್ಕಳು ಬಂದರು.ರಾಮು ಹಿರೇಗುತ್ತಿಗೆ ಬಂದ ಮೇಲೆ ಹುಟ್ಟಿದವ.ಇವನು ಗರ್ಭದಲ್ಲಿದ್ದಾಗ ಸೌ.ರಾಧೆ ಹೊಟ್ಟೆಗೆ ಹಾವು ಸುತ್ತಿದಂತೆ ಕನಸಿನಲ್ಲಿ ಕಂಡಳು.ನನ್ನ ತಾಯಿಯ ಅಜ್ಜಿಮನೆ,ವಿಷ್ಣುಮಾವನ ಅಜ್ಜಿಮನೆ-ಎರಡೂ ಒಂದೇ:ಕೋಟಿತೀರ್ಥದ ಸಮೀಪ ಇರುವ ಮಾರಿಗೋಳಿ ಮನೆ.ಅಲ್ಲಿಯ ದೇವರು ಸುಬ್ರಹ್ಮಣ್ಯ(ಕುಮಾರ).ಇವನ ಜನ್ಮನಕ್ಷತ್ರ-ರಾಮನ ನಕ್ಷತ್ರ, ಪುಷ್ಯ.ಹೀಗೆ ಇವನು ರಾಮಕುಮಾರನಾದ. ಪಂಡಿತ ಸುಬ್ಬಮ್ಮ ಎಂದೆ. ಇವಳೂ ಗೋಕಣದವಳೇ. ತನ್ನ ಹನ್ನೆರಡನೆ ವಯಸಿನಲ್ಲೆ ಬಾಲವಿಧವೆ. ನಂತರ ತವರುಮನೆ, ಮನೆ ಎನ್ನುತ್ತಾ ಐದಾರು ವರ್ಷ ಕಳೆದಳು. ಅನಾಥೆ ಕಸ್ತೂರಬಾ ಆಶ್ರಮಕ್ಕೆ ಸೇರಿಕೊಂಡಳು. ಕೆಲವು ಕಾಲ ಕರ್ಕಿ ರಾಮ ಭಾಗವತರ ಮನೆಯಲ್ಲಿ ಮಕ್ಕಳ ಜೊತೆ ಇದ್ದಳಂತೆ. ಡಾ.ಹೊಸಮನೆಯವರ ಹಿರೇಗುತ್ತಿಯ ಬಿಡಾರದಲ್ಲಿ ಇದ್ದಳಂತೆ. ಕೊನೆಗೆ ೧೯೫೦ರ ಸುಮಾರಿಗೆ ತೀರ್ಥಹಳ್ಳಿಯ ನಮ್ಮ ಬಿಡಾರಕ್ಕೆ ಬಂದಳು. ಕೊನೆಯವರೆಗೂ ಗೋಕರ್ಣದಲ್ಲಿ ನಮ್ಮ ಮನೆಯಲ್ಲೇ ಇದ್ದಳು. ತೀರ್ಥಹಳ್ಳಿಯಲ್ಲಿ ಹುಟ್ಟಿದ ಮೂವರಲ್ಲಿ ರಾಜಾರಾಮ ಮಾತ್ರ ಹುಬ್ಬಳ್ಳಿಯಲ್ಲಿದ್ದ. ಈಶ, ವಸಂತ ಇವರನ್ನು ಮಕ್ಕಳಂತೆ ನೋಡಿಕೊಂದು ಬಳೆಯಿಸಿದಳು. ಈಶ ಎಂದರೆ ರಾಶಿ ಪ್ರೀತಿ.ನಾವೆಲ್ಲಾ ಈಶ ಸುಬ್ಬಮ್ಮನ ದತ್ತುಮಗ ಎನ್ನುತ್ತಿದ್ದೆವು. ದಿನಾ ಸುಬ್ಬಮ್ಮ ನಮ್ಮ ಅಬ್ಬೆಯ ಮಂಡೆ ಬಾಚುತ್ತಿದ್ದಳು. ಪಂಡಿತ ಸುಬ್ಬಮ್ಮ ವಿಕೇಶಿ. ಈಶನ ಮಾತು ಸಹಜವಾಗಿಯೇ ಇತ್ತು, "ಈ ಸುಬ್ಬಮ್ಮ ತನ್ನ ಮಂಡೆ ಬಾಚಿಕೊಂಡಿದ್ದಕ್ಕಿಂತ ಅಬ್ಬೆಯ ಮಂಡೆಯನ್ನೆ ಹೆಚ್ಚು ವರ್ಷ ಬಾಚುತ್ತಿದ್ದಾಳೆ". ಆ ಮಾತಿನಲ್ಲಿ ನೋವು ಇತ್ತು, ನಗುವಿನ ಮೇಲು ಹೊದಿಕೆಯಲ್ಲಿ. ೧೯೬೨ರ ಜುಲೈದಲ್ಲಿ ನಮ್ಮ ಹೈಸ್ಕೂಲ್‌ನಲ್ಲಿ ಕೆಲ ಬದಲಾವಣಿಗಳಾದವು. ಗುಡಿ ಮೂರೂರಿಗೆ, ನಾನು ಅರ್ಚಕ (ಭಟ್ಟ) ಹಿರೇಗುತ್ತಿಗೆ, ಮೂರ್ತಿ ಭದ್ರಕಾಳಿ ಹೈಸ್ಕೂಲಿನಲ್ಲಿ ಹೆಡ್ ಮಾಸ್ಟರ್ ಆಗಿ ಅಧಿಕಾರ ವಹಿಸಿಕೊಂಡೆವು. "ಬಲೀಯಸಿ ಕೇವಲ ಮೀಶ್ವರೇಚ್ಛಾ". ಜುಲೈ ಒಂದರಿಂದ ದಿನವೂ ಗೋಕರ್ಣಕ್ಕೆ ಬಂದು ಹೋಗಿ ಮಾಡುತ್ತಿದ್ದೆ. ಹತ್ತು ಹನ್ನೆರಡು ದಿನಗಳಲ್ಲಿ ಸೊನಗಾರಕೊಪ್ಪದಲ್ಲಿ ಒಂದು ಮನೆ, ಹಿತ್ತಲನ್ನು ಶ್ರೀ ಹೊಸಬಣ್ಣ ನಾಯಕರ ಸಹಾಯದಿಂದ ಬಾಡಿಗೆಗೆ ದೊರಕಿಸಿಕೊಂಡೆನು. ಮಗಳು ಸುಬ್ಬಲಕ್ಷ್ಮಿಯನ್ನು ಹಿರಿಯ ಪ್ರಾಥಮಿಕ ಶಾಲೆಗೆ ಸೇರಿಸಿದೆನು. ಅಮ್ಮನ ಪಾಶ: ನಮ್ಮ ಅಬ್ಬೆಗೆ ಮೊಮ್ಮಗನನ್ನು ಬಿಟ್ಟು ಆಗಲೇ ಒಂದು ತಿಂಗಳಾಯಿತು. ಬೇಸರ ಬಂತು. ತೊರ್ಕೆಯಲ್ಲಿದ್ದ ನಮ್ಮ ಅಣ್ಣನನ್ನು ಕರೆದುಕೊಂಡು ಅನಿರೀಕ್ಷಿತವಾಗಿ ಹಿರೇಗುತ್ತಿಗೆ ಬಂದೇಬಿಟ್ಟಳು. ಅವರ ಮೊಮ್ಮಗ (ಚಿಂತಾಮಣಿ) ಒಬ್ಬನೇ ಜಗುಲಿಯಲ್ಲಿ ಕುಳಿತಿದ್ದನಂತೆ. ಅವನ ತಾಯಿ ಸ್ನಾನ ಮಾಡಿ ಬರಲು ಬಚ್ಚಲಿಗೆ ಹೋಗಿದ್ದಾಳೆ. ಅಮ್ಮ ಅಂಗಳದಲ್ಲಿ ಕಾಲಿಟ್ಟಳೋ ಇಲ್ಲವೋ "ಅಮ್ಮಾ, ಅಮ್ಮಾ" ಎಂದು ಕೂಗಿದನಂತೆ. ಅಮ್ಮನಿಗೆ ಮೊಮ್ಮಗ ತನ್ನನ್ನು ಕರೆದದ್ದು ಕೇಳಿ ದುಃಖ ಉಮ್ಮಳಿಸಿ ಬಂತು. ತುಂಬಿದ ಮನೆಯಲ್ಲಿ ಇರಬೇಕಾದ ತನ್ನ ಮೊಮ್ಮಗ ಒಬ್ಬಂಟಿಯಾಗಿ ಯಾರದೋ ಮನೆಯ ಜಗಲಿಯಲ್ಲಿ ಇದ್ದಾನಲ್ಲಾ ಎಂದು. ತಕ್ಷಣ ಎತ್ತಿಕೊಳ್ಳುವಂತಿಲ್ಲ. ಆ ಶಿರವಳ್ತದ ಒಳಕ್ಕೆ ಒಂದು ಬಾಗಿಲು, ಒಳಗೆ ಚಿಲಕ ಹಾಕಿದ್ದಾರೆ. ಅಮ್ಮ ’ರಾಧೆ’ ಎಂದು ಕೂಗಿದಳು. ಇವಳು ಅತ್ತೆಯ ದನಿ ಕೇಳಿ ಬಂದು ಬಾಗಿಲು ತೆಗೆದಳು. ಅಮ್ಮ ಮೊಮ್ಮಗನನ್ನು ಎತ್ತಿ ಮುದ್ದಾಡಿ ಎಷ್ಟು ಅತ್ತಳೋ ಗೊತ್ತಿಲ್ಲ. ಮೊಮ್ಮಗ ಅಮ್ಮನ ಮುಖವನ್ನು ಒರೆಸುತ್ತಿದ್ದನು. ಅವನ ದೊಡ್ಡಪ್ಪ ಬಿಸ್ಕೀಟ್ ಪೊಟ್ಟಣ ಕೊಡಲು ತೆಗೆದುಕೊಂಡು ’ಅಮ್ಮಾ’ ಎಂದನಂತೆ. ’ತಿನ್ನು’ ಎಂದಳು. ಇಷ್ಟು ಹೊತ್ತಿಗೆ ಚಹಾ ಬಂತು. ಅಷ್ಟು ಹೊತ್ತಿಗೆ ಸುಬ್ಬಲಕ್ಷ್ಮಿ ಶಾಲೆಯಿಂದ ಬಂದಳು. ಸುಬ್ಬಿ ಎಂದು ಸುಬ್ಬಮ್ಮ ಮೊಮ್ಮಗಳನ್ನು ಮುದ್ದಿಟ್ಟಳು. ಅವಳಿಗೂ ಒಂದು ಬಿಸ್ಕೀಟ್ ಪೊಟ್ಟಣ ತಂದಿದ್ದಳು. ಅವಳ ಗೆಳತಿ ಸಾವಿತ್ರಿ, ವಾಸುದೇವ ಶೆಟ್ಟರ ಮಗಳು. ಇವಳು ಅವಳ ಜೊತೆ ಬಿಸ್ಕೀಟ್ ತಿಂದಳು. ದೊಡ್ಡಪ್ಪ ಪೇಟೆ ಕಡೆ ಹೊರಟ. ಅಮ್ಮ, ಮೊಮ್ಮಗ ಚಾಪೆ ಮೇಲೆ ಊಟದವರೆಗೆ ಮಲಗಿದರು. ಅಮ್ಮ ಸೊಸೆಯ ಹತ್ತಿರ ಮಾತನಾಡುತ್ತಾ ಇದ್ದಳು. ಮಾಣಿ ಅಮ್ಮನ ಬೆಚ್ಚನೆಯ ಮಡಿಲಲ್ಲಿ ನಿದ್ದೆ ಹೋದ. "ಅಲ್ದೇ ರಾಧೆ, ಜ್ವರ ಬಂದರೆ ಔಷಧಕ್ಕೆ ಡಾಕ್ಟರಿದ್ದಾರಾ?". "ಎರಡು ದಿನ ಬರ್ತಾರೆ". ಅದಕ್ಕೆ ತಕ್ಷಣ ಅಮ್ಮನ ಪ್ರತಿಕ್ರಿಯೆ: "ಅಲ್ದೆ, ಹಂಗಾರೆ ಆ ಎರಡು ದಿನವೇ ಜ್ವರ ಬೀಳಬೇಕು!" ಸಂಜೆವರೆಗಿದ್ದು ಅಮ್ಮ ಗೋಕರ್ಣಕ್ಕೆ ಹೊರಟಳು. ಮಾಣಿ ರಗಳೆ "ಹೋಗಡ ಉಳ್ಕೊ". "ಇಲ್ಲೆ, ಅಜ್ಜಂಗೆ ಔಷಧ ಕೊಡೊ. ಇನ್ನೊಂದು ಸಲ ಅಜ್ಜನ ಕರಕಂಡು ಬತ್ತೆ" ಎಂದಳು. ಮೊಮ್ಮಗ ಬಸ್ ಸ್ಟ್ಯಾಂಡಿಗೆ ಹೋಗಿ ಅಮ್ಮನಿಗೆ ಟಾ ಟಾ ಮಾಡಿ ಬಂದ. ನಿಜ, ಆದರೂ "ಅಮ್ಮ ಬೇಕಾಗಿತ್ತು" ಎಂದು ಪುನಃ ತೀಡಲು ಶುರುಮಾಡ್ದ. "ನಾಳೆ ನಾ ಕರೆದುಕೊಂಡು ಹೋಗ್ತೆ, ಗೋಕರ್ಣಕ್ಕೆ" ಎಂದೆ. ಸುಮ್ಮನಾದ. ಡಿಸೆಂಬರ್‌ದಲ್ಲಿ ಅಪ್ಪಯ್ಯಂಗೆ ಕಣ್ಣಿನ ಆಪರೇಶನ್ ಬಗ್ಗೆ ಮುಂಬೈಗೆ ಹೋಗುವುದೆಂತಲೂ, ಜೊತೆಯಲ್ಲಿ ಅಬ್ಬೆ, ನಾನು ಹೋಗುವುದೆಂತಲೂ ತೀರ್ಮಾನವಾಯಿತು. ಅಲ್ಲಿ ಮೂರ್ತಿ ಎಲ್ಲಾ ಏರ್ಪಾಡು ಮಾಡಿದ್ದ. ಅವನ ಸ್ನೇಹಿತ ದೊಡ್ಡಮನೆ ಹೆಗಡೆ ಬಿಡಾರ ಖಾಲಿ ಇತ್ತು. ಅದು ನಮಗೆ ಅನುಕೂಲವಾಯಿತು. ಈ ಪ್ರಯಾಣದಲ್ಲಿ ನನಗೂ ಒಂದು ಕೆಲಸ ಆಗುವುದಿತ್ತು. ಹೈಡ್ರಾಸಿಲ್ ಆಪರೇಶನ್ ಆಗುವುದಿತ್ತು. ಮೂರ್ತಿಯ ಕೇವಲ ದೋಸ್ತ, ತೀರ್ಥಹಳ್ಳಿಯ ಡಾ.ಪ್ರಭಾಕರ ನನ್ನ ಆಪರೇಶನ್ ಮಾಡಿದ. ಐದಾರು ದಿನ ಆಸ್ಪತ್ರೆಯಲ್ಲಿದ್ದು ರೂಮಿಗೆ ಬಂದೆನು. ಅಪ್ಪಯ್ಯನ ಕಣ್ಣುಗಳ ತಪಾಸಣೆ ಮಾಡಿದವರು ಡಾ. ತೇಲಂಗ. ಅವರು ಏಶಿಯಾದಲ್ಲೇ ಪ್ರಸಿದ್ಧರಾದ ನೇತ್ರತಜ್ಞರು. "ಇದು ಕ್ಯಾಟಯಾಕ್ಟ್ ಅಲ್ಲ.ರೆಟಿನಾ ಡಿಟ್ಯಾಚ್‌ಮೆಂಟ್. ಈ ವಯಸಿಗೆ ಅದನ್ನು ಅಟ್ಯಾಚ್ ಮಾಡುವುದು ಬೇಡ." ಇದು ಡಾ.ತೇಲಂಗರ ಅಭಿಪ್ರಾಯ ಇನ್ನೂ ಅಲ್ಪ ಸ್ವಲ್ಪ ಕಾಲ ದೃಷ್ಟಿ ಕೆಡದಂತೆ ಕೆಲವು ಔಷಧ ಬರೆದುಕೊಟ್ಟರು. ನಾವು ಜನವರಿಯಲ್ಲಿ ತಿರುಗಿ ಊರಿಗೆ ಬಂದೆವು. ಬರುವಾಗ ಪೂನಾದಲ್ಲಿ ಹಂದೆಮಾವನ ಸೋದರ ಅಳಿಯ (ಮುಂದೆ ಅಳಿಯನೂ ಆದ) ಶ್ರೀಪಾದನಲ್ಲಿ ಉಳಿದೆವು. ಮುಂಬೈಯಲ್ಲಿ ರಾಧೆಯ ಅತ್ತೆ ಸೀತತ್ತೆ, ರಾಮಮಾವ ಕಮಟೆ ಇವರ ಮನೆಗೂ ಒಂದು ದಿನ ಹೋಗಿದ್ದೆವು. ಅವರಿಗೆ ತುಂಬಾ ಸಂತೋಷವಾಯಿತು. ಸೀತತ್ತೆ ಒಬ್ಬಳೇ ಐದಾರು ರೀತಿಯ ಪದಾರ್ಥ, ಎರಡು.ಮೂರು ಸಿಹಿ ಖಾರ ಮಾಡಿದ್ದಳು. ಅವರ ಹಿರಿಯ ಮಗಳು ರಾಜೇಶ್ವರಿ ಒಂದು ನೇಯ್ದ ಪ್ಲಾಸ್ಟಿಕ್ ಬ್ಯಾಗನ್ನು ರಾಧಕ್ಕನಿಗೆ ಎಂದು ನನ್ನ ಹತ್ತಿರ ಕೊಟ್ಟಿದ್ದಳು. ಅದು ಏನಿಲ್ಲವೆಂದರೂ ಇಪ್ಪತ್ತು ವರ್ಷ ತಾಳಿಕೆ ಬಂದಿತ್ತು. ನಂತರ ರಾಧೆ ಅದನ್ನು ತನ್ನ ತಾಯಿಗೆ ಕೊಟ್ಟಳಂತೆ. ನನ್ನ ತಮ್ಮ ಲಕ್ಷ್ಮೀನಾರಾಯಣನಿಗೆ ಬೈಂದೂರ ಹೆಣ್ಣು. ಹೆಸರು ಗಿರಿಜಾ. ಈ ಮದುವೆಯ ವಿಶೇಷವೆಂದರೆ ವಧೂವರರು ಒಬ್ಬರನ್ನೊಬ್ಬರು ನೋಡಿದ್ದು ಮದುವೆ ಮಂಟಪದಲ್ಲೇ. ಅವನಿಗೆ ಪುಸ್ತಕ ಎಂದರಾಯಿತು. ಅಚ್ಚುಕಟ್ಟಾಗಿ ತಮಾಷೆ ಮಾಡಬಲ್ಲ. ಇಬ್ಬರು ಗಂಡುಮಕ್ಕಳು. ರಾಮಪ್ರಸಾದ, ಶ್ಯಾಮಪ್ರಕಾಶ. ಆರ್.ಎಸ್.ಎಸ್.ನ ಕಟ್ಟಾ ಅಭಿಮಾನಿ. ತನ್ನ ಹೈಸ್ಕೂಲ ಜೀವನದಲ್ಲಿ ಒಂದು ದಿನವೂ ಸಂಘಪ್ರಾರ್ಥನೆ ತಪ್ಪಿಸಿದವನಲ್ಲ. ಬೆಂಗಳೂರಿನಲ್ಲಿ ನಡೆದ ಅಧಿವೇಶನಕ್ಕೆ ತೀರ್ಥಹಳ್ಳಿಯಿಂದ ಬಂದಿದ್ದ. ತನ್ನ ಶಿಸ್ತಿನ, ಧ್ಯೇಯದ ನಡತೆಯಿಂದ ಎಲ್ಲರ ಮನ ಗೆದ್ದಿದ್ದ. ಇದಾದ ಹತ್ತು ಹದಿನೈದು ವರ್ಷಗಳ ನಂತರ ಜಸ್ಟೀಸ್ ರಾಮಾಜೋಯಿಸರು ನನಗೆ ಸಿಕ್ಕಾಗ ಕೇಳಿದ ಪ್ರಶ್ನೆ: "ಲಕ್ಷ್ಮೀನಾರಾಯಣ ಭಟ್ಟರು ಎಲ್ಲಿದ್ದಾರೆ? ಏನು ಮಾಡ್ತಾರೆ?"."ಬಿಷಪ್ಸ್ ಕ್ಯಾಂಡಲ್‌ಸ್ಟಿಕ್ಸ್"ನಲ್ಲಿ ಫಾದರ್ ಪಾತ್ರ ವಹಿಸಿ ಪ್ರೇಕ್ಷಕರಿಂದ ಸೈ ಎನ್ನಿಸಿಕೊಂಡವ. ಇವನ ತಮ್ಮ ಜಯರಾಮ. ತುಂಬಾ ಸೊಗಸುಗಾರ. ವಾರದ ಹಿಂದಿನ ತುಪ್ಪ ಇವನಿಗೆ ವಾಸನೆ ಎಂದು ನಾವು ತಮಾಷೆ ಮಾಡುತ್ತಿದ್ದೆವು. "ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು" ಎನ್ನುವುದನ್ನು "ಉದಯಗಾವಲಿ ಮನ್ನ ಚೆಲುವ ಕನ್ನಡನಾಡು" ಎಂದು ಹಾಡುತ್ತಿದ್ದ. ನಾವು ಇವನನ್ನು ದೊಡ್ಡ ಒಳದಲ್ಲಿ ಕೂರಿಸಿ, ಬಾಗಿಲು ಹಾಕಿ, ಈಗ ಜಯರಾಮ ಭಟ್ಟರಿಂದ "ಉದಯವಾಗಲಿ" ರಾಜ್ಯ ಗೀತ, ರೇಡಿಯೋ ಕೊಡ್ಲೆಕೆರೆ ಗೋಕರ್ಣ ಎನ್ನುತ್ತಿದ್ದೆವು. ಇವನು ’ಉದಯಗಾವಲಿ’ ಸಾಕು ಎಂದರೂ ಹಾಡುತ್ತಿದ್ದ. ನಾವು ಬಾಗಿಲು ತೆರೆದರೆ ನಿಲ್ಲಿಸುತ್ತಿದ್ದ. ಓದುವುದರಲ್ಲಿ ಹಠವಾದಿ. ತನಗೆ ಬರದೇ ಇದ್ದುದನ್ನು ಬಲ್ಲವರಿಂದ ತಿಳಿದುಕೊಳ್ಳುತ್ತಿದ್ದ. ನನಗೆ, ಇವನಿಗೆ ತುಂಬ ಹೊಂದಿಕೆ ಇತ್ತು. ’ಸಣ್ಣ ಸಣ್ಣ ವಾಕ್ಯಗಳಲ್ಲಿ ಹೇಳು" ಎನ್ನುತ್ತಿದ್ದ, ಬರೆದುಕೊಳ್ಳುತ್ತಿದ್ದ. ಹಿಂದಿ ಎಂ.ಏ.ಪಾಸುಮಾಡಿದ. ನಮ್ಮ ಮನೆಯಲ್ಲಿ ಮೊದಲ ಎಂ.ಏ. ಇವನು. (ನಾನೂ ಹೌದು - ’ಎಂ.ಏ!’ ಭಟ್ಟ - ಹುಟ್ಟಿನಿಂದಲೇ! ಆದರೆ ನನ್ನದು ಮೊದಲ ಬಿ.ಎಸ್.ಸಿಯ ದಾಖಲೆ). ಜಯರಾಮ ಹಿಂದಿಯಲ್ಲಿ ಪತ್ರ ಪದ್ಯ ರೂಪದಲ್ಲಿ ಬರೆಯುತ್ತಿದ್ದ, ಇವನು ಅಣ್ಣನಿಗೆ ಬರೆದ ಪತ್ರ ಓದಿ ಸ್ಫೂರ್ತಿಗೊಂಡು ನಾನು ಹಿಂದಿಯಲ್ಲಿ ಬರೆದ ಪದ್ಯ ಪತ್ರ: ಜಯರಾಮ ಭಯ್ಯಾ ಪ್ಯಾರೇ ಮೇರೇ ಜಗಹ ಜಗಹಪರ ಯಾದ ಹೈ ತೇರೇ! ತೊರ್ಕೆ ಗ್ರಾಮ ಮೇ ಖತ್ ತೋ ಪಾಯಾ ಪಾಕರ ಸುಖಕೇ ಜಲಧಿ ಮೇ ಸೋಯಾ!! ಹೈಸ್ಕೂಲ್ ಅಸಿ.ಮಾ. ಆಗಿ ಸೇರಿ ಕಾಲೇಜು ಲೆಕ್ಚರರ್ ಆಗಿದ್ದು ಇವನ ಸಾಹಸ. ಜೋಗಾದಲ್ಲಿ ಹದಿನೈದಿಪ್ಪತ್ತು ವರ್ಷ ಸಹಶಿಕ್ಷಕ. ನಂತರ ಪ್ರಮೋಶನ್ ಪಡೆದು ಮೇಗರವಳ್ಳಿಗೆ ಹೋದ. ಸಣ್ಣ ತೊಂದರೆ ಬಂದರೂ ಅಧೀರನಾಗುತ್ತಿದ್ದ. ಅಪ್ಪಯ್ಯ, ಅಬ್ಬೆ ಸಲಹೆ ಕೇಳುವ. ತಂದೆ, ತಾಯಿಯರ ಸೇವೆ ಮಾಡುವುದರಲ್ಲಿ ಹಿಂದೆ ಬಿದ್ದವನಲ್ಲ. ಶ್ರೀ ಗುರುಗಳ ಪ್ರೀತಿಪಾತ್ರನಾದ ಶಿಷ್ಯ, ಸ್ನೇಹಪ್ರಿಯ. ಜಯರಾಮನ ಕೆಳಗೆ ಮೂರ್ತಿ, ನರಸಿಂಹಮೂರ್ತಿ ಪೂರ್ತಿ ಹೆಸರು. ಪಠ್ಯ, ಪಠ್ಯೇತರ ಪುಸ್ತಕಗಳನ್ನು ಮೀರಿ ಇತರ ಪ್ರೌಢಪುಸ್ತಕಗಳನ್ನು ಹಿಂದಿ, ಸಂಸ್ಕೃತ, ಕನ್ನಡಗಳಲ್ಲಿ ಹೆಚ್ಚು ಓದಿದ ಮೂವರಲ್ಲಿ ಇವನೂ ಒಬ್ಬ (ಇನ್ನಿಬ್ಬರು ದೊಡ್ಡಣ್ಣ ಶಿವರಾಮ ಮತ್ತು ಲಕ್ಷ್ಮೀನಾರಾಯಣ). ಈ ಮೂವರಲ್ಲಿ ಯಾರನ್ನು ಕೇಳಿದರೂ ಸಾಹಿತ್ಯ ವಿಷಯದಲ್ಲಿ ಸಂಶಯಕ್ಕೆ ಪರಿಹಾರ ಸಿಗುತ್ತದೆ. ಲಕ್ಷ್ಮೀನಾರಾಯಣನಿಗೆ ನಿವೃತ್ತಿ ಆದ ಮೇಲೆ ಪುಸ್ತಕಗಳ ಮಧ್ಯದಲ್ಲೇ ವಾಸ. ಅಣ್ಣನಿಗೆ ’ಉಮರನ ಒಸಗೆ’ ಮೆಚ್ಚಿನದು. "ನಾಂ ಮಸೀದಿಗೆ ಬಂದುದೇಕೆಂದು ನಿಜವ ಪೇಳ್ವೊಡೆ ಪಿಂತೆ ನಾಂ ಕದ್ದ ಮಡಿಗದ್ದುಗೆ ಹಳತಾಗಿಹುದು". ಮಸೀದಿಯಲ್ಲಿ ನಡೆಯುವ ವಾದನಿವಾದ ವಾಗ್ ಝರಿ, ಭಾರವಾದ ಶಬ್ದಗಳನ್ನು ಕೇಳಿ "ನಾಂ ಪೋದ ಬಾಗಿಲೊಳೆ ಪಿಂತಿರುಗಿ ಬಂದೆನ್. ".ದೊಡ್ಡ ಭಾಷಣಗಳನ್ನು ಕೇಳಿ ಬಂದ ಮೇಲೆ "ಅಣ್ಣಾ, ಹೇಗಿತ್ತು?" ಎಂದರೆ "ಪೋದ ಬಾಗಿಲೊಳೆ ಪಿಂತಿರುಗಿ ಬಂದೆನ್" ಎನ್ನುತ್ತಿದ್ದ. ಮೂರ್ತಿ ಆರರಲ್ಲಿ ಚಿಕ್ಕವನು. ಪನ್ನಿತಾತಿ ತಲೆಗೆ ಕಂಚಿ ಟೊಪ್ಪಿ ಎಂದವ ಇವನೇ! "ಅಚ್ಚುಮ" ಎಂದರೆ ಅಳುತ್ತಿದ್ದನ ಮೂರ್ತಿ. ಅದು ಅವನಿಗೆ ಪ್ರೀತಿಯಿಂದ ಕರೆಯುತ್ತಿದ್ದ ಸಂಕ್ಷಿಪ್ತನಾವು! (ಶಾರ್ಟ್ ಫಾರ್ಮ್). ಅಬ್ಬೆಯೇ ಕೆಲಸಲ ಅವನನ್ನು ತೀಡಿಸಲು "ಅಚ್ಚು ಮೂರ್ತಿಗೆ ಹಸಿ ಫಟಿಂಗಗೆ" ಸ್ವಯಂಕೃತ ಪದ್ಯ ಹೇಳುತ್ತಿದ್ದಳು. ಇವನು ಎರಡು ಸಲ ಅಳುತ್ತಿದ್ದ. ಎರಡು ಸಲ ಏಕೆ ಎಂದರೆ ಅಚ್ಚ ಹೇಳಿದ್ದಕ್ಕೆ ಮತ್ತು ಹಸಿಫಟಿಂಗ ಎಂದುದಕ್ಕೆ - ಅನ್ನುತ್ತಿದ್ದ. ರಾಜಾರಾಮ,ಮೂರ್ತಿಗೆ ಏಳು ವರ್ಷಗಳಾದಾಗ ಜನಿಸಿದವ. ಇನ್ನೊಬ್ಬರ ತಂಟೆಗೆ ಎಂದೂ ಹೋದವನಲ್ಲ. ಎತ್ತರದ ಅಚ್ಚುಕಟ್ಟಾದ ವ್ಯಕ್ತಿತ್ವ. ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಹೊರಗಿನಿಂದ ಓದಿ ಸ್ನಾತಕೋತ್ತರ ಪದವಿಯನ್ನು ಪಡೆದ ಪರಿಶ್ರಮಿ. ಮನೆಯಲ್ಲಿ ನಾವೆಲ್ಲ ಸೇರಿದಾಗ ಯಕ್ಷಗಾನದ ವಿಭಿನ್ನ ಪಾತ್ರಗಳನ್ನು ಅಭಿನಯಿಸಿ ತೋರಿಸುತ್ತಿದ್ದ. ರಾಜಾರಾಮ ಮಾಸ್ತರು ಎಂದು ಎಲ್ಲರೂ ಕರೆಯುವುದು ಇವನನ್ನು. ಎಲ್ಲರೊಡನೆ ಅಷ್ಟಾಗಿ ಬೆರೆಯುವವನಲ್ಲ. ಬೆರೆತವರನ್ನು ಮರೆತವನಲ್ಲ. ಹಂದೆ ಮಾವನ ಅಳಿಯ ಶ್ರೀಪಾದ ಇವನ ಗಳಸ್ಯ ಕಂಠಸ್ಯ ಸ್ನೇಹಿತ. ಶ್ರೀಪಾದ ನಮಗೂ ದೂರದವನಲ್ಲ. ನನಗೆ ನೆಚ್ಚಿನ ವಿದ್ಯಾರ್ಥಿಯೂ ಹೌದು. ಒಳ್ಳೇ ಚಿತ್ರಕಾರ. ಒಂದು ಋಷಿ ಪಂಚಮಿ ಹಬ್ಬಕ್ಕೆ ನಮ್ಮ ಮನೆಯ ಗೋಡೆಯ ಮೇಲಿದ್ದ ಕರಿಹಲಗೆಯ ಮೇಲೆ ನಾಕೈದು ಋಷಿಗಳ ಚಿತ್ರ ಬರೆದಿದ್ದ. ನಮ್ಮ ರಾಜಾರಾಮ ಚಿತ್ರ ಬರೆದವನಲ್ಲ. ಆದರೆ ಅದನ್ನು ಮೆಚ್ಚುವ, ನಾಲ್ಕು ಜನರಿಗೆ ತೋರಿಸಿ ಸಂತೋಷಪಡುವ ಗುಣವಂತ. ನಾವೆಲ್ಲ ರಾಜಾರಾಮನನ್ನು ಕರೆಯುವುದು ’ರಾಜ’ ಎಂದು. ದೊಡ್ಡಣ್ಣನಿಗೆ ರಾಜ ಎಂದರೆ ಎಲ್ಲಿಲ್ಲದ ಅಕ್ಕರೆ. ಗೌರಕ್ಕನ ’ಹುಬ್ಬಳ್ಳಿ ರಾಜ’. ನಾವು ಒಂಬತ್ತು ಮಕ್ಕಳಲ್ಲಿ ಕೊನೆಯವ ವಸಂತ.ಸಹಜವಾಗಿಯೇ ಎಲ್ಲರ ಪ್ರೀತಿಪಾತ್ರ.ಸೇವಾ ಮನೋಭಾವ ಇವನ ವ್ಯಕ್ತಿತ್ವದ ವಿಶೇಷ ಅಂಶ.ಇವನಿಗೂ ಕಗ್ಗ,ಒಸಗೆಯ ಪದ್ಯಗಳು ಬಾಯಲ್ಲಿ.ಗೋಕರ್ಣದ ಅರ್ಬನ್ ಬ್ಯಾಂಕಲ್ಲಿ ಸೇವೆ ಸಲ್ಲಿಸಿ ನಿವೄತ್ತ.ಮಾತು ಮಿತ,ಹಿತ.ಏನನ್ನೇ ಆಗಲಿ,ಮಾಡಿ ತೋರಿಸುವವ ಹೊರತೂ ಮಾತಾಡಿ ಸಮಯ ಕಳೆಯಬಾರದು ಎಂಬ ನಡತೆಯವನು.ಇವನ ಅಚ್ಚುಕಟ್ಟು ಎಲ್ಲರಿಗೂ ಅಚ್ಚುಮೆಚ್ಚು. ದೊಡ್ಡಣ್ಣನಿಗೆ ಮೂರು ಹೆಣ್ಣು ಮಕ್ಕಳುಃ ಪುಷ್ಪ, ನಾಗರತ್ನ ಮತ್ತು ಸೀತಾಲಕ್ಷ್ಮಿ. ಗಜಣ್ಣನಿಗೆ ಮೂವರು ಗಂಡು ಮಕ್ಕಳು. ಹಿರಿಯವನು ಅನಂತರಾಜ ಗುಣಾಢ್ಯನಾಗಿದ್ದ. ಊರಿನವರಿಗೆಲ್ಲ ರಾಜಣ್ಣನಾಗಿ, ಯಕ್ಷಗಾನ ನಟನಾಗಿ ಖ್ಯಾತಿ ಪಡೆದವ.ಒಬ್ಬ ಸ್ವಯಂ ಸೇವಕ. ಊರಿನವರು ಯಾರೇ ಕಾಯಿಲೆ ಬೀಳಲಿ, ಇವನ ಸಹಾಯ ಕೇಳಿದರೆ ಖಂಡಿತ ಮಾಡುತ್ತಿದ್ದ. ಹೊನ್ನಾವರದ ಡಾ.ಭಾಸ್ಕರ, ಮಣಿಪಾಲದ ಡಾಕ್ಟರುಗಳು- ಎಲ್ಲೆಡೆಗೂ ರಾಜಣ್ಣ ಎಂದೇ ಪರಿಚಿತನಾಗಿದ್ದ. ಬಡಬಗ್ಗರ ಸಹಾಯಕ್ಕೆ ಎಂದೂ ಹಿಂದೆ ಬೀಳುತ್ತಿರಲಿಲ್ಲ. ಊರಿನ ಸಾರ್ವಜನಿಕ ಗಣೇಶೋತ್ಸವದಲ್ಲಿ ಪ್ರಾರಂಭದಿಂದ ವಿಸರ್ಜನೆವರೆಗೂ ರಾಜಣ್ಣ ಬೇಕು. ಲಯನ್ಸ್ ಕ್ಲಬ್ಬಿನ, ಯುವಕ ಸಂಘದ, ವೈದ್ಯಕೀಯತಪಾಸಣಾ ಕೇಂದ್ರದಲ್ಲಿ ರಾಜಣ್ಣನದು ಸಿದ್ಢ ಹಸ್ತ. ಎಲ್ಲರ ಪ್ರೀತಿಗೆ ಪಾತ್ರನಾದ ರಾಜಣ್ಣ, ಕಾಯಿಲೆ ಬಿದ್ದ.ಎಲ್ಲರನ್ನೂ ಮಣಿಪಾಲಕ್ಕೆ ಕರೆದೊಯ್ಯುತ್ತಿದ್ದ ರಾಜಣ್ಣ, ಅವರು ಆರೋಗ್ಯವಂತರಾದ ಮೇಲೆ ಊರಿಗೆ ಕರೆದುಕೊಂಡು ಬಂದು ಮುಟ್ಟಿಸುತ್ತಿದ್ದ ರಾಜಣ್ಣ - ಆದರೆ ಅವನನ್ನು ಮಣಿಪಾಲದವರೆಗೆ ಕರೆದೊಯ್ಯಲಾಗಲಿಲ್ಲ. ದುರ್ದೈವ, ನಡುಹಾದಿಯಲ್ಲೇ ಅಸುನೀಗಿದ. ಶ್ರಾವಣದಲ್ಲಿ ಹಂದೆಮಾವನೊಟ್ಟಿಗೆ ಹೋಗಿ ಹೆಣ್ಣು ನೋಡಿ ಒಪ್ಪಿಬಂದೆನಷ್ಟೆ? ನಾನು ಒಪ್ಪಿದ್ದೇನೆಂದು ತಂದೆಯವರಿಗೂ ತಿಳಿಸಿಯಾಗಿದೆ. ಮಾರ್ಗಶೀರ್ಷ ಶುದ್ಧ ಪಂಚಮಿಯಂದು ಮದುವೆ ಎಂದು ನಿರ್ಣಯಿಸಿದರು. ಮೂರೂರು, ಸಿರ್ಸಿ, ಹುಬ್ಬಳ್ಳಿ ಎಲ್ಲಾ ಕಡೆ ಮದುವೆ ಕರೆಯ ಹೋಯಿತು. ಕರ್ಮಾಂಗಗಳು ತದಿಗೆಯಿಂದಲೇ ಪ್ರಾರಂಭ. ಮಧ್ಯಾಹ್ನ ನೆಂಟರಿಗೆಲ್ಲಾ ಊಟ. ಮಧ್ಯಾಹ್ನ ೦೨೩೦ಕ್ಕೆ ದಿಬ್ಬಣವು ಓಲಗಸಮೇತ ತದಡಿಗೆ ಸ್ಪೆಶಲ್ ಬಸ್ಸಿನಲ್ಲಿ ಹೊರಟಿತು. ಸ್ಪೆಶಲ್ ದೋಣಿಯಲ್ಲಿ ಅಘನಾಶಿನಿಗೆ ಪ್ರಯಾಣ. ದೋಣಿಯಲ್ಲಿ ಹುಲಿಯ ಗರ್ನಾಲು ಹೊಡೆಯುತ್ತಿದ್ದ. ಬೆಂಕಿ ಹಚ್ಚಿ ಗರ್ನಾಲು ಎಸೆಯುತ್ತಿದ್ದ. ಬೀಡಿ ಬಾಯಿಗೆ ಇಡುತ್ತಿದ್ದ. ಹೊಸಮನೆ ದೊಡ್ಡಮಾಣಿ" ಏ ಹುಲಿಯಾ, ಗರ್ನಾಲು ಹಚ್ಚಿ ಬಾಯಿಗಿಟ್ಟುಕೊಂಡು ಬೀಡಿ ಹೊಳೆಗೆ ಎಸೆವೆ." ಎಲ್ಲಾ ನಗು. ದೊಡ್ಡದೊಂದು ತೆರೆ ಬಂದು ದೋಣಿಗೆ ಅಪ್ಪಳಿಸಿದಾಗ ನಿಂತಿದ್ದ ಜಯರಾಮ ಭಾವ, ಶಂಕರಣ್ಣ ಕೆಳಗೆ (ದೋಣಿ ಒಳಗೆ)ತಂದೆ, ತಾಯಿ, ಬಂಧುಬಳಗವನ್ನು ದುಃಖದ ಮಡುವಿನಲ್ಲಿ ಬಿಟ್ಟು ಹೋದ. ಆದರೂ ತಮ್ಮ ಮಗ ಊರಿನ ಎಲ್ಲರ ಪ್ರೀತಿಗೆ ಪಾತ್ರನಾಗಿ ಸಾರ್ಥಕ ಜೀವನ ಸಾಗಿಸಿದ ಎಂಬ ಸಮಾಧಾನ ಕೊಟ್ಟು ಹೋದ. ನಮ್ಮೆಲ್ಲರನ್ನು - ಅಂದರೆ ನಾವು ದೊಡ್ಡಪ್ಪ ಚಿಕ್ಕಪ್ಪಂದಿರನ್ನು, ಅವನ ತಮ್ಮಂದಿರನ್ನು, ಅಪಾರ ಬಂಧುಮಿತ್ರರನ್ನು ಅಗಲಿ ಅಕಾಲದಲ್ಲೇ ಅವನು ನಡೆದ ದೂರ ದೂರ...... ನನಗೆ ನಾಲ್ಕು ಮಕ್ಕಳು: ಎರಡು ಗಂಡು, ಎರಡು ಹೆಣ್ಣು. ಲಕ್ಷ್ಮೀನಾರಾಯಣನಿಗೆ ಎರಡು ಗಂಡು ಮಕ್ಕಳು. ಜಯರಾಮ, ನರಸಿಂಹಮೂರ್ತಿ ಇವರಿಗೂ ಎರಡು ಗಂಡು ಮಕ್ಕಳು. ರಾಜಾರಾಮನಿಗೆ ಒಬ್ಬಳು ಮಗಳು. ವಿಶ್ವನಾಥನಿಗೆ ಎರಡು ಗಂಡು ಮಕ್ಕಳು. ಕಿರಿಯ ವಸಂತನಿಗೆ ಒಂದು ಗಂಡು, ಒಂದು ಹೆಣ್ಣು ಮಗಳು. ಇದು ಕೊಡ್ಲೆಕೆರೆ ಅನಂತಭಟ್ಟರ ವಂಶವೃಕ್ಷದ ಕಿರುಪರಿಚಯ. ಇನ್ನು ಅವರ ಸೊಸೆಯರ ಹೆಸರು: ಮಹಾಲಕ್ಷ್ಮಿ, ಭೂಮಿದೇವಿ, ರಾಧೆ, ಗಿರಿಜಾ, ಜಯಲಕ್ಷ್ಮಿ, ಇಂದಿರಾ, ಲಲಿತಾ, ಸಾವಿತ್ರಿ ಮತ್ತು ಸುಮನಾ. ನಿಲ್ಲಿ, ಒಂಬತ್ತು ಆಯಿತೋ, ಇಲ್ಲವೋ, ನೋಡುತ್ತೇನೆ. ಎಣಿಕೆ ಸರಿಯಾಗಿದೆ. ಅನಂತ ಪರಿವಾರ ಅನಂತಮಕ್ಕೆ. ನಮ್ಮ ತಂದೆ ಅನಂತ ಭಟ್ಟರು,ಅವರ ತಂದೆ,ಅಂದರೆ ನಮ್ಮ ಅಜ್ಜ ಶಿವರಾಮ.ಶಿವರಾಮಜ್ಜನಿಗೆ ಅಣ್ಣ ದತ್ತಾತ್ರಯ,ತಮ್ಮ ಹರಿಹರ.ಇವರು ಅನ್ಯೋನ್ಯವಾಗಿದ್ದರು.ಮುಂದೆ ಪಾಲಾಗುವಾಗ ನಡೆದದ್ದು: ಮನೆಯಲ್ಲಿ ಮೂರು ಕುಟ್ಟುಕಲ್ಲುಗಳಿದ್ದವಂತೆ. (ಕವಳ ಕುಟ್ಟುವುದು). ಅವನ್ನು ತಲಾ ಒಬ್ಬರಂತೆ ಮೊದಲಿಗೆ ಹಂಚಿಕೊಂಡರಂತೆ. ಅದು ಅವರ ತಮಾಷೆಯ ಜೀವನ! ಬಳಿಕ ಹಬ್ಬಗಳನ್ನು ಹಂಚಿಕೊಂಡರು. ಗಣಪತಿ ಹಬ್ಬ ದತ್ತಜ್ಜನ ಪಾಲಿಗೆ, ನವರಾತ್ರಿ ನನ್ನಜ್ಜ ಶಿವರಾಮನದು, ಅನಂತವ್ರತ ಹರಿಹರಜ್ಜನದು ಹೀಗೆ. ಇವರಲ್ಲೆಲ್ಲಾ ನಮ್ಮಜ್ಜ ಶಿವರಾಮಜ್ಜ ಒಳ್ಳೆ ವ್ಯವಹಾರಸ್ಥನಂತೆ. ನಮ್ಮ ಮಠದ ಆಗಿನ ಗುರುಗಳು ತೀರ್ಥಹಳ್ಳಿಯಲ್ಲಿ ನಡೆಯುತ್ತಿದ್ದ ಒಂದು ವ್ಯಾಜ್ಯಕ್ಕೆ ಶಿವರಾಮನೇ ಸರಿ ಎಂದು ಹೇಳಿ ಕಳಿಸಿ ಕರೆಸಿಕೊಂಡರಂತೆ. ಕೊಟ್ಟಿದ್ದು ಬರೀ ಕಾಗದ, ಪೆನ್ಸಿಲ್. ಇಷ್ಟರಿಂದಲೇ ಈಗಿನ ಮಹತ್ತರವಾದ ಕಾಗದ ಪತ್ರಗಳನ್ನು ಸಂಗ್ರಹಿಸಿದ ಚಾಣಾಕ್ಷ ನಮ್ಮಜ್ಜ. ತಮ್ಮ ಕೈತಪ್ಪಿದ್ದ ತೀರ್ಥಹಳ್ಳಿ ಮಠಕ್ಕೆ ಪುನಃ ಪ್ರವೇಶ ಪಡೆದದ್ದು ಶ್ರೀ ಶಿವರಾಮಭಟ್ಟರ ಬುದ್ಧಿವಂತಿಕೆ, ನಿಸ್ಸೀಮ ನಿಶಿತಮತಿ ಎಂದು ಹೇಳುತ್ತಿದ್ದರಂತೆ. ಅಲ್ಲಿಯ ಉತ್ಪನ್ನ ಸೀಮಿತವಾದದ್ದು. ಒಂದು ಪತ್ರದ ಪ್ರಕಾರ ಶಿವರಾಮ ಭಟ್ಟರು ನಾಲ್ಕು ಕೆಲಸದವರನ್ನು ಇಟ್ಟುಕೊಂಡಿದ್ದರಂತೆ. "ಯಾಕೆ ಹಾಗೆ?" ಎಂದರೆ ಪ್ರಸಂಗವಶಾತ್ ತಾನು ಕಾಲವಶನಾದರೆ ಆ ನಾಲ್ಕು ಜನರಾದರೂ ತನ್ನ ಉತ್ತರಕ್ರಿಯೆಗೆ ಇರಲಿ ಎಂದು ಈ ವ್ಯವಸ್ಥೆ ಎಂದಿದ್ದರಂತೆ. ಅಂದರೆ ಅಷ್ಟು ಜನವಿರೋಧ ಆ ಸಮಯದಲ್ಲಿ ಎದುರಿಸಬೇಕಾಗಿ ಬಂದಿತ್ತು! ಮುಂದೆ ಅವರು ತೀರ್ಥಹಳ್ಳಿಯಲ್ಲೇ ಕಾಲವಶರಾದರು. ಶ್ರೀ ಶ್ರೀಗಳವರು ನಮ್ಮ ತಂದೆಯವರನ್ನು ಕರೆದು ಅವರ ಕೆಲಸವನ್ನು ಮುಂದುವರಿಸಲು ಹೇಳಿದಾಗ ಮೊದಲು ಅಳುಕಿದರೂ ನಮ್ಮಪ್ಪ - ವ್ಯವಹಾರದ ಜವಾಬ್ದಾರಿ ತೆಗೆದುಕೊಂಡರು. ಅಲ್ಲಿ ಮಠ ಮತ್ತು ಮಠದಲ್ಲಿ ಲಕ್ಷ್ಮೀನರಸಿಂಹ ದೇವಸ್ಥಾನ. ಮಠದ ಕಟ್ಟಡ ಚಂದ್ರಶಾಲೆ ಸರ್ಕಾರದ್ದು. ಲಕ್ಷ್ಮೀನರಸಿಂಹ ದೇವಸ್ಥಾನ ಮತ್ತು ದೇವಸ್ಥಾನದ ಹೆಸರಿನಲ್ಲಿರುವ ಎಪ್ಪತ್ತೈದು ಎಕರೆ ಜಮೀನು ಶ್ರೀಗಳದು. ಮುಜರಾಯಿ ಇಲಾಖೆಯದು ಎಂಬ ವಿವಾದ. ಸರಿ, ಕೋರ್ಟ್ ವ್ಯಾಜ್ಯ. ಮೂರನೇಯತ್ತೆ ಪಾಸಾದ ನಮ್ಮ ತಂದೆ ಈ ಕೋರ್ಟ್ ವ್ಯವಹಾರ ನಡೆಸಬೇಕು. ಧೈರ್ಯದಿಂದ ನಡೆಸಿದರು. ಬೆಂಗಳೂರಿನಲ್ಲಿ ಶ್ರೀಗಳವರ ಚಾತುರ್ಮಾಸ್ಯವ್ರತ ಏರ್ಪಡಿಸಿದರು. ಅಧಿಕಾರಿಗಳ ಪರಿಚಯ ಮಾಡಿಕೊಂಡರು. ಈ ವಿಷಯದಲ್ಲಿ ಅವರಿಗೆ ನೆರವಾದವರು ಸಾಗರದ ಶ್ರೀ ಶ್ರೀಕಂಠಯ್ಯ ಎನ್ನುವ ಕಾಯಿದೆ ತಜ್ಞರು, ವ್ಯವಹಾರಸ್ಥರು. ಅಂತೂ ಪ್ರಕರಣ ಮಠದಂತೆ ಆಯಿತು. ಶ್ರೀ ಶ್ರೀಕಂಠಯ್ಯನವರಿಗೆ ಗುರುಭಕ್ತತಿಲಕ ಎನ್ನುವ ಬಿರುದನ್ನು ಕೊಡಲಾಯಿತು- ಶ್ರೀ ರಾಘವೇಂದ್ರ ಭಾರತಿಗಳವರನ್ನು ಶಿಷ್ಯರನ್ನಾಗಿ ಪಡೆದ ಸಮಾರಂಭದಲ್ಲಿ. ಅವರಿಗೆ ಆ ಬಿರುದು ಕೊಡುವಾಗ ಸಣ್ಣ ಅಪಸ್ವರ: ಅವರು ಹವ್ಯಕ ಬ್ರಾಹ್ಮಣರಲ್ಲ ಎಂದು. ಆಗ ಇನ್ನೂ ಕೆಲವರು ವಾದಿಸಿದರು, ಅವರು ಹವ್ಯಕರೇ ಆದರೆ ಈ ಬಿರುದು ಕೊಡುವುದು ತಪ್ಪು. ಎಲ್ಲ ಹವ್ಯಕರೂ ಗುರುಭಕ್ತರೇ. ಆದರೆ ಶ್ರೀಕಂಠಯ್ಯನವರು ಹವ್ಯಕರಲ್ಲ. ಆದುದರಿಂದ ಇದು ಮಾನ್ಯ. ಈ ವಾದ ಒಪ್ಪಿತವಾಯಿತು. ಹೀಗೆ ತೀರ್ಥಹಳ್ಳಿ ಮಠ ನಮ್ಮದಾಯಿತು. ಶ್ರೀರಾಘವೇಂದ್ರಭಾರತಿಗಳ ಕಾಲದಲ್ಲಿ ಮುಖ್ಯಮಠ ಎಂಬ ಮಾನ್ಯತೆಯನ್ನೂ ಪಡೆಯಿತು. ಕೋಟಿರಾಜ ನಾಗರಾಜರ ಕಥೆ ಮೊಮ್ಮಕ್ಕಳೆಲ್ಲಾ ತಾತಮ್ಮನಿಗೆ ದಿನಾ ಗಂಟು ಬೀಳುವರು, "ತಾತಮ್ಮಾ ಕಥೆ ಹೇಳೆ, ಕಥೆ ಹೇಳೆ". ತಾತಮ್ಮನದು ಒಂದೇ ಉತ್ತರ: "ಕತೆ ಕತೆ ಕಾರಣ ಬೆಕ್ಕಿನ ತೋರಣ. ಮಕ್ಕಳಿಗೆಲ್ಲಾ ಬೆಕ್ಕಿನ ಪಳದ್ಯ". ಈ ಪದ್ಯದ ರೂಪಾಂತರವೂ ಒಂದಿತ್ತು. "ಕತೆ ಕತೆ ಕಾರಣ, ಮಾವಿನ ತೋರಣ, ಮಕ್ಕಳಿಗೆಲ್ಲಾ ಹೋಳಿಗೆ ಹೂರಣ". ಅಂತೂ ಕಥೆ ಶುರುವಾಗುತ್ತಿತ್ತು. ಕೋಟಿರಾಜ ಮತ್ತು ಐವರು ಸಹೋದರರು ತುಂಬಾ ವಿದ್ಯಾವಂತರು. ಶೃಂಗೇರಿ ಜಗದ್ಗುರುಗಳ ಸಹಪಾಠಿ ಮಹಾಬಲೇಶ್ವರ ಶಾಸ್ತ್ರಿಗಳು ಇವರ ಧರ್ಮಪತ್ನಿ ಸರಸ್ವತಿಬಾಯಿ. ಸರಸ್ವತಿಬಾಯಿ ಗರ್ಭಿಣಿ ಇರುವಾಗಲೇ ಮಹಾಬಲ ಶಾಸ್ತ್ರಿಗಳು ಸ್ವರ್ಗಸ್ಥರಾದರು. ಮರಣಾನಂತರ ಕನ್ಯಾರತ್ನ ಜನನ. "ತಾತಮ್ಮ, ಅವಳ ಹೆಸರೇನು?" ಕೇಳಿದವ ಅಕ್ಕಿಮಾಣಿ. "ಸುಮ್ಮಂಗಿರು, ಏನು ಗಡಬಡೆ ನಿಂದು, ಏಳು ತಿಂಗಳಿಗೆ ಹುಟ್ಟಿದವರ ಹಾಗೆ ಗಡಬಡೆ ಮಾಡಡ". ಅಕ್ಕಿ ಮಾಣಿ ಸುಮ್ಮನುಳಿದ. ಇತ್ತ ನಾಗಪುರಿಯಲ್ಲಿ ನಾಗರಾಜನಿಗೆ ಮೂರು ಗಂಡು ಮಕ್ಕಳು ಹಾಗೂ ಮೂರು ಹೆಣ್ಣು ಮಕ್ಕಳು. ಹಿರಿಯವಳನ್ನು ದೇವ ರಾಜ್ಯಕ್ಕೂ, ಎರಡನೆಯವಳನ್ನು ನೂತನ ರಾಜ್ಯಕ್ಕೂ, ಮೂರನೆಯವಳನ್ನು ಮಾರ್ಕಂಡೇಯನಿಗೂ ಕೊಟ್ಟು ಮದುವೆ ಮಾಡಿದರು. ಎರಡನೇ ಶಿವರಾಜನಿಗೆ ಪರ್ವತನಗರದ ಪಾಷಾಣಗಿರಿಯ ಹೆಣ್ಣು. ಈ ಸೀತಾಮಾತೆ ಗಂಡು ಮಗುವನ್ನು ಪ್ರಸವಿಸಿ ಐದಾರು ತಿಂಗಳಲ್ಲಿ ಸ್ವರ್ಗಸ್ಥಳಾದಳು. ಶಿವರಾಜ ಎರಡನೇ ಮದುವೆ ಒಲ್ಲೆ ಎಂದ. "ತಾತಮ್ಮ, ಇವನ ಹೆಸರು ಏನು?" ಮಕ್ಕಳಲ್ಲಿ ಒಬ್ಬರ ಪ್ರಶ್ನೆ. "ಮಧ್ಯೆ ಬಾಯಿ ಹಾಕಡ, ಇವತ್ತಿಗೆ ಇಷ್ಟು ಸಾಕು" ಎಂದು ಎಲ್ಲವನ್ನೂ ಮಲಗಿಸಿದಳು. ತಾತಮ್ಮ ತಂಗಿ ಮನೆ ಅಗಸೆಗೆ ನಾಲ್ಕೈದು ದಿನ ಪಾರು! ಮತ್ತಾವತ್ತೋ ಕಥೆ ಮುಂದುವರಿಯುವುದು... ಗೋಕರ್ಣದಲ್ಲಿ ಅಜ್ಜೀಬಳ ಹೆಗಡೆಯವರ ಕಡೆಯ ಸಂತರ್ಪಣೆ. ಊಟ ದೇವಸ್ಥಾನದ ಚಂದ್ರಶಾಲೆಯಲ್ಲಿ. ಊಟಕ್ಕೆ ಬಾಳೆ ಹಾಕಿದ್ದಾರೆ. ಕೋಟಿರಾಜನ ಮನೆ ಕನ್ಯೆ ಊಟಕ್ಕೆ ಬಂದಿದ್ದಾಳೆ, ಗೆಳತಿಯರೊಂದಿಗೆ. ಊರ ಯುವಕರೆಲ್ಲಾ ಬಡಿಸಲು ಟೊಂಕ ಕಟ್ಟಿ ನಿಂತಿದ್ದಾರೆ. ಊಟ ನಡೆದಿತ್ತು. ಶಿವರಾಜನ ಮಗ ಪಾಯಸ ಬಡಿಸಲು ಉಗ್ಗ ಹಿಡಿದು ನಡೆದ. ಎಲ್ಲರಿಗೂ ಪಾಯಸ ಬಡಿಸಿದ. ಅಕಸ್ಮಾತ್ತೋ, ಬೇಕೆಂತಲೋ - ಗೊತ್ತಿಲ್ಲ - ಕೋಟಿ ರಾಜನ ಮಗಳಿಗೆ ಒಂದೇ ಸಲ ಎರಡು ಹುಟ್ಟು ಬಡಿಸಿದ. ಇದನ್ನು ಗೆಳತಿಯರು ನೋಡಿದರು. ಸರಿ, ಊರೆಲ್ಲಾ ಗುಲ್ಲು. ಕೋಟಿರಾಜನ ಮಗಳಿಗೂ, ಶಿವರಾಜನ ಮಗನಿಗೂ ಪ್ರೀತಿಯಿದೆ ಎಂದು. ಹಾಗಾದರೆ ಪ್ರೇಮವಿವಾಹ ಎಂದ ಗಜಣ್ಣ. " ಆದದ್ದೊ, ಅಪ್ಪುದೋ?" ಎಂದೆ ನಾನು. "ನಿಂಗ್ಳು ಹೀಂಗೆಲ್ಲಾ ಅಡ್ಡಾತಿಡ್ಡಾ ಮಾತನಾಡಿದರೆ ಕಥೆ ಖೈದ್" ಎಂದಳು ಹುಸಿಕೋಪದಿಂದ ತಾತಮ್ಮ. "ತಪ್ಪಾಯಿತು, ತಾತಮ್ಮಾ, ದಯಮಾಡಿ ಕಥೆ ಮುಂದುವರಿಸು" ಎಂದ ಮೇಲೆ ಮತ್ತೆ ಹೇಳತೊಡಗಿದಳು. "ಸರಿ, ಹಿರಿಯರು ಮಾತನಾಡಿ ಲಗ್ನ ನಿಶ್ಚಯಿಸಿದರು. ಮಂಟಪದಲ್ಲಿ "ಗಣೇಶರಾಜಸ್ಯ ಪೌತ್ರಂ ಶಿವರಾಜಸ್ಯ ಪುತ್ರಾಣಾಂ ಅನಂತ ನಾಮ್ನಾವರಾಯ...... ಪೌತ್ರಿ ಮಹಾಬಲ ರಾಜಸ್ಯ ಪುತ್ರೀ ಸುಬ್ಬಿನಾಮ್ನಾನಂ ಕನ್ಯಾಯಾಂ" ಎಂದು ಮಂತ್ರ ಪಠಿಸಿದರು ಎಂದ ಕೂಡಲೇ ನಾವೆಲ್ಲರೂ "ಓ,ಓ, ಅಪ್ಪಯ್ಯ ಅಬ್ಬೆ ಮದುವೆ" ಎಂದು ಕುಣಿದಾಡಿದೆವು. ಒಳಗೆ ಮಲಗಿದ್ದ ಅಪ್ಪಯ್ಯ ಅಬ್ಬೆ ಹೊರಬಂದು ನೋಡಿದರೆ ಮಕ್ಕಳ ಕುಣಿತ "ಅಪ್ಪಯ್ಯ, ಅಬ್ಬೆ ಮದುವೆ, ಕೋಟಿರಾಜನ ಮಗಳು, ನಾಗರಾಜನ ಮಗನಿಗೂ ಮದುವೆ. ಕೋಟಿರಾಜನ ಮಗಳಿಂದ ಸಂತಾನಕೋಟಿಯಾಗಲಿ. ನಾಗಸಂತಾನ ಅನಂತವಾಗಲಿ ಎಂದ ದೊಡ್ಡಣ್ಣ. ’ನಾಗರಾಜ ಸಂತತಿದಾಯಕ’ ಎಂದೂ ಸೇರಿಸಿದ. "ಅನಂತ ವಿಜಯ" ಅಂದಿನಿಂದಲೇ ಅನಂತ ವಿಜಯ ಪ್ರಾರಂಭವಾಯಿತು. ಎಂದು ಅವನು ಚಿ.ಸುಬ್ಬಿಯನ್ನು ವರಿಸಿದನೋ ಅಂದಿನಿಂದಲೇ. ನಮ್ಮಲ್ಲಿ ಆಗ ಮನೆಯಲ್ಲಿ ಬೇರೆ ಹೆಸರು ಇಡುವ ಪದ್ಧತಿ ಇತ್ತು. ಸೊಸೆಗೆ ಎಲ್ಲರೂ ಸೇರಿ "ಲಕ್ಷ್ಮಿ" ಎಂದು ನಾಮಕರಣ ಮಾಡಿದರು. ಅಂದಿನಿಂದ ನಮ್ಮ ಅಮ್ಮ ಅನಂತಲಕ್ಷ್ಮಿಯಾದಳು. ಆ ಅತ್ತೆಯರು, ಅವರ ಸೊಸೆಯಂದಿರು ಎಲ್ಲರೂ ಲಕ್ಷ್ಮಿ ಎಂದೇ ಕರೆಯುತ್ತಿದ್ದರು. ಲಕ್ಷ್ಮಿ ಗರ್ಭಿಣಿಯಾದುದನ್ನು ಕೇಳಿ ಎಲ್ಲರೂ ಹರ್ಷಗೊಂಡರು. ತಂದೆ ಶಿವರಾಮನಿಗೆ ಅಜ್ಜನಾಗುವ ಆಸೆ. ಮೊದಲ ಬಾಣಂತನವನ್ನು ತವರು ಮನೆಯಲ್ಲಿ ಮಾಡುವುದು ಪದ್ಧತಿ. ಆದರೆ ಅಲ್ಲಿ ಅನುಕೂಲವಿರಲಿಲ್ಲ. ಅದರಿಂದ ಅಬ್ಬೆಯ ಅಬ್ಬೆ ಮನೆ, ಸುಬ್ರಹ್ಮಣ್ಯದಲ್ಲಿ ಬಾಳಂತನ ನಡೆಯಿತು. ನಮ್ಮ ದೊಡ್ಡಣ್ಣ ಜನಿಸಿದ್ದು ಅಲ್ಲೇ, ನರಸಿಂಹಭಟ್ಟರ ಮನೆಯಲ್ಲಿ ಶಿವರಾಮ ಅಜ್ಜನಾದ ಮೊಮ್ಮಗ ಶಿವರಾಮನಿಂದಾಗಿ. ಅನಂತನ ಮೊದಲ ಹರ್ಷದ ರವ ಶಿವರಾಮನಿಂದ. ಮೊಮ್ಮಗನಿಗೆ ಒಂದು ಅಂಗಿಯನ್ನು ನಿಂತು ಹೊಲಿಸಿಕೊಂಡು ಬಂದನಂತೆ ಅಜ್ಜ. ಆ ಚಂದದ ಅಂಗಿ ಎಂದೂ ಗಲೀಜಾಗಲೇ ಇಲ್ಲ - ಅಷ್ಟು ಗಿಡ್ಡ ಅದು! ಸೊಸೆಗೆ ನಗು ತಡೆಯಲಾಗಲಿಲ್ಲ. ಆದರೂ ಸುಮ್ಮನಿದ್ದು ಅಜ್ಜಿ ಮನೆಗೆ ಬಂದು ನಗೆಯಾಡಿದಳಂತೆ. ಶಿವರಾಮ ಹರದಾಡುವಾಗ ಎಲ್ಲಾದರೂ ಬಿದ್ದಾನೆಂದು ಅವನ ಕಾಲು ಬಳೆಗೆ ಬಳ್ಳಿ ಕಟ್ಟಿ ಇನ್ನೊಂದು ತುದಿಯನ್ನು ಕಿಟಕಿಗೆ ಕಟ್ಟಿ ತನ್ನ ಕೆಲಸಕ್ಕೆ ತೊಡಗಿಕೊಂಡಿದ್ದಳಂತೆ ನಮ್ಮಮ್ಮ. ಹೊರಗೆಲ್ಲೋ ಹೋಗಿದ್ದ ಅಜ್ಜ ಬಂದು ನೋಡಿದ. ಬ್ರಹ್ಮೇತಿ ಕೋಪ ಬಂತು. ಅಂದು ಮಧ್ಯಾಹ್ನ ಊಟ ಮಾಡದೇ ಛತ್ರದ ಮಂಜುನಾಥನ ಮನೆಯಲ್ಲಿ ಕೂತನಂತೆ. ಅಮ್ಮನಿಗೇ ಅರ್ಥಾವಾಯಿತೋ, ಬೇರೆ ಯಾರಾದರೂ ಹೇಳಿದರೋ - ತಿಳಿಯದು. ಅಲ್ಲಿಗೆ ಹೋಗಿ "ತಪ್ಪಾಯಿತು" ಎಂದು ನಮಸ್ಕಾರ ಮಾಡಿದ ಮೇಲೆ ಮನೆಗೆ ಬಂದು ಮೊಮ್ಮಗನನ್ನು ತೊಡೆ ಮೇಲೆ ಕೂರಿಸಿಕೊಂಡು ಊಟ ಮಾಡಿದನೆಂದು ಅಮ್ಮ ಹೇಳುತ್ತಿದ್ದಳು. ಇನ್ನೊಮ್ಮೆ ಇವಳು ಅಡಿಗೆ ಮಾಡಿ ಕೊಳ್ಳಿಗೆ ನೀರು ಹಾಕಿ ಮೂಲೆಯಲ್ಲಿಟ್ಟು ನೆರಮನೆಗೆ ಮಾತನಾಡಲು ಹೋಗಿದ್ದಳು - ಮಗನನ್ನು ಕರೆದುಕೊಂಡು. ಮಾವ ಸ್ನಾನ ಮಾಡಿ ಬಂದು ಸಂಧ್ಯಾವಂದನೆ ಮಾಡುತ್ತಿದ್ದಾಗ ಆಚೆಮನೆ ಪಾತತ್ತೆ ಯಾಕೋ ಬಂದಳು. "ದೊಡ್ಡಪ್ಪ, ಬೆಂಕಿ ಸೌದಿ ಉರಿತಾ ಇದ್ದು, ಎಂತಕ್ಕೆ ನಂದಿಸಿದ್ದಿಲ್ಲೆ ಎಂದಾಗ "ಪಾತಿ, ಇವತ್ತು ನಾ ಇದ್ದೆ ನಂದಸ್ತೆ. ನಾ ಇಲ್ಲದಾಗ ಹೀಗೇ ಆದರೆ ಯಾರು ನೀರು ಹಾಕ್ತೊ? ಅವಳೇ ಬರಲಿ" ಎಂದನಂತೆ. ಪಾತತ್ತೆ ನೀರು ಹಾಕಿ ನಂದಿಸಿ ಸುಬ್ಬೀ ಎಂದು ಅಮ್ಮನನ್ನು ಕರೆದು ತೋರಿಸಿದಳಂತೆ . ಅಮ್ಮನಿಗೆ ಛಳಿಜ್ವರ, ಪಾಪ! ಅಜ್ಜ ತೀರ್ಥಹಳ್ಳಿಗೆ ಹೋದ. ಅನಂತ ಮನೆಗೆ ಬಂದ. ಮುಂದೆ ಕೆಲವೇ ತಿಂಗಳಲ್ಲಿ ಶಿವರಾಮಜ್ಜ ತೀರ್ಥಹಳ್ಳಿಯಲ್ಲೇ ಕೈಲಾಸವಾಸಿ ಆದ. ಅಪರ ಕಾರ್ಯಗಳನ್ನೆಲ್ಲಾ ಮುಗಿಸಿ ಅನಂತ ಬರಲೇ ಇಲ್ಲವಲ್ಲ ಎಂದು ಶ್ರೀ ಶ್ರೀಗಳವರು ಹೇಳಿ ಕಳಿಸಿದರು. ಬಂದ. "ನೀನು ನಿನ್ನಪ್ಪನ ಕೆಲಸ ಮುಂದುವರಿಸು" ಎಂದಾಗ "ತನ್ನಿಂದ ಆಗದು, ಹೆದರಿಕೆ ಆಗುತ್ತದೆ" ಎಂದನಂತೆ. "ಶಿವರಾಮಭಟ್ಟನ ಮಗನಿಗೆ ಎಲ್ಲಿಯ ಹೆದರಿಕೆ? ನಾನಿದ್ದೇನೆ, ಮುಂದುವರಿಸು" ಎಂದು ಅಪ್ಪಣೆ ಕೊಡಿಸಿದರು. ಇದು ನಿಜವಾದ ಅನಂತ ವಿಜಯ. ತೀರ್ಥಹಳ್ಳಿಯಲ್ಲಿ ಮಾಡಬೇಕಾದ ಕೆಲಸ ಬಹಳ ಇತ್ತು. ಪರರ ಪಾಲಾಗಿದ್ದ ಜಮೀನನ್ನು ಸಾಮ, ದಾನ, ಭೇದ, ದಂಡಗಳಿಂದ ಮಠಕ್ಕೆ ಬರುವಂತೆ ಮಾಡಿದ್ದು ಹರಸಾಹಸ. ಇಷ್ಟರ ಮಧ್ಯ ಊರಿನವರ ಸಹಕಾರವೂ ಇಲ್ಲ. ಆದರೂ ಈ ಕೆಲಸದಲ್ಲಿ ತಂದೆಯವರಿಗೆ ನೆರವಾದವರು ಕೆರೆಮಾರ್ಕಾಂಡೆ ಗಣೇಶಭಟ್ಟರು, ಸೋದರತ್ತೆಯ ಮಗ, ಕಾಯಾ, ವಾಚಾ, ಮನಸಾ ಸಹಾಯ ಮಾಡಿದರಂತೆ. ಇಷ್ಟರಲ್ಲೇ ಎರಡನೇ ಮಗನ ಜನನ. ಕುಲದೇವರ ಹೆಸರು, ಗಜಾನನ. ಮೂರನೆಯದಾಗಿ ಹುಟ್ಟಿದವನಿಗೆ ಮಾವನ ಹೆಸರು, ಮಹಾಬಲೇಶ್ವರ. ವೈಕುಂಠ ಚತುರ್ದಶಿಯ ದಿನ ಹುಟ್ಟಿದವನು ಲಕ್ಷ್ಮೀನಾರಾಯಣನಾದ. ಐದನೆಯ ಮಗನಿಗೆ ಜಯರಾಮ ಎಂಬ ಹೆಸರು. ಅದು ಊರ ಹಿರಿಯರಾದ ಜಯರಾಮ ಉಪಾಧ್ಯರು ಗರುಡಚಯನ ಮಾಡಿದ ವರ್ಷವಂತೆ. ಮುಂದೆ ಈ ಜಯರಾಮನಿಗೆ ಜಯರಾಮ ಉಪಾಧ್ಯರ ಮನೆಯ ಹೆಣ್ಣನ್ನೇ ನಮ್ಮ ತಂದೆ ಮದುವೆ ಮಾಡಿಸಿದರು. ಆರನೆಯ ಮಗೆ ನರಸಿಂಹಮೂರ್ತಿ. ನಾವಿದ್ದ ತೀರ್ಥಹಳ್ಳಿ ಮಠದ ಆದ್ಯದೇವರ ಹೆಸರು. ನಮ್ಮ ಮನೆಯ ಆಚೆ ಈಚೆ: ಆಚೆ ಮನೆ ಹರಿಹರಜ್ಜನದು. ಅವನಿಗೆ ಒಬ್ಬನೇ ಮಗ. ಹೆಸರು ಗಣಪತಿ. ನಾವು ಕರೆಯುತ್ತಿದ್ದುದು ಭವಾನಿ ಅಣ್ಣ ಎಂದು. ಅವನಿಗೆ ಮೂರು ಜನ ಅಕ್ಕಂದಿರು. ಮಂಕಾಳಿ, ಪಾರ್ವತಿ, ಭವಾನಿ. ಹಾಗಾಗಿ ಅವನು ಭವಾನಿ ಅಣ್ಣನಾದ! ಭವಾನಿ ಅಣ್ಣನಿಗೆ ಮೂರು ಗಂಡುಮಕ್ಕಳು. ಹರಿಹರ, ರಾಮಕೃಷ್ಣ ಮತ್ತು ಮಹಾಬಲೇಶ್ವರ. ಈಚೆ ಮನೆ ದತ್ತಾತ್ರಯ ಅಜ್ಜ. ಅವನಿಗೆ ಮೂವರು ಗಂಡು ಮಕ್ಕಳು. ಗಣೀಶ, ರಾಮಚಂದ್ರ ಮತ್ತು ನಾರಾಯಣ. ಹೆಣ್ಣು ಮಕ್ಕಳು ಗಂಗಕ್ಕ, ತ್ರಿವೇಣಿ, ನಾಗವೇಣಿ, ಸರಸ್ವತಿ (ಚಚ್ಚಕ್ಕ), ಗೌರಿ. ಇವರ ತಾಯಿ ಅಬ್ಬೆಗೆ ಕಾವೇರತ್ತೆ. ಆಚೆಮನೆ ಅಜ್ಜನ ಹೆಂಡತಿ. ಅನ್ನದೇವಿ (ಅಂದೇವತ್ತೆ). ಈ ಮನೆಯನ್ನು ಮಾರಿ ಅವರು ಚೌಡಗೆರೆಗೆ ಹೋದರು. ಕೊಂಡವರು ಬಗ್ಗೋಣ ರಾಮಭಟ್ಟರು, ಗಣೇಶ ಅಡಿಗಳು. ಅಪ್ಪಯ್ಯನ ಅತ್ತೆಮನೆ: ೧. ಮಂಕಾಳಮ್ಮನ ಮನೆ. ಊರ ಪ್ರಾರಂಭದಲ್ಲಿದೆ. ಹೆಸರು ಚಚ್ಚಮ್ಮ (ಸರಸ್ವತಿ ಇರಬೇಕು). ನಮ್ಮ ಮನೆಯ ಮದುವೆ, ಮುಂಜಿಗೆ ಅಜ್ಜನ ಶ್ರಾದ್ಧಕ್ಕೆ ನಾವೇ ಹೋಗಿ ಕರೆದುಕೊಂಡು ಬರುತ್ತಿದ್ದೆವು. ನಂತರ ಮುಟ್ಟಿಸುತ್ತಿದ್ದೆವು. ಅವಳಿಗೆ ಮಕ್ಕಳಿರಲಿಲ್ಲ, ಮಾರಿಬೇನೆಗೆ ತನ್ನ ಎರಡೂ ಕಣ್ಣುಗಳನ್ನು ಕಳೆದುಕೊಂಡಿದ್ದಳು, ಎಂಬತ್ತು ವರ್ಷ ಬದುಕಿದ್ದಳು. ೨) ಕೆರೆಮಾರ್ಕಾಂಡೆ: ಮನೆ ರಥಬೀದಿಯಲ್ಲಿದೆ. ಇವಳಿಗೆ ಇಬ್ಬರು ಗಂಡುಮಕ್ಕಳು. ಜಯರಾಮ, ಗಣೇಶ. ಈ ಗಣೇಶಮಾವನೇ ತೀರ್ಥಹಳ್ಳಿಯಲ್ಲಿ ಅಪ್ಪಯ್ಯನಿಗೆ ನೆರವಾದವನು. ಜೈಭಾವ ನಮ್ಮ ಮನೆ ನವರಾತ್ರಿ ಪೂಜೆ ಮಾಡುತ್ತಿದ್ದ. ಅವನ ಮನೆಗೆ ಅಣ್ಣತಮ್ಮಂದಿರ ಬಿದಿಗೆ ಊಟಕ್ಕೆ ನಾವೆಲ್ಲರೂ ಹೋಗುತ್ತಿದ್ದೆವು. ೩) ಶಾಬತ್ತೆ: ಹೊಸಮನೆ ಅಂದರೆ ರಥಬೀದಿಯಲ್ಲಿ ಮನೆ, ಇವಳಿಗೆ ಮೂರು ಗಂಡು ಮಕ್ಕಳು. ಶಿವರಾಮ, ಸದಾಶಿವ, ಕೃಷ್ಣ. ಕೊಡ್ಲೆಕೆರೆ ವಾಸುದೇವ ಭಟ್ಟರ ಬಗೆಗೂ ನಾನು ಹೇಳಲೇಬೇಕು. ಶಿವರಾಮಜ್ಜ ಮತ್ತು ಇವರು ಶಟ್ಕರು ಅಂತ ಅಲ್ಲ. ದೂರದ ಕಾಶಿಯಲ್ಲಿ ಪೌರೋಹಿತ್ಯ ನಡೆಸಿದ ಸಾಹಸಿ ವಾಸಜ್ಜ. ಯಕ್ಷಗಾನ ಕಲಾಪ್ರೇಮಿ. ಇವರ ಮೂರು ಮಕ್ಕಳಲ್ಲಿ ಹಿರಿಯವ ಗಣಪತಿ ಅಣ್ಣ ಸಾಹಸಿ. ಎರಡನೆಯವ ಸುಬ್ರಾಯ ಶುದ್ಧ ವೈದಿಕ. ಮೂರನೆಯವ ವಿಶ್ವನಾಥ. ಬಹಳ ವರ್ಷ ಮೂವರೂ ಒಟ್ಟಿಗೆ ಪೌರೋಹಿತ್ಯ ಒದಗಿಸಿದರು. ಈಗ ಪಾಲಾಗಿದ್ದಾರೆ. ಆದರೆ ಔದಾರ್ಯ ಪಾಲಾಗಲಿಲ್ಲ. ನಮ್ಮ ಮನೆಯ ಎದುರಿಗೆ ನಾಗತೀರ್ಥ, ಪಕ್ಕದಲ್ಲಿ ಅಶ್ವತ್ಥ ವೃಕ್ಷವಿರುವ ಅಶ್ವತ್ಥಕಟ್ಟೆ. ಈ ಅಶ್ವತ್ಥಕಟ್ಟೆ ವಿಶೇಷತೆಯನ್ನು ಪಡೆದಿದೆ. ಈ ಅಶ್ವತ್ಥ ವೃಕ್ಷಕ್ಕೆ ಊರಿನ ಪ್ರಸಿದ್ಧ ಅಗ್ನಿಹೋತ್ರ ದೀಕ್ಷಿತರು ,ಜೋಗಳೆಕರರ ಮನೆಯಿಂದ ಉಪನಯನ ಆಗಿದೆಯಂತೆ. ಕೋಟಿತೀರ್ಥಸ್ನಾನ ಮಾಡಿ ಊರಿನವರು ದಿನಾ ಈ ತ್ರಿಮೂರ್ತಿಸ್ವರೂಪ ಅಶ್ವತ್ಥಮರಕ್ಕೆ ನಮಸ್ಕರಿಸಿಯೇ ಮುಂದೆ ಮುಖ್ಯ ದೇವಾಲಯಕ್ಕೆ ಹೋಗುವುದು. "ವೃಕ್ಷ ಮೂಲೇ ಸ್ಥಿತೋ ಬ್ರಹ್ಮ, ವೃಕ್ಷ ಮಧ್ಯೇ ಜನಾರ್ದನ, ವೃಕ್ಷಾಗ್ರೇ ಶಂಕರ ಪ್ರೋಕ್ತಂ, ವೃಕ್ಷರಾಜಾಯ ತೇ ನಮಃ" ಎನ್ನುತ್ತಾ ಪ್ರದಕ್ಷಿಣೆ ಹಾಕಿ ಹೋಗುವವರು ಕೆಲವರು. ಹಂದೆಮನೆ ಅಮ್ಮ - ನಾವು ಚಿಕ್ಕವರಿದ್ದ ಕಾಲದ ನೆನಪು. ಉದಯಗೀತೆ ಹಾಡುತ್ತಾ ಕೋಟಿತೀರ್ಥ ಸ್ನಾನಕ್ಕೆ ಹೋಗಿ (ವರ್ಷದ ಎಲ್ಲ ದಿನಗಳೂ) ಬರುವಾಗ ಈ ಅಶ್ವತ್ಥಮರದ ಬೇರಿಗೆ ನೀರು ಹಾಕುತ್ತಾ ಮೇಲಣ ಶ್ಲೋಕ ಹೇಳುತ್ತಿದ್ದಳು. ಪನ್ನಿತಾತಿಗೆ ಇದು ಅಲಾರ್ಮ್ ಗಂಟೆ. "ಮಕ್ಕಳೇ, ಏಳಿ, ಹಂದೆಮನೆ ಅಮ್ಮ ಅಶ್ವತ್ಥಕ್ಕೆ ಬಂದಾಯಿತು. ಈ ವಯಸಿನಲ್ಲಿ ಅವಳು ಕೋಟಿತೀರ್ಥಸ್ನಾನ ಮುಗಿಸಿ ಬಂದರೂ ನೀವು ಹಾಸಿಗೆಗೆ ಶರಣು. ಏಳ್ರೋ" ಎಂದು ಏಳುವವರೆಗೂ ಗದರಿಸುತ್ತಿದ್ದಳು. ಅಶ್ವತ್ಥಮರಕ್ಕೆ ಹೊಂದಿ ನಾಗೇಶ್ವರ ದೇವಸ್ಥಾನ.ಸಂತಾನ ಪ್ರಾಪ್ತಿಗಾಗಿ ಇಲ್ಲಿ ಸರ್ಪಸಂಸ್ಕಾರ, ನಾಗಪ್ರತಿಷ್ಠೆ ಮಾಡುತ್ತಾರೆ. ಶ್ರಾವಣಶುದ್ಧ ಪಂಚಮಿ ನಾಗರಪಂಚಮಿಗೆ ಸಾವಿರಾರು ಜನರಿಂದ ಪೂಜೆ. ಸಂಜೆಗೆ ಸರ್ವಾಲಂಕಾರ ಪೂಜೆ, ಮಹಾಮಂಗಳಾರತಿ. ಈ ಮಂಗಳಾರತಿಗೆ ಊರ ಮುಖ್ಯ ದೇವಸ್ಥಾನ (ಮಹಾಬಲೇಶ್ವರ)ದಿಂದ ಓಲಗ ಬರುತ್ತದೆ. ನಮಗೆಲ್ಲಾ ಹೆಮ್ಮೆ. ಮಳೆಗಾಲದ ನಿಮಿತ್ತ ನಿಂತ ಉತ್ಸವಗಳು ನಮ್ಮ ಕೇರಿಗೆ ಮೊದಲು ಬಂದು ಓಲಗದ ನಾದಗೈದು ಆ ಇಡೀ ವರ್ಷದ ಉತ್ಸವಗಳ ವಾಲಗಕ್ಕೆ ನಾಂದಿ. ಜೈ ನಾಗೇಶ್ವರ. ಈ ದೇವಸ್ಥಾನಕ್ಕೆ ತಾಗಿ ಇರುವುದೇ ವೇದೇಶ್ವರ. ಅದಕ್ಕೆ ತಾಗಿ ಊರಿನ ಉಪಾಧಿವಂತರಲ್ಲಿ ಒಬ್ಬರಾದ ಉಪಾಧ್ಯಾಯರ ಮನೆ. (ದೀಕ್ಷಿತರೂ ಹೌದು). ಇದಕ್ಕೆ ತಾಗಿ ಗೋಕರ್ಣದ ಪಾಳೆಯಗಾರ ಉಪಾಧಿವಂತ ಗೋಪಿ ಮನೆ. ಐತಿಹಾಸಿಕವಾಗಿ, ಸಾಮಾಜಿಕವಾಗಿ ಪ್ರಸಿದ್ಧ ಮನೆತನ. ನಂತರ ಇನ್ನೊಬ್ಬ ಉಪಾಧಿವಂತರು ಅಡಿಗಳ ಮನೆ. ದೊಡ್ಡ ಕುಟುಂಬ. ವಿದ್ಯಾವಂತರ, ವೇದವಿದ್ವಾಂಸರ ಮನೆ. ನಂತರ ಶ್ರೀ ಜೋಗಳೇಕರ ದೀಕ್ಷಿತರ ಮನೆ. ಇವರು ಮಹಾರಾಷ್ಟ್ರದವರು. ಇಲ್ಲಿಗೆ ಬಂದು ಮೂರುನೂರು, ನಾಲ್ಕುನೂರು ವರ್ಷಗಳಾಗಿರಬೇಕು. ಸಮುದ್ರಕ್ಕೆ ಹೊಂದಿ ಇವರ ಜಮೀನು ಉಂಟು. ಊರ ಮಧ್ಯದಲ್ಲಿ ಶ್ರೀ ವೆಂಕಟರಮಣ ದೇವಸ್ಥಾನ ಉಂಟು. ಆಚೆಮನೆ ಶಾಂತಕ್ಕ (ಶಾಂತನಮನೆ) ಶನಿವಾರ ದೇವರು ಎನ್ನುತ್ತಾಳೆ. ಅವಳ ಗಂಡನ ಹೆಸರು ವೆಂಕಟರಮಣ. ಅಲ್ಲಿಂದ ಎಡಕ್ಕೆ ತಿರುಗಿ ಹೋದರೆ ಈಶ್ವರ ದೇವಸ್ಥಾನದ ಮುಖ್ಯ ಅರ್ಚಕರಲ್ಲಿ ಒಬ್ಬರಾದ ಹಿರೇಭಟ್ಟರ ಮನೆ. ಅಲ್ಲಿಂದ ಮುಂದೆ ಕೋಟಿತೀರ್ಥ, ಕೋಟಿತೀರ್ಥಕ್ಕೆ ಸುತ್ತು ಹಾಕುತ್ತಾ ಹೋದರೆ ಎಡಗಡೆ ಎತ್ತರದಲ್ಲಿ ಕೆಕ್ಕಾರಮಠ ಉಂಟು. ಇದರ ಮೂಲ ಮಠ ಇಲ್ಲಿಂದ ಎರಡು ಮೂರು ಮೈಲಿ ದೂರ ಅಶೋಕೆ (ಅಶೋಕಾವನ)ಯಲ್ಲಿದೆ. ಪ್ರಕೃತ ಗುರುಗಳು ಶ್ರೀ ರಾಘವೇಶ್ವರ ಭಾರತಿಗಳು ಲಕ್ಷಾಂತರ ರೂ ಸಾರ್ಥಕ ಪಡಿಸಿ ಆಕರ್ಷಣೀಯ ಮೂಲ ಮಠವನ್ನಾಗಿ ಮಾಡುವ ಮಹಾಸಂಕಲ್ಪ ಮಾಡಿದ್ದಾರೆ. ಪುನಃ ಕೋಟಿತೀರ್ಥಕ್ಕೆ ಬಂದರೆ ಕೂರ್ಸೆಮನೆ ಸಿಗುತ್ತದೆ. ಇವರೂ ಪ್ರಥಮ ಉಪಾಧಿವಂತರಲ್ಲಿ ಒಬ್ಬರು. ಹಾಗೇ ಮುಂದೆ ಹೋದರೆ ನಮ್ಮ ಕುಲದೇವತೆ ಶ್ರೀ ಪಟ್ಟವಿನಾಯಕ (ಬಟ್ಟೆ ಗಣಪತಿ) ದೇವಾಲಯ. ಮುಂದೆ ಕೃಷ್ಣಾಪುರ ಹೊನ್ನಳ್ಳಿ ಮಠ, ಕಾಲಭೈರವ, ಸೀದಾ ಹೋದರೆ ಮೊದಲು ಹೊರಟ ನಾಗೇಶ್ವರ ದೇವಸ್ಥಾನ. ಅಂದ ಹಾಗೆ ವೆಂಕಟರಮಣ ದೇವರ ಪೂಜಾರರೂ ಮಹಾರಾಷ್ಟ್ರದ ಬ್ರಾಹ್ಮಣರು. "ದೃಷ್ಟ್ವ ವಾ ದಿವ್ಯಲಿಂಗಂಚ........" ****** ಸುಪ್ರಸಿದ್ಧಕವಿ ಎಕ್ಕುಂಡಿಯವರು ಕ.ವಿ.ವಿ.ವ್ಯಾಸಂಗ ವಿಸ್ತರಣಾ ಮಾಲಿಕೆಯಲ್ಲಿ ಉಪನ್ಯಾಸಕರಾಗಿ ಬಂದು ತಮ್ಮನ್ನು ಪರಿಚಯಿಸಿಕೊಂಡರು. ಎರಡನೇ ಸಲ ನಮ್ಮ ಗ್ಯಾದರಿಂಗ್‌ಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಗ್ಯಾದರಿಂಗನ್ನು ಉದ್ದೇಶಿಸಿ ಜನರನ್ನು ತಮ್ಮ ಕಡೆ ಆಕರ್ಷಿಸಿಕೊಂಡ ರೀತಿ ನೂತನ, ಯಾಣದ ಕಲ್ಲಿನ ಸೌಂದರ್ಯ, ಹಿರೇಗುತ್ತಿಯ ಬೆಲ್ಲದ ಮಾಧುರ್ಯ ಎನ್ನುತ್ತಿದ್ದಂತೆ ಕಿವಿಗಡಚಿಕ್ಕುವಂತೆ ಚಪ್ಪಾಳೆ ಪ್ರೇಕ್ಷಕರಿಂದ. ಅವರನ್ನು ಪರಿಚಯಿಸುತ್ತಾ ನಮ್ಮ ಶಾಲೆಯ ಎಚ್.ಎಲ್.ನಾಯಕ ಮಾಸ್ತರರು "ಶ್ರೀ ಎಕ್ಕುಂಡಿ ಮಾಸ್ತರರು ಹೊಸದಾಗಿ ಬಂದಾಗ ನಾವೆಲ್ಲಾ ಅವರ ಶಿಷ್ಯರು. ಅಲ್ಲಿ ಬಂಕೇಶ್ವರ ಕೆರೆಗೆ ಬಿಡುವಿನಲ್ಲಿ ಸ್ನಾನಕ್ಕೆ ಹೋಗುತ್ತಿದ್ದರು. ನಮಗೆಲ್ಲಾ ಮುಳುಗುವುದು, ಈಜುವುದು ಹೇಳಿಕೊಡುತ್ತಿದ್ದರು."ಎಂದು ನೆನಪಿಸಿಕೊಂಡರು.ಎಕ್ಕುಂಡಿ ಮಾಸ್ತರರು ತಮ್ಮ ಮಾತುಗಳಲ್ಲಿ ಹೇಳಿದರು:"ಮುಳುಗಿದವರನ್ನೆಲ್ಲಾ ಮೇಲಕ್ಕೆತ್ತಿಯೇ ಹಿಂತಿರುಗುತ್ತಿದ್ದೆ".ಅಗ ಪುನಃ ಚಪ್ಪಾಳೆ. ಅವರ "ಮೂಡಲದೀಪವನುರಿಸುವ ಕೈಯಿಗೆ ಶರಣೆಂಬೆವು ನಾವು"- ಕವಿ ಮುಖದಿಂದಲೇ ಕವಿವಾಣಿಯನ್ನು ಕೇಳಿದಾಗ ಆದ ಸಂತೋಷ ಅಷ್ಟಿಷ್ಟಲ್ಲ. ಮಧ್ಯಾಹ್ನ ವಿರಾಮ ಮಾಡಿಕೊಂಡು ಮೊರಬದ ಲಕ್ಷ್ಮೀನಾರಾಯಣ ದೇವಾಲಯಕ್ಕೆ ಹೋಗಿ ಬಂದೆವು. ಅವರು ಅದರ ಐತಿಹ್ಯವನ್ನು ಸಮೀಪದಲ್ಲಿದ್ದ ನಮಗೆ ಹೇಳಿದಾಗ ನಾವು ಸಣ್ಣವರಾದೆವು. ರಾತ್ರಿ ಮನರಂಜನಾ ಕಾರ್ಯಕ್ರಮಕ್ಕೂ ತುಂಬ ಹೊತ್ತು ಇದ್ದರು. ಹಿರೇಗುತ್ತಿಯ ಜನರಿಗೆ ಒಂದು ಕಾಲದಲ್ಲಿ ಸಮೀಪದ ಮಾಧ್ಯಮಿಕ ಶಾಲೆ ಗೋಕರ್ಣದ ಬಿಎಚ್ ಎಸ್, ಬಂಕಿಕೊಡ್ಲದ ಎ ಎಚ್ ಎಸ್, ಆದರೂ ಬಹುತೇಕ ವಿದ್ಯಾರ್ಥಿಗಳು ಬಂಕಿಕೊಡ್ಲಿಗೇ ಹೋಗುತ್ತಿದ್ದರು. ಅದಕ್ಕೆ ಕಾರಣ ಕನ್ನಡ ಇಬ್ಬರು ಸುಪ್ರಸಿದ್ಧ ಸಾಹಿತಿಗಳು ಆಗ ಅಲ್ಲಿ ಶಿಕ್ಷಕರಾಗಿದ್ದರು. ಒಬ್ಬರು ಶ್ರೀ ಗೌರೀಶ ಕಾಯ್ಕಿಣಿ, ಇನ್ನೊಬ್ಬರು ಶ್ರೀ ಸು.ರಂ. ಎಕ್ಕುಂಡಿ. ಹೀಗಾಗಿ ಶ್ರೀ ಎಕ್ಕುಂಡಿ ಮಾಸ್ತರರಿಗೆ ಶಿಷ್ಯರ ಮನೆಗಳಲ್ಲಿ ಸತ್ಕಾರವೋ ಸತ್ಕಾರ. ಎಲ್ಲಿ ನೋಡಿದರೂ ಅವರ ಶಿಷ್ಯರೇ ಕಾಣುತ್ತಿದ್ದರು. ಮಾರನೇ ದಿನ ೯ - ೧೦ ಗಂಟೆವರೆಗೂ ಇದ್ದು ನಂತರ ಬಂಕಿಕೊಡ್ಲಿಗೆ ಮರು ಪ್ರಯಾಣ ಮಾಡಿದರು. ಶ್ರೀಮತಿ ಎಕ್ಕುಂಡಿಯವರೂ ಆಗಮಿಸಿದ್ದರು. ಶ್ರೀ ಆರ್.ಎಸ್.ಭಾಗವತ: ಭಾಗವತರದು ಕುಮಟಾದ ಸುಪ್ರಸಿದ್ಧ ಮನೆತನ. ಅವರು ಉತ್ತಮ ಸಾಮಾಜಿಕ ಕಾರ್ಯಕರ್ತರು ಮತ್ತು ಪ್ರಸಿದ್ಧ ವಕೀಲರು. ಅವರ ಅಣ್ಣ, ತಮ್ಮ, ದೊಡ್ಡಪ್ಪ ಎಲ್ಲರೂ ವಕೀಲರೇ. ಪ್ರಕೃತ ಪ್ರಸಂಗ ಬೇರೆಯೇ. ನಮ್ಮ ಗ್ಯಾದರಿಂಗ್‌ನ ಮುನ್ನಾದಿನ ಅವರಿಗೆ ಧರ್ಮಸ್ಥಳಕ್ಕೆ ಹೋಗಲೇಬೇಕಾದ ಧರ್ಮಸಂಕಟ ಒದಗಿತು. ನಮ್ಮ ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಭಾಗವತರಾದ ಶ್ರೀ ಕಡತೋಕಾ ಮಂಜುನಾಥ ಭಾಗವತರಿಗೆ ಸಂಬಂಧಪಟ್ಟ ಒಂದು ಕಾರ್ಯಕ್ಕಾಗಿ ಶ್ರೀ ಭಾಗವತರು ಧರ್ಮಸ್ಥಳಕ್ಕೆ ಧಾವಿಸಬೇಕಾಯಿತು. ಹೋಗುವಾಗ ನಮ್ಮ ಕಾರ್ಯಕ್ರಮದೊಳಗೇ ಬಂದು ಮುಟ್ಟುತ್ತೇನೆ ಎಂಬ ಕಲ್ಪನೆ ಅವರದು. ಆದರೆ ಅದು ಸಾಧ್ಯವಾಗಲಿಲ್ಲ. ಸಾಯಂಕಾಲ ನಾಲ್ಕಕ್ಕೆ ಪರಮಾಶ್ಚರ್ಯ ಕಾದಿತ್ತು. ಭಾಗವತರ ಚಿಕ್ಕಪ್ಪ ಶ್ರೀ.ಚಿ.ಎಸ್.ಭಾಗವತರು ಜೀಪಿನಲ್ಲಿ ಆಗಮಿಸಿದರು. "ನಮ್ಮ ರಾಮಚಂದ್ರನ ಬದಲಾಗಿ ನಾನೇ ಬಂದಿದ್ದೇನೆ" ಎಂದು ಸರಳವಾಗಿ ಬಂದರು. "ಕಾರ್ಯಕ್ರಮ ಮುಂದುವರಿಯಲಿ" ಎಂದರು. ಹೆಡ್‌ಮಾಸ್ಟರ್ ಆದ ನನಗೆ ಆದ ಸಂತೋಷ ಅಷ್ಟಿಷ್ಟಲ್ಲ. ಅಧ್ಯಕ್ಷರು ಯಾರೆಂದು ಯೋಚಿಸುತ್ತ ಬಟ್ಟೆ ಗಣಪತಿಗೆ (ಕುಲದೇವರು) ಪ್ರಾರ್ಥಿಸುತ್ತಿದ್ದೆ. ಗಣಪತಿಯೇ ( ಭಾಗವತ) ಅಧ್ಯಕ್ಷನಾಗಿ ಬಂದ! ಕಾರ್ಯಕ್ರಮ ಬಹು ಸುಂದರವಾಗಿ ಮುಗಿಯಿತು. ಒಬ್ಬ ಮುನ್ಸೀಫ್ ಹೀಗೆ ಇಷ್ಟು ಸರಳತೆಯಿಂದ ನಡೆದುಕೊಂಡರೆಂಬುದು, ಕಾರ್ಯಕ್ರಮ ಸಾರ್ಥಕವಾಯಿತೆಂಬುದು ನಮ್ಮ ಶಾಲೆಯ ಸೌಭಾಗ್ಯ. ಪ್ರೊ.ಜಿನದೇವ ನಾಯಕ, ಪ್ರಿ.ಎನ್.ಆರ್.ನಾಯಕ, ಡಾ.ಕೆ.ಜಿ.ಶಾಸ್ತ್ರಿ, ಪ್ರೊ.ಶರ್ಮಾ, ಶ್ರೀ ಎಸ್.ಎಚ್.ನಾಯಕ, ಪ್ರಿ.ಪ್ರೊ.ಸಭಾಹಿತ, ದಾಂಡೇಲಿ, ಪ್ರಿ.ಕೆ.ಜಿ.ನಾಯಕ, ಧಾರವಾಡ, ಕ.ವಿ.ವಿ. ಪ್ರಸಾರಾಂಗದ ಶ್ರೀ ನಾಯಕ, ಅಂಕೋಲಾದ ಪ್ರಸಿದ್ಧ ವಕೀಲ ಶ್ರೀ ಡಿ.ಎಸ್.ನಾಯಕ, ಡಾ.ಎಲ್.ಆರ್.ಹೆಗಡೆ ನೆನಪಿಗೆ ಬರುತ್ತಿರುವ ಇನ್ನು ಕೆಲ ಮುಖ್ಯ ಅತಿಥಿ ಮಹೋದಯರು. ವಡ್ಡರ್ಸೆ ರಘುರಾಮ ಶೆಟ್ಟರು ’ಮುಂಗಾರು’ ಪತ್ರಿಕೆಯ ಪ್ರಧಾನ ಸಂಪಾದಕರು. ನಮ್ಮ ಹೈಸ್ಕೂಲಿನ ಹಿಂದಿನ ವಿದ್ಯಾರ್ಥಿ ಗಂಗಾಧರನ ಜೊತೆ ಬಂದರು. ಇದರಲ್ಲಿ ಗಂಗಾಧರನ ಪಾತ್ರ ಹಿರಿದು. ಶಾಲೆಯಲ್ಲಿ ಮಕ್ಕಳ ಶಿಸ್ತು ನೋಡಿ ಸಂತೋಷಪಟ್ಟರು. ನಮ್ಮ ವಿದ್ಯಾರ್ಥಿಗಳ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿ ಹಿಂದುಳಿದವರೇ ಹೆಚ್ಚಿರುವ ಈ ಊರಿನಲ್ಲಿ ಶಾಲೆ ನಡೆಸುವ ಶಿಕ್ಷಣ ಸಂಸ್ಥೆಯನ್ನು ಶ್ಲಾಘಿಸಿದರು. ಹೊರಡುವಾಗ ಅವರಿಗೆ ಹಸ್ತಲಾಘವ ನೀಡುತ್ತಾ "ನಮ್ಮ ಹುಡುಗ ಗಂಗಾಧರನನ್ನು ನಿಮಗೆ ಒಪ್ಪಿಸಿದ್ದೇವೆ, ಈ ಪತ್ರಿಕಾರಂಗದಲ್ಲಿ ಪ್ರಸಿದ್ಧನಾಗುವಂತೆ ಮಾರ್ಗದರ್ಶನ ಬಯಸುತ್ತೇವೆ" ಎಂದೆ. ಶೆಟ್ಟರು ’ಹಾಂ’ ಎಂದರು. ನೋಡನೋಡುತ್ತ ಹಿರೇಗುತ್ತಿಯ ಗಂಗಾಧರ, ಗಂಗಾಧರ ಹಿರೇಗುತ್ತಿ ಆದ. ನಮ್ಮ ಶಾಲೆಯ ಕ್ರೀಡಾಕೂಟಕ್ಕೆ ಗೋಕರ್ಣದ ಸಂಸ್ಕೃತ ಕಾಲೇಜಿನ ಪ್ರಿನ್ಸಿಪಾಲ್, ಜ್ಯೋತಿರ್ವಿದ್ವಾನ್ ಪ್ರೊ.ರಾಮಕೃಷ್ಣ ಬೈಲಕೇರಿ ಬಂದಿದ್ದರು. ಬಹು ಆಕರ್ಷಣೀಯ ಭಾಷಣ ಮಾಡಿದರು. ಪಾರ್ವತಿ ಈಶ್ವರನನ್ನು ಮೆಚ್ಚಿಸಲು ತಪಸ್ಸು ಮಾಡುವಾಗ ಈಶ್ವರನೇ ಒಬ್ಬ ಋಷಿಯ ವೇಷದಲ್ಲಿ ಬಂದು "ಶರೀರ ಮಾಧ್ಯಂ ಖಲು ಧರ್ಮಸಾಧನಂ" - ಧರ್ಮಸಾಧನೆಗೆ ನೀನು ಮಾಡುತ್ತಿರುವ ಕಠೋರ ತಪಸ್ಸು ಯೋಗ್ಯವಾದುದಲ್ಲ, ಅದರಿಂದ ಆರೋಗ್ಯ ಕೆಡುತ್ತದೆ. ಆರೋಗ್ಯವಂತ ಶರೀರದಲ್ಲಿ ಉತ್ತಮ ಮನಸಿರುತ್ತದೆ ಎನ್ನುತ್ತಾನೆ. ಹಾಗೆ ವಿದ್ಯಾರ್ಜನೆಯೇ ನಿಮ್ಮ ಧರ್ಮವಾಗಿರುವಾಗ ಆರೋಗ್ಯವಂತ ಶರೀರ ಬೇಕು, ಅದಕ್ಕೆ ನೀವು ಪಾಠ ಮಾತ್ರವಲ್ಲದೆ ಆಟ, ವ್ಯಾಯಾಮ ಕೂಡ ಮಾಡಬೇಕು ಎಂದು ಕ್ರೀಡೋತ್ಸವಕ್ಕೆ ತಕ್ಕಂತೆ ಒಪ್ಪುವಂತೆ ಮಾತನಾಡಿದರು. ಇನ್ನೊಮ್ಮೆ ಮಾದನಗೇರಿಯ ವಿಜಯಾ ಬ್ಯಾಂಕಿನ ಮ್ಯಾನೇಜರ್ ಆಗಿದ್ದ ಶ್ರೀ ಜಿ.ಡಿ.ಕಾರಂತರು ಬಂದು ಸಂದರ್ಭಕ್ಕೆ ಸರಿಯಾಗಿ ನಾಲ್ಕು ಮಾತನಾಡಿದರು. ಉಪಯುಕ್ತ ಉಪದೇಶ ಮಾಡಿದರು. ಕುಮಟಾದ ಡಾ.ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಮಕ್ಕಳು (ಶಿಕ್ಷಕ ವಿದ್ಯಾರ್ಥಿಗಳು) ತರಬೇತಿ ಪಾಠಕ್ಕೆ ಹಿರೇಗುತ್ತಿ ಶಾಲೆಗೆ ಬಂದುದಿದೆ. ಅದು ನಮ್ಮ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಯಿತು. ಒಂದೆರಡು ಸಲ ಪ್ರಿ.ಆರ್.ಎಂ.ನಾಯಕರೂ ಬಂದಿದ್ದರು. ಕೊನೆಯ ದಿನ ಶಿಕ್ಷಣದ ಬಗೆಗೆ ಬಹು ಮುಖ್ಯವಾದ ಮಾತುಗಳನ್ನು ಹೇಳಿದರು. ಪ್ರಾಸಂಗಿಕವಾಗಿ ನಮ್ಮ ಶಾಲೆಯನ್ನು, ನಮ್ಮನ್ನು ಮೆಚ್ಚಿ ಪ್ರೋತ್ಸಾಹಕ ಮಾತುಗಳನ್ನಾಡಿದರು. ಶಿಕ್ಷಕ ವಿದ್ಯಾರ್ಥಿಗಳು ಶಾಲೆಗೆ ನೆನಪಿನ ಕಾಣಿಕೆ ಕೊಡುತ್ತಿದ್ದರು. ನಮ್ಮ ಶಾಲೆಯಲ್ಲೇ ಪಾಠಕೊಟ್ಟು ಶ್ರೀ ಎಚ್.ಎಲ್.ನಾಯಕರೂ ಸಹ ಬಿ.ಎಡ್.ಆದುದು ಅವರ ಸಾಹಸದ ಪ್ರಾಮಾಣಿಕ ಸಾಕ್ಷಿ. ಕೇವಲ ಎಸ್.ಎಸ್.ಎಲ್.ಸಿ ಆದ ಶ್ರೀ ಎಚ್.ಎಲ್. ನಾಯಕರು ಬಿ.ಎ., ಬಿ.ಇ.ಡಿ ಮಾಡಿದರು. ಮುಂದೆ ಸ್ನಾತಕೋತ್ತರ ಪದವಿಯನ್ನೂ ಗಳಿಸಿದರು. ***************************************************************** ಗೋಕರ್ಣದ ವಿದ್ವಾಂಸರು: ಇಲ್ಲಿಯ ಬಹುತೇಕ ಎಲ್ಲ ಮನೆಗಳೂ ವಿದ್ವತ್ತಿಗೆ ಪ್ರಸಿದ್ಧವಾದವು. ಭಡ್ತಿ ಮನೆತನದ ದೇವರು ಭಟ್ಟರು ಸಾತ್ತ್ವಿಕ ಸಂಸ್ಕೃತ ಪಂಡಿತರು. ಸರ್ಕಾರದಿಂದ ಬರುವ ಅಲ್ಪ ಪಗಾರಿನಲ್ಲಿ ದೀರ್ಘ ಕಾಲ ಶ್ರದ್ಧೆಯಿಂದ ಸಂಸ್ಕೃತ ಶಾಲೆ ನಡೆಸಿದವರು. ವಿದ್ಯಾರ್ಥಿಗಳ ಕೊರತೆ ಇತ್ತು. ಇನ್ಸಪೆಕ್ಟರ್ ಬರುವಾಗಲಾದರೂ ಸಂಖ್ಯೆ ಇರಬೇಕು. ಇದು ಮೋಸವಲ್ಲ. ಸಂಸ್ಕೃತ ಓದುವವರಿಗಾದರೂ ಶಾಲೆ ಬೇಕಲ್ಲ.ಇದಕ್ಕೆ ಸಂಬಂಧಿಸಿದ ಒಂದು ತಮಾಷೆ. ಒಮ್ಮೆ ಇನ್ಸಪೆಕ್ಟರ್ ಬರುವಾಗ ಒಬ್ಬರು ಭಟ್ಟರು ಸಿಕ್ಕರು. ಅವರಿಗೆ ಸಂಸ್ಕೃತ ಬರುವುದೇ ಇಲ್ಲ. ಆದರೂ ಶಾಲು ಹೊದೆದು ಕುಳಿತರು.ಗಂಟಲ ಕೆರೆತ,ಪಾಪ.ಅಳುಕೂ ಇದ್ದೀತು.ಇವರ ಕಷ್ಟ ಗಮನಿಸಿ ಇನ್ಸಪೆಕ್ಟರರು ’ಕಫ ಆಗ್ಯದೇನು?’ ಎಂದರು.ಇವರು ತಡ ಮಾಡಲಿಲ್ಲ. ಸಟಕ್ಕನೆ ಎದ್ದು ಕಫಃ, ಕಫೌ, ಕಫಾನಿ, ಕಫಸ್ಯ, ಕಫಯೋ, ಕಫಾಯಾಃ..ಮುಂತಾಗಿ ಶುರು ಮಾಡಿಬಿಟ್ಟರು. ಇನ್ಸಪೆಕ್ಟರಿಗೆ ಯಾಕಾದರೂ ಕೇಳಿದೆನೋ, ಅನ್ನಿಸಿತು. ಭಟ್ಟರು ’ರಾಮ’, ’ಹರಿ’ ಮುಂತಾದ ಶಬ್ದಗಳ ವಿಭಕ್ತಿ ಪ್ರತ್ಯಯಗಳನ್ನು ಹೇಳುವ ಕ್ರಮದಲ್ಲೇ ’ಕಫ’ ಆಗಿದೆಯೇ ಎಂದು ತಪಾಸಕರು ಕೇಳಿದರೆಂದು ಭಾವಿಸಿದರು! ಈ ಕಲ್ಪಿತ ಹಾಸ್ಯ ಪ್ರಕರಣ ಗೋಕರ್ಣದ ಆ ದಿನಗಳ ಅಭಿಜಾತ ವಿನೋದದ ಉದಾಹರಣೆ. ಮೇಧಾ ದಕ್ಷಿಣಾಮೂರ್ತಿ ಸಂಸ್ಕೃತ ಪಾಠಶಾಲೆಯಲ್ಲಿ ಓದಿ ಅನೇಕ ವಿದ್ವಾಂಸರು ನಾಡಿನಾದ್ಯಂತ ಹೆಸರು ಗಳಿಸಿದ್ದಾರೆ. ದೈವರಾತ ಶರ್ಮಾ: ಇವರೂ ಭಡ್ತಿ ಮನೆತನದವರು. ವೇದ ದ್ರಷ್ಟಾರರು. ಮಹರ್ಷಿ ದೈವರಾತರಾದರು. ಡಾ.ರಾಜೇಂದ್ರಪ್ರಸಾದರು, ರಾಷ್ಟ್ರಧ್ಯಕ್ಷರು ಇವರನ್ನು ತುಂಬ ಗೌರವದಿಂದ ಕಾಣುತ್ತಿದ್ದರು. ದೈವರಾತರ ಆಹ್ವಾನದಂತೆ ಗೋಕರ್ಣಕ್ಕೆ ಅವರ ಆಶ್ರಮಕ್ಕೆ ಬಂದು, ನೋಡಿ ಸಂತೋಷಪಟ್ಟರು. ಈ ಮನೆತನದಲ್ಲಿ ನಾರಾಯಣ ಶಾಸ್ತ್ರಿಗಳು, ಡಾ.ಭಡ್ತಿ ಇವರೆಲ್ಲಾ ಮಾನ್ಯರು. ವಿದ್ವಾನ್ ಸಾಂಬಭಟ್ಟರು: ಉಡುಪಿಯಲ್ಲಿ ತರ್ಕ ಓದಿ ಪಾರಂಗತರಾದವರು. ಹಾಸ್ಯಪ್ರಿಯರು. ಪರಸ್ಥಳದಿಂದ ಬಂದ ತರ್ಕವಿದ್ವಾಂಸರನ್ನು ತರ್ಕದಲ್ಲಿ ಸೋಲಿಸಿದ ಖ್ಯಾತಿ ಉಂಟು. ವೇದಶಾಸ್ತ್ರವನ್ನು ಬಲ್ಲವರು. ವೈದಿಕರೂ ಹೌದು, ಲೌಕಿಕರೂ ಹೌದು. ಅವರ ಎರಡು ಹಾಸ್ಯಕಥೆಗಳನ್ನು ನೆನಪಿಸಿಕೊಳ್ಳಬಹುದು. ಒಮ್ಮೆ ಅಂಕೋಲೆಗೆ ಹೋದವರು ಸಿನಿಮಾ ನೋಡಲು ಹೋದರಂತೆ. ಪಕ್ಕದಲ್ಲಿ ಒಬ್ಬ ಸಾಚಾ ವ್ಯಕ್ತಿ ಕೂತಿದ್ದ. ಇವರು ಅವನೊಡನೆ ಹರಟಲು ಶುರುಮಾಡಿದರು. ಸಾಂಬಭಟ್ಟರು ಕೇಳಿದರು. "ಸ್ವಾಮಿ, ಈ ಥಿಯೇಟರಿನ ಯಜಮಾನರು ನಿಮಗೆ ಗೊತ್ತಿದೆಯೇ?", "ಹೌದು. ಗೊತ್ತಿದೆ, ಏನು ವಿಷಯ?" "ಮತ್ತೆ ಯಾಕೂ ಇಲ್ಲ. ಈ ಟಿಕೇಟಿನ ಹಣ ವಾಪಸು ಸಿಗುವಂತೆ ಮಾಡಿ." "ಅರೇ ಯಾಕೆ?" "ಎಷ್ಟು ಹೊತ್ತಾಯಿತು! ಇನ್ನೂ ಹಾರ್ಮೋನಿಯಂ ಇಲ್ಲ. ತಬಲಾ ಇಲ್ಲ. ಅವರೆಲ್ಲಾ ಬಂದು ಕಾರ್ಯಕ್ರಮ ಶುರುವಾಗಲು ಇನ್ನೂ ಒಂದು ತಾಸಾದರೂ ಬೇಕು. ಅಷ್ಟು ಹೊತ್ತು ಕಾಯಲಾರೆ" ಎಂದು ಸಾಂಬಭಟ್ಟರು ಹೇಳಿದರು. ಆ ವ್ಯಕ್ತಿಗೆ ನಗು ಬಂತು. "ಭಟ್ಟರೆ, ನಿಮಗೆ ಸಿನಿಮಾ ಅಂದರೆ ಏನು ಅಂತಲೇ ಗೊತ್ತಿಲ್ಲ. ಅದೆಲ್ಲಾ ಇಲ್ಲಿ ಬೇಕಾಗುವುದಿಲ್ಲ." ಸಾಂಬಭಟ್ಟರು ಇನ್ನಷ್ಟು ಅಸಮಾಧಾನ ವ್ಯಕ್ತಪಡಿಸಿದರು: "ಅರೇ, ಸಂಗೀತ ಇಲ್ಲವೋ! ಹಾಗಾದರೆ ನಾನು ನಿಲ್ಲಲಾರೆ. ನಮ್ಮೂರಲ್ಲಿ ಚಿಕ್ಕಮಕ್ಕಳ ನಾಟಕಕ್ಕೂ ಸಂಗೀತ, ಹಿಮ್ಮೇಳ ಎಲ್ಲಾ ಇರುತ್ತದೆ. ನೀವು ದುಡ್ಡೊಂದನ್ನು ಕೊಡಿಸಿ. ನಾನು ಹೊರಟೆ". ಆಗ ಆತ ಇವರು ಹಳ್ಳಿಯ ಗಮಾರ, ಏನೂ ತಿಳಿಯದವರು ಎಂದು ತೀರ್ಮಾಸಿಸಿಕೊಂಡ. ಸಮಾಧಾನದ ಮಾತು ಹೇಳಿದ: "ಭಟ್ಟರೆ, ಈಗ ಲೈಟು ತೆಗೀತಾರೆ. ಕಡೆಗೆ ನೋಡಿ ನೀವು, ಹೆಂಗಿರ್ತದೆ!". ಸಾಂಬಭಟ್ಟರು ಕೌತುಕ ವ್ಯಕ್ತಪಡಿಸಿದರು: "ಲೈಟ್ ತೆಗೆದ ಮೇಲೆ ನೋಡುವುದು ಏನನ್ನು? ಕತ್ತಲೆಯಲ್ಲಿ ನನಗಂತೂ ಏನೂ ಕಾಣಿಸುವುದಿಲ್ಲ. ನಿಮ್ಮದು ಬೆಕ್ಕಿನ ಕಣ್ಣೋ ಹೇಗೆ?". ಅಷ್ಟರಲ್ಲೇ ಸಿನಿಮಾ ಶುರುವಾಯಿತು. ಮುಗಿದ ಮೇಲೆ ಸಾಂಬಭಟ್ಟರು ಹೇಳಿದರು: "ನೀವು ಹೇಳಿದ್ದು ಹೌದು. ಬಹಳ ಚೆನ್ನಾಗಿತ್ತು. ಸಂಗೀತವೂ ಇತ್ತು. ಭೇಷ್". ಅಂತೂ ಆ ವ್ಯಕ್ತಿ ಎದುರು ದಡ್ಡನಂತೆ ತೋರಿಸಿಕೊಂಡು, ಸಾಕಷ್ಟು ಗೋಳು ಹೊಯ್ದುಕೊಂಡು ಅವನು ಕೊಟ್ಟ ಶೇಂಗಾವನ್ನೂ ತಿಂದು ಕೊನೆ ಬಸ್ಸಿನಲ್ಲಿ ಗೋಕರ್ಣಕ್ಕೆ ಹೊರಟರು. ಇವರ ಇನ್ನೊಂದು ಕಥೆ ಕುಂತಿ ಪ್ರತಿಮೆಯದು. ನಮ್ಮೂರ ಕ್ಷೌರದಂಗಡಿಯ ಹಿಂದೆ ಒಂದು ಹೆಣ್ಣು ಮೂರ್ತಿ ಇದೆ. ಅದೇನೆಂದು ತಿಳಿಯದು. ಸಾಂಬಭಟ್ಟರು ಒಂದು ದಿನ ಅದು ಕುಂತಿಯ ಪ್ರತಿಮೆ ಎಂದರು. ಉಗ್ರು ನಾರಾಯಣ ಭಟ್ಟರಿಗೆ ಇವರ ತಮಾಷೆ ಗೊತ್ತು. "ಸುಮ್ಮಂಗಿರಿ. ಅದು ಯಾವುದೋ ಮೂರ್ತಿ. ಮಹಾಭಾರತದಲ್ಲಿ ಎಲ್ಲೂ ಕುಂತೀದೇವಿಯ ವಿಗ್ರಹವಿಲ್ಲ". ಸಾಂಬಭಟ್ಟರೇನೂ ಬೇಸರ ಮಾಡಿಕೊಳ್ಳಲಿಲ್ಲ. ’ನಾರಾಯಣಾ, ನಾ ಹೇಳುದು ಸ್ವಲ್ಪ ಕೇಳು’ ಎಂದು ಕಥೆ ಶುರು ಮಾಡಿದರು. "ಪಾಂಡವರು ದಕ್ಷಿಣಕ್ಕೆ ಬಂದಾಗ ಕುಂತಿದೇವಿ ತಾನು ಗೋಕರ್ಣಕ್ಷೇತ್ರಕ್ಕೆ ಹೋಗಿ ಬರಬೇಕು, ವ್ಯವಸ್ಥೆ ಮಾಡು ಎಂದಳು, ಧರ್ಮರಾಯನ ಹತ್ತಿರ. ಸರಿ, ಧರ್ಮರಾಯ ಭೀಮನಿಗೆ ಆಜ್ಞೆ ಮಾಡಿದ. ತಾಯಿಯನ್ನು ಕರೆದುಕೊಂಡು ಭೀಮಸೇನ ಗೋಕರ್ಣಕ್ಕೆ ಬಂದ. ಕೋಟಿತೀರ್ಥ ಸ್ನಾನ ಮಾಡಿ ದೇವಸ್ಥಾನಕ್ಕೆ ಹೊರಟರು. ಮೊದಲು ಗಣಪತಿ, ನಂತರ ಮಹಾಬಲೇಶ್ವರಕ್ಕೆ ಬಂದರು. ಬಾಗಿಲು ಕಾಯುವ ಮಂಜುನಾಥ "ಅಮ್ಮಾ, ನೀವು ಪೂಜೆ ಮಾಡುವಂತಿಲ್ಲ. ಸಕೇಶಿಯರು ಈಶ್ವರನನ್ನು ಮುಟ್ಟುವಂತಿಲ್ಲ" ಎಂದ. "ಅಪ್ಪಾ, ನಾವು ಕ್ಷತ್ರಿಯರು. ನಮ್ಮಲ್ಲಿ ವಿಧವೆಯರಿಗೆ ಮುಂಡನ ಇಲ್ಲ" ಎಂದು ಭೀಮಸೇನ ಗರ್ಜಿಸಿ ಗದೆ ಕಡೆ ನೋಡಿದ. "ಇಲ್ನೋಡಿ, ನಿಮ್ಮ ಸಿಟ್ಟು ಇಲ್ಲಿ ನಡೆಯುವುದಿಲ್ಲ. ಒಳಗೆ ಮಹಾರುದ್ರ ಇದ್ದಾನೆ. ಇನ್ನು ನಿಮ್ಮ ಗದೆ ನಮ್ಮೂರ ತಿಪ್ಪಾಚಾರಿ ವಾರಕ್ಕೊಂದು ಮಾಡುತ್ತಾನೆ" ಎಂದ. ಸರಿ, ಇನ್ನೇನೂ ಉಪಾಯವಿಲ್ಲ ಎಂದು ಭೀಮ ತಾಯಿಯನ್ನು ಕರೆದುಕೊಂಡು ಕ್ಷೌರಿಕನ ಹತ್ತಿರ ಹೋಗಿ ಕೇಶಮುಂಡನ ಮಾಡು ಎಂದ. "ಏನೆಂದಿರಿ, ಇವರ ಕೇಶ ಮುಂಡನ ಮಾಡುವುದೇ? ಅದು ಧರ್ಮಶಾಸ್ತ್ರಕ್ಕೆ ವಿರುದ್ಧ". ಭೀಮಸೇನ ’ಏಕೆ?’ ಎಂದು ಕೂಗಾಡಿದ. "ನೋಡಿ, ನೀವು ಭೀಮಸೇನರೇ ಹೇಳಿದಿರಿ, ಇವರು ಮಹಾತಾಯಿ ಕುಂತಿ. ಇವರಿಗೆ ಪಾಂಡು ಮಹಾರಾಜರು ಗಂಡ. ಅವರೀಗ ಇಲ್ಲ. ಆದರೆ ಉಳಿದವರು? ವಾಯುದೇವರು, ಅಗ್ನಿದೇವರು, ಯಮದೇವರು ಇವರೆಲ್ಲಾ ಇದ್ದಾರೆ. ಹಾಗಿರುವಾಗ ಇವರಿಗೆ ವೈಧವ್ಯ ಇಲ್ಲ. ಮುಂಡನ ಮಾಡಲಾರೆ. ಧರ್ಮಸೂಕ್ಷ್ಮ ಬಹು ದೊಡ್ಡದು ಭೀಮಪ್ಪನವರೇ" ಎಂದ. "ಹಾಗಾದರೆ ಧರ್ಮರಾಜನನ್ನೇ ಕೇಳಿ ಬರುತ್ತೇನೆ" ಎಂದು ಭೀಮಸೇನ ಹೊರಟ. "ಅಮ್ಮಾ, ನೀನು ಇಲ್ಲೇ ಇರು, ನಾನು ಅರಣ್ಯಕ್ಕೆ ಹೋಗಿ ಅಣ್ಣನನ್ನು ಕೇಳಿ ಬರುತ್ತೇನೆ" ಎಂದು ಗಡಿಬಿಡಿಯಲ್ಲಿ ನಡೆದ. ಎಷ್ಟು ವರ್ಷಗಳಾದರೂ ಭೀಮ ಬರಲೇ ಇಲ್ಲ. ಕುಂತಿ ನಿಂತೇ ಇದ್ದಾಳೆ" ಕಥೆ ಮುಗಿವ ಹೊತ್ತಿಗೆ ಸಾಂಬಭಟ್ಟರ ಕ್ಷೌರವೂ ಮುಗಿದಿತ್ತು. ವಿಘ್ನೇಶ್ವರ ಉಪಾಧ್ಯಾಯರು (ದೀಕ್ಷಿತರು): ಇವರ ಬಗೆಗೆ ಹೇಳುವಾಗ ತುಂಬಾ ಹುಶಾರಾಗಿರಬೇಕು. ನನ್ನ ಬಾಲ್ಯ ಸ್ನೇಹಿತರು. ತುಂಬಾ ದೋಸ್ತರು. ಅವರ ವಿದ್ವತ್ತಿನ ಬಗೆಗೆ ಹೇಳುವಾಗ ಹೆಚ್ಚು ಹೇಳಿದರೆ ಕುಸ್ತಿಗೆ ಬಂದಾರು, ಕಡಿಮೆ ಹೇಳಿದರೆ ಮಿತ್ರದ್ರೋಹವಾದೀತು. ಹಿರೇಭಟ್ಟರು, ಅಡಿಗಳು, ಬಿಜ್ಜೂರ ಪಾಳ್ಯ ಉಪಾಧ್ಯಾಯರು, ಶೇಷ ವಿದ್ವಾನ್ ಮಹಾಜನವರ್ಗ ಗೋಕರ್ಣದ ಹೃದಯ.ನಮ್ಮ ಮಠದಿಂದ ರಾಯಸ ಬರುವಾಗ ಈ ಮೇಲಣ ನಾಲ್ವರಿಗೂ ಆದ್ಯತೆ. ಈ ಮನೆತನದವರು ಅಗ್ನಿಹೋತ್ರ ನಡೆಸಿಕೊಂಡು ಬಂದಿದ್ದಾರೆ. ಹೀಗಾಗಿಯೇ ನನ್ನ ಸ್ನೇಹಿತರು ದೀಕ್ಷಿತರೂ ಹೌದು. ತಂದೆ ದಾಮೋದರ ದೀಕ್ಷಿತರು. ಅವರ ಇಬ್ಬರು ಮಕ್ಕಳಲ್ಲಿ ವಿಘ್ನೇಶ್ವರ ಹಿರಿಯರು. ಸಾಂಬದೀಕ್ಷಿತರು ಎರಡನೆಯವರು. ವೇದವಿದ್ವಾಂಸರಾಗಿ ಇಬ್ಬರೂ ಪ್ರಖ್ಯಾತರು. ನನ್ನ ಸ್ನೇಹಿತ ದೀಕ್ಷಿತರು ಧರ್ಮಗ್ರಂಥಗಳನ್ನು ಆಳವಾಗಿ ಅಭ್ಯಾಸ ಮಾಡಿದವರು. ರಾಮಚಂದ್ರಾಪುರ ಮಠ, ಸ್ವರ್ಣವಲ್ಲಿ ಮಠ, ಕಾಂಚಿ ಮಠಗಳಿಂದ, ಪೂನಾ, ಸಾಂಗ್ಲಿ ಮೊದಲಾದೆಡೆಗಳಿಂದ ಮನ್ನಣೆ ಪಡೆದವರು. ದಿನವೂ ಸಾಯಂಕಾಲ ನಮ್ಮ ದೀಕ್ಷಿತರು, ವೆಂಕಟರಮಣ ಶಾಸ್ತ್ರಿಗಳು, ಗುಣಿ ಶಾಸ್ತ್ರಿಗಳು, ಸಾಂಬಭಟ್ಟರು ಫೋಟೋ ಅಂಗಡಿ ಹತ್ತಿರ ನಿಂತು, ಕುಳಿತು ಯಜ್ಞಯಾಗಾದಿಗಳ ಬಗೆಗೆ ಸಂದೇಹ ನಿವಾರಣೆ,ಇನ್ನಾವುದೋ ಧಾರ್ಮಿಕ ವಿಷಯ ಕುರಿತು ಚರ್ಚೆ ಮಾಡುತ್ತಿದ್ದರು. ನಮ್ಮ ದೀಕ್ಷಿತರು ಯಾವ ವಿಷಯದಲ್ಲೇ ಆಗಲಿ ಖಂಡಿತಮತ ಉಳ್ಳವರು. ಒಮ್ಮೆ ವೆಂಕಟರಮಣ ಶಾಸ್ತ್ರಿಗಳು -ದೀಕ್ಷಿತರಿಗಿಂತ ವಯಸ್ಸಿನಲ್ಲಿ ಹಿರಿಯರು. ವಿದ್ವತ್ತಿನಲ್ಲಿ ದೀಕ್ಷಿತರು ಅವರಿಗೆ ಸಮಾನರೇ - ಇವರ ವಿಷಯ ಮಂಡನೆಗೆ ಮನಸೋತು "ವಿಘ್ನೇಶ್ವರನಿಗೆ ನಮಃ" ಎಂದರು. ಆಗ ದೀಕ್ಷಿತರಿರಲಿಲ್ಲ. ಅಲ್ಲಿದ್ದವರಲ್ಲೊಬ್ಬರು ಕೇಳಿದರು: "ಯಾಕೆ ಹಾಗೆಂದಿರಿ? ನೀವು ಹಿರಿಯರು, ಜ್ಞಾನವಂತರು". "ಛೇ ಛೇ ವಿದ್ವತ್ತಿಗೆ ಪೂಜ್ಯತೆ. ನ ತು ಲಿಂಗಂ ನ ತು ವಯಃ" ಎಂದರು. ’ಗುಣಕ್ಕೆ ಗಣ್ಯತೆ’ ಎಂದರು. ಯಾರಿಗಾದರೂ ಧರ್ಮಾಚರಣೆ ನಿಮಿತ್ತ ಸಂಶಯ ಬಂದರೆ ಶ್ರೀ ದೀಕ್ಷಿತರೇ ಪರಿಹಾರ ಸೂಚಿಸುತ್ತಿದ್ದರು. ’ಧರ್ಮಸಿಂಧು’ ಪುಸ್ತಕದ ಪುಟಪುಟವೂ ಪಟಪಟ ಹಾರುತ್ತಿದ್ದವು. ಕೆಲವು ವ್ಯವಹಾರಗಳ ಬಗೆಗೆ ಊರ ಕೆಲವರಿಗೂ, ದೀಕ್ಷಿತರಿಗೂ ಭಿನ್ನಾಭಿಪ್ರಾಯಗಳಿದ್ದವು. ದಿನವೂ ಕೋರ್ಟ್ ವ್ಯವಹಾರ ಇದ್ದಿದ್ದೇ. ಅಲ್ಲೂ ವಕೀಲರು ದೀಕ್ಷಿತರ ಕಾಯಿದೆ ಜ್ಞಾನವನ್ನು ಮೆಚ್ಚಿದ್ದರು. ವೆಂಕಟರಮಣ ಪಂಡಿತರು ಬಗ್ಗೋಣ ಪಂಚಾಂಗದ ತಯಾರಕರು. ಜ್ಯೋತಿಷ್ಯ ವಿಚಾರದಲ್ಲಿ ಎತ್ತಿದ ಕೈ. ದೃಕ್ ಪಂಚಾಂಗ ಪ್ರವರ್ತಕರು. ದಿನಾ ಹಲವಾರು ಜಾತಕಗಳ ಮೇಳಾಮೇಳಿ ನೋಡುತ್ತಿದ್ದರು. ಮುಂಬಯಿಯಂಥ ದೂರದ ಊರುಗಳಿಂದಲೂ ಕೆಲವರು ಜಾತಕ ಪರಿಶೀಲನೆಗೆ ಇವರ ಬಳಿ ಬರುತ್ತಿದ್ದರು. ಊರವರಿಗೆ ಇವರು ಅಣ್ಣು ಪಂಡಿತರು. ಇವರು "ಅಕ್ಕು" ಎಂದರೆ ಯಾರದೂ ಮರುಮಾತಿಲ್ಲ. ವಾಕ್ ಸಿದ್ಧಿ ಅಂತಹುದು.ಇವರು ಸಂಸ್ಕೃತ ಕವಿಗಳೂ ಹೌದು. ಇವರ ಹಿರಿಯ ಮಗ ವಿಘ್ನೇಶ್ವರ ಪಂಡಿತರು ಕವಿ,ನಾಟಕ ಕರ್ತೃ. ಕನ್ನಡ, ಸಂಸ್ಕೃತ ಎರಡರಲ್ಲೂ ಕವಿಗಳು. "ಕಚ ದೇವಯಾನಿ" ಇವರ ಪ್ರಸಿದ್ಧ ಗೀತನಾಟಕ. ಅಣ್ಣು ಪಂಡಿತರ ಎರಡನೇ ಮಗ ರಾಮಾ ಪಂಡಿತರು. ರಾಮಪ್ಪಿ ಪಂಡಿತರು ಎಂದು ಊರಲ್ಲಿ ಗೌರವ, ಪ್ರೀತಿಯಿಂದ ಕರೆಯುತ್ತಿದ್ದರು. ಜಾತಕ ಪರಿಶೀಲನೆಯಲ್ಲಿ ತಂದೆಗೆ ಸರಿಸಮಾನರು.ಶ್ರೀ ಅಣ್ಣು ಪಂಡಿತರ "ಶ್ರೀ ಮಹಾಬಲೇಶದೇವ ಸಾರ್ವಭೌಮತೇ" ಭಕ್ತಿಗೀತಗಳಲ್ಲೆಲ್ಲ ಅತಿ ಶ್ರೇಷ್ಠವಾದುದು. ಅವರು ಜ್ಯೋತಿಷ್ಯ ಶಾಸ್ತ್ರದ ಕುರಿತು ಪುಸ್ತಕಗಳನ್ನೂ ಬರೆದಿದ್ದಾರೆ. ವಿದ್ವಾನ್ ಕೊಡ್ಲೆಕೆರೆ ರಾಮಚಂದ್ರಭಟ್ಟರು ತೂಬನಗಿಂಡಿ: ಕೋಟಿತೀರ್ಥದ ನೀರು ಸಮುದ್ರಕ್ಕೆ ಹೋಗುವ ತೂಬಿನ ಹತ್ತಿರವಿರುವುದರಿಂದ ಈ ಮನೆಗೆ ತೂಬಿನಗಂಡಿ ಎಂದು ಹೆಸರು. ಅವರಿಗೆ ಪೇದ ಪಠಣದಲ್ಲಿ ಚಿನ್ನದ ಕಡಗ ಬಂದಿದೆ. ಇನ್ನೂ ಹಲವಾರು ಪ್ರಶಸ್ತಿಪತ್ರಗಳು ಸಂದಿವೆ. ಜನಾರೋಗ್ಯ: ವೈದ್ಯಕೀಯದಲ್ಲಿ ಹೆಸರಾಂತ ವೈದ್ಯರು ಆಗಿದ್ದಾರೆ. ವೈದ್ಯಖಾತೆ ಸುಬ್ಬಣ್ಣ ಭಟ್ಟರು ದೊಡ್ಡ ಕಡಾಯಿಗಳಲ್ಲಿ ಆಯುರ್ವೇದ ಔಷಧ ತಯಾರಿಸುತ್ತಿದ್ದರಂತೆ. ಇವರ ವಿನಾ ಕೂರ್ಸೆ ವೆಂಕಟರಮಣ ವೈದ್ಯರು, ಗಣೇಶ ವೈದ್ಯರು, ಉಗ್ರು ಗಜಾನನ ಮಾಸ್ತರು, ಡಾ.ಜಠಾರ......ಜಠಾರರದು ಅಶೋಕೆಯಲ್ಲಿ ವೈದ್ಯಕೀಯವನ ಇರಬೇಕು. ಅಶೋಕೆಯಲ್ಲಿ ಹರ ಸಾಹಸದಿಂದ ದೊಡ್ಡ ಪ್ರಮಾಣದಲ್ಲಿ ಬೆಳೆಸುತ್ತಿರುವ ವೈದ್ಯಕೀಯವನ ಮಹರ್ಷಿ ದೈವರಾತರ ಮಗ ಶ್ರೀ ವೇದಶ್ರಮ ಶರ್ಮ ಇವರದು. ಜ್ಯೋತಿಷಿಗಳು: ಶೃಂಗೇರಿ ಮಠದ ಎಲ್ಲ ಶಾಸ್ತ್ರಿಗಳೂ ಜ್ಯೋತಿಷಿಗಳೇ. ಮಹಾಬಲ ಶಾಸ್ತ್ರಿಗಳು, ರಾಜಾರಾಮ ಶಾಸ್ತ್ರಿಗಳು, ನರಸಿಂಹ ಶಾಸ್ತ್ರಿಗಳು, ಕುಪ್ಪಾ ಶಾಸ್ತ್ರಿಗಳು - ಅವರ ಹೆಸರು ಸೂರ್ಯನಾರಾಯಣ ಶಾಸ್ತ್ರಿಗಳು. ಒಬ್ಬರಿಗಿಂತ ಒಬ್ಬರು ಪ್ರಸಿದ್ಧರು. ಇವರಿಗೆಲ್ಲಾ ಜ್ಯೋತಿಷ್ಯ ಆರ್ಷೇಯ. ಅಲ್ಲೇ ಪಕ್ಕದಲ್ಲಿ ಗಜಾನನ ಸಭಾಹಿತರು, ಅವರ ಮಕ್ಕಳು ಗಣಪತಿ ಸಭಾಹಿತ, ನಿವೃತ್ತ ಶಿಕ್ಷಕರು. ಭಡ್ತಿ ಭಟ್ಟರು, ಬೈಲಕೇರಿ ಕೃಷ್ಣ ಭಟ್ಟರು, ಇವರ ತಂದೆ ಪರಮೇಶ್ವರ ಭಟ್ಟರು ಬೈಲಕೇರಿ (ಭಾವಯ್ಯ), ಹಾಗೇ ಮುಂದೆ ಬಂದರೆ ಸುಬ್ರಹ್ಮಣ್ಯ ಶರ್ಮಾ ಬರವಣಿ (ನಿವೃತ್ತ ಪ್ರೌಢಶಾಲಾ ಅಧ್ಯಾಪಕರು), ಶಂಕರಲಿಂಗ ಬಂಗಾರು ಭಟ್ಟರು, ವಿಘ್ನೇಶ್ವರ ಶಾಂತಾರಾಮ ಉಪಾಧ್ಯರು ಇವರೆಲ್ಲಾ ಪ್ರಸಿದ್ಧ, ಸುಪ್ರಸಿದ್ಧ ಜ್ಯೋತಿಷಿಗಳು. ಶ್ರೀ ಅಣ್ಣು ಪಂಡಿತರ ಮೊಮ್ಮಗ, ಮೊಮ್ಮಗಳು- ಇಬ್ಬರೂ ಜ್ಯೋತಿಷಿಗಳೇ. ಶ್ರೀ ಶಿವರಾಮ ಹಿರೇಭಟ್ಟರ ಹೆಸರು ತಪ್ಪಿದ್ದಕ್ಕೆ ಕ್ಷಮೆ ಇರಲಿ. ಸುಪ್ರಸಿದ್ಧ ಜ್ಯೋತಿಷ್ಯರು. ಯಕ್ಷಗಾನ ಕಲಾವಿದರು: ಶ್ರೀ ಚಿತ್ರಿಗೆ ಜಿ.ಎಂ.,ಸಿದ್ದೇಶ್ವರ ನಾರಾಯಣ ಮಾಸ್ತರರು, ಮಕ್ಕಳು, ಕೊಡ್ಲೆಕೆರೆ ಗಜಾನನ ಭಟ್ಟರು, ಲಕ್ಷ್ಮೀನಾರಾಯಣ ಧಾರೇಶ್ವರ, ಮಹಾಬಲ ಶಿವೋಡಿ, ಮೂಲೆ ಮಹಾದೇವ ಅಡಿಗಳು, ಅಗಸೆ ಪಂಡಿತರ ಮನೆಯ ಕೂರ್ಸೆ ಭಟ್ಟರು, ಶ್ರೀ ಶಂಕರ ಪಂಡಿತ ಭಾಗವತರು, ಶ್ರೀ ರಾಮದಾಸ ಪಂಡಿತರು, ಹಾವಗೋಡಿ ಗಣೇಶ ಭಟ್ಟರು, ಅವರ ಮಕ್ಕಳು. ಸುಬ್ರಾಯ ಹಾವಗೋಡಿ ಮತ್ತು ಅನಂತ ಹಾವಗೋಡಿ. ಮಹಾಬಲಮೂರ್ತಿ ಕೊಡ್ಲೆಕೆರೆ ವಿದೇಶಕ್ಕೂ ಹೋಗಿ ಯಕ್ಷಗಾನದ ಕಂಪು ಪಸರಿಸಿದರು. ವಿದ್ಯಾರ್ಥಿದೆಸೆಯಿಂದಲೂ ಯಕ್ಷಗಾನ ಕಲಾವಿದ. ತಂದೆಯಿಂದ ಈ ಕಲೆ ಆರ್ಷೇಯವಾಗಿ ಮಗನಿಗೆ ಒಲಿದು ಬಂದಿದೆ. ಚಿತ್ರಿಗೆ ದತ್ತ ಮಾಸ್ತರರ ಮಗೆ ಇನ್ನೊಬ್ಬ ಹೆಸರಾದ ಕಲಾವಿದ. ಶಿವಾನಂದ ಭಂಡಾರಿ ಮಹಾನ್ ಕಲಾವಿದನಾಗುವ ಎಲ್ಲ ಲಕ್ಷಣಗಳನ್ನೂ ಹೊಂದಿದವರಾಗಿದ್ದರು. ಹಾವಗೋಡಿ ಅನಂತ, ಶಿವಾನಂದರ ಜೋಡಿ ಪ್ರಸಿದ್ಧವಾಗಿತ್ತು. ಆದರೆ ಶಿವಾನಂದ ಎಳೆವಯಸಿನಲ್ಲೇ ಅಗಲಿದ. ಓಣಿ ಜಂಭೆ ಭಟ್ಟರು. ಗೋಕರ್ಣದ ಯಕ್ಷಗಾನ ಕಲಾವಿದರಲ್ಲಿ ಈ ದಂಪತಿಗಳ ಸ್ಮರಣೆ ಮಾಡಲೇಬೇಕು: ನನ್ನ ದೊಡ್ಡಣ್ಣ ಮತ್ತು ದೊಡ್ಡತ್ತಿಗೆ: ಶಿವರಾಮ ಮತ್ತು ಲಕ್ಷ್ಮಿ (ಮಹಾಲಕ್ಷ್ಮಿ) ಕೊಡ್ಲೆಕೆರೆ. ಯಕ್ಷಗಾನದಲ್ಲಿ ಸ್ತ್ರೀ ಪಾತ್ರವನ್ನು ಪುರುಷರೇ ಮಾಡುವುದು ರಿವಾಜು. ಈ ದಂಪತಿಗಳು ಆ ರಿವಾಜು ಮುರಿದರು. ಶ್ರೀಮತಿ ಲಕ್ಷ್ಮಿ ಸತ್ಯಭಾಮೆಯ ಪಾತ್ರವಹಿಸಿ ಪ್ರೇಕ್ಷಕರ ಮನಗೆದ್ದರು. ಕೃಷ್ಣನ ಪಾತ್ರ ಶಿವರಾಮಣ್ಣನದು. ಹೀಗೆ ಇವರೊಂದು ದಾಖಲೆ ಮಾಡಿದರೆನ್ನಬೇಕು. ಕ್ಷೇತ್ರಾಧೀಶ್ವರ ಮಹಾಬಲೇಶ್ವರ ಸಾರ್ವಭೌಮನಲ್ಲಿ ಹಾಡುವ (ಮಂಗಳಾರತಿ ಹಾಡು, ಭಕ್ತಿಗೀತೆ) ಅನೇಕ ಹಾಡುಗಳು ಅರ್ಥಗರ್ಭಿತವಾಗಿವೆ. ಕೆಲವು ಮರಾಠಿಯಲ್ಲೂ ಇವೆ. ೧. ಜೈ ಶಿವ ಓಂಕಾರ, ಸ್ವಾಮಿ, ಭಜ ಶಿವ ಓಂಕಾರ ಬ್ರಹ್ಮ ವಿಷ್ಣು ಸದಾಶಿವ ಅರ್ಧಾಂಗಿಯ ಗೌರ...... ೨. ಶ್ರೀಮಹಾಬಲೇಶದೇವ ಸಾರ್ವಭೌಮತೇ ೩. ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ ****** ವಿಶೇಷ ಉತ್ಸವಗಳು: ಸಾರ್ವಭೌಮನ ಉತ್ಸವ (ಮಳೆಗಾಲ ಬಿಟ್ಟು) ಪ್ರತಿ ಸೋಮವಾರ ಸಾಯಂಕಾಲ ಶ್ರೀ ವೆಂಕಟರಮಣ ದೇವಾಲಯದವರೆಗೆ ಬರುತ್ತದೆ. ಶ್ರೀ ದೇವರು ಕೂರುವ ಜಾಗಕ್ಕೆ ’ಸೋಮವಾರ ಪೌಳಿ’ ಎನ್ನುವರು. ಉತ್ಸವ ಹೋಗುವಾಗ ಮನೆಯವರು ದೇವರಿಗೆ ಆರತಿ ಕೊಡುವರು. ಆರತಿಗಳ ಸ್ವೀಕರಿಸಿ ಉತ್ಸವ ಮೂರ್ತಿ ಪುನಃ ದೇವಾಲಯಕ್ಕೆ ಹೋಗುವುದು. ನಾಗರ ಪಂಚಮಿ: ಶ್ರೀ ದೇವರ ಓಲಗ ಮೊದಲ ಬಾರಿ ಮಳೆಗಾಲದಲ್ಲಿ ದೇವಾಲಯದ ಹೊರಗೆ ಬಂದು ಶ್ರೀ ನಾಗೇಶ್ವರನಲ್ಲಿ ಮಹಾಮಂಗಳಾರತಿ ಕಾಲದಲ್ಲಿ ಮೊಳಗುವುದು. ಶ್ರೀಕೃಷ್ಣ ಜನ್ಮಾಷ್ಟಮಿ: ಶ್ರೀ ದೇವರ ಮೊದಲ ಉತ್ಸವ ಸಂಜೆ ಎಂಟು ಗಂಟೆಗೆ ರಥಬೀದಿ ಮೂಲಕ ಕೋಟಿತೀರ್ಥಕಟ್ಟೆ ಸುತ್ತು ಹಾಕಿ ಶ್ರೀಕೃಷ್ಣನ ದೇವಾಲಯ ’ಕೃಷ್ಣಾಪುರ’ಕ್ಕೆ ಬರುವುದು. ಮಂಗಳಾರತಿ ನಡೆಯುವಾಗ ಓಲಗದ ಸೇವೆ ನಡೆದು ಕೋಟಿ ತೀರ್ಥಕ್ಕೆ ಸುತ್ತು ಹಾಕಿ ರಥಬೀದಿಯ ಮುಖಾಂತರ ದೇವಾಲಯಕ್ಕೆ ಬರುತ್ತದೆ. ಗಂಗಾಷ್ಟಮಿ: ಶ್ರೀ ದೇವರ ಉತ್ಸವ ರಾತ್ರಿ ಹತ್ತೂ ಮೂವತ್ತಕ್ಕೆ ಶ್ರೀ ದೇವಾಲಯದಿಂದ ಸಮುದ್ರ ಬೇಲೆಗುಂಟ ಗಂಗಾಕೊಳ್ಳ (ಗಂಗಾವಳಿ) ಇರುವ ಗಂಗಾಂಬಾ ದೇವಾಲಯಕ್ಕೆ ಮೃಗಬೇಟೆ ಆಡುತ್ತಾ ಹೋಗುತ್ತದೆ. ಅಲ್ಲಿ ದಕ್ಷಿಣಗಂಗೆಯಲ್ಲಿ (ಗಂಗಾವಳಿ) ಮಿಂದು ಶ್ರೀದೇವಿಯ ಮನೆಗೆ ಹೋದರೆ ಗಂಗಾಮಾತೆ ಈಶ್ವರನಿಗೆ ಬಾಗಿಲು ತೆರೆಯುವುದಿಲ್ಲ. ಈಶ್ವರನಿಗೂ, ಗಂಗೆಗೂ ಬಹು ಸ್ವಾರಸ್ಯಕರವಾದ ವಾಗ್ವಾದ ನಡೆಯುತ್ತದೆ. ಕೇಳಿಯೇ ಸಂತೋಷ ಪಡಬೇಕು. ನಂತರ ಗಂಗಾಮಾತೆ ಬಾಗಿಲು ತೆರೆಯುತ್ತಾಳೆ. ಗಂಗೆಯ ಲಗ್ನ ಈಶ್ವರನೊಂದಿಗೆ ಅದೇ ಅಮಾವಾಸ್ಯೆಗೆ ನಡೆಯಬೇಕೆಂದೂ, ಲಗ್ನಮಂಟಪವನ್ನು ರುದ್ರಪಾದದಲ್ಲಿ ಕಟ್ಟಬೇಕೆಂದೂ (ಗೋಕರ್ಣ-ಗಂಗಾವಳಿಗಳ ನಡುವಿನ ಶಿವಕ್ಷೇತ್ರ)} ನಿರ್ಣಯವಾಗುತ್ತದೆ. ಈಶ್ವರ ಆನಂದದಿಂದ ಪುನಃ ತನ್ನ ದೇವಾಲಯಕ್ಕೆ ಹರ್ಷಚಿತ್ತನಾಗಿ ಬರುತ್ತಾನೆ. ಹಾದಿಯುದ್ದಕ್ಕೂ ಹಾಲಕ್ಕಿ ಒಕ್ಕಲ ಮನೆಯವರು ನೂತನ ಫಲ,ಆರತಿ ಎಲ್ಲಾ ಒಪ್ಪಿಸಿ ಆರತಿ ಬೆಳಗುತ್ತಾರೆ. ಬರುವಾಗ ರಾತ್ರಿ ಹತ್ತು,ಹನ್ನೊಂದಕ್ಕೆ ಶ್ರೀ ದೇವರ ಮೂರ್ತಿ ಆಶ್ರಮದಲ್ಲಿ ತಂಗುತ್ತದೆ. ಈ ಆಶ್ರಮವೇ ಮುಂದೆ ದೈವರಾತರ ಆಶ್ರಮವಾಯ್ತು. ಮಹರ್ಷಿಗಳು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಮಹಾಬಲನ ಎದುರು ಭಕ್ತಿ ಪರವಶರಾಗಿ ನಾಟ್ಯ ಮಾಡುತ್ತಿದ್ದರು. ಅದು ನೋಡಲು ನಯನಾನಂದಕರವಾಗಿರುತ್ತದೆ. ದೀಪಾವಳಿ: ಲಗ್ನ ಮಹೋತ್ಸವ: ಆಶ್ವಯುಜ ಬಹುಳ ಅಮಾವಾಸ್ಯೆ ಸಾರ್ವಭೌಮನ ಲಗ್ನದುತ್ಸವ - ಶ್ರೀ ದೇವರ ಉತ್ಸವ, ಡಮರು ಡಾಮರ...... ಪತಾಕೆಗಳೊಂದಿಗೆ ದಿಬ್ಬಣ ಸಮೇತ ೩.೩೦ - ೪ಕ್ಕೆ ಹೊರಡುತ್ತದೆ. ಸಮುದ್ರ ಬೇಲೆಯ ಮುಖಾಂತರ ರುದ್ರಪಾದ ಮಂಟಪಕ್ಕೆ.ಅಲ್ಲಿಗೆ ಆಗಲೇ ಗಂಗಾಮಾತೆಯ ಉತ್ಸವ ವಿಜೃಂಭಣೆಯಿಂದ ದೊಡ್ಡ ಸಂಖ್ಯೆಯ ಭಕ್ತರೊಂದಿಗೆ ಬಂದಿರುತ್ತದೆ. ಶುಭಮುಹೂರ್ತದಲ್ಲಿ ಲಗ್ನ ನಡೆಯುತ್ತದೆ. ಕಣ್ಣಿಗೆ ಹಬ್ಬವದು. ನಂತರ ಸಣ್ಣ ಹುಸಿ ಜಗಳವಾಗುತ್ತದೆ. ಲಗ್ನಮಂಟಪದ ಮಾವಿನ ಸೊಪ್ಪು ಪ್ರಸಾದರೂಪದಲ್ಲಿ ತಮಗೆ ಸಲ್ಲಬೇಕೆಂದು ಹೆಣ್ಣಿನ ಕಡೆಯವರಿಗೂ, ಅದು ಗಂಡಿಗೇ ಸೇರಬೇಕೆಂದು ಗಂಡಿನ ಕಡೆಯವರಿಗೂ ಜಗಳ! ಮರಳಿನಲ್ಲಿ ಹೂತ ಮಂಟಪವನ್ನು ಸುಲಭವಾಗಿ ಕಿತ್ತುಕೊಂಡು ಇಬ್ಬರೂ ಓಡಿ ಬರುತ್ತಾರೆ. ಹೆಣ್ಣಿನ ಕಡೆಯವರು ಓಡಿ ಹೋಗುತ್ತಾರೆ! ಈಶ್ವರ ಗಂಗಾಧರನಾಗಿ ನವವಧುವಿನೊಂದಿಗೆ ದೇವಾಲಯ ಪ್ರವೇಶಕ್ಕಾಗಿ ಹೋಗುವುದು ಮುಂದಿನ ಕಾರ್ಯಕ್ರಮ. ಎರಡು ಮೂರು ಮೈಲಿ ದೂರವನ್ನು ಸಾವಕಾಶ ಕ್ರಮಿಸಿ ದೇವಾಲಯಕ್ಕೆ ೧೦:೧೦ಕ್ಕೆ ಪ್ರವೇಶ ಮಾಡುತ್ತಾರೆ. ಊರಿನ ಜನರೆಲ್ಲಾ ಶುಭ್ರಬಟ್ಟೆಗಳೊಡನೆ, ಹೆಂಗೆಳೆಯರು ದಿಬ್ಬಣದ ಪೋಷಾಕಿನಲ್ಲಿ ಬರುತ್ತಾರೆ. ಮಕ್ಕಳು, ಬಲ್ಲಿದರು ಪಟಾಕಿ, ಬಾಣ,ಬತ್ತಾಸುಗಳನ್ನು ಸಿಡಿಸುತ್ತಾರೆ. ದೇವಾಲಯದ ಶಿಖರಕ್ಕೆ ದೀಪ ಹಚ್ಚುತ್ತಾರೆ. ದೇವರ ಮೈಲಿ ಸುತ್ತ ಜನರ ಸಡಗರವೋ ಸಡಗರ. ದೇವಾಲಯಕ್ಕೆ ಮೂರು ಸುತ್ತು ಹಾಕಿ ವಧೂವರರು ಗರ್ಭಗುಡಿ ಪ್ರವೇಶಿಸುತ್ತಾರೆ. ಮಹಾಮಂಗಳಾರತಿ ನಡೆಯುತ್ತದೆ. ನಂತರ ಊರವರು ಮನೆಗೆ ಹೋಗುವಾಗ ಲಗ್ನಮಂಟಪದ ತೋರಣದ ಸೊಪ್ಪನ್ನು ಪ್ರಸಾದವೆಂದು ಮನೆಗೆ ಒಯ್ಯುತ್ತಾರೆ. ಜನಗಳು ಹೂವು, ಮಾವಿನಸೊಪ್ಪಿನ ತೋರಣದೊಂದಿಗೆ ಮನೆಗೆ ಹಿಂತಿರುಗುತ್ತಾರೆ. ಉತ್ಸವಕ್ಕೆ ಬಂದವರಿಗೆ ಪ್ರಸಾದ ಹಂಚುತ್ತಾರೆ. ಮಾರನೇ ದಿನವೇ ಕಾರ್ತಿಕಮಾಸ ಪ್ರಾರಂಭ. ಕಾರ್ತಿಕ ದೀಪೋತ್ಸವ - ಬೇಂದ್ರೆಯವರ ಕವಿತೆಯ ’ಕೋಟಿಕಾರ್ತಿಕೋತ್ಸವ’ ನೆನಪಾಗುತ್ತದೆ. ಹಬ್ಬಗಾಣಿಕೆ: ಪಾಡ್ಯದ ದಿನ ಶ್ರೀ ಮಹಾಬಲೇಶ್ವರನಿಗೆ ಪ್ರತಿಮನೆಯವರು ಹಬ್ಬಗಾಣಿಕೆ ಎಂದು ಒಂದು,ಎರಡು ಕಾಯಿ ಅರ್ಪಿಸುತ್ತಾರೆ. ಅರ್ಪಿಸುವ ಮೊದಲು ಕಾಯಿಗಳನ್ನು ಗಣಪತಿ, ಪಾರ್ವತಿ ದೇವರಿಗೆ ಇಟ್ಟು ನಮಸ್ಕರಿಸಿ ನಂತರ ಒಪ್ಪಿಸುತ್ತಾರೆ. ಕಾರ್ತಿಕ ಹುಣ್ಣಿಮೆ : ಶಿವರಾತ್ರಿಯ ನಂತರ ಇದೇ ಎರಡನೆಯ ಮಹತ್ವದ ಹಬ್ಬ. ಕಾರ್ತಿಕ ಶುದ್ಧ ಹುಣ್ಣಿಮೆಯಂದು ಬಿಲ್ವಾರ್ಚನೆ ಅತಿ ಮಹತ್ವದ ಪೂಜೆ. ಅತಿ ಮಹತ್ವದ ಪರ್ವಕಾಲ. ಪ್ರತಿ ಮನೆಯಿಂದಲೂ ಬಿಲ್ವಪತ್ರ ಪೂಜೆ, ನಂತರ ಬಿಲ್ವಪತ್ರೆ ಸಂಗ್ರಹ ಪ್ರಸಾದರೂಪದಲ್ಲಿ. ೧೧-೧೨ ಗಂಟೆಯೊಳಗೆ ಮುಗಿಯುತ್ತದೆ. ನಂತರ ದೇವರ ಉತ್ಸವ ಭೀಮನಕೊಂಡಕ್ಕೆ ಹೋಗಿ ಅಲ್ಲಿ ಧಾತ್ರಿಹವನ ನಡೆಯುತ್ತದೆ. ಇದು ರಾತ್ರಿಯ ಉತ್ಸವದ ಅಂಗವಾಗಿ ನಡೆಯುತ್ತದೆ. ಪ್ರತಿ ದೇವಸ್ಥಾನದ ಉತ್ಸವಕ್ಕೆ ಮೊದಲು ಈ ಧಾರ್ಮಿಕ ವಿಧಿ ನಡೆಯಲೇಬೇಕು. ನಂತರ ಮೂರು ಸಂಜೆಗೆ ಶ್ರೀದೇವರ ಸರ್ವಾಂಗಭೂಷಣ ಅಲಂಕಾರದೊಡನೆ ಕಾರ್ತಿಕ ಹುಣ್ಣಿಮೆ ಉತ್ಸವ ಪ್ರಾರಂಭವಾಗುತ್ತದೆ. ಉತ್ಸವ ಕೋಟಿತೀರ್ಥಕ್ಕೆ ಸುತ್ತು ಹಾಕಿ ವೆಂಕಟರಮಣ ದೇವಸ್ಥಾನಕ್ಕೆ ಬರುತ್ತದೆ. ಅಲ್ಲಿಂದ ಪಲ್ಲಕ್ಕಿ, ಅಲ್ಲ, ಲಾಲಕ್ಕಿ ಉತ್ಸವ. ಲಾಲಕ್ಕಿ ಎಂದರೆ ದೇವರ ಬಾಡದ ಮಂಟಪಕ್ಕೆ ಎರಡು ಮರದ ಎಳೆಗಳನ್ನು ಸಮಾಂತರವಾಗಿ ಜೋಡಿಸುತ್ತಾರೆ, ನಾಲ್ಕು ಜನ ಹೊರುತ್ತಾರೆ. ಪಲ್ಲಕ್ಕಿಗಿಂತ ಶೋಭಾಯಮಾನವಾಗಿ ಕಾಣುತ್ತದೆ. ಅಂಗಡಿ ಮನೆಗಳ ಮುಂದೆ ದೊಡ್ಡ ದೊಡ್ಡ ತೋರಣ ಹಾಕುತ್ತಾರೆ. ಕೆಲವೆಡೆ ಮಕರ ತೋರಣ ಹಾಕುತ್ತಾರೆ. ಆ ಕಡೆ, ಈ ಕಡೆ ಕಂಬ ಹುಗಿದು ಬಿದಿರನ್ನು ಕಮಾನಾಗಿ ಬಗ್ಗಿಸಿ ಮಾವಿನ ಸೊಪ್ಪು, ಅಡಿಕೆ ಕೊನೆ ಕಟ್ಟುತ್ತಾರೆ. ನೋಡಲು ನಯನ ಮನೋಹರವಾಗಿರುತ್ತದೆ. ಈ ಉತ್ಸವವು ದೇವಸ್ಥಾನ ತಲುಪಲು ಎರಡು-ಮೂರು ಗಂಟೆ ಬೇಕಾಗುತ್ತದೆ. ಉದ್ದಕ್ಕೂ ನೆಲ ಚಕ್ರ, ಬಾಣ, ಕೊಡೆ, ಚಕ್ರ, ಬಾಣ ಬಿರುಸು, ಗರ್ನಾಲು, ಒಬ್ಬೊಬ್ಬರೂ ನೂರಿನ್ನೂರು ಹೊಡೆಯುತ್ತಾರೆ. ಇಟ್ಲಪಿಂಡಿ ಉತ್ಸವ: ಇದೇ ಕಾರ್ತಿಕ ಹುಣ್ಣಿಮೆಯ ದಿನ ಗೌಡ ಸಾರಸ್ವತರ ಮಠದಿಂದ ಉತ್ಸವ ಮಧ್ಯಾಹ್ನ ರಾಮತೀರ್ಥಕ್ಕೆ ಹೋಗಿ ಅಲ್ಲಿ ಧಾತ್ರಿಹವನ, ಊಟ ನಡೆಯುತ್ತವೆ. ನಂತರ ಲಾಲಕ್ಕಿ ಉತ್ಸವ, ನೆಲ್ಲಿಕಾಯಿಯಿಂದ ವಿಶೇಷವಾಗಿ ಸಿಂಗರಿಸಿಕೊಂಡು ಅವರ ಮಠದ ಕಡೆ ಹೊರಡುತ್ತದೆ. ಈ ಉತ್ಸವವೂ ವಿಜೃಂಭಣೆಯಿಂದ ನಡೆಯುತ್ತದೆ. ಶ್ರೀಮಹಾಬಲೇಶ್ವರ ದೇವರ ಉತ್ಸವ ಗುಡಿ ಪ್ರವೇಶದ ಹೊತ್ತಿನಲ್ಲಿ ಶಿಖರದ ತುಂಬಾ ಹಣತೆ ದೀಪ ಹಚ್ಚುತ್ತಾರೆ. ಈಗ ವಿದ್ಯುದ್ದೀಪ. ನೋಡಲು ಎರಡು ಕಣ್ಣು ಸಾಲದು. ದೇವಾಲಯದ ಸುತ್ತ ನಾಲ್ಕು ಪೌಳಿಯಲ್ಲೂ ಜನಸ್ತೋಮ ನೆರೆದಿರುತ್ತದೆ. ಪೌಳಿಯನ್ನು ದೀಪಗಳಿಂದ ಶೃಂಗರಿಸಿರುತ್ತಾರೆ. ದೀಪಾವಳಿ ಎಂದರೆ ಅಕ್ಷರಶಃ ದೀಪಗಳ ಮೆರವಣಿಗೆ - ಕೆಳೆಯರ ಕೂಟದವರು ಹೇಳಿದಂತೆ ಸೊಡರು ಸಾಲಿನ ಹಬ್ಬ. ಇಂದಿನಿಂದ ಮೊದಲುಗೊಂಡು ಮುಂದೆ ಹತ್ತು ದಿನಗಳು ಊರ ದೇವರುಗಳ ಉತ್ಸವ ಊರಿನ ಸುತ್ತ ನಡೆಯುತ್ತದೆ. ಶೃಂಗೇರಿಮಠದ ಉತ್ಸವ, ಬಟ್ಟೆ ಗಣಪತಿ ಉತ್ಸವ, ಹಿತ್ತಲ ಗಣಪತಿ ಉತ್ಸವ, ಶಾರದಮ್ಮನವರ ಉತ್ಸವ, ಬಂಡಿಕೇರಿ ಮಠದ ಉತ್ಸವ, ರಾಮ ದೇವರ ಉತ್ಸವ, ಕೋದಂಡರಾಮ ಉತ್ಸವ, ವೆಂಕಟರಮಣ ದೇವರ ಉತ್ಸವ, ಮಂಕಾಳಮ್ಮನವರ ಉತ್ಸವ,ಮುಂದೆ ಮಾರ್ಗಶೀರ್ಷದಲ್ಲಿ ಚಂಪಾಷಷ್ಠಿ ಉತ್ಸವ. ಇವುಗಳಲ್ಲಿ ಹೆಚ್ಚು ಜನ ಮಹತ್ವ ಪಡೆದ ಉತ್ಸವಗಳು ಅಮ್ನೋರ ಉತ್ಸವ, ವೆಂಕಟರಮಣ ದೇವರ ಉತ್ಸವ, ಇತ್ತಲಾಗಿ ಬಟ್ಟೆ ಗಣಪತಿ ಉತ್ಸವ. ಅಮ್ನೋರ ಉತ್ಸವಕ್ಕೆ ಸುತ್ತಮುತ್ತಲಿನ ಊರಿನ ಜನರೆಲ್ಲಾ ಬರುತ್ತಾರೆ. ಬಾಣಬಿರುಸು ಗರ್ನಾಲು ಲೆಕ್ಕಕ್ಕೆ ಇಲ್ಲ. ಏಳಕ್ಕೆ ಹೊರಟ ಉತ್ಸವ ರಾತ್ರೆ ಹನ್ನೊಂದಕ್ಕೆ ಗುಡಿ ತಲುಪುತ್ತದೆ. ವೆಂಕಟರಮಣ ದೇವರ ಉತ್ಸವಕ್ಕೂ ಸುತ್ತಮುತ್ತಲಿನ ಊರಿನವರು ಬರುತ್ತಾರೆ. ಅದೇ ರೀತಿ ಬಾಣ ಬಿರುಸು. ರಸ್ತೆ ಉದ್ದಕ್ಕೂ ಮಕರ ತೋರಣ. ಈ ಎರಡೂ ಉತ್ಸವಗಳೂ ಸಮಾನ ಜನಾದರಣೆ ಪಡೆದಿವೆ. ಭಕ್ತರ ಸಮೂಹ ನೆರೆದಿರುತ್ತದೆ. ಬಟ್ಟೆ ಗಣಪತಿ ಉತ್ಸವದ ನಯನ ಮನೋಹರ ನೋಟ ಇತ್ತಲಾಗಿನದು. ಯುವಕರೆಲ್ಲಾ ಉತ್ಸಹದಿಂದ ಕೋಟಿತೀರ್ಥಕ್ಕೆ ಏಳೆಂಟು ಸಾಲಿನಲ್ಲಿ ಮೇಣದಬತ್ತಿ ದೀಪ ಹಚ್ಚುತ್ತಾರೆ. ಅದರ ಪ್ರತಿಫಲನ ನೀರಿನಲ್ಲಿ. ಅದ್ಭುತರಮ್ಯ, ನಂತರ ಯಕ್ಷಗಾನವೂ ನಡೆಯುತ್ತದೆ. ಹೀಗೆ ಕಾರ್ತಿಕಮಾಸದಲ್ಲಿ ಕೋಟಿ ಕಾರ್ತಿಕೋತ್ಸವದಲ್ಲಿ ತಾರೆಗಳು ಮಿನುಗುತ್ತವೆ. ನವರಾತ್ರಿ ಮತ್ತು ವಿಜಯದಶಮಿ ಉತ್ಸವ: ಇದು ಅಶ್ವಯುಜ ಶುದ್ಧ ಪಾಡ್ಯದಿಂದ ಶುದ್ಧ ನವಮಿಯವರೆಗೆ ನಡೆಯುತ್ತದೆ. ಹತ್ತನೇ ದಿನ ವಿಜಯದಶಮಿ. ಇದು ಮಂಕಾಳಮ್ಮನವರ ಮನೆಯಲ್ಲಿ, ಭದ್ರಕಾಳಿ ದೇವಾಲಯದಲ್ಲಿ - ಬಹು ಸಂಭ್ರಮದಿಂದ ನಡೆಯುತ್ತದೆ. ಊರ ಸುಮಂಗಲಿಯರು ದಿನಾ ಪಂಚಾಮೃತವನ್ನು ಶ್ರೀದೇವಿಗೆ ಅರ್ಪಿಸಿ ಬರುತ್ತಾರೆ. ದೇವಾಲಯ ಊರಿನ ತುದಿಯಲ್ಲಿರುವುದರಿಂದ ಎದುರಾಗುವ ಮುತ್ತೈದೆಯರು ಅರಿಸಿನ, ಕುಂಕುಮ ಹಣೆಗೆ ಹಚ್ಚುತ್ತಾರೆ. ಒಬ್ಬೊಬ್ಬರೂ ಪ್ರತ್ಯಕ್ಷ ಅಮ್ನೋರಂತೆ ಕಾಣುತ್ತಾರೆ. ಒಂಬತ್ತೂ ದಿನ ಈ ದೃಶ್ಯ ಕಾಣಸಿಗುತ್ತದೆ. ಪ್ರತಿ ಸಂಜೆ ೦೭:೩೦ ರಿಂದ ಮಂಗಳಾರತಿವರೆಗೆ ಯಕ್ಷಗಾನ ಬೈಠಕ್ ಆಗುತ್ತದೆ. ಪ್ರಧಾನವಾಗಿ ಭದ್ರಕಾಳಿ ಯಕ್ಷಗಾನ ಮೇಳದವರು ಏರ್ಪಡಿಸುತ್ತಾರೆ. ಊರ ಕಲಾವಿದರೂ, ಪಕ್ಕದ ಊರಿನವರೂ ಭಾಗವಹಿಸುತ್ತಾರೆ. ದಶಮಿಯಿಂದ ಯಕ್ಷಗಾನ ನಡೆಯುತ್ತದೆ. ದಸರಾ ಉತ್ಸವ: ವಿಜಯದಶಮಿ ದಿವಸ ಶ್ರೀ ದೇವರು ಸೀಮೋಲ್ಲಂಘನ ಮಾಡುತ್ತಾರೆ. ಮಹಾಬಲೇಶ್ವರ ದೇವಾಲಯದಿಂದ ಉತ್ಸವ ಹೊರಟು ಊರ ಹೊರಗೆ ಚೌಡಗೇರಿಯಲ್ಲಿ ಒಂದು ಕಟ್ಟೆ ಇದೆ. ಅಲ್ಲಿ ದೇವರು ಕೂಡ್ರುತ್ತಾರೆ. ಕಟ್ಟೆಯನ್ನು ಶೃಂಗರಿಸುತ್ತಾರೆ. ಅಷ್ಟಾವಧಾನ ಸೇವೆ ಆಗುತ್ತದೆ. ನಂತರ ದೇವರು ಭದ್ರಕಾಳಿ ದೇವಾಲಯಕ್ಕೆ ಹೋಗುತ್ತದೆ. ಅಲ್ಲಿ ಜನಸಾಗರವೇ ನೆರೆದಿರುತ್ತದೆ. ಉಭಯ ದೇವರಿಗೂ ಮಂಗಳಾರತಿ ಮಾಡುತ್ತಾರೆ. ಶಮೀಪತ್ರದ ವಿನಿಮಯವಾಗುತ್ತದೆ. ನಂತರ ಮಹಾಬಲೇಶ್ವರ ದೇವರು ಪಲ್ಲಕ್ಕಿಯಲ್ಲಿ ಒಂದು ಮೈಲಿ ಉದ್ದದ ರಸ್ತೆಯನ್ನು ಕ್ರಮಿಸಿ ರಾತ್ರಿ ಹತ್ತಕ್ಕೆ ಮರಳಿ ದೇವಾಲಯಕ್ಕೆ ಬರುವ. ಇದು ವಿಜಯಯಾತ್ರೆ, ಸೀಮೋಲ್ಲಂಘನ,ಬನ್ನಿಬಂಗಾರದ ವಿನಿಮಯ. ವಿದ್ಯಾದಶಮಿ: ವಿಜಯದಶಮಿ, ವಿದ್ಯಾದಶಮಿ-ಎರಡೂ ಒಂದೇ. ಊರ ಬಾಲಕರು ಶೃಂಗೇರಿ ಶಾರದಾಂಬಾ ದೇವಾಲಯಕ್ಕೆ, ಅವರವರ ಪುರೋಹಿತರ ಮನೆಗೆ ಹೋಗಿ ವಿದ್ಯಾಭ್ಯಾಸ ಪ್ರಾರಂಭಿಸುತ್ತಾರೆ. "ಶ್ರೀಗಣೇಶಾಯ ನಮಃ", "ಸರಸ್ವತಿ ನಮಸ್ತುಭ್ಯಂ" "ಗುರುಬ್ರಹ್ಮಾ ಗುರುರ್ವಿಷ್ಣು" ಶ್ಲೋಕಗಳನ್ನು ಹೇಳಿಸಿಕೊಂಡು ಬರುತ್ತಾರೆ. ಪ್ರಾಜ್ಞರು ತರ್ಕ, ಮೀಮಾಂಸೆ ಮೊದಲಾದವುಗಳ ಅಧ್ಯಯನ ಆರಂಭಿಸುತ್ತಾರೆ." ಶಮೀ ಶಮಯತೇ ಪಾಪಂ! ಶಮೋರ್ ಶತ್ರು ವಿನಾಶನಂ! ಅರ್ಜುನಸ್ಯ ಧನುರ್ಧಾರಿ ರಾಮಸ್ಯಪ್ರಿಯ ದರ್ಶನಂ...... ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣೀಂ! ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ...... ಸುಗ್ಗಿಹಬ್ಬ, ಬಂಡಿಹಬ್ಬ: ಇದೊಂದು ವಿಶೇಷ ಸುಗ್ಗಿಹಬ್ಬ. ಎಲ್ಲೆಡೆ ಫಾಲ್ಗುಣ ಶುದ್ಧ ಹುಣ್ಣಿಮೆಗೆ ಸುಗ್ಗಿ ಹುಣ್ಣಿಮೆ. ಆದರೆ ಗಂಗಾವಳಿ ನದಿಯಿಂದ ಅಘನಾಶಿನಿ ನದಿಯವರೆಗಿನ ಊರುಗಳಲ್ಲಿ ಚೈತ್ರ ಶುದ್ಧ ಹುಣ್ಣಿಮೆಗೆ ಸುಗ್ಗಿ. ಮೊದಲ ದಿನ ರಾತ್ರಿ ಕಾಮನ ಮೂರ್ತಿ ಮಾಡಿ ಸುಡುವರು. ಮಾರನೇ ದಿನ ಸ್ನಾನ-ಸಂಜೆಗೆ ಶ್ರೀದೇವರ ಉತ್ಸವ ವೆಂಕಟರಮಣ ದೇವಸ್ಥಾನದವರೆಗೆ ಬರುತ್ತದೆ. ಪೂರ್ಣಚಂದ್ರ ದಿಗಂತದಲ್ಲಿ ಕಾಣುತ್ತಾನೆ. ಆಗ ಹಾಲಕ್ಕಿ ಸಮಾಜದ ಸುಗ್ಗಿ. ಕೈಯಲ್ಲಿ ಬೆಂಡಿನ ಕುಂಚ. ತಲೆಗೆ ಬಣ್ಣದ ಬೆಂಡಿನ ಅಂದವಾದ ಶಿರಸ್ತ್ರಾಣ, ನೋಡಲು ಬಲು ಸೊಗಸಾಗಿರುತ್ತದೆ. ಸುಗ್ಗಿ ಮಕ್ಕಳು ಕುಣಿಯುತ್ತಾ "ಹೋ ಹೋ ಚೋ ಜಂಗಮ ಜಕ್ಕಮ ಹೋ ಹೋ ಚೋ" ಎಂದು ಅರಸುಗೌಡನ ಮುಖಂಡತ್ವದಲ್ಲಿ ದೇವಸ್ಥಾನಕ್ಕೆ ಹೋಗಿ ಮರ್ಯಾದೆ ಪಡೆದು ಪುನಃ ತಮ್ಮ ಸುಗ್ಗಿಮನೆಗೆ ಕುಣಿಯುತ್ತಾ ಹೋಗುತ್ತಾರೆ. ಮಾರನೇ ದಿನ ಊರಿನ ಪ್ರಮುಖರ ಅಂಗಳದಲ್ಲಿ ಸುಗ್ಗಿ ಕುಣಿತವಾಗುತ್ತದೆ. ನಂತರ ಸಂಜೆ ಹಗಣ (ಹಗರಣ). ದೇವಸ್ಥಾನದಲ್ಲಿ ಕುಣಿತ ಮುಗಿಸಿ ರಥಬೀದಿಗೆ ಬರುತ್ತಾರೆ. ಅಲ್ಲಿ ನಾನಾ ಬಣ್ಣದ ವೇಷಗಳು ಜನರಿಗೆ ಮೋದ ಉಂಟು ಮಾಡುತ್ತವೆ. ಪೌರಾಣಿಕ, ಸಾಮಾಜಿಕ ಟೀಕೆ ಟಿಪ್ಪಣಿಗಳನ್ನು ಪ್ರದರ್ಶಿಸುತ್ತಾರೆ. ಆ ವರ್ಷದ ಸಾಮಾಜಿಕ ವಿಷಯಗಳ ಬಗೆಗೆ ಕಟು ಟಿಪ್ಪಣಿಗಳ ಪ್ರದರ್ಶನ - ಹಾಲಕ್ಕಿಗಳ ಸಾಮಾಜಿಕ ಪ್ರಜ್ಞೆಯನ್ನು ತೋರಿಸುತ್ತದೆ. ಇದೇ ರೀತಿ ಇನ್ನೊಂದು ತಂಡದವರು (ಹುಳಸೀರೆ ಬಿಜ್ಜೂರು) ಮಾರನೇ ದಿನ ರಥ ಬೀದಿಯಲ್ಲಿ ಹಗಣ ಪ್ರದರ್ಶಿಸುವರು. "ಜಂಗಮ ಜಕ್ಕಮ ಚೋಹೋಚೋ" ಕೊನೆಯಲ್ಲಿ "ದೋದಯ ದಕದಯ ದೋದಯ ದಕದಯ..". ಮಾರನೇ ದಿನ ಎರಡೂ ಮೇಳದವರದು ಹಗಲು ಹಗಣ ನಡೆಯುತ್ತದೆ. ಬಂಡಿಹಬ್ಬ : ಇದು ಕರಾವಳಿಯ ಎಲ್ಲ ಊರುಗಳಲ್ಲಿ ನಡೆದಂತೆ ನಮ್ಮ ಊರಿನಲ್ಲೂ ನಡೆಯುತ್ತದೆ. ಗೋಕರ್ಣದಲ್ಲಿ ಮೂರುಸಂಜೆ: "ಸುಬ್ಬೀ, ಮೂರುಸಂಜ್ಯಾತು. ಮಕ್ಳಿನ್ನೂ ಬಂಜ್ವಿಲ್ಲೆ. ಏನ್ ಬೇಲೆಯೊ, ಏನ್ ಗೋಲೆಯೋ" ತಾತಮ್ಮ ಧ್ವನಿ ಎತ್ತಿದಳು. ಅಬ್ಬೆ "ಹೌದೇ, ದಿನಾ ಇದೇ ಹಾಡು, ಬರಲಿ" ಎಂದು ಸಿಟ್ಟು ಮಾಡುತ್ತಾ ಗಂಜಿ ಒಲೆ ಸೌದಿಗೆ ನೀರು ಹಾಕಿದಳು. ಸರಿ, ಶಿವರಾಮ ಬಂದ, ಬೈಸಿಕೊಂಡ. ಗಜಣ್ಣನಿಗೂ ಬೈಗುಳು. ನನಗೆ ಕಿವಿಹಿಂಡಿ "ನಾಳೆ ಹೊತ್ತ ಮಾಡಿದ್ರೆ ನೋಡು" ಎಂದು ಗದರಿಸಿದಳು. ಶಾಲೆ ಬಿಟ್ಟವರೇ ಹೋದವರು ನಾವು. "ಆಟ ಆಡಿದ್ರೊ, ಹೊಡೆದಾಟ ಮಾಡಿದ್ರೋ, ಇದೆ, ತಲೆ ತುಂಬಾ ಹೊಂಯ್ಗೆ" ಎಂದು ಅಬ್ಬೆ ಇನ್ನೊಮ್ಮೆ ಕಿವಿ ಹಿಂಡಿದಳು. ಕೈಕಾಲು ತೊಳೆದು, ಬಾಯಿಪಾಠ ಹೇಳಿ, ದೇವರಿಗೆ ನಮಸ್ಕರಿಸಿ, ಗಂಜಿ ಊಟಕ್ಕೆ ಹೋದೆವು. ಬಿಸಿ ಬಿಸಿ ಗಂಜಿ, ಹಾಲು, ತುಪ್ಪ, ಕಚ್ಚುಲೆ ಹಪ್ಪಳ, ಕಾಯಿಚೂರು, ಒಂದೊಂದು ದಿನ ಉಳ್ಳಾಗಡ್ಡೆ ಹೋಳು. ಊಟ ಮಾಡಿ ಓದಲು ಕುಳಿತೆವು. ಗೋಕರ್ಣದಲ್ಲಿ ಮೂರು ಸಂಜೆ ಎಂದೆ. ಬೇಲೆ ತುಂಬಾ ಜನ. ಸಂಜೆ ಐದರಿಂದ ಶುರು : ಮೇಲಿನಕೇರಿ, ತಾರಮಕ್ಕಿ, ಬಿಜ್ಜೂರು, ಸಾಣಿಕಟ್ಟೆ ಎಲ್ಲಾ ಕಡೆಯಿಂದ ಬೀಚಿಗೆ ಜನ ಒಳ್ಳೆ ಬಟ್ಟೆ ಹಾಕಿಕೊಂಡು ಬರುವರು. ಸೂರ್ಯಾಸ್ತದ ಹೊತ್ತಿನ ಸಮುದ್ರ ನೋಡಬೇಕು. ಸೂರ್ಯನ ಬಣ್ಣದಿಂದ ನೀರು ಥಳಥಳಿಸುತ್ತದೆ. ಹುಣ್ಣಿಮೆ ಸಮೀಪದಲ್ಲಂತೂ ಬೆಳದಿಂಗಳಿನ ಸೊಬಗು ಜೊತೆಜೊತೆಗೆ. ಕೆಲವರು ಸೇಂಗಾ, ಮಂಡಕ್ಕಿ, ಉಳ್ಳಾಗಡ್ಡೆ, ಟೊಮಾಟೊ, ಮೆಣಸು ಹಾಕಿ ಕಲಸಿದ ಭೇಲಪುರಿ ಇವುಗಳನ್ನು ತಿನ್ನುತ್ತಾರೆ. ಮೊದಲು ಚಹಾ ಇರಲಿಲ್ಲ. ನೀರು ಈಗ ಸಮೃದ್ಧಿ. ಮನೆಲಿದ್ದ ಪನ್ನಿತಾತಿಗೆ ಈ ಪಾಟಿ ಜನರ ಕಲ್ಪನೆ ಇಲ್ಲ. ಅಬ್ಬೆಗೂ ಅಷ್ಟೆ. "ಅಬ್ಬೆನೂ ಒಂದು ದಿವಸ ಕರಕಂಡು ಬಪ್ಪೊ" ನಾನೆಂದೆ. "ಅಕ್ಕು, ಮನೆಲಿ ಇದ್ದು ನೀನು ಗಂಜಿ ಮಾಡು" ಎಂದ ದೊಡ್ಡಣ್ಣ. ಬೇಲೆಯಲ್ಲಿ ನೀರು ಬೇಲೆ ಇದ್ದಾಗ ತಳ್ಳಿ ಆಟ. ಈಗ ಈ ಆಟವೇ ಇಲ್ಲ. ಖೋ ಖೋ ಆಟ,ಒಣ ಬೇಲೆಯಲ್ಲಿ ಹುಡುದೀ ಆಟ ಆಡುತ್ತಾರೆ. ನೋಡಲು ಬಲುಚೆನ್ನ. ಎಷ್ಟು ತಂಡ ಬೇಕಾದರೂ ಆಡಬಹುದು. ವಿಶಾಲ ಬೇಲೆ, ಪ್ರೇಕ್ಷಕರೂ ಇರುತ್ತಾರೆ. ಅಕ್ಕಪಕ್ಕದ ಊರಿನವರೂ ಪ್ರತ್ಯೇಕ ಆಡುತ್ತಾರೆ, ಇಲ್ಲವೇ ಊರಿನವರೊಡನೆ ಸೇರಿ ಆಡುತ್ತಾರೆ. ಆದರೆ ಕಡು ಬೇಸಿಗೆಯಲ್ಲಿ ಸಾಮಾನ್ಯ ಏಪ್ರಿಲ್ ೧೫ ರಿಂದ ಮಳೆ ಬರುವವರೆಗೂ ಸಾಮಾನ್ಯವಾಗಿ ಮನೆಯ ಗಂಡಸರೆಲ್ಲಾ ಮಲಗಲು ಬೇಲೆಗೆ ಹೋಗುತ್ತಾರೆ. ಒಂದು ಚಾಪೆ, ಒಂದು ಚಾದರ ತೆಗೆದುಕೊಂಡು ಬೇಲೆಗೆ ಹೋಗುತ್ತಾರೆ. ಆಗ ರಾತ್ರಿ ಹತ್ತರಿಂದ ಬೆಳಿಗ್ಗೆ ಆರು,ಆರೂವರೆವರೆಗೆ ನೂರಾರು ಹಾಸಿಗೆಗಳು ಇರುತ್ತವೆ. ತಲೆದಿಂಬಿನ ಅವಶ್ಯಕತೆ ಇಲ್ಲ. ಹೊಂಯ್ಗೆ ಗುಪ್ಪೆ ಮಾಡುತ್ತಾರೆ. ಸುತ್ತಲೂ ಹೊಂಯಿಗೆ ಕಟ್ಟು ಕಟ್ಟುತ್ತಾರೆ. ಗಾಳಿಗೆ ಹೊಂಯ್ಗೆ ಹಾರಿ ಬರದಿರಲೆಂದು ಈ ವ್ಯವಸ್ಥೆ. ರಾತ್ರಿ ಹನ್ನೊಂದರವರೆಗೂ ಪಟ್ಟಾಂಗ, ಪೊಕ್ಕೆ ಕೊಚ್ಚುವುದು! "ಇನ್ನು ಮನಿಕಂಬನೋ" ಎಂಬಷ್ಟರಲ್ಲೇ ಕೆಲವರು ನಿದ್ದೆ ಹೋಗಿರುತ್ತಾರೆ.ಬಸ್ಸಿಗೆ ಹೋಗುವವರು ಬೇಗ ಎದ್ದು ಆಚೆ ಈಚೆಯವರಿಗೆ ಹೊಂಯ್ಗೆ ಹಾರಿಸಿ ಬೈಸಿಕೊಂಡು ಹೋಗುತ್ತಾರೆ. ಹೆಂಗಸರೂ ಸಹ ರಾಮತೀರ್ಥ ಸ್ನಾನಕ್ಕೆ ಮಧ್ಯಾಹ್ನ ೨-೪ರ ಒಳಗೆ ಹೋಗುತ್ತಾರೆ. ಆಗ ಆ ಕಡೆ ಜನರ ಸಂಚಾರ ಕಡಿಮೆ. ಅವರದು ಕಂಬಳ. ಅವಲಕ್ಕಿ, ಸಾಂಬಾರ್ ಅವಲಕ್ಕಿ, ಸ್ಟವ್ ತೆಗೆದುಕೊಂಡು ಹೋಗುತ್ತಾರೆ. ಚಹಾ ಮಾಡುತ್ತಾರೆ. ಇವೆಲ್ಲ ಮೇಲೆ ರಾಮತೀರ್ಥದಲ್ಲಿ. ಗಂಡಸರು ಬರದಂತೆ ಮೂರು ನಾಲ್ಕು ಜನ ಹೊಂಡದಾಚೆ ಇರುತ್ತಾರೆ. ಅಟ್ಲಕಾಯಿ, ಸೀಗೆಕಾಯಿ, ಯಥೇಚ್ಛ ನೀರು ಅವರಿಗೆ ಮಹದಾನಂದ. ಇವರ ಸ್ನಾನಾನಂತರ ಕಾವಲುಗಾರರ ಪಾಳಿ. ಸ್ನಾನ ಆದವರು ತಲೆಗೂದಲು ಒಣಗಿಸುತ್ತ ನಿಂತಿರುತ್ತಾರೆ. ಸಾಮಾನ್ಯವಾಗಿ ಹೆಂಗಸರು ಸ್ನಾನ ಮಾಡುತ್ತಾರೆ ಎಂದಾಗ ಯಾವ ಗಂಡಸೂ ಬರುವುದಿಲ್ಲ. ಆದರೂ ಧೈರ್ಯಕ್ಕೆ. ಎಲ್ಲರದೂ ಸ್ನಾನ ಆದ ಮೇಲೆ ಚಹಾ,ಸಾಂಬಾರವಲಕ್ಕಿ, ಹಪ್ಪಳ ತಯಾರಿ. ಕೆಲವೊಮ್ಮೆ ಪಾಲು ಸಾಧುಗಳಿಗೂ ಕೊಡುವುದುಂಟು. ಹೆಂಗಸರಲ್ಲಿ ಕೆಲವು ಸಶಕ್ತರು ಪುನಃ ನೂರೊಂದು ಮೆಟ್ಟಿಲು ಏರಿ ಭರತನಗುಡಿಗೆ ಹೋಗುತ್ತಾರೆ. ಅಲ್ಲಿ ಬಾಲಭರತನ ವಿಗ್ರಹವುಂಟು. ಅಲ್ಲೇ ಕೆಳಗೆ ಪಾಂಡವರ ಗುಹೆ ಇದೆ. ಸಾಧುಗಳು ಸ್ವಚ್ಛಮಾಡಿಟ್ಟಿರುತ್ತಾರೆ. ಗುಹೆಯೊಳಗೆ ಕಾಶಿ, ರಾಮೇಶ್ವರಗಳಿಗೆ ಗುಹಾ ಮಾರ್ಗವಿದೆ ಎನ್ನುತ್ತಾರೆ, ನಾವು ಕೇಳುತ್ತೇವೆ. ಮಳೆಗಾಲವಾದುದರಿಂದ ಮಂದಗಮನೆಯರು ಬಲು ಮೆಲ್ಲಗೆ ನಡೆಯಬೇಕು. ಹೋದವರೆಲ್ಲಾ ಬಂದ ಮೇಲೆ "ದನ ಮನೆ ಕಡೆ ಬಪ್ಪು ಹೊತ್ತಾತು" ಎನ್ನುತ್ತಾ ಮನೆ ಸೇರಿಕೊಳ್ಳುತ್ತಾರೆ. ಆದರೂ ಗೋಪಾಲಭಟ್ಟರಿಗೆ ರಾಮತೀರ್ಥ ತಿರುಗಾಟ ತಪ್ಪಲಿಲ್ಲ. ಅವರ ಹೆಂಡತಿ ಒದ್ದೆ ಸೀರೆ ಬಿಟ್ಟು ಬಂದಿದ್ದಾಳೆ. ಹೋಗಿ ತರಬೇಕು. ಜೊತೆಗೆ ಗೋವಿಂದಭಟ್ಟರೆ ಹೆಂಡತಿ ಯಮುನಕ್ಕೆ ಹಿತ್ತಾಳೆ ಕರಡಿಗೆ, ಉಪ್ಪಿಟ್ಟು ಒಯ್ದುದನ್ನು ಬಿಟ್ಟು ಬಂದಿದ್ದಾಳೆ. ಒದ್ದೆ ಸೀರೆ ಸಿಕ್ಕಿತು. ಹಿತ್ತಾಳೆ ಕರಡಿಗೆ ಸಿಗಲಿಲ್ಲ. ಗೋವಿಂದಭಟ್ಟರು ಮನೆಗೆ ಬರುವ ಹೊತ್ತಿಗೆ ಬಾಗಿಲಲ್ಲಿ ನಿಂತು ’ಸಿಕ್ಕಿದ್ದಿಲ್ಲೆ ಅಲ್ದಾ?" ಎಂದಳು. "ನಿನಗೆ ಹೆಂಗೆ ಗೊತ್ತಾತು?" ಎಂದಾಗ "ಆ ಕರಡಿಗೆಯನ್ನು ರಮಕ್ಕ ತಂದಿದ್ದಾಳೆ,ನೀವು ಆ ಕಡೆ ಹೋದ ಮೇಲೆ ತಂದುಕೊಟ್ಟಳು" ಎಂದಳು. "ಸರಿ, ರಮಕ್ಕಾನೋ, ಭೀಮಕ್ಕಾನೋ, ನಿನ್ನ ಕರಡಿಗೆ ಕರಕರೆ ಪರಿಹಾರವಾಯ್ತಲ್ಲ, ಮಾರಾಯ್ತಿ" ಎಂದ ಮಹರಾಯ! ಮಳೆಗಾಲದಲ್ಲಿ ಗಂಡಸರು ಸ್ನಾನಕ್ಕೆ ರಾಮತೀರ್ಥಕ್ಕೆ ಹೋಗುತ್ತಾರೆ. ಅಲ್ಲಿ ಹತ್ತರಿಂದ ಹನ್ನೆರಡು ಫೂಟು ಎತ್ತರದಿಂದ ರಾಮತೀರ್ಥದ ನೀರು ದಪ್ಪಕ್ಕೆ ನುಗ್ಗಿ ಕೆಳಗಿನ ಕೆರೆಯಲ್ಲಿ ಬೀಳುತ್ತದೆ. ಆಗ ಅಲ್ಲಿ ತಲೆ ಕೊಟ್ಟು ನಿಂತರೆ ಹಾ ಹಾ ಎನಿಸುತ್ತದೆ. ಬೆಳಿಗ್ಗೆ ಎಂಟರಿಂದ ಹನ್ನೆರಡು, ಒಂದು ಗಂಟೆಯವರೆಗೂ ಜನರು ಸ್ನಾನ ಮಾಡುತ್ತಿರುತ್ತಾರೆ. ಪುಂಡ ಹುಡುಗರು ಮೇಲೆ ಹೋಗಿ ಕಾಲುವೆ ನೀರನ್ನು ಮಣ್ಣಿನಿಂದ ಕರಡುತ್ತಾರೆ. ಕೆಳಗಿರುವವರಿಗೆ ಮಣ್ಣು ನೀರು! ತಲೆಗೂ, ಪಂಚೆಗೂ ಮಣ್ಣರಾಡಿ. ಹುಡುಗರನ್ನು ಬೈದು ಓಡಿಸುವಷ್ಟರಲ್ಲಿ ನೀರು ತಿಳಿಯಾಗಿರುತ್ತದೆ. ಲಕ್ಷ್ಮಣತೀರ್ಥ, ಸೀತಾತೀರ್ಥದಲ್ಲಿ ನೀರು ಧುಮಿಕ್ಕುತ್ತದೆ. ಆದರೆ ಎತ್ತರ ಕಡಿಮೆ, ನೀರಿನ ಪ್ರಮಾಣ ಕಡಿಮೆ. ಈ ಕೆರೆಗೂ, ಸಮುದ್ರಕ್ಕೂ ನಡುವೆ ಮಹಾ ದೊಡ್ಡ ಕಲ್ಲುಗಳ ಗೋಡೆ ಇರುತ್ತದೆ. ಇದನ್ನು ಶಾಂಡಿಲ್ಯರೆಂಬ ಅವಧೂತರು ಮುಂದಾಗಿ ನಿರ್ಮಿಸಿದರು ಎಂದು ಪ್ರತೀತಿ. ಕೆಳಗಿನ ಕೆರೆಯಿಂದ ೨೫-೩೦ ಮೆಟ್ಟಿಲು ಎತ್ತರದಲ್ಲಿ ರಾಮದೇವಸ್ಥಾನ ಉಂಟು. ಇಲ್ಲೇ ಶ್ರೀಶಾಂಡಿಲ್ಯ ಮಹರ್ಷಿಗಳ ಸ್ಮಾರಕ ಸಮಾಧಿ ಉಂಟು. ಈ ದೇವಸ್ಥಾನದ ಸುತ್ತ ಸಮುದ್ರದ ಹಿಂದುಗಡೆ ಹೋಗಿ ನೋಡಿದರೆ ಸಮುದ್ರದ ವಿಸ್ತಾರ, ಕಣ್ಮನವನ್ನು ತಣಿಸುತ್ತದೆ. ಸಾಮಾನ್ಯವಾಗಿ ಈ ಭಾಗದಲ್ಲಿ ಸಮುದ್ರದಲ್ಲಿ ಸೌದೆ ತೇಲಿ ಬರುತ್ತದೆ. ಸಾಹಸಿಗಳು ಅದನ್ನು ಹಿಡಿಯುತ್ತಾರೆ. ನಾನು ಸಣ್ಣವನಿರುವಾಗ ಬಟ್ಟೆಯ ಟಾಕಿ ಒಮ್ಮೆ ಬಳಿದು ಬಂದಿತ್ತು. ಎಲ್ಲೋ ಬಟ್ಟೆ ಹಡಗು ತೂಫಾನಿಗೆ ಸಿಕ್ಕು ಒಡೆದಿರಬೇಕು. ಅದು ಸಣ್ಣಣ್ಣ ಶಂಕರಲಿಂಗಭಟ್ಟರ ಕಣ್ಣಿಗೆ ಬಿತ್ತು. ಸರಸರನೆ ಕೆಳಗೆ ಧುಮುಕಿ ಅದರ ಒಂದು ತುದಿ ಹಿಡಿದರು, ಸಾವಕಾಶ ಮೇಲಕ್ಕೆ ಕೊಟ್ಟರು, ನಾವು ನಾಲ್ಕೈದು ಜನ ಮೇಲೆಳೆದು ಹಾಕಿದೆವು. ಸುಮಾರು ಎರಡು ಟಾಕಿ ಇರಬಹುದು. ನಮ್ಮನ್ನೆಲ್ಲ ಮನೆಗೆ ಕರೆದೊಯ್ದು ಹಪ್ಪಳ, ಮಜ್ಜಿಗೆ ಕೊಟ್ಟರು. ಆದರೆ ಇಷ್ಟಕ್ಕೆ ಮುಗಿಸಲಿಲ್ಲ. ಹುಡುಗರಿಗೆಲ್ಲಾ ಒಂದು ಪೈರಾಣಿಗೆ ಬೇಕಷ್ಟು ಬಟ್ಟೆ ಕತ್ತರಿಸಿ ಮನೆಗೆ ತಂದುಕೊಟ್ಟರು. ಕೆಳಗೆ ಇಳಿದವರದು ಅಪಾಯಕಾರಿ ಕೆಲಸ. ಕಟ್ಟಿಗೆ, ಸಾಗವಾನಿ, ಹಲಸು ಎಲ್ಲಾ ತೇಲಿ ಬರುತ್ತದೆ. ಅದನ್ನು ದಡದಲ್ಲಿರುವವರು ಹಿಡಿಯುತ್ತಾರೆ. ಜಗ್ಗೆ, ಪಗ್ಗೆ ಹೆಂಗಸರೂ ಒಟ್ಟು ಮಾಡುತ್ತಾರೆ. ಕೆಲವರ ಕೆಲಸ ಸುಲಭ. ಮೇಲೆ ಕಟ್ಟಿಗೆ ತಂದು ಹಾಕಿದವರ ರಾಶಿಯಿಂದ ಲಪಟಾಯಿಸುವುದು! ರುದ್ರಪಾದಯಾತ್ರೆ: ಅವರಿಗೆ ಹತ್ತು ಹನ್ನೆರಡು ಜನರಿಗೆ ಪುರುಸೊತ್ತಿದ್ದಾಗ ರುದ್ರಪಾದಕ್ಕೆ ಹೋಗುವುದುಂಟು. ಅಲ್ಲಿ ಒಂದು ರಾತ್ರೆ ಉಳಿದು ವಿವಿಧ ಮನೋರಂಜನೆಗಳನ್ನು ಮಾಡಿ ರಾತ್ರಿ ಕಳೆದು, ಬೆಳಿಗ್ಗೆ ರುದ್ರಪಾದ ಕೆರೆಯಲ್ಲಿ ಸ್ನಾನ ಮಾಡಿ, ಚಹಾ ಕುಡಿದು ಬರುವುದು - ಚಾಕ್ಕೆ ಅಲ್ಲಿಯ ನಿವಾಸಿಗಳು, ಹಾಲಕ್ಕಿ ಗೌಡರು ಹಾಲು ತಂದುಕೊಡುತ್ತಿದ್ದರಂತೆ. ಒಂದು ಗುಂಪಿನವರು ರಾತ್ರಿ ಭೈಠಕ್ (ಯಕ್ಷಗಾನ ಪ್ರಸಂಗ) ಮಾಡಿದರು. ಹೆಂಗಸರಲ್ಲೇ, ಕೌರವ, ಕೃಷ್ಣ, ವಿದುರ, ಕೃಷ್ಣ ಸಂಧಾನವಂತೆ. ದ್ರೌಪದಿಯನ್ನು ಶರಾವತಕ್ಕ, ಭೀಮನ ಪಾರ್ಟನ್ನು ಭೀಮಕ್ಕನೇ ಮಾಡಿದರಂತೆ. ಇದನ್ನೆಲ್ಲಾ ನನಗೆ ಹೇಳಿದ್ದು ಪಂಡಿತರ ಮನೆ ಸುಬ್ಬಮ್ಮ. ಸ್ವತಃ ಅವಳೇ ಭಾಗವತಳು. ಮೃದಂಗ ಎಂದಾಗ ಮಂದಾಕಿನಿ ಕೊಡಪಾನ ಬಾರಿಸಿದಳು. ಇಷ್ಟಾದ ಮೇಲೆ ಮನೆಯಲ್ಲೇ ನಾಲ್ಕಾರು ಪದ್ಯಗಳನ್ನು ಹೇಳಿಸಿದೆವು. ಪದ್ಯ ಕೇಳಿದ ಪದ್ಮಕ್ಕ "ಗಂಡು ಭಾಗವತರನ್ನು ಸುಡೋ" ಎಂದಳು. ರಾಘಣ್ಣನಿಗೆ ಸಿಟ್ಟು ಬಂತು. "ನಿಂಗ್ಳು ಹೆಂಗಸರು - ಸುಡುವವರು, ಹಪ್ಪಳಸುಡಿ" ಎಂದು ಹೇಳಿ ಸಭಾತ್ಯಾಗ ಮಾಡಿದನು. ತೊಟ್ಟಿಲು ತೂಗುವ ಹಬ್ಬ: ಇದು ಸಹ ಮುಖ್ಯವಾಗಿ ಹೆಂಗಸರದೇ ಕಾರ್ಯಕ್ರಮ. ಶ್ರೀವೆಂಕಟರಮಣ ದೇವಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ದಿನ ಸಾಮಾನ್ಯ ಎಲ್ಲ ಹೆಂಗಸರೂ ಶ್ರೀ ದೇವಸ್ಥಾನದಲ್ಲಿ ಸೇರುವರು. ಬೆಳ್ಳಿಯ ತೊಟ್ಟಿಲಲ್ಲಿ ಚಿನ್ನದ ಶ್ರೀಕೃಷ್ಣನ ಬಾಲ ಶಿಶುವನ್ನು ರಾತ್ರಿ ಹನ್ನೆರಡಕ್ಕೆ ಇಟ್ಟು ತೊಟ್ಟಿಲು ತೂಗಿದರು. ಎಲ್ಲ ಹೆಂಗಸರೂ ಹಾಡುವರು. "ಜೋ ಜೋ ಶ್ರೀಕೃಷ್ಣಲಾಲಿ". ಇನ್ನೂ ಬಹಳಷ್ಟು ಪದ್ಯ ಹಾಡುವರು. ಸಂತಾನವಿಲ್ಲದ ಹೆಂಗಸರೂ ತೊಟ್ಟಿಲು ತೂಗಿದರೆ ಅವರಿಗೆ ಸಂತಾನ ಪ್ರಾಪ್ತಿಯಾಗುವುದೆಂಬ ಬಲವಾದ ನಂಬಿಕೆ. ಸಂತಾನ ಪ್ರಾಪ್ತಿಯಾದ ಉದಾಹರಣೆ ಬೇಕಷ್ಟಿದೆ. ರಾತ್ರಿ ೦೧೩೦ರವರೆಗೆ ಈ ಕಾರ್ಯಕ್ರಮ ನಡೆದು ಮಂಗಲ ಹಾಡುತ್ತಾರೆ. ಸುತ್ತಾಯಾತ್ರೆ: ಕಾರ್ತಿಕ ಶುದ್ಧ ಏಕಾದಶಿ ದೊಡ್ಡ ಏಕಾದಶಿ, ಶಯನ ಏಕಾದಶಿ. ಮಾರನೆದಿನ ತುಳಸಿ ವಿವಾಹ. ಅಂದು ಕೆಲ ಹೆಂಗಸರು ಸೇರಿ ಗುಡ್ಡೆ ಮೇಲಣ ದೇವಸ್ಥಾನಗಳಿಗೆ ಪೂಜೆ ಸಲ್ಲಿಸುವರು. ಮೊದಲು ಹನ್ನೊಂದಕ್ಕೆ ಬಟ್ಟೆ ಗಣಪತಿ ದರ್ಶನ ಮಾಡುತ್ತಾರೆ. ಅರ್ಚಕರು ಮಹಾಮಂಗಳಾರತಿ ಮಾಡಿಸುತ್ತಾ ಯಾತ್ರೆಗೆ ಶುಭ ಕೋರುವರು. ನಂತರ ಯಾತ್ರಿಕರು ಭೀಮನಕೊಂಡಕ್ಕೆ ಹೋಗಿ ತೀರ್ಥ ಪ್ರೋಕ್ಷಣ್ಯ ಮಾಡಿಕೊಂಡು ಯಾತ್ರೆ ಮುಂದುವರಿಸಿ ೧.೩೦ - ೨ರ ಹಾಗೆ ಉಮಾ ಮಹೇಶ್ವರಕ್ಕೆ ಬರುತ್ತಾರೆ. ಇಲ್ಲಿ ಫಲಾಹಾರ ಮಾಡುತ್ತಾರೆ. ಸಾಮಾನ್ಯವಾಗಿ ಮೊಗೆಕಾಯಿ, ಬೆಲ್ಲ, ಅವಲಕ್ಕಿ, ಮೊಸರು, ಅಲ್ಲಿ ಸ್ವಲ್ಪ ವಿಶ್ರಮಿಸಿ ತಮ್ಮ ಪ್ರಯಾಣ ಮುಂದುವರಿಸುವರು. ಜಟಾಯು ತೀರ್ಥ, ಬಲ್ಲಾಳು ತೀರ್ಥ..ಬಲ್ಲಾಳು ತೀರ್ಥದಲ್ಲಿ ಸಾಲಿಗ್ರಾಮ ಶಿಲೆಯನ್ನು ಸಂಗ್ರಹಿಸುವರು. ಅದನ್ನು ಊರಿನಲ್ಲಿ ಕೇಳಿದವರಿಗೆ ಕೊಡುವರು. ಅದೇ ಸಾಲಿಗ್ರಾಮ ನಮ್ಮ ತುಳಸಿವಿವಾಹಕ್ಕೆ ವಿಷ್ಣುರೂಪ. ಆ ಹೊತ್ತು ಸಾಯಂಕಾಲ ನಾಲ್ಕರಿಂದ ರಾತ್ರಿ ಹನ್ನೆರಡರವರೆಗೆ ತುಳಸಿಪೂಜೆ ಮಾಡುತ್ತಾರೆ. ಅದನ್ನೇ ಕೆಲವರು ತುಳಸಿ ವಿವಾಹ ಎನ್ನುತ್ತಾರೆ. ತುಳಸಿಕಟ್ಟೆಯನ್ನು ಮುಂಚಿನದಿನವೇ ಶೃಂಗರಿಸುತ್ತಾರೆ. ಕಬ್ಬು, ಮಾವಿನ ತೋರಣ, ತುಳಸಿ ಕಟ್ಟೆಗೆ ಬಣ್ಣ ಬಣ್ಣದ ಚಿತ್ತಾರಗಳಿಂದ ಶೃಂಗರಿಸುತ್ತಾರೆ. ತುಳಸಿಕಟ್ಟೆ ಇಲ್ಲದವರು ಅಂದಿನ ದಿನಕ್ಕೆ ಒಂದು ಗಿಡವನ್ನಾದರೂ ನೆಟ್ಟು ಪೂಜೆ ಸಲ್ಲಿಸುತ್ತಾರೆ. ಮದುವೆಗೆ ಆಚೀಚೆ ಮನೆಯವರು ಬರುತ್ತಾರೆ. ಅವರ ಮನೆಗೆ ನಾವು.ಮಂಗಳಾರತಿ ಸಮಯದಲ್ಲಿ ಪಟಾಕಿ, ಧಡಾಕಿ ಹೊಡೆಯುತ್ತಾರೆ. ನೈವೇದ್ಯಕ್ಕೆ ಕಬ್ಬು, ಅವಲಕ್ಕಿ, ಕಾಯಿ, ಬೆಲ್ಲ.ಆರತಿ ಆಗಬೇಕಾದರೆ "ಗೋವಿಂದಾನು ಗೋವಿಂದಾ ಗೋವಿಂದಾ’ ಎನ್ನುತ್ತೇವೆ. ಅಂದೇ ಉತ್ಥಾನ ದ್ವಾದಶಿ. ಕೃಷ್ಣನಿಗೆ, ತುಲಸಿಗೆ, ನವವಿವಾಹಿತರಿಗೆ ಕ್ಷೀರಾಭಿಷೇಕ ಮಾಡುತ್ತಾರೆ. ಬಂದವರಿಗೆಲ್ಲಾ ಅವಲಕ್ಕಿ ಬೆಲ್ಲ, ಕಬ್ಬಿನ ಹೋಳು ಹಂಚುತ್ತಾರೆ. ವಟುಗಳಿಗೆ ಮದುವೆ ದಕ್ಷಿಣೆ. ಪುರೋಹಿತರಿಗೆ ಮರ್ಯಾದೆ ಸಲ್ಲಿಸುತ್ತಾರೆ. ನಾವೆಲ್ಲಾ ನಮ್ಮ ಕೇರಿಯ ಹಬ್ಬ ಮುಗಿಸಿ ಜಿ.ಎಸ್.ಬಿ.ಕೇರಿ, ವಿಶ್ವಕರ್ಮರ ಓಣಿ, ಸೊನಗಾರ ಕೇರಿ ಪೂಜೆಗಳನ್ನು ಮುಗಿಸಿ ಚೀಲ ತುಂಬಾ ಅವಲಕ್ಕಿ, ಮಂಡಕ್ಕಿ, ದಕ್ಷಿಣೆಯ ಹಣ (ಚೀಲಗಟ್ಟಲೆ ಅಲ್ಲ!) - ರಾತ್ರಿ ಹನ್ನೆರಡೂವರೆ-ಒಂದು ಗಂಟೆ ಹೊತ್ತಿಗೆ ಮನೆಗೆ ಬರುತ್ತಿದ್ದೆವು. ಮಾರನೇ ದಿನ ಬಾಯ್ಬೇಡಿ ಹೊತ್ತಿಗೆ ತಿನ್ನುತ್ತಿದ್ದೆವು. ಕೆಲವರಿಗೆ ಶುದ್ಧ ಹುಣ್ಣಿಮೆಗೆ ತುಳಸಿ ಮದುವೆ. ಮುಖ್ಯವಾಗಿ ಹಾಲಕ್ಕಿ ಗೌಡರ ಕೇರಿ. ತುಳಸಿಕಟ್ಟೆ ಅಂದವಾಗಿ ಶೃಂಗರಿಸುತ್ತಾರೆ. ಅಡಿಕೆ ಕೊನೆ, ಸಿಂಗಾರ, ತೆಂಗಿನ ಸಿಹಿಯಾಳ, ನೈವೇದ್ಯಕ್ಕೆ ಅವಲಕ್ಕಿ ಬೆಲ್ಲ, ದಕ್ಷಿಣೆ...... ********************************* ನನಗೆ ಸಾಹಿತ್ಯಕ್ಷೇತ್ರದಲ್ಲಿ ಅಭಿರುಚಿ ಹುಟ್ಟಿಸಿದ ಅಧ್ಯಾಪಕವೃಂದ ಮತ್ತು ಪುಸ್ತಕಗಳು. ಕರಾವಳಿಯವರಾದ ನಮಗೆ ಸಾಹಿತ್ಯದಲ್ಲಿ ಯಕ್ಷಗಾನ ಮೊದಲ ಗುರು. ನಮ್ಮ ಮನೆಯ ಕೈಮೇಜಿನಲ್ಲಿ ಎರಡು ಪ್ರಸಂಗ ಪಟ್ಟಿಗಳಿದ್ದವು. ಒಂದು ದ್ರೋಣಪರ್ವ ಹಾಗೂ ಇನ್ನೊಂದು ದ್ರೌಪದಿ ವಸ್ತ್ರಾಪಹರಣ. ಇದನ್ನು ಬರೆದವರು ವಿಚಿತ್ರ ಎಂದರೆ ಕರಾವಳಿಯವರಲ್ಲ. ಸಾಗರ ತಾಲೂಕು ಹೊಸಬಾಳೆ ಗ್ರಾಮದ ಹೊಸಬಾಳೆ ರಾಮಪ್ಪನವರ ಮಗ ಪುಟ್ಟಪ್ಪನವರು. ಅವರು ಹೆಸರು ಹೇಳಿಕೊಂಡ ರೀತಿ ಆಕರ್ಷಣೀಯವಾಗಿತ್ತು. "ನವಕದಳಿಪುರದ ರಾಮಾಖ್ಯನ ತರಳ ಪುಟ್ಟಪ್ಪ". ನನಗೆ ಇದರಲ್ಲಿ ಹೊಸತನ ಕಂಡಿತು. ನಾನೂ "ದನಗಿವಿಪುರದ ಅನಂತ ಪುತ್ರ ಮಹಾಬಲ" ಎಂದು ಹೇಳಿ ನನ್ನ ಸ್ನೇಹಿತರಿಗೆ ಆಶ್ಚರ್ಯ ಉಂಟುಮಾಡಿದೆ! ನನಗೆ ಈ ಪ್ರಸಂಗದಲ್ಲಿ ಬರುವ ಸಂವಾದ ತುಂಬಾ ಆಕರ್ಷಣೀಯವಾಗಿತ್ತು. ರಾಜಸೂಯಯಾಗಕ್ಕೆ ಶಿಶುಪಾಲ ಹೋಗಿ ಶತಾಪರಾಧ ಮಾಡಿ ಕೃಷ್ಣನ ಚಕ್ರಕ್ಕೆ ಆಹುತಿಯಾಗುತ್ತಾನೆ. ಅವನ ತಮ್ಮ ದಂತವಕ್ತ್ರನಿಗೆ ಇದು ಗೊತ್ತಿಲ್ಲ. ’ಪುರವನ್ನು ಶೃಂಗರಿಸು’ ಅನ್ನುತ್ತಾನೆ. "ಮೊನ್ನೆದಿನವೇ ಯಾಗ ಮುಗಿದು ಅಣ್ಣನೀದಿನ ಬರುವನು’ ಎಂದು ತಮ್ಮನ ಊಹೆ. ಆದರೆ ಚೈದ್ಯನ (ಶಿಶುಪಾಲ) ಜೊತೆಗೆ ತೆರಳಿದ ಭಟ್ಟರು ಶಿಶುಪಾಲ ಕೃಷ್ಣನ ಚಕ್ರಕ್ಕೆ ಬಲಿಯಾದ ಸುದ್ದಿ ಹೇಳಿದಾಗ ತಮ್ಮ ಕೆಂಡಾಮಂಡಲವಾಗುತ್ತಾನೆ. ಇಂದ್ರಪ್ರಸ್ಥಕ್ಕೆ ಬರುತ್ತಾನೆ - ಕೃಷ್ಣನನ್ನು ಸಂಹರಿಸಬೇಕೆಂದು! ಇಲ್ಲಿ ನಡೆಯುವ ಸಂಭಾಷಣೆ ಚತುರತೆಯಿಂದ ಕೂಡಿದೆ. ಕೃಷ್ಣ ಮತ್ತು ಶಿಶುಪಾಲ (ಹಾಗೂ ದಂತವಕ್ತ್ರ) ಭಾವಂದಿರು (ಭಾಮೈದುನರು). ಕೃಷ್ಣಭಾವ; ಏನು, ಕೋಪಭಾವದಿಂದ ನನ್ನ ಕೊಲ್ವ ಮಾತಿದೇನು?" - ಕೃಷ್ಣನ ಚೋದ್ಯ. ಅದಕ್ಕೆ ದಂತವಕ್ತ್ರ "ಭಾವಗೀವನೆಂಬ ನಗೆಯ ಠೀವಿ ಮಾತು ಹಿಂದಕಾಯ್ತು. ಮಾವನನ್ನು ತರಿದ ನಿನ್ನ ಬಿಡುವುದುಚಿತವೇ?" ಕೃಷ್ಣ: "ತನಗೆ ಸೊಕ್ಕು ಇರುವುದೆಂಬ ಬಿಂಕದಿಂದ ಸಾಧುನೃಪರ ಸೆರೆಯೊಳಿಟ್ಟ ಪಾಪ ಹನನಗೈದಿತು" (ಅವನ ಪಾಪವೇ ಅವನನ್ನು ಕೊಂದಿತು). ಚೈದ್ಯ: ಕೇಳು ಕಂಸನಿರಲಿ ಪಿಂದೆ ಕಾಳರಾತ್ರಿಯೊಳಗೆ ಪೋಗಿ ಶೀಲಮಗಧ ಪತಿಯ ಸೀಳಿ ಕೊಂದ ಪಾತಕಿ. ಕೃಷ್ಣ: ಅವನ ಕ್ರೌರ್ಯದಿಂದಲೇ ಅವನು ಸತ್ತ, ನಾನು ಕಾರಣನಲ್ಲ. ಚೈದ್ಯ: ಹಾಲನುಣಿಸಲು ಬಂದ ವೀರ ನಾರಿ ಅಸಮಶೂರ ರಕ್ಕಸಿ ಸಾಧ್ವಿ ಪೂತನಿಯ ತನುವನ್ನು ಸಾಯಿಸಿದೆ. ಕೃಷ್ಣ: ಮಕ್ಕಳಿಗೆ ಮೋಸದಿಂದ ವಿಷಮನುಣಿಸಲು ಬಂದ ಪೂತನಿಯ ಅಸುವ ಹೀರಿ ಮಕ್ಕಳನ್ನು ಸಲುಹಿಕೊಂಡೆನು. ನನಗೆ ಈ ಸಂವಾದ ಈಗಲೂ ನೆನಪಿರುವಂತೆ ಅಚ್ಚೊತ್ತಿದೆ. ಹೀಗೆಯೇ ದ್ರೌಪದಿ ಪ್ರತಾಪದಲ್ಲಿಯೂ ಸೊಗಸಾದ ಸಂವಾದವಿದೆ. ದ್ರೋಣಾಚಾರ್ಯರಿಗೂ, ಅರ್ಜುನನಿಗೂ ನಡೆದ ಸಂವಾದವಿದು: ದ್ರೋಣ: ಗುರುವಾಗಿ ನಾನು ಶಿಷ್ಯನೊಡನೆ ಯುದ್ಧ ಮಾಡುವುದು ಯಾವ ನ್ಯಾಯ? ಅರ್ಜುನ: ಈ ಹಿಂದೆ ಭೀಷ್ಮಾಚಾರ್ಯರು ಗುರು ಪರಶುರಾಮನೊಂದಿಗೆ ಅಂಬೆಯ ವಿವಾಹದ ವಿಷಯವಾಗಿ ಯುದ್ಧ ಮಾಡಿರಲಿಲ್ಲವೇ ಗುರುಗಳೆ? ಆದರೆ ದ್ವಿಜರಾಗಿ ನೀವು ರಾಜರನ್ನು ಸಂಹರಿಸುತ್ತಿರುವುದು ಸರಿಯೇ? ದ್ರೋಣ: ಹಿಂದೆ ಭಾರ್ಗವಾಖ್ಯ ಇಪ್ಪತ್ತೊಂದು ಬಾರಿ ಕ್ಷತ್ರಿಯರನ್ನು ಕೊಂದನವಗೆ ಜಾತಿ ಪೋಯ್ತೆ, ಎಲೆ ಕಿರೀಟಿಯೇ? ಈ ರೀತಿಯ ಸಂವಾದಗಳು ಇತ್ತಲಾಗಿನ ಆಟಗಳಲ್ಲಿ ಚಿಟ್ಟಾಣಿಯವರ ’ಸದ್ದಿಲ್ಲದೇ ಮದ್ದರೆವೆನು’ ಇವೆಲ್ಲ ನನ್ನ ನೆನಪಿನಲ್ಲಿ ಸದ್ದಿಲ್ಲದೇ ವಾಸಿಸಿವೆ. ಇವು ನನ್ನ ಸಾಹಿತ್ಯ ದಿಗಂತದಲ್ಲಿ ಪ್ರಥಮಗುರು ಸ್ಥಾನದಲ್ಲಿವೆ. ಇನ್ನು ನಾಟಕದ ಕೆಲ ಉಕ್ತಿಗಳು - ಶಕಾರನ ವಕ್ರ ಬುದ್ಧಿಗೆ: ಯಾರು? ಜಮದಗ್ನಿಯ ಪುತ್ರನಾದ ಭೀಮಸೇನನೇ, ಕುಂತಿಯ ಮಗನಾದ ರಾವಣನೇ ಬುದ್ಧಿ...... ಅಪರವತಾರಗಳು. ಚಾರುದತ್ತನ ಎರಡು ಶ್ಲೋಕಗಳು: "ಅಪಾಪಾನಾಂ ಕುಲೇ ಜಾತೇ...... "(ನಾನು ಅಪಾಪಿಗಳ ಕುಲದಲ್ಲಿ ಹುಟ್ಟಿದವನು..) ಎಂಬ ಪದ್ಯ ಆಗಲೇ ನನ್ನ ಮನ ಸೆಳೆದಿತ್ತು. "ಚಾರುದತ್ತ ನಿರ್ದೋಷಿ ಎಂದಾಗಿ ಘಾಸಿಗೆ ಹಾಕಿದರೆ ಅದು ಪುತ್ರಜನ್ಮಕ್ಕೆ ಸಮಾನ ಎಂದು ತಿಳಿಯುತ್ತೇನೆ" ಎಂಥ ಶುದ್ಧ ಹೃದಯ! ಇನ್ನು ಸಾಮಾಜಿಕ, ಪೌರಾಣಿಕ ನಾಟಕಗಳನ್ನು ತೆಗೆದುಕೊಂಡರೆ ಕೈಲಾಸಂರವರ ’ಪರ್ಪಸ್’- ಏಕಲವ್ಯನಿಗೆ ಸಂಬಂಧಿಸಿದ ನಾಟಕ. ದ್ರೋಣಾಚಾರ್ಯರು ಅರ್ಜುನನಿಗೆ ವಿದ್ಯಾರ್ಥಿಯಾಗಲು ಈ ಐದು ಎಲಿಮೆಂಟ್ಸ್ ಇರಬೇಕು ಎನ್ನುತ್ತಾರೆ: (೧) ಗುರುವಿನಲ್ಲಿ ವಿದ್ಯಾರ್ಥಿಗೆ ಪ್ರೀತಿ. (೨) ಗುರುವಿಗೆ ವಿದ್ಯಾರ್ಥಿಯಲ್ಲಿ ಅಕ್ಕರೆ (೩) ತಾನು ಓದುತ್ತಿರುವ ವಿಷಯದ ಬಗೆಗೆ ಪ್ರೀತಿ. (೪) ಒಳ್ಳೆಯ ಉದ್ದೇಶ. (೫)ಏಕಾಗ್ರತೆ ಎಂದು ಹೇಳುತ್ತಾರೆ. ನಂತರ ವಿದ್ಯಾರ್ಥಿಗಳನ್ನು ಸಂಧ್ಯಾವಂದನೆಗೆ ಕಳಿಸುತ್ತಾರೆ. ಆಗ ಏಕಲವ್ಯ ಬಂದು ದ್ರೋಣರಿಗೆ ಎರಗಿ ವಿದ್ಯಾಭಿಕ್ಷೆಯನ್ನು ಯಾಚಿಸುತ್ತಾನೆ. ತನ್ನ ಪರಿಚಯ ಮಾಡಿಕೊಳ್ಳುತ್ತಾನೆ. ಆಗ ದ್ರೋಣ "ಇಲ್ಲ, ಆಗುವುದಿಲ್ಲ. ಈಗ ನಾನು ರಾಜಕುಮಾರರಿಗೆ ವಿದ್ಯೆ ಹೇಳಿಕೊಡುತ್ತಿದ್ದೇನೆ" ಎಂದಾಗ ಏಕಲವ್ಯ "ಹೇ ಗುರು, ಹಾಗೆ ಅನ್ನಬೇಡಿ. ಈಗ ನೀವು ಹೇಳಿದ, ವಿದ್ಯಾರ್ಥಿಗಳಲ್ಲಿರಬೇಕಾದ ಮೂಲಭೂತ ಗುಣಗಳು ನನ್ನಲ್ಲಿವೆ. ಮೊದಲನೆಯದಾಗಿ ನನಗೆ ವಿದ್ಯೆಯಲ್ಲಿ ಪ್ರೀತಿ ಉಂಟು. ಅದಕ್ಕಾಗಿ ದೂರದ ಹಿರಣ್ಯಧನಸ್ಸಿನ ಕಾಡಿನಿಂದ ಇಲ್ಲಿಗೆ ಬಂದಿದ್ದೇನೆ. ತಮ್ಮಲ್ಲಿ ಪ್ರೀತಿ, ಗೌರವ ಇದ್ದುದರಿಂದಲೇ ಅಬ್ಬೆ ಮಾತಿಗೆ ಹೂಂಗುಟ್ಟು ಒಂದೇ ಮನಸಿನಿಂದ ಬಂದಿದ್ದೇನೆ. ನನ್ನ ಉದ್ದೇಶ ನಿನ್ನ ಅರ್ಜುನನ ಉದ್ದೇಶಕ್ಕಿಂತಲೂ ಉಚ್ಚವಾದದ್ದು. ಅರ್ಜುನನ ಉದ್ದೇಶ ಏಕೈಕ ಬಿಲ್ಲುವಿದ್ಯೆಗಾರನಾಗಿ ಪಾಪದ ರಾಜರ ಮೇಲೆ ಯುದ್ಧ ಸಾರಿ ಭಂಡಾರ ಲೂಟಿ ಮಾಡುವುದು. ನನ್ನದು ಅದಲ್ಲ. ನನ್ನ ಪಕ್ಕದ ಕಾಡಿನಲ್ಲಿ ಒಬ್ಬ ತಪಸ್ವಿ ಇದ್ದಾನೆ. ಅವನ ಆಶ್ರಮದಲ್ಲಿ ಹಿಂಸ್ರ ಪಶುಗಳು, ಸಾಧುಪ್ರಾಣಿಗಳು ಒಟ್ಟಿಗೆ ಆಡುತ್ತವೆ. ಅದು ಅವನ ತಪಸ್ಸಿನ ಪ್ರಭಾವ. ಶೂದ್ರನಾದ ನಾನು ತಪಸ್ಸು ಮಾಡಲಾರೆ. ನನ್ನ ಉದ್ದೇಶ ಬಿಲ್ವಿದ್ಯೆಯಿಂದ ಹಿಂಸ್ರ ಪಶುಗಳನ್ನು ಹತೋಟಿಯಲ್ಲಿಡುವುದು. ಹಿಂಸೆಯನ್ನು ಅಹಿಂಸೆಯಿಂದ ನಿಗ್ರಹಿಸುವುದು. ಇನ್ನು ಏಕಾಗ್ರತೆ. ಬಿಲ್ಲುಗಾರಿಕೆಯಲ್ಲಿ ಹುಟ್ಟು ಬೇಟೆಗಾರನಾದ ನನಗಿರುವ ಬಿಲ್ವಿದ್ಯೆಯ ಏಕಾಗ್ರತೆ ಅರ್ಜುನನಿಗೆ ಬರಲು ಸಾಧ್ಯವೇ? ಇನ್ನು ಗುರು ಶಿಷ್ಯನ ಬಗೆಗೆ ತೋರುವ ಅಕ್ಕರೆಯ ಅಂಶ. ಅದು ತಾವು ಹೇಳಬೇಕು - ಎಂದು ಕೈಕಟ್ಟಿ ನಿಲ್ಲುತ್ತಾನೆ. ಕೈಲಾಸಂ ಹೇಳಿರುವ (ದ್ರೋಣರಿಂದ ಹೇಳಿಸಿರುವ) ಈ ಐದು ಅಂಶಗಳನ್ನು ನನ್ನ ವೃತ್ತಿಯ ಮೂವತ್ತೇಳು ವರ್ಷಗಳೂ ಹೇಳುತ್ತ ಬಂದಿದ್ದೇನೆ. ಮಕ್ಕಳೂ ಲಕ್ಷ್ಯಕೊಟ್ಟು ಕೇಳುತ್ತಿದ್ದರು. ನನ್ನಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಹುಟ್ಟಿಸಿದ ಪುಸ್ತಕಗಳ ಬಗೆ ಅದು. ೨. ಕೆ.ವಿ.ಅಯ್ಯರ್‌ರ "ರೂಪದರ್ಶಿ" ಕಾದಂಬರಿ. ಅಥೆನ್ಸ್ ನಗರದ ಸೌಂದರ್ಯವನ್ನು ಹೆಚ್ಚಿಸಿದ ದೇವಸ್ಥಾನಗಳ ಬಗೆಗೆ ಬರೆಯುತ್ತ ಕಾದಂಬರಿಕಾರರು ಮೊದಲನೇ ವಾಕ್ಯವನ್ನು ಬಹು ಸುಂದರವಾಗಿ ಮನಂಬುಗುವಂತೆ ಬರೆದಿದ್ದಾರೆ. ನಗರ ಸೌಂದರ್ಯವನ್ನು ಹೆಚ್ಚಿಸಲು ಅಥೆನ್ಸ್‌ನವರು ಲಕ್ಷಾಂತರ ರೂಪಾಯಿಗಳನ್ನು "ಸಾರ್ಥಕಗೊಳಿಸಿದರು" ಎಂಬ ಪ್ರಯೋಗವಿದೆ. ಬೇರೆ ಯಾವ ಲೇಖಕರಾದರೂ ವ್ಯಯ ಮಾಡಿದರು, ಖರ್ಚುಮಾಡಿದರು ಎಂದು ಬರೆಯುತ್ತಿದ್ದರೇನೋ! ಆದರೆ ಸಾರ್ಥಕ ಪದವನ್ನು ಎತ್ತಿ ಹಿಡಿದು, ಅದರ ಔಚಿತ್ಯವನ್ನೂ ಎತ್ತಿ ಹಿಡಿದು ಇಡೀ ಬಿ.ಎಸ್.ಸಿ ಕನ್ನಡ ಎರಡನೇ ಭಾಷಾ ವಿದ್ಯಾರ್ಥಿಗಳ ಸಂತೋಷಕ್ಕೆ ಪಾತ್ರರಾದವರು ರಾಜರತ್ನಂ,ನಮ್ಮ ಪ್ರಿಯ ಶಿಕ್ಷಕರು. ಕನ್ನಡದ ಎರಡು ರತ್ನಗಳಾದ ಶ್ರೀ.ವಿ.ಸೀ ಹಾಗೂ ಶ್ರೀ ಜಿ.ಪಿ.ರಾಜರತ್ನಂ- ನಾವು ಅವರನ್ನು ಕನ್ನಡ ಪ್ರೊಫೆಸರ್ ಆಗಿ ಪಡೆದು ಧನ್ಯರು. ೩. ಬಿ.ಎಂ.ಶ್ರೀ.ಯವರ "ಅಶ್ವತ್ಥಾಮನ್" ನಾಟಕವನ್ನು ಮನಸಿಗೆ ನಾಟುವಂತೆ ಪಾಠ ಮಾಡಿದವರು ವಿ.ಸೀ.ಅವರು.ಅಶ್ವತ್ಥಾಮನ್‌ನ ಕ್ರೌರ್ಯವನ್ನು (ಉಪಪಾಂಡವರ ವಧೆಯ ಕಾಲದಲ್ಲಿ), ಕ್ರೋಧಾನ್ವಿತ ಭೀಮಸೇನನನ್ನು ಬಲು ಚೆನ್ನಾಗಿ ವರ್ಣಿಸಿದ್ದಾರೆ. ಶ್ರೀಕೃಷ್ಣನನ್ನೂ,ಪಾಂಡವರನ್ನೂ ಕೊಲ್ಲುವೆನೆಂದು ಹೊರಟ ಅಶ್ವತ್ಥಾಮನು ರುದ್ರ ಬೀಸಿದ ಭ್ರಮೆಗೆ ಒಳಗಾಗುತ್ತಾನೆ. ಶ್ರೀಕೃಷ್ಣ ಎಂದು ಭಾವಿಸಿ ಒಂದು ಕುರಿಯನ್ನು ಹಿಡಿದು "ಬಾ ಕೃಷ್ಣ,ಯುದ್ಧಮನ್ ಪೊತ್ತಿಸಿದ ಮಾಯಾವಿ,ಫಲಮನ್ ಉಣ್,ಬಾರ......ಎನುತೆ ಬೀಡಿಂಗುಯ್ದು ಹಿಂಸಿಸುತ್ತಿರ್ಪನ್".ಇವೆಲ್ಲಾ ನಡೆದದ್ದು ಪಾಂಡವರ ಪಾಳಯದಲ್ಲಿ, ನಡುರಾತ್ರಿಯಲ್ಲಿ. ಬುದ್ಧಿಗೆ ಮಂಕು ಕವಿದು ಮಾಡಿದ ಕ್ರೌರ್ಯದ ಕಾರ್ಯಗಳು ಎಂಥ ಕ್ರೂರಿಗೂ ಅಯ್ಯೋ ಅನಿಸಬೇಕು - ಹಾಗಿವೆ. ಮುಂದೆ ಅಶ್ವತ್ಥಾಮ ಆತ್ಮಹತ್ಯೆ ಮಾಡಿಕೊಳ್ಳುವಾಗ ಅವನ ಆತ್ಮಗತ ವಾಕ್ಯಗಳು ಎಂಥವರಿಗೂ ಮರುಕ ಹುಟ್ಟಿಸುವಂತಹವು.ಖಡ್ಗ ನೆಲದಲ್ಲೂರಿ ಅವನು ಹೇಳುವ ಮಾತುಗಳು: "ನಿಶ್ಚಲಂ ನಿಂದುದೀ ಕಟುಕನ್.ನಂಬತಕ್ಕುದು-ಮಗುಳ್ದು ಕೊಲ್ಗುಂ. ........................... ಮೊದಲೆ ಇದು ಆ ಶತ್ರುಮಿತ್ರನ್ ಅಭಿಮನ್ಯು,ಎನ್ನ ಕರುಬಾದವನ್,ಸಮಯುದ್ಧದೊಳ್ ಮೆಚ್ಚುಗೊಟ್ಟ ಕೊಡುಗೆ ತಾನ್;..........................ಪೊಸತು ಮಸೆದೀಗಳ್ ಮೊನೆಗೊಂಡ ಕೂರ್ಪಿನದು;ನೋಡಿ ನಟ್ಟೆನ್ ನಾನೆ,ಒಡನೆ ಸಾವೀಯಲ್..." ಎನ್ನುತ್ತ ಆ ಖಡ್ಗದ ಮೇಲೆ ಬಿದ್ದು ಸಾಯುತ್ತಾನೆ. ಬೇಟೆಗೆ ಹೋದ ಏಕಲವ್ಯ ಬರುತ್ತಾನೆ "ಹೇ ಗುರುಪುತ್ರ, ಏನು ಮಾಡಿದೆ! ನಿನ್ನ ಕುಲಕಿದು ಜಸಮೇ?" ಎಂದು ಭೂಮಿಯಲ್ಲಿ ಹೊರಳಾಡುತ್ತಾನೆ. ಬಿ.ಎಂ.ಶ್ರೀ ಸೃಷ್ಟಿಸಿದ ಪಾತ್ರಗಳಲ್ಲೆಲ್ಲಾ ಅತ್ಯಂತ ದೈನ್ಯಭಾವ ಹುಟ್ಟಿಸುವ ಪಾತ್ರ ಭಾರ್ಗವಿಯದು. ಕೃಷ್ಣ ಒಮ್ಮೆ ಅವಳಿಗೆ ಹೇಳುತ್ತಾನೆ. "ಕಲಿಗಳನ್ ಬಳಯಿಪುದೆ ನಿನ್ ಪಾಲ್ ನಲಿವು". ಭಾರ್ಗವಿಯ ದೀರ್ಘ ಆತ್ಮಕಥನ: "ಅಯ್ಯನ್ ಎನ್ನನ್ ಆ ಋಷಿ ಭಾರದ್ವಾಜಂಗೆ ಕೊಟ್ಟನ್... ಆ ಬೀರಸಿರಿಯ ಮಂಗಳದ ಕಳಶಮೆನೆ... ಲೋಕೈಕ ಬಾಣನನ್ ದ್ರೋಣನನ್ ಪೊತ್ತೆನ್. ಮೊಗಗಾಣ್ಬ ಮುನ್ನಮೇ ಯಮನ್ ಉಯ್ದನ್ ಇನಿಯನನ್.ಪೊತ್ತನನ್ ಪೆತ್ತೆನ್.ನಡಪಿದೆನ್.ಒರ್ವನಾಳ್ ಮಾಡಿದೆನ್.ಬಡತನದೊಳ್ ಎತ್ತಲುಂ ತಿರಿದು ಬಾಳ್ವಂಗೆ ನೀನ್ ಮೂಡಿ,ತಾಯನ್ ಅಂದೇ ತಿಂದೊಕೊಂಡಯ್.ಮಗುಗೆ ಪಾಲ್ಗಿಲ್ಲ.ರಾಜರೊಳ್ ಕೆಳೆತನಂ...ಕಣ್ಗೆಟ್ಟ ಮಕ್ಕಳನ್ ಕುರುಧರೆಗೆ ಕರೆತಂದೆನ್.ದ್ರೋಣನನ್ ರಾಜಗುರುವನ್ ಮಾಡಿದೆನ್. ಅರಸರೊಳ್ ಗುರುತನದ ಮನ್ನಣೆಯನ್ ಉಂಡನ್.... **************************************************************************************************************************************************************************************************************************************************************************** ಅನಂತದೆಡೆಗೆ "ಅಶ್ವತ್ಥಾಮನ್" ಕೃತಿಯ ಪರಿಚ್ಛೇದಗಳ ಉಲ್ಲೇಖದೊಂದಿಗೆ ತಂದೆಯವರ ಬರವಣಿಗೆ ನಿಂತಿದೆ. ಆ ರವಿವಾರ ರಾತ್ರಿ ಅವರು ಈ ಭಾಗ ಬರೆದು ಬರವಣಿಗೆ ನಿಲ್ಲಿಸಿದರು. ಮರುದಿನ ಬರಹ ಮುಂದುವರಿಸುವರೆಂಬ ನಿರೀಕ್ಷೆಯಲ್ಲೇ ನಾವಿದ್ದೆವು.ಕಗ್ಗ,ಒಸಗೆ,ಹರಿಶ್ಚಂದ್ರ ಕಾವ್ಯ..... ಇವೆಲ್ಲದರ ಕುರಿತು ಅವರು ಬರೆಯುವುದಿತ್ತು. ಆದರೆ ಅವರಿಗೆ ಸೋಮವಾರ ಮಧ್ಯಾಹ್ನದ ಹೊತ್ತಿಗೆ ರಕ್ತವಾಂತಿಯಾಯಿತು. ಅಂದು ಅವರನ್ನು ಬೆಂಗಳೂರಿನ ಜಯನಗರದಲ್ಲಿರುವ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಸೇರಿಸಲಾಯಿತು. ಒಂದು ವಾರ ಹಾಗೆ ಐ.ಸಿ.ಯು.ದಲ್ಲಿದ್ದಾಗಲೂ ಪ್ರಜ್ಞಾಸ್ಥಿತಿಯಲ್ಲಿದ್ದರು.ಬಂಧು ಬಾಂಧವರೆಲ್ಲರನ್ನೂ ಗುರುತಿಸಿದರು, ಮಾತನಾಡಿದರು. ಮುಂದಿನ ಸೋಮವಾರ ಬೆಳಿಗ್ಗೆ ಅವರ ಉಸಿರಾಟ ಕ್ಷೀಣಿಸಿತು. ಕೃತಕ ಉಸಿರಾಟದ ವ್ಯವಸ್ಥೆ ಅಳವಡಿಸಿದ್ದರಿಂದ ಕೆಲ ಗಂಟೆಗಳ ಕಾಲ ಉಸಿರಾಟ ಮುಂದುವರಿಯಿತು. ಅಂದು ರಾತ್ರಿ ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ಅವರು ಕೊನೆಯುಸಿರೆಳೆದರು. (೪-೧೦-೨೦೧೦, ಸೋಮವಾರ).ಅದಕ್ಕೂ ಮುನ್ನ ಇಡೀ ದಿನ ಪರಿಚಯದ ಅನೇಕ ಪ್ರಿಯರು ಅವರ ದರ್ಶನ ಪಡೆದರು. ಕಡೇಕ್ಷಣದಲ್ಲಿ ಸಂಪ್ರದಾಯದಂತೆ ಗಂಗಾಜಲವನ್ನು ಅವರ ತುದಿನಾಲಗೆಯ ಮೇಲೆ ಸಮರ್ಪಿಸಿದೆ. ಅವರು ತನ್ನ ಬಾಳಿನುದ್ದಕ್ಕೂ ಅಭಿಮಾನದಿಂದ, ವಾತ್ಸಲ್ಯದಿಂದ ಕಂಡ ವಿದ್ಯಾರ್ಥಿಗಳು, ಎಳೆಯರು, ಸಮಕಾಲೀನರು,ಹಿರಿಯರು ಎಲ್ಲರನ್ನೂ ನೆನೆಯುತ್ತ ಅವರ ಮುಂದಿನ ಪ್ರಯಾಣಕ್ಕೆ ಶುಭ ಕೋರಿ ಕೆಲವು ಗಳಿಗೆ ಮೌನವಾಗಿ ನಿಂತುಕೊಂಡೆ. ಆಸ್ಪತ್ರೆಯ ಸಿಬ್ಬಂದಿ ನಮಗೆ ಹೊರಗಿರಲು ಸೂಚಿಸಿದರು. ಕೆಲ ನಿಮಿಷಗಳ ಬಳಿಕ ಡಾಕ್ಟರು ಹೊರಗೆ ಬಂದು ತಂದೆಯವರ ಮರಣವನ್ನು ಪ್ರಕಟಿಸಿದರು. ಅಶೋಕಭಾವ, ಗಪ್ಪತಿ ಮಾವ,ರಾಮು...ಎಲ್ಲರೂ ಅಲ್ಲಿದ್ದೆವು.ಅಪ್ಪ ಹೊರಟು ಹೋಗಿದ್ದರು... ಮನುಷ್ಯ ಅಳಿದ ಮೇಲೆ ಉಳಿಯುವುದು ಏನು? ಇದು ಬಾಳಿನ ರಹಸ್ಯಮಯ ಪ್ರಶ್ನೆ. ತನ್ನ ಸುತ್ತುಮುತ್ತಲಿನ ಬಾಳನ್ನು ಗಾಢವಾಗಿ ಪ್ರೀತಿಸಿದ, ಪ್ರಭಾವಿಸಿದ ವ್ಯಕ್ತಿಗಳ ಕುರಿತಾಗಿ ಈ ಮಾತು ಕೇಳಿಕೊಂಡಾಗ ಭಾವೋದ್ವೇಗದಿಂದ ಪ್ರಶ್ನೆ ಇನ್ನಷ್ಟು ಜಟಿಲವಾಗುತ್ತದೆ. ಬಾಳಿನ ಕಡೆಯ ನೂರು,ನೂರಿಪ್ಪತ್ತು ದಿನಗಳಲ್ಲಿ ತಂದೆಯವರು ಬರೆದ ಈ ಪುಟಗಳು ಇಲ್ಲಿ ಉಲ್ಲೇಖಿತವಾದ ಎಲ್ಲ ಸಂಗತಿಗಳಿಗೂ ಅವರ ಅಸಾಧಾರಣ ನೆನಪಿನ ಶಕ್ತಿಯನ್ನೇ ಆಧರಿಸಿವೆ.ಅಲ್ಲಿ ಇಲ್ಲಿ ವಿವರಗಳು ಕಿಂಚಿತ್ತು ಬದಲಾಗಿರಲೂಬಹುದೇನೋ.ಆದರೆ ಈ ಕೃತಿಯನ್ನು ಓದಬೇಕಾದುದು ಒಂದು "ಜೀವನಚಿತ್ರ"ವಾಗಿ,ಇತಿಹಾಸದಂತೆ ಅಲ್ಲ.ಗೋಕರ್ಣದ ಸಂಪ್ರದಾಯಸ್ಥ ಕುಟುಂಬ ಒಂದರಲ್ಲಿ ಹುಟ್ಟಿದ ಹುಡುಗ, ಗೋಕರ್ಣ,ತೀರ್ಥಹಳ್ಳಿ,ಬೆಂಗಳೂರು ಇಲ್ಲೆಲ್ಲ ಆಧುನಿಕ ಶಿಕ್ಷಣ ಪಡೆದು ಮಾಧ್ಯಮಿಕ ಶಾಲಾ ಶಿಕ್ಷಕರಾಗಿ, ಮುಖ್ಯಾಧ್ಯಾಪಕರಾಗಿ, ಜೀವನವನ್ನು ಅಖಂಡವಾಗಿ ಪ್ರೀತಿಸಿದ ರಸಿಕನಾಗಿ, ಬಾಳನ್ನು ಕಲೆಯಾಗಿಸಿಕೊಂಡ ಅಪ್ಪಟ ಕಲಾವಿದನಾಗಿ ಬೆಳೆದ, ಮಾಗಿದ ಚಿತ್ರ ಅದು. ಅವರ ಬರವಣಿಗೆ ನೆನಪಿನ ಅಲೆಗಳ ಮಾದರಿಯನ್ನೇ ಅನುಸರಿಸಿದೆ.ಯಾವುದೋ ವಿಷಯ ಎಷ್ಟೋ ಹೇಳಿ, ಇನ್ನಾವುದೋ ವಿಷಯಕ್ಕೆ ಸಾರಿ, ಮತ್ತೆ ಮೂಲಸಂಗತಿಗೆ ವಾಪಸಾಗುವ ಪಲ್ಲಟಗಳ ಮಾದರಿಯನ್ನು ಹಾಗೇ ಉಳಿಸಿಕೊಂಡಿದ್ದೇವೆ. ಅವರು ಬರೆಯಬಹುದಾದ ಮತ್ತು ಬರೆಯಬೇಕಾದ ಸಂಗತಿಗಳು ಇನ್ನೂ ಹಲವು ಇದ್ದವು. ಮುಖ್ಯವಾಗಿ ಹೇಳಬೇಕೆಂದರೆ ಕಳೆದ ಇಪ್ಪತ್ತು ವರ್ಷಗಳಿಂದ ಅವರು ವಾಸಿಸಿದ ಅಘನಾಶಿನಿಯ ಕುರಿತೇ ಹೆಚ್ಚೇನೂ ಬರೆದಿಲ್ಲ! ಅವರ ಇಳಿವಯಸಿನಲ್ಲಿ ಹಿರಿಯ ಮಗನಂತೆ ಅವರನ್ನು ನೋಡಿಕೊಂಡ ನಾಣುಮಾವ(ಎನ್.ವಿ.ಸಭಾಹಿತ), ಅವರ ಪ್ರೀತಿಯ ಹಿತ್ತಿಲು, ಬಾವಿ-ಕೆರೆ, ವಾಕಿಂಗ್, ದೇವಸ್ಥಾನ,ಗಪ್ಪತಿಮಾವ,ಎಲ್ಲ ಬಂಧು-ಬಾಂಧವರು,ಸ್ನೇಹಿತರು.... ಇವರನ್ನೆಲ್ಲ,ಇವನ್ನೆಲ್ಲ ಅವರು ನೆನೆಯದ ದಿನವಿರಲಿಲ್ಲ.ಅಘನಾಶಿನಿಯಿಂದ ಒಂದು ದೂರವಾಣಿ ಕರೆ ಬಂದರೂ ಸಾಕು, ಅತ್ತುಬಿಡುತ್ತಿದ್ದರು.ಹಿರೇಗುತ್ತಿಯಲ್ಲಿ ಸಹೋದ್ಯೋಗಿಗಳ ಕುರಿತು ಬರೆಯುವಾಗಲೂ ಅವರಿಗೆ ಎಲ್ಲರ ಕುರಿತು ಬರೆಯಲು ಸಾಧ್ಯವಾಗಲಿಲ್ಲ. ಆದರೆ ಈ ಕೃತಿಯಲ್ಲಿ ಅವರಿಗೆ ಬೇಕಾದವರೆಲ್ಲರೂ ಯಾವುದೋ ರೂಪದಲ್ಲಿ ಇದ್ದೇ ಇದ್ದಾರೆ-ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ! ಹಾಗೂ ಅವರಿಗೆ ಬೇಡವಾದವರು ಯಾರೂ ಇರಲಿಲ್ಲ! ಅವರ ಬಾಳಲ್ಲಿ ಬೆಳಕು ತುಂಬಿದ ಹಾಗೂ ಅವರಿಂದ ಬಾಳಲ್ಲಿ ಬೆಳಕನ್ನು ಕಂಡ ಎಲ್ಲ ಮಹನೀಯರಿಗೂ ಎರಡೂ ಕೈ ಜೋಡಿಸಿ ವಂದನೆ ಸಲ್ಲಿಸುತ್ತೇವೆ. ಈ ಜೀವನಚಿತ್ರ ಅಪೂರ್ಣ ಎಂದೆನೆ?ಹಾಗೆ ಹೇಳಲಾಗದು ಎಂದು ಈಗ ತೋರುತ್ತಿದೆ. ಒಂದು ಜೀವದ ಚಿತ್ರ, ಬಾಳಿನ ಚಿತ್ರ ಅದರೊಡನೆ ಬದುಕಿದವರ ಮಾತು, ನೆನಹುಗಳಲ್ಲಿ ಮುಂದುವರಿಯುತ್ತಲೇ ಇರುತ್ತದೆ. ಸಾರ್ಥಕವಾದ ಒಂದೊಂದು ಜೀವಿತವೂ ಭೂಮಿಯಲ್ಲಿ ತನ್ನ ಪರಿಮಳ ಉಳಿಸಿಹೋಗಿರುತ್ತದೆ. ಅದಕ್ಕೆ ಸಾಕ್ಷಿ ಎಂಬಂತೆ ಅವರೊಡನೆ ಬಾಳಿದ ಅನೇಕರು ತಮ್ಮ ನೆನಪುಗಳನ್ನು ಹಂಚಿಕೊಂಡು ಈ ಜೀವನ ಚಿತ್ರಕ್ಕೊಂದು ವಿಶಿಷ್ಟ ಆಯಾಮ ಒದಗಿಸಿದ್ದಾರೆ.ಬರೆದವರು ಕೆಲವರು.ಬರೆಯಬೇಕಾಗಿದ್ದ ಇನ್ನೂ ಅನೇಕರು ಅನಿವಾರ್ಯ ಕಾರಣಗಳಿಂದ ಕ್ಷಿಪ್ರವಾಗಿ ಪ್ರತಿಕ್ರಿಯಿಸಲು ಆಗಲಿಲ್ಲ. ಮುಂದೆ ಬರೆಯಬಹುದು. ಗಣಿತ ಶಿಕ್ಷಕರಾಗಿದ್ದ ತಂದೆಯವರು ’ಅನಂತ’ತತ್ತ್ವದ ಕುರಿತು (ಇನ್‌ಫ಼ಿನಿಟಿ) ಚೆನ್ನಾಗಿ ತಿಳಿದಿದ್ದರು.ಅವರು ತರಗತಿಯಲ್ಲಿ ಅನಂತದ ಪರಿಕಲ್ಪನೆ ಮೂಡಿಸುತ್ತಿದ್ದ ಪರಿ ಅನನ್ಯ. ಛೇದ ಚಿಕ್ಕದಾದಂತೆ (೧/೧=೧, ೧/೦.೧=೧೦, ೧/.೦೦೧=೧೦೦........೧/೦= ಅನಂತ) ಭಾಗಲಬ್ಧ ಅನಂತದತ್ತ ಸಾಗುವುದನ್ನು ಅವರು ಚೆನ್ನಾಗಿ ಮನಗಾಣಿಸಿ ಕೊಡುತ್ತಿದ್ದರು.ಹಾಗೆಯೇ ಅವರ ತಂದೆಯವರ ಹೆಸರೂ ’ಅನಂತ’. ಅಘನಾಶಿನಿಯಲ್ಲಿ ಕಟ್ಟಿದ ಮನೆಯ ಹೆಸರೂ ’ಅನಂತ’. ಬ್ರಹ್ಮವೂ ಅನಾದಿ,’ಅನಂತ’.ತನ್ನ ಜೀವನಚಿತ್ರವನ್ನೂ ಅವರು ಅಂತ್ಯಗೊಳಿಸದೆ ಅನಂತದೊಳಗೆ ಸೇರಿಸಿಬಿಟ್ಟಿದ್ದಾರೆ! ದೀಪದ ಕಂಬವು ಬರುವ ನಾಳೆಗಳಿಗೂ ಬೆಳಕಿನ ಹಾದಿಯನ್ನು ತೋರುತ್ತ ತಣ್ಣಗೆ ನಿಲ್ಲುವುದು..... (ಚಿಂತಾಮಣಿ-ಕುಟುಂಬದ ಎಲ್ಲರ ಪರವಾಗಿ)